ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಸ್ವಾಮಿ ರಾಗ ಸಂಯೋಜನೆಗೆ ಮಾನ್ಯತೆ ನೀಡಿ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಗಮ ಸಂಗೀತ ಗಾಯಕ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿರುವ ನಾಡಗೀತೆಯ ಧಾಟಿಗೆ ಅಧಿಕೃತ ಮಾನ್ಯತೆ ನೀಡಬೇಕು ಎಂದು  ಹಿರಿಯ ಸಾಹಿತಿ ಕೆ.ಎಸ್‌.ನಿಸಾರ್ ಅಹಮದ್ ಮತ್ತು ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ನಾಡಗೀತೆಗೆ ಮೊದಲು ರಾಗ ಸಂಯೋಜನೆ ಮಾಡಿದವರು ಅನಂತಸ್ವಾಮಿ. ಅದಕ್ಕೆ ಮಾನ್ಯತೆ ನೀಡುವ ಮೂಲಕ ಸುಗಮ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅವರಿಗೆ ಗೌರವ ಸಲ್ಲಿಸಬೇಕೆಂದು ನಿಸಾರ್ ಅಹಮದ್ ಕೋರಿದ್ದಾರೆ.

ಇದು ನಾಡಗೀತೆ ಆಗುತ್ತದೆ ಎಂಬ ಕಲ್ಪನೆ ಇಲ್ಲದಿದ್ದಾಗ ಅನಂತಸ್ವಾಮಿ ರಾಗ ಸಂಯೋಜಿಸಿ ಹಾಡಿ ಜನಪ್ರಿಯಗೊಳಿಸಿದ್ದರು. ಜನಮಾನ
ಸದಲ್ಲಿ ಅದು ನೆಲೆಗೊಂಡಿದೆ. ಹೀಗಾಗಿ ಅದಕ್ಕೆ ಮಾನ್ಯತೆ ನೀಡಬೇಕು ಎಂದು ಬರಗೂರು ರಾಮಚಂದ್ರಪ್ಪ ಮನವಿ ಮಾಡಿದ್ದಾರೆ.

‘ವಸಂತ ಕನಕಾಪುರೆ ಅಧ್ಯಕ್ಷತೆಯ ಸಮಿತಿ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಗೆ ಮಾನ್ಯತೆ ನೀಡುವಂತೆ 2006ರಲ್ಲಿ ಶಿಫಾರಸು ಮಾಡಿತ್ತು. ಆದರೆ, ಅದು ನನೆಗುದಿಗೆ ಬಿದ್ದಿದ್ದು, ಮತ್ತೊಂದು ಸಮಿತಿ ರಚನೆಯಾಗಿ ವರದಿ ನೀಡಿದೆ. ಅದು ಅನಂತಸ್ವಾಮಿ ರಾಗ ಸಂಯೋಜನೆ ಪರವಾಗಿ ವರದಿ ನೀಡಿಲ್ಲ ಎಂದು ನಮಗೆ ತಿಳಿದು ಬಂದಿದೆ. ಆದರೆ, ಈಗ ಅದೇ ವರದಿ ಸರ್ಕಾರದ ಮುಂದಿದೆ’ ಎಂದೂ ಅವರುಸ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮೊದಲನೇ ಸಮಿತಿ ಶಿಫಾರಸ್ಸನ್ನು ಒಪ್ಪಬೇಕು. ನಾಡಗೀತೆಯ ನಡುವೆ ಬರುವ ವಾದ್ಯ ಸಂಗೀತವನ್ನು ತೆಗೆದು ಹಾಡಿದರೆ ಅವಧಿಯೂ ಕಡಿಮೆಯಾಗಲಿದೆ ಎಂದಿದ್ದಾರೆ.

