ಶನಿವಾರ, ಜೂಲೈ 4, 2020
21 °C
ರಾಮದುರ್ಗದ ಗ್ರಾಮದಲ್ಲಿ ವಿಶಿಷ್ಟ ಆಚರಣೆ, ಮನೆಗಳಿಗೆ ಬೀಗ ಹಾಕಿ ಹೊರ ಹೋಗುವ ಜನರು

ಊರು ಬಿಡುವುದೇ ಗುಳೆ ಲಕ್ಕಮ್ಮ ಜಾತ್ರೆ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಊರು ಬಿಡುವುದೇ ಗುಳೆ ಲಕ್ಕಮ್ಮ ಜಾತ್ರೆ ವಿಶೇಷ

ಕೂಡ್ಲಿಗಿ: ತಾಲ್ಲೂಕಿನ ರಾಮದುರ್ಗದ ಗ್ರಾಮದಲ್ಲಿ ಬುಧವಾರ ಜನರು ಊರು ಬಿಡುವ ಮೂಲಕ ಈ ಭಾಗದಲ್ಲಿ ವಿಶಿಷ್ಟ ಗುಳೆ ಲಕ್ಕಮ್ಮ ಜಾತ್ರೆ ಆಚರಿಸಿದರು. ಗ್ರಾಮದ ಎಲ್ಲಾ ಮನೆಗಳಿಗೆ ಬೀಗ ಹಾಕಲಾಗಿತ್ತು.

ಐದು ವರ್ಷಕ್ಕೊಮ್ಮೆ ನಡೆಯುವ ಗುಳೆ ಲಕ್ಕಮ್ಮ ಜಾತ್ರೆ ಸಂದರ್ಭದಲ್ಲಿ ಊರಿನ ಜನರೆಲ್ಲರೂ ಊರ ಹೊರಗಿನ ಹೊಲ, ತೋಟಗಳಲ್ಲಿ ಬಿಡಾರ ಹೂಡುತ್ತಾರೆ. ಅದರಂತೆ ಮಂಗಳವಾರ ರಾತ್ರಿ ಗುಳೆ ಲಕ್ಕಮ್ಮ ದೇವಿಯ ಗಂಗೆ ಪೂಜೆ ಮಾಡಿ, ದೇವಸ್ಥಾನದ ಮುಂದೆ ಪ್ರತಿಷ್ಠಾಪನೆ ಮಾಡಲಾಗಿತ್ತು. ನಂತರ ರಾತ್ರಿ 12 ಗಂಟೆಯಿಂದ ಗ್ರಾಮಸ್ಥರೆಲ್ಲ ಅಕ್ಕಿ ಬೇಳೆ, ಬೆಲ್ಲಗಳಿಂದ ದೇವಿಗೆ ಉಡಿ ತುಂಬಿದರು.

ಬೆಳಗಿನ ಜಾವ ನಾಲ್ಕು ಗಂಟೆಯಿಂದ ವಿವಿಧ ಬಗೆಯ ಅಡುಗೆ, ತಿಂಡಿ, ತಿನಿಸುಗಳನ್ನು ಮಾಡಿಕೊಂಡು 10 ಗಂಟೆಯಿಂದ ಸಕಲ ವಾದ್ಯಗಳೊಂದಿಗೆ ದೇವಿಯ ಮೆರವಣಿಗೆ

ಮಾಡಿಕೊಂಡು ಊರಿನ ಎಲ್ಲಾ ಜನ ತಮ್ಮ ಸಾಕು ಪ್ರಾಣಿಗಳೊಂದಿಗೆ ಹೊರಟು, ಗ್ರಾಮದ ಹೊರ ವಲಯದಲ್ಲಿರುವ ಮರದ ಕೆಳಗೆ ಗುಳೆ ಲಕ್ಕಮ್ಮನನ್ನು ಪ್ರತಿಷ್ಠಾಪನೆ ಮಾಡಿದರು.

ಗ್ರಾಮ ಹೊರ ವಲಯದಲ್ಲಿ ಬೀಡು ಬಿಟ್ಟ ಜನರು ತಮ್ಮ ಬೀಗರು, ಸ್ನೇಹಿತರೊಂದಿಗೆ ತಾವು ತಂದಿದ್ದ ವಿವಿಧ ಭಕ್ಷ್ಯ ಭೋಜನಗಳನ್ನು ಸವಿದು ಸಂಜೆ ನಾಲ್ಕು ಗಂಟೆಯ ನಂತರ ಮತ್ತೆ ಗ್ರಾಮದತ್ತ ನಡೆದರು.

ಜನರು ಗ್ರಾಮಕ್ಕೆ ಮರಳುವ ಮೊದಲು ಅಕ್ಕಿ ಬೆಲ್ಲದಿಂದ ಗುಳೆ ಲಕ್ಕಮ್ಮ ಪೂಜಾರಿಯೇ ಸಿದ್ದಪಡಿಸಿದ್ದ ಚರಗವನ್ನು ಗ್ರಾಮದಲ್ಲಿ ಚೆಲ್ಲಲಾಯಿತು.

ಇದರ ನಂತರ ದೇವಿಯೊಂದಿಗೆ ಜನರು ಗ್ರಾಮದೊಳಕ್ಕೆ ಹೋಗಿ ಗುಡಿ ತುಂಬಿಸುವುದರೊಂದಿಗೆ ಜಾತ್ರೆ ಸಂಪನ್ನವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.