ಮಂಗಳವಾರ, ಆಗಸ್ಟ್ 4, 2020
22 °C

ನಿಯಮಬಾಹಿರ ಕಟ್ಟಡದ ನೆಲಮಹಡಿ ಪಾಲಿಕೆ ಪಾಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಇನ್ನುಮುಂದೆ ನಿಯಮ ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳ ನೆಲಮಹಡಿ ಪಾಲಿಕೆಯ ಸ್ವತ್ತಾಗಲಿದೆ!

ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸುವವರಿಗೆ ಅಂಕುಶ ಹಾಕಲು ಇಂತಹದ್ದೊಂದು ಕಠಿಣ ನಿಯಮ ರೂಪಿಸಲು ಬಿಬಿಎಂಪಿ ಮುಂದಾಗಿದೆ.

‘ಬಿಗಿ ನಿಯಮ ರೂಪಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಜನವರಿ 9ರಂದು ನಡೆಯುವ ಕೌನ್ಸಿಲ್‌ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು. ಕೌನ್ಸಿಲ್‌ನ ಒಪ್ಪಿಗೆ ಪಡೆದು, ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸುತ್ತೇವೆ' ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಿವೇಶನದ ವಿಸ್ತೀರ್ಣಕ್ಕೆ ಅನುಸಾರವಾಗಿ ಕಟ್ಟಡದ ನಕ್ಷೆಗೆ ಮಂಜೂರಾತಿ ಪಡೆದವರು, ನಿಯಮ ಉಲ್ಲಂಘಿಸಿ ಹೆಚ್ಚು ವಿಸ್ತೀರ್ಣದ ಮತ್ತು ಹೆಚ್ಚು ಮಹಡಿಗಳ ಕಟ್ಟಡ ಕಟ್ಟುತ್ತಿದ್ದಾರೆ. ಇಂತಹ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿವೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆಯಲ್ಲೂ ಕೆಲವು ಕಟ್ಟಡ ಮಾಲೀಕರು ತಪ್ಪು ಮಾಹಿತಿ ನೀಡುವ ಚಾಳಿ ಬಿಟ್ಟಿಲ್ಲ. ಹಾಗಾಗಿ ಇಂತಹ ಕಾನೂನು ಜಾರಿಗೆ ತರುವ ಬಗ್ಗೆ ಗಂಭೀರ ಆಲೋಚನೆ ಮಾಡಿದ್ದೇವೆ ಎಂದರು.

ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಈಗ ಸರಳಗೊಳಿಸಲಾಗಿದೆ. ಅನುಮತಿ ಪಡೆದಷ್ಟೇ ವಿಸ್ತೀರ್ಣದ ಕಟ್ಟಡವನ್ನು ಮಾತ್ರ ಕಟ್ಟಿಕೊಳ್ಳಬೇಕು. ನಿಯಮ ಉಲ್ಲಂಘಿಸಿ ಹೆಚ್ಚುವರಿಯಾಗಿ ನಿರ್ಮಿಸಿದರೆ, ನೆಲಮಹಡಿಯನ್ನು ಪಾಲಿಕೆ ಸ್ವಾಧೀನಕ್ಕೆ ಪಡೆಯಬಹುದು ಎಂಬ ಕರಾರಿಗೆ ಸಹಿ ಹಾಕಿಸಿಕೊಳ್ಳಲಾಗುತ್ತದೆ. ಈ ಕರಾರು ಪತ್ರಕ್ಕೆ ಸಹಿ ಹಾಕಿದವರಿಗೆ ಮಾತ್ರ ಕಟ್ಟಡ ನಿರ್ಮಾಣ ಪರವಾನಗಿ ನೀಡಲಾಗುತ್ತದೆ ಎಂದು ಮೇಯರ್‌ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕಂಪೆನಿಯೊಂದರ ಒಡೆತನದ ನಾಲ್ಕು ಕಟ್ಟಡಗಳ ಆಸ್ತಿ ತೆರಿಗೆಯನ್ನು ತಟಸ್ಥ ಸಂಸ್ಥೆಯಿಂದ ತಪಾಸಣೆಗೆ ಒಳಪಡಿಸಿದಾಗ ₹36 ಕೋಟಿ ಕಡಿಮೆ ಲೆಕ್ಕ ತೋರಿಸಿರುವುದು ಕಂಡುಬಂತು. ಇದನ್ನು ಆ ಕಂಪೆನಿ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ನ್ಯಾಯಾಲಯವು ‘ಬಿಬಿಎಂಪಿಗೆ ಮೊದಲು ಆಸ್ತಿ ತೆರಿಗೆ ಪಾವತಿಸಿ ಬನ್ನಿ’ ಎಂದು ಕಂಪೆನಿಗೆ ತಾಕೀತು ಮಾಡಿತು. ಕಂಪೆನಿ ಈಗ ಪಾಲಿಕೆಗೆ ₹360 ಕೋಟಿ ಆಸ್ತಿ ತೆರಿಗೆ ಪಾವತಿಸಿದೆ. ಈ ರೀತಿ ತೆರಿಗೆ ವಂಚಿಸಿರುವ ಕಂಪೆನಿಗಳು ಇನ್ನಷ್ಟು ಇವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.