ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ: ಪದಾಧಿಕಾರಿಗಳ ಆಯ್ಕೆಗೆ 25 ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ!

Last Updated 4 ಜನವರಿ 2018, 9:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆಯು ಪದಾಧಿಕಾರಿಗಳ ಆಯ್ಕೆಗೆ 25 ವರ್ಷಗಳಿಂದ ಚುನಾವಣೆಯೇ ನಡೆಸಿಲ್ಲ, ಸರಿಯಾಗಿ ಟೂರ್ನಿಗಳನ್ನು ಕೂಡ ಆಯೋಜಿಸದೇ ಈ ಭಾಗದ ಕ್ರೀಡಾಪಟುಗಳಿಗೆ ಅನ್ಯಾಯ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ.

‘1993ರಲ್ಲಿ ಸ್ಥಾಪಿತವಾದ ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ ಇದುವರೆಗೆ ಕನಿಷ್ಠ 20 ಜಿಲ್ಲಾಮಟ್ಟದ ಚೆಸ್‌ ಸ್ಪರ್ಧೆಗಳನ್ನೂ ಆಯೋಜಿಸಿಲ್ಲ. ಅವಳಿ ನಗರಗಳಲ್ಲಿ ಇರುವ ಚೆಸ್‌ ಕ್ಲಬ್‌ಗಳು ಟೂರ್ನಿ ಆಯೋಜಿಸಿದರೆ ಜಿಲ್ಲಾ ಚೆಸ್‌ ಸಂಸ್ಥೆಯ ಸಹಭಾಗಿತ್ವ ಎನ್ನುವುದನ್ನು ಉಲ್ಲೇಖಿಸುವುದಕ್ಕೆ ಸಂಸ್ಥೆಯ ಕಾರ್ಯದರ್ಶಿ ವಿನಯ ಕುರ್ತಕೋಟಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಸ್ಥಳೀಯ ಕ್ಲಬ್‌ಗಳಿಗೆ ಬೆಂಬಲ ನೀಡಬೇಕಿದ್ದ ಚೆಸ್‌ ಸಂಸ್ಥೆಯೇ ಅಸಹಕಾರ ನೀಡುತ್ತಿದೆ. ಈ ಭಾಗದ ಹಿರಿಯ ಚೆಸ್‌ ಆಟಗಾರರಿಗೆ ಸದಸ್ಯತ್ವ ಕೂಡ ಕೊಡುತ್ತಿಲ್ಲ’ ಎಂದು ಹುಬ್ಬಳ್ಳಿ ಚೆಸ್‌ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕೆ.ವಿ. ಶ್ರೀಪಾದ ಆರೋಪಿಸಿದ್ದಾರೆ.

‘ಕರ್ನಾಟಕ ಸೊಸೈಟಿ ಕಾಯ್ದೆಯ ಪ್ರಕಾರ ಸಂಸ್ಥೆಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಯಬೇಕು. ಪ್ರತಿ ವರ್ಷ ಮಹಾಸಭೆ ನಡೆಸಿ ಲೆಕ್ಕಪತ್ರದ ವಿವರಗಳನ್ನು ರಿಜಿಸ್ಟ್ರಾರ್‌ಗೆ ಸಲ್ಲಿಸಬೇಕು. ಇದ್ಯಾವುದನ್ನೂ ಜಿಲ್ಲಾ ಚೆಸ್‌ ಸಂಸ್ಥೆ ಮಾಡಿಲ್ಲ. ಸಂಸ್ಥೆಯಲ್ಲಿ ಒಬ್ಬರದ್ದೇ ಆಡಳಿತ ನಡೆಯುತ್ತಿದೆ’ ಎಂದು ಅವರು ದೂರಿದ್ದಾರೆ.