ಬಗೆಹರಿಯದ ಗೊಂದಲ
ಕುವೆಂಪು ಬರೆದಿರುವ ‘ಜಯ ಭಾರತ ಜನನಿಯ ತನುಜಾತೆ’ ಕವಿತೆಗೆ 2004ರಲ್ಲಿ ನಾಡಗೀತೆಯ ಮಾನ್ಯತೆ ನೀಡಿದ  ಸರ್ಕಾರ, 24 ಸಾಲುಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿತು. ಆದರೆ, ಯಾರ ರಾಗಸಂಯೋಜನೆಯಲ್ಲಿ ಹಾಡಬೇಕು ಎಂಬುದನ್ನು ನಿಗದಿ ಮಾಡಿರಲಿಲ್ಲ.

ಈ ಗೊಂದಲ ಪರಿಹಾರಕ್ಕೆ ಹಿರಿಯ ಕವಿ ಜಿ.ಎಸ್. ಶಿವರುದ್ರಪ್ಪ ಸಲಹೆಯ ಮೇರೆಗೆ ವಸಂತ ಕನಕಾಪುರೆ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚನೆ ಮಾಡಿತು. ‘ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2 ನಿಮಿಷ 40 ಸೆಕೆಂಡ್ ಹಾಡುವುದು ಸೂಕ್ತ’ ಎಂದು ಈ ಸಮಿತಿ 2006ರಲ್ಲಿ ವರದಿ ನೀಡಿತ್ತು.

ಈ ಹೊತ್ತಿನಲ್ಲಿ ಸಿ. ಅಶ್ವತ್ಥ್ ಶಿಷ್ಯರು, ಅನಂತಸ್ವಾಮಿ ಸಂಯೋಜನೆಯ ಗೀತೆ ಬೇಡ, ಅಶ್ವತ್ಥ್ ಅವರ ರಾಗ ಸಂಯೋಜನೆಯನ್ನೇ ಬಳಸಬೇಕೆಂದು ಪಟ್ಟು ಹಿಡಿದಿದ್ದರು. ಗೊಂದಲ ಮುಂದುವರಿದಿದ್ದರಿಂದ ವಸಂತ ಕನಕಾಪುರೆ ಅವರ ಅಧ್ಯಕ್ಷತೆಯಲ್ಲೇ ಕವಿ ಚನ್ನವೀರ ಕಣವಿ ಮತ್ತು ಇನ್ನೂ ಕೆಲವರಿದ್ದ ಸಮಿತಿ ರಚಿಸಲಾಯಿತು. ವರದಿ ಕೊಡುವ ಮುನ್ನ ಕನಕಾಪುರೆ ನಿಧನರಾದರು. ಕಣವಿ ಅಧ್ಯಕ್ಷತೆಯಲ್ಲೆ ಸಮಿತಿ ಮುಂದುವರಿಯಿತು.

ಕಣವಿ ಅಧ್ಯಕ್ಷತೆ ಸಮಿತಿಯು ಅಶ್ವಥ್ ಧಾಟಿಯನ್ನು ಅಧಿಕೃತಗೊಳಿಸಬಹುದು ಎಂದು ಶಿಫಾರಸು ಮಾಡಿ 2014ರಲ್ಲಿ ವರದಿ ಸಲ್ಲಿಸಿದೆ.

**

ನಾಡಗೀತೆ ಸಿ.ಅಶ್ವಥ್ ಧಾಟಿಯಲ್ಲಿ ಇದ್ದರೆ ಒಳ್ಳೆಯದು, ಸರ್ಕಾರ ಅದನ್ನೇ ಅಂತಿಮಗೊಳಿಸಬೇಕು.
– ಶಿವಮೊಗ್ಗ ಸುಬ್ಬಣ್ಣ, ಗಾಯಕ

ಈ ಕವಿತೆಗೆ ಮೊದಲು ರಾಗ ಸಂಯೋಜಸಿದವರು ಮೈಸೂರು ಅನಂತಸ್ವಾಮಿ. ‌ಅದನ್ನೇ ಅಧಿಕೃತಗೊಳಿಸಬೇಕು
–ಬಿ.ಕೆ. ಸುಮಿತ್ರಾ, ಗಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT