ಬುಧವಾರ, ಆಗಸ್ಟ್ 5, 2020
23 °C
ಆಕರ್ಷಿಸಿದ ₹2ಕೋಟಿ ಮೌಲ್ಯದ ’ಪದ್ಮಾ’

ಗಮನಸೆಳೆದ ಕುದುರೆ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಮನಸೆಳೆದ ಕುದುರೆ ಉತ್ಸವ

ನಂದುರಬಾರ/ಮುಂಬೈ: ವೈವಿಧ್ಯಮಯ ಕುದುರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆಯಾಗಿದ್ದ ಸಾರಂಗಖೇಡ ಚೇತಕ್ ಉತ್ಸವ ಈ ಬಾರಿಯೂ ಪ್ರಾಣಿಪ್ರಿಯರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

₹11 ಲಕ್ಷದಿಂದ ₹2ಕೋಟಿಯವರೆಗಿನ ಮೌಲ್ಯದ ಕುದುರೆಗಳು ಇಲ್ಲಿ ಭಾಗವಹಿಸಿದ್ದವು. ಸಾರಂಗಖೇಡ ಗ್ರಾಮದಲ್ಲಿ ಕಳೆದ 300 ವರ್ಷಗಳಿಂದ ಈ ಉತ್ಸವ ಆಯೋಜಿಸಲಾಗುತ್ತಿದೆ.‌ ಕೇವಲ 10 ಸಾವಿರ ಜನಸಂಖ್ಯೆಯನ್ನು ಈ ಗ್ರಾಮ ಹೊಂದಿದೆ. ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಸಾರಂಗಖೇಡ ಚೇತಕ್‌ ಉತ್ಸವ ಸಮಿತಿ ಜಂಟಿಯಾಗಿ ಈ ಉತ್ಸವವನ್ನು 2017ರ ಡಿಸೆಂಬರ್‌ 3ರಿಂದ ಜನವರಿ 2ರವರೆಗೆ ಆಯೋಜಿಸಿದ್ದವು.

₹3.57ಕೋಟಿ ಮೌಲ್ಯದ 1,053 ಕುದುರೆಗಳು ಈ ಉತ್ಸವದಲ್ಲಿ ಮಾರಾಟವಾಗಿವೆ. ಈ ಬಾರಿ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು ಮತ್ತು ಪಂಜಾಬ್‌ ರಾಜ್ಯಗಳಿಂದ 2,500ಕ್ಕೂ ಹೆಚ್ಚು ಕುದುರೆಗಳು ಉತ್ಸವದಲ್ಲಿ ಭಾಗವಹಿಸಿದ್ದವು.  ದೇಶಿಯ ತಳಿಗಳಾದ ಕಾಠಿಯಾವಾಡಿ, ಮರ‍್ವಾರಿ, ಮಣಿಪುರಿ ಮತ್ತು ನುಖ್ರಾ ಉತ್ಸವಕ್ಕೆ ಮೆರುಗು ನೀಡಿದ್ದವು.

ದುಬಾರಿ ಬೆಲೆಯ ಪದ್ಮಾ, ಆಸ್ಕರ್‌, ಬಾಹುಬಲಿ ಮತ್ತು ನರಸಿಂಹ ಈ ಬಾರಿಯ ಪ್ರಮುಖ ಆಕರ್ಷಣೀಯ ಕೇಂದ್ರಬಿಂದುವಾಗಿದ್ದವು.  ಆದರೆ, ಈ ಕುದುರೆಗಳು ಮಾರಾಟಕ್ಕೆ ಇರಲಿಲ್ಲ. ಇವುಗಳಲ್ಲಿ ಐದು ಬಿಳಿ ಮಚ್ಛೆಗಳಿದ್ದರೆ ‌ಅದೃಷ್ಟದ ಕುದುರೆಗಳು ಎಂದು ನಂಬಲಾಗುತ್ತದೆ. ಇವುಗಳ ಬೆಲೆಯೂ ಅಚ್ಚರಿ ಮೂಡಿಸುತ್ತದೆ. ಪದ್ಮಾ ಮೌಲ್ಯ ₹2 ಕೋಟಿ, ಆಸ್ಕರ್‌ ಮೌಲ್ಯ ₹1.11 ಕೋಟಿ ಹಾಗೂ ಬಾಹುಬಲಿ ಮತ್ತು ನರಸಿಂಹ ಕುದುರೆಗಳ ಮೌಲ್ಯ ಕ್ರಮವಾಗಿ ₹51 ಲಕ್ಷ ಮತ್ತು ₹11 ಲಕ್ಷ ಎಂದು ನಿಗದಿಪಡಿಸಲಾಗಿತ್ತು.

ಅಮೆರಿಕ, ಜಪಾನ್‌, ರಷ್ಯಾದವರು ಸೇರಿದಂತೆ 16 ಲಕ್ಷ ಮಂದಿ ಕುದುರೆಗಳನ್ನು ವೀಕ್ಷಿಸಲು ಉತ್ಸವಕ್ಕೆ ಭೇಟಿ ನೀಡಿದ್ದರು.

‘ಈ ಗ್ರಾಮದಲ್ಲಿ ಕುದುರೆ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಪ್ರವಾಸೋದ್ಯಮ ನಿಗಮ ಉದ್ದೇಶಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರ ₹4.98 ಕೋಟಿ ನೀಡಲು ಒಪ್ಪಿಗೆ ಸೂಚಿಸಿದೆ’ ಎಂದು ಪ್ರವಾಸೋದ್ಯಮ ಸಚಿವ ಜಯಕುಮಾರ್‌ ರಾವಳ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.