‘ಕಾರಣ, ಜಿಲ್ಲಾ ಚೆಸ್‌ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆ.ವಿ. ಶ್ರೀಪಾದ ಅವರು ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಅರವಿಂದ ಶಾಸ್ತ್ರಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಸಂಸ್ಥೆಯ ಈಗಿನ ಆಡಳಿತವನ್ನು ರದ್ದುಗೊಳಿಸಿ ಹೊಸದಾಗಿ ಸಂಸ್ಥೆ ರಚಿಸಬೇಕು, ನಿಯಮಗಳ ಪ್ರಕಾರ ಚುನಾವಣೆ ನಡೆಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ದಾಖಲೆ ಬಹಿರಂಗಕ್ಕೆ ಒತ್ತಾಯ: ‘ವಾರ್ಷಿಕ ಮಹಾಸಭೆ, ಬೈಲಾದ ವಿವರ ಮತ್ತು ಸಂಸ್ಥೆಯ ಪದಾಧಿಕಾರಿಗಳ ಮಾಹಿತಿ ನೀಡುವಂತೆ ಜಿಲ್ಲಾ ಚೆಸ್‌ ಸಂಸ್ಥೆಯ ಕಾರ್ಯದರ್ಶಿ ವಿನಯ ಕುರ್ತಕೋಟಿಗೆ ಎರಡು ತಿಂಗಳ ಹಿಂದೆ ಮಾಹಿತಿ ಹಕ್ಕಿನ ಮೂಲಕ ಅರ್ಜಿ ಸಲ್ಲಿಸಿದ್ದರೂ ಉತ್ತರ ಬಂದಿಲ್ಲ. ಸಂಸ್ಥೆಯ ಜಿಲ್ಲಾಧ್ಯಕ್ಷ ವಿ.ವಿ. ಮಂಗಳವಾಡಕರ ಅವರೂ ಪ್ರತಿಕ್ರಿಯಿಸಿಲ್ಲ. ಇದು ಹೀಗೆಯೇ ಮುಂದುವರೆದರೆ ಕೋರ್ಟ್‌ ಮೆಟ್ಟಿಲೇರುತ್ತೇನೆ‘ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅರವಿಂದಶಾಸ್ತ್ರಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಒಂದು ವರ್ಷದ ಹಿಂದೆ ರಿಜಿಸ್ಟ್ರಾರ್‌ ಆಫ್‌ ಸೊಸೈಟಿಯಲ್ಲಿ ಚೆಸ್ ಸಂಸ್ಥೆ ಪರವಾನಗಿ ನವೀಕರಣ ಮಾಡಿಸಿಕೊಂಡಿದ್ದಾಗಿ ಧಾರವಾಡ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಹೇಳಿದ್ದಾರೆ. ಚುನಾವಣೆ ನಡೆಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಇದರ ಬಗ್ಗೆ ಪರಿಶೀಲಿಸುತ್ತೇನೆ’ ಎಂದರು.

‘ಸಂಸ್ಥೆಯ ಹೆಸರು ಕೆಡಿಸುವ ಹುನ್ನಾರ’

‘ಜಿಲ್ಲೆಯಲ್ಲಿ ನಿರಂತರವಾಗಿ ಚೆಸ್‌ಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ಸಹಿಸದ ಕೆಲವರು ಸಂಸ್ಥೆಯ ಹೆಸರನ್ನು ಕೆಡಿಸುವ ಉದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. 2017ರಲ್ಲಿ ಚುನಾವಣೆ ನಡೆದು ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆ ನಡೆದಿದೆ’ ಎಂದು ಜಿಲ್ಲಾ ಚೆಸ್‌ ಸಂಸ್ಥೆಯ ಕಾರ್ಯದರ್ಶಿ ವಿನಯ ಕುರ್ತಕೋಟಿ ಪ್ರತಿಕ್ರಿಯೆ ನೀಡಿದ್ದಾರೆ.

‘ಜಿಲ್ಲಾ ಸಂಸ್ಥೆಯ ವತಿಯಿಂದ ಟೂರ್ನಿಗಳನ್ನು ಹಮ್ಮಿಕೊಂಡಾಗಲೇ ಹುಬ್ಬಳ್ಳಿಯ ಚೆಸ್ ಸಂಸ್ಥೆಯೊಂದು ಉದ್ದೇಶಪೂರ್ವಕವಾಗಿ ಟೂರ್ನಿಗಳನ್ನು ನಡೆಸುತ್ತದೆ. ಈಗಿರುವ ಜಿಲ್ಲಾ ಸಂಸ್ಥೆಯಲ್ಲಿ ಸ್ಥಾನ ಪಡೆಯಬೇಕು ಎನ್ನುವ ಕಾರಣಕ್ಕೆ ಕೆಲವರು ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಆರೋಪ ಮಾಡಿದವರು ಚೆಸ್‌ಗೆ ಕೊಟ್ಟ ಕೊಡುಗೆ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.

*

ಜಿಲ್ಲಾ ಸಂಸ್ಥೆಯ ಯಾವ ದಾಖಲೆಗಳೂ ಇಲ್ಲ. ಚುನಾವಣೆ ನಡೆಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ದಾಖಲೆಗಳನ್ನು ಬಹಿರಂಗಪಡಿಸಲಿ.

–ಕೆ.ವಿ. ಶ್ರೀಪಾದ ಅಧ್ಯಕ್ಷ, ಹುಬ್ಬಳ್ಳಿ ಚೆಸ್‌ ಅಕಾಡೆಮಿ

*

ಜಿಲ್ಲಾ ಚೆಸ್‌ ಸಂಸ್ಥೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಸರಿಯಾಗಿಯೇ ಇವೆ. ಚುನಾವಣೆಯೂ ನಡೆದಿದೆ.

–ವಿ.ವಿ. ಮಂಗಳವಾಡಕರ, ಅಧ್ಯಕ್ಷ, ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT