ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್–ಬೌಲಿಂಗ್ ಸಮನ್ವಯತೆಯೇ ಗೆಲುವಿಗೆ ಹಾದಿ: ವೆಂಕಟೇಶ್ ಪ್ರಸಾದ್

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹಸಿರು ಪಿಚ್‌ಗಳಿದ್ದ ಮಾತ್ರಕ್ಕೆ ಮಧ್ಯಮವೇಗಿಗಳ ಆಟದಿಂದ ಮಾತ್ರ ಜಯಿಸುವುದು ಸಾಧ್ಯವಿಲ್ಲ. ಸ್ಕೋರ್ ಬೋರ್ಡ್ ಮೇಲೆ ಉತ್ತಮ ಮೊತ್ತದ ಬಲ ಇದ್ದರೆ ಬೌಲರ್‌ಗಳಿಗೆ ಹೆಚ್ಚು ಸ್ವಾತಂತ್ರ್ಯ ಸಿಗುತ್ತದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಸಮನ್ವಯತೆ ಸಾಧಿಸಿದಾಗ ಯಾವುದೇ ಪಿಚ್‌ನಲ್ಲಿಯೂ ಗೆಲ್ಲಬಹುದು. ಈಗಿನ ತಂಡದಲ್ಲಿ ಅಂತಹ ಸಾಮರ್ಥ್ಯ ಇದೆ’ – ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ. ಭಾರತ ಜೂನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ವೆಂಕಟೇಶಪ್ರಸಾದ್ ಅವರ ಅಭಿಪ್ರಾಯ ಇದು.

ಇದೇ 5ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಆರಂಭವಾಗಲಿರುವ ಟೆಸ್ಟ್ ಸರಣಿಯ ಕುರಿತು ಅವರು ಬುಧವಾರ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘ದಕ್ಷಿಣ ಆಫ್ರಿಕಾದಲ್ಲಿ ಹಸಿರು ಪಿಚ್‌ಗಳಿದ್ದ ಮಾತ್ರಕ್ಕೆ ವೇಗಿಗಳ ಮೇಲಷ್ಟೇ ಒತ್ತಡ ಹಾಕುವುದು ಸರಿಯಲ್ಲ. ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡಿ ಉತ್ತಮ ಮೊತ್ತ ಕಲೆ ಹಾಕಿದಾಗ ಬೌಲರ್‌ಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ’ ಎಂದರು.

ಈಗಿರುವುದು ಶ್ರೇಷ್ಠ ತಂಡ: ‘ಕೆಲವು ವರ್ಷಗಳ ಹಿಂದೆ ನಮ್ಮ ತಂಡವು ಪಂದ್ಯದಲ್ಲಿ ಉತ್ತಮ ಆರಂಭ ಮಾಡಿಯೂ ಕೊನೆಯ ಹಂತದಲ್ಲಿ ಜಯವನ್ನು ಒಲಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೆವು. ಆದರೆ ಈಗಿನ ತಂಡ ಆ ರೀತಿಯಲ್ಲ. ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಜಯಿಸಲು ಇದು ಒಳ್ಳೆಯ ಅವಕಾಶ. ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಚೇತೇಶ್ವರ್ ಪೂಜಾರ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಧ್ಯಮವೇಗಿಗಳು ಮತ್ತು ಸ್ಪಿನ್ನರ್‌ಗಳೂ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅಲ್ಲಿಯ ಪರಿಸ್ಥಿತಿಗೆ ಹೊಂದಿಕೊಂಡು ಆಡುವ ಸಾಮರ್ಥ್ಯ ಈ ತಂಡಕ್ಕೆ ಖಂಡಿತವಾಗಿಯೂ ಇದೆ’ ಎಂದು ವೆಂಕಟೇಶ್ ಹೇಳಿದರು.

‘ಕೆಲವು ವರ್ಷಗಳ ಹಿಂದೆ ಭಾರತ ತಂಡವು ವಿದೇಶಿ ನೆಲದಲ್ಲಿ ಆಡುವ ಆತಂಕದಲ್ಲಿರುತ್ತಿತ್ತು.  ಈಗ ಅಂತಹ ಸಮಸ್ಯೆ ಇಲ್ಲ. ಯಾವುದೇ ದೇಶದಲ್ಲಿಯೂ ಗೆಲ್ಲುವ ಸಾಮರ್ಥ್ಯ ಈಗಿನ ತಂಡಕ್ಕೆ ಇದೆ. ಅನಿಲ್ ಕುಂಬ್ಳೆ ಅವರು ಕೋಚ್ ಆಗಿದ್ದಾಗ ತಂಡವು ಸತತ ಗೆಲುವು ಸಾಧಿಸಿತ್ತು. ಈಗಲೂ ಚೆನ್ನಾಗಿ ಆಡುತ್ತಿದೆ. ಆದ್ದರಿಂದ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು ಸರಣಿ ಜಯಿಸುವ ನಿರೀಕ್ಷೆ ಇದೆ’ ಎಂದರು.

‘ನಾನು ದಕ್ಷಿಣ ಆಫ್ರಿಕಾದಲ್ಲಿ 20 ವರ್ಷಗಳ ಹಿಂದೆ ಆಡಿದ್ದೆ. ಅದೊಂದು ವಿಶೇಷ ಅನುಭವ. ಈಗ ಕ್ರಿಕೆಟ್ ಸಾಕಷ್ಟು ಬದಲಾಗಿದೆ. ಭಾರತ ತಂಡ ಮತ್ತಷ್ಟು ಬಲಿಷ್ಠಗೊಂಡಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಡರ್ಬನ್ ಪಂದ್ಯದ ನೆನಪು...
1996–97ರಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಿದಾಗ ಕರ್ನಾಟಕದ ಮೂವರು ವೇಗಿಗಳು ತಂಡದಲ್ಲಿದ್ದರು. ಜಾವಗಲ್ ಶ್ರೀನಾಥ್ ಬೌಲಿಂಗ್ ಸಾರಥ್ಯ ವಹಿಸಿದ್ದರು. ವೆಂಕಟೇಶ ಪ್ರಸಾದ್ ಮತ್ತು ಡೇವಿಡ್ ಜಾನ್ಸನ್ ಅವರು ಶ್ರೀನಾಥ್‌ ಅವರಿಗೆ ಜೊತೆ ನೀಡಿದ್ದರು.

ಸರಣಿಯ  ಒಂದು ಪಂದ್ಯವು ಡರ್ಬನ್‌ನಲ್ಲಿ ನಡೆದಿತ್ತು. ಅದರಲ್ಲಿ ವೆಂಕಟೇಶ್ ಪ್ರಸಾದ್ (60ಕ್ಕೆ5 ಮತ್ತು 93ಕ್ಕೆ5) ಅವರು ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿತ್ತು. ವೆಂಕಟೇಶ್  ಜೋಹಾನ್ಸ್‌ಬರ್ಗ್‌ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದ್ದರು. ಆ ಪಂದ್ಯವು ಡ್ರಾ ಆಗಿತ್ತು.

‘ಈ ಬಾರಿ ಡರ್ಬನ್‌ನಲ್ಲಿ ಪಂದ್ಯವು ನಡೆಯುತ್ತಿಲ್ಲ. ಎರಡು ದಶಕಗಳ ಹಿಂದೆ ಅಲ್ಲಿ ಆಡಿದ್ದೆ. ಉತ್ತಮವಾಗಿ ಬೌಲಿಂಗ್ ಮಾಡಿದ್ದೆ’ ಎಂದು ನೆನಪಿಸಿಕೊಂಡರು.

ಬಲಗೈ ಮಧ್ಯಮವೇಗಿ ವೆಂಕಟೇಶ್ ಪ್ರಸಾದ್ ಅವರು 33 ಟೆಸ್ಟ್‌ ಪಂದ್ಯಗಳನ್ನು ಆಡಿ 96 ವಿಕೆಟ್‌ಗಳನ್ನು ಮತ್ತು 161 ಏಕದಿನ ಪಂದ್ಯಗಳಿಂದ 196 ವಿಕೆಟ್‌ಗಳನ್ನು ಗಳಿಸಿದ್ದಾರೆ. 2003ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕೆಲಕಾಲ ಭಾರತ ತಂಡಕ್ಕೆ ಬೌಲಿಂಗ್ ಕೋಚ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT