ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕೋಚವಿಲ್ಲ; ಬೇಕು ಸರ್ಕಾರದ ಸೌಲಭ್ಯ’

ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಸಮಗ್ರ ತಿದ್ದುಪಡಿಗೆ ಆಗ್ರಹ
ಅಕ್ಷರ ಗಾತ್ರ

ದಾವಣಗೆರೆ: ‘ಅಪ್ಪ ಯಾರೂ ಅಂತನೇ ನನಗೆ ಗೊತ್ತಿಲ್ಲ. ತಾಯಿ ಇರುವುದಂತೂ ಸತ್ಯ. ದೇವದಾಸಿ ಮಗಳು ಎಂದು ಹೇಳಿಕೊಳ್ಳುವುದಕ್ಕೆ ನನಗೆ ಯಾವುದೇ ಮುಜುಗರ ಇಲ್ಲ. ಆದರೆ, ಸರ್ಕಾರಿ ಉದ್ಯೋಗಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವಾಗ ತಂದೆ ಹೆಸರು ನಮೂದಿಸಬೇಕು. ಹೆಸರು ನಮೂದಿಸದೇ ಇದ್ದರೆ, ನಿಮ್ಮ ಅರ್ಜಿ ತಿರಸ್ಕೃತವಾಗುತ್ತದೆ ಎಂದು ಹೇಳಿ ಕಳುಹಿಸುತ್ತಾರೆ. ಆಗ ಅಳು ಬರುತ್ತೆ. ಪದವಿ ಮುಗಿಸಿದ್ದೇನೆ. ನಾನೂ ಅಧಿಕಾರಿಯಾಗಬೇಕು ಎಂಬ ಆಸೆ ಇದೆ....’

‘ತಂದೆ ಗೊತ್ತಿಲ್ಲ. ತಾಯಿ ಅನಾರೋಗ್ಯದಿಂದ ಈಚೆಗೆ ಮೃತಳಾದಳು. ನನಗೆ ಸಹೋದರ, ಸಹೋದರಿ ಯಾರೂ ಇಲ್ಲ. ಸಂಬಂಧಿಕರೂ ನನ್ನನ್ನು ಮನೆಯಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಎಲ್ಲಿಗೆ ಹೋಗಬೇಕು? ಅನಾಥಳಾಗಿದ್ದೇನೆ....’

ದೇವದಾಸಿ ಮಕ್ಕಳ ಮನದಾಳದ ನೋವಿನ ಮಾತುಗಳಿವು. ಇದು ಒಬ್ಬ, ಇಬ್ಬರ ಸಮಸ್ಯೆಯಲ್ಲ. ದೇವದಾಸಿ ತಾಯಂದಿರ ಬಹುತೇಕ ಮಕ್ಕಳ ಸಮಸ್ಯೆಗಳು ಇದೇ ರೀತಿ ಇವೆ!

2007–08ರಲ್ಲಿ ಸರ್ಕಾರ ನಡೆಸಿದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 2,170 ಜನ ದೇವದಾಸಿಯರಿದ್ದಾರೆ. ಇವರ ಬಹುತೇಕ ಮಕ್ಕಳು ಇಂದು ಪದವಿ, ಸ್ನಾತಕೋತ್ತರ ಪದವಿ, ಸಿ.ಎ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುತ್ತಿದ್ದಾರೆ.

ಅನ್ಯಾಯಕ್ಕೆ ಒಳಗಾಗಿದ್ದೇವೆ: ‘ತಾಯಿ ದೇವದಾಸಿ ಎಂಬ ಕಾರಣದಿಂದಾಗಿ ಸಮಾಜದಲ್ಲಿ ಇಂದಿಗೂ ಅನ್ಯಾಯಕ್ಕೆ ಒಳಗಾಗುತ್ತಲೇ ಇದ್ದೇವೆ. ಅದರಲ್ಲೂ ಹೆಣ್ಣುಮಕ್ಕಳ ಸ್ಥಿತಿಯಂತೂ ಹೇಳತೀರದು. ತಾಯಿ ಮೃತಳಾದ ನಂತರ ಸಮಾಜವು ಮಗಳನ್ನೂ ಅದೇ ರೀತಿ ನೋಡುತ್ತದೆ. ಒಂದು ವೇಳೆ ಆಕೆ ಮದುವೆಯಾದರೂ ಗಂಡನ ಮನೆಯಲ್ಲಿಯೂ ಆಕೆಗೆ ಕಿರುಕುಳ ಮುಂದುವರೆಯುತ್ತದೆ’ ಎಂದು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಳಸಮುದಾಯದ
ಅಧ್ಯಯನ ಕೇಂದ್ರದ ಸಂಶೋಧನಾ ಸಲಹೆಗಾರ, ದೇವದಾಸಿಯ ಮಗನಾದ ಯಮನೂರಪ್ಪ ಕೊಪ್ಪಳ ಬೇಸರದಿಂದ ಹೇಳುತ್ತಾರೆ.

ತಂದೆ ಇಲ್ಲ ಎನ್ನುವ ಹಾಗೂ ದೇವದಾಸಿಯ ಮಕ್ಕಳು ಎಂಬ ಕಾರಣದಿಂದಾಗಿ ಸಾಕಷ್ಟು ಮಕ್ಕಳು ಇಂದಿಗೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಸಮಾಜ ಸಾಕಷ್ಟು ಮುಂದುವರಿದಿದ್ದರೂ ದೇವದಾಸಿ ತಾಯಂದಿರ ಮಕ್ಕಳ ಸ್ಥಿತಿಯು ಇಂದಿಗೂ ಶೋಚನಿಯ ಸ್ಥಿತಿಯಲ್ಲಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಕಾಯ್ದೆಗೆ ಸಮಗ್ರ ತಿದ್ದುಪಡಿಯಾಗಲಿ: ‘ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಜಾರಿಗೊಳಿಸಿದ ‘ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ– 1984’  ಹೆಚ್ಚು ಪರಿಣಾಮಕಾರಿಯಾಗಿಲ್ಲ. ಈ ಕಾಯ್ದೆಯನ್ನು ಮತ್ತೊಮ್ಮೆ ಸಮಗ್ರವಾಗಿ ತಿದ್ದುಪಡಿ ಮಾಡುವ ಮೂಲಕ ದೇವದಾಸಿಯರ ಮಕ್ಕಳನ್ನು ಕಾಯ್ದೆ ಒಳಗೆ ಸೇರಿಸಿ, ಅವರಿಗೂ ಸರ್ಕಾರದಿಂದ ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಆಗ ಮಾತ್ರ ದೇವದಾಸಿಯರ ಮಕ್ಕಳು ನೆಮ್ಮದಿಯಿಂದ ಸಮಾಜದಲ್ಲಿ ಜೀವನ ಮಾಡಲು ಸಾಧ್ಯ’ ಎನ್ನುತ್ತಾರೆ ಅವರು.

‘ಸಮಾಜದಿಂದ ಅನ್ಯಾಯಕ್ಕೆ ಒಳಗಾಗಿದ್ದೇವೆ. ಅದಕ್ಕಾಗಿ ಸರ್ಕಾರದಿಂದ ಸೌಲಭ್ಯಗಳನ್ನು ಕೇಳುತ್ತಿದ್ದೇವೆ. ದೇವದಾಸಿ ಹಾಗೂ ಅವರ ಮಕ್ಕಳ ಬದುಕಿನ ಸ್ಥಿತಿಗತಿಯ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು. ತಂದೆಯ ಹೆಸರಿಲ್ಲ ಎಂಬ ಕಾರಣಕ್ಕೆ
ಸರ್ಕಾರಿ ನೌಕರಿಯಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಅವರಿಗೆ ಸಂಬಂಧಿಸಿದಂತೆ ನೂತನ ಕಾಯ್ದೆ ರೂಪಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

***
‘ಒಳಮೀಸಲಾತಿ ನೀಡಿ’

ದೇವದಾಸಿಯ ಮಗಳು ಎಂದು ಹೇಳಿಕೊಳ್ಳಲು ಯಾವ ಸಂಕೋಚವೂ ಇಲ್ಲ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಕ್ಕಾಗಿ ನಾವು ಹೋರಾಡುತ್ತಿದ್ದೇವೆ.

ನಮಗೆ ಉದ್ಯೋಗದಲ್ಲಿ ಒಳಮೀಸಲಾತಿ ಬೇಕು. ಸರ್ಕಾರಿ ಉದ್ಯೋಗದ ಅರ್ಜಿ ನಮೂನೆಯಲ್ಲಿ ತಂದೆ ಹೆಸರಿನ ಕಾಲಂನಲ್ಲಿ ತಾಯಿ ಹೆಸರು ನಮೂದಿಸಲು ಅವಕಾಶ ನೀಡಬೇಕು.
–ದುರ್ಗಾರಾಣಿ, ಬಿಕಾಂ ವಿದ್ಯಾರ್ಥಿನಿ.
***

ದೇವದಾಸಿ ಮಕ್ಕಳ ಸ್ಥಿತಿಗತಿ ಕುರಿತು ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ತಳಸಮುದಾಯದ ಅಧ್ಯಯನ ಕೇಂದ್ರದ ಸಂಶೋಧನಾ ಸಲಹೆಗಾರರು ಕೆಲ ಬೇಡಿಕೆಗಳ ಪಟ್ಟಿ ಮಾಡಿದ್ದಾರೆ. ಅವುಗಳನ್ನು ಸರ್ಕಾರದ ಮುಂದಿಡಲು ಚಿಂತನೆ ನಡೆಸಲಾಗಿದೆ. ಪ್ರಮುಖವಾಗಿ...

l ಸರ್ಕಾರಿ ಉದ್ಯೋಗದಲ್ಲಿ ಒಳಮೀಸಲಾತಿ ನೀಡಬೇಕು
l ವಿಶೇಷ ಕಾನೂನು ರಚಿಸಬೇಕು
l ದೇವದಾಸಿ ಮಕ್ಕಳಿಗೆ ಸ್ನಾತಕೋತ್ತರ ಪದವಿ ತನಕ ಉಚಿತ ಶಿಕ್ಷಣ ನೀಡಬೇಕು
l ಕೌಶಲಾಭಿವೃದ್ಧಿ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಬಡ್ಡಿರಹಿತ ಸಾಲ–ಸೌಲಭ್ಯ ನೀಡಬೇಕು
l ದೇವದಾಸಿಯರಿಗೆ ಕನಿಷ್ಠ 2 ಎಕರೆ ಜಮೀನು ನೀಡಬೇಕು. ಜತೆಗೆ ವಸತಿ ಸೌಲಭ್ಯವನ್ನೂ ನೀಡಬೇಕು
l ದೇವದಾಸಿಯರ ಮಾಸಾಶನವನ್ನು ₹ 1,500ರಿಂದ ₹ 5,000ಕ್ಕೆ ಏರಿಸಬೇಕು
l ತಂದೆಯ ಡಿಎನ್‌ಎ ಪರೀಕ್ಷೆಗೆ ಅವಕಾಶ ನೀಡಬೇಕು
l ದೇವದಾಸಿಯರ ಮಕ್ಕಳ ಶಿಕ್ಷಣ, ಉದ್ಯೋಗ, ಆರೋಗ್ಯ ಸ್ಥಿತಿಗತಿಯ ಬಗ್ಗೆ ಸರ್ವೆ ಮಾಡಬೇಕು
l ದೇವದಾಸಿ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು
l ದೇವದಾಸಿಯರ ಮಕ್ಕಳ ಮದುವೆಗೆ ಪ್ರೋತ್ಸಾಹಧನ ನೀಡಬೇಕು
***
ನಮ್ಮ ಮಕ್ಕಳೂ ಓದಿ, ಅಧಿಕಾರಿಗಳಾಗಬೇಕು ಎಂಬ ಆಸೆ ಇದೆ. ಆದರೆ, ಅವರ ಉನ್ನತ ವಿದ್ಯಾಭ್ಯಾಸಕ್ಕೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ.
ಗಂಗಮ್ಮ,ದೇವದಾಸಿ

***
ನೋಂದಾಯಿತ ದೇವದಾಸಿಯರಿಗೆ ವಸತಿ ನೀಡುವ ಚಿಂತನೆ ನಡೆದಿದೆ. ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆಗೆ ಸಮಗ್ರ ತಿದ್ದುಪಡಿ ಮಾಡಬೇಕು ಎಂಬ ಒತ್ತಾಯವೂ ಇದೆ.
    - ಜೆ.ಮೋಕ್ಷಪತಿ, ಯೋಜನಾಧಿಕಾರಿ
ದೇವದಾಸಿ ಪುನರ್ವಸತಿ ಯೋಜನೆ.

***
ಸರ್ಕಾರದ ಕೆಲ ಇಲಾಖೆಗಳಲ್ಲಿ ದೇವದಾಸಿಯರಿಗೆ ಹಾಗೂ ಅವರ ಮಕ್ಕಳ ಆರ್ಥಿಕ ಪ್ರಗತಿಗೆ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಪ್ರಜ್ಞಾ, ತಾಲ್ಲೂಕು ಯೋಜನಾ ಅನುಷ್ಠಾನಾಧಿಕಾರಿ
***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT