ಬುಧವಾರ, ಜೂಲೈ 8, 2020
22 °C

ವರ್ಗಾವಣೆಯಾದರೂ ಬಿಡುಗಡೆಯಾಗದ ತಾಂತ್ರಿಕ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರ ನಿಗಮ ವರ್ಗಾವಣೆಗೊಂಡಿರುವ ತಾಂತ್ರಿಕ ಸಿಬ್ಬಂದಿಯನ್ನು ಸದ್ಯಕ್ಕೆ ಬಿಡುಗಡೆ ಮಾಡದಿರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ‌ನಿರ್ಧರಿಸಿದ್ದು, ಇದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.

ವರ್ಗಾವಣೆಗೊಂಡು ಕೌನ್ಸೆಲಿಂಗ್ ಮುಗಿಸಿರುವ ಎಲ್ಲಾ ಸಿಬ್ಬಂದಿಯನ್ನು ಇದೇ