ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಹಕ್ಕಿಜ್ವರ; ಜಿಲ್ಲೆಯಲ್ಲಿ ಕಟ್ಟೆಚ್ಚರ

ಮುಂಜಾಗ್ರತಾ ಕ್ರಮ: ಕೋಳಿಗಳ ರಕ್ತದ ಮಾದರಿ ಪರೀಕ್ಷೆ
Last Updated 4 ಜನವರಿ 2018, 7:30 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ನಗರವೂ ಸೇರಿದಂತೆ ಮೈಸೂರು ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಬೆಂಗಳೂರು ಬಳಿಯ ದಾಸರ ಹಳ್ಳಿಯ ಕೋಳಿಮಾಂಸದ ಅಂಗಡಿ ಯಲ್ಲಿ ಸತ್ತ ಕೋಳಿಗಳಲ್ಲಿ ರೋಗಾಣು ಇರುವುದು ದೃಢಪಟ್ಟಿತ್ತು. ಇದರಿಂದ ಹಕ್ಕಿಜ್ವರ ಹರಡುವ ಆತಂಕ ಎದುರಾಗಿದೆ.

‘ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೋಳಿ ಸಾಕಣೆ ಕೇಂದ್ರಗಳ ಕೋಳಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಪ್ರಸಾದ್‌ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಳಿಗಳು ಅಸಹಜ ರೀತಿಯಲ್ಲಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸತ್ತರೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲೆಯ ಎಲ್ಲ ಕೋಳಿ ಸಾಕಣೆ ಕೇಂದ್ರಗಳ ಮಾಲೀಕರಿಗೆ ಸೂಚಿಸಿದ್ದೇವೆ ಎಂದು ಹೇಳಿದರು.

ಹಕ್ಕಿಜ್ವರದ ಆತಂಕ ಎದುರಾದರೆ ಯಾವುದೇ ಪರಿಸ್ಥಿತಿ ನಿಭಾಯಿಸಲು ಇಲಾಖೆಯ ತುರ್ತು ಕಾರ್ಯಾಚರಣೆ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 34 ತುರ್ತು ಕಾರ್ಯಾಚರಣೆ ತಂಡಗಳಿವೆ ಎಂದರು.

ತಮಿಳುನಾಡಿನಿಂದ ಸಾಗಣೆ ಮಾಡಿದ್ದ ಕೋಳಿಗಳು ಬೆಂಗಳೂರಿನಲ್ಲಿ ಹಕ್ಕಿಜ್ವರದಿಂದ ಸತ್ತಿವೆ. ಮೈಸೂರಿನ ಕೋಳಿ ಅಂಗಡಿಗಳಿಗೆ ಹೊರ ರಾಜ್ಯಗಳಿಂದ ಕೋಳಿಗಳು ಬರುತ್ತಿಲ್ಲ. ಸಾಮಾನ್ಯವಾಗಿ ನಮ್ಮ ಜಿಲ್ಲೆಯಿಂದಲೇ ಬೇರೆ ಕಡೆಗೆ ಕೋಳಿ ಸಾಗಣೆ ಮಾಡಲಾಗುತ್ತಿದೆ. ಆದ್ದರಿಂದ ಆತಂಕಪಡಬೇಕಿಲ್ಲ ಎಂದರು.

ನಗರ ವ್ಯಾಪ್ತಿಯಲ್ಲೂ ಮುನ್ನೆಚ್ಚರಿಕೆ: ಹಕ್ಕಿಜ್ವರ ಬರದಂತೆ ನಗರದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರ ವ್ಯಾಪ್ತಿಯ ಕೋಳಿ ಮಾಂಸದ ಅಂಗಡಿಗಳು ಮತ್ತು ಕೋಳಿ ಸಾಕಣೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊರರಾಜ್ಯಗಳಿಂದ ಕೋಳಿ ಖರೀದಿಸದಂತೆ ಕೋಳಿ ಅಂಗಡಿಗಳ ಮಾಲೀಕರಿಗೆ ತಿಳಿಸಲಾಗಿದೆ.

ಕುಕ್ಕರಹಳ್ಳಿ ಕೆರೆಯಲ್ಲಿ ಕಳೆದ ತಿಂಗಳು ಒಟ್ಟು ಏಳು ಪೆಲಿಕಾನ್‌ಗಳು ಸತ್ತಿದ್ದವು. ಅವುಗಳು ಸಾವಿಗೆ ಹಕ್ಕಿಜ್ವರ ಕಾರಣ ಅಲ್ಲ ಎಂದು ಭೋಪಾಲ್‌ನಲ್ಲಿರುವ ಪ್ರಾಣಿಗಳ ರೋಗ ಪತ್ತೆ ಪ್ರಯೋಗಾಲಯದ ವರದಿ ತಿಳಿಸಿತ್ತು. ಇದರಿಂದ ನಗರದಲ್ಲಿ ಹಕ್ಕಿಜ್ವರ ಭೀತಿ ದೂರವಾಗಿತ್ತು. ಇದೀಗ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದರಿಂದ ಮತ್ತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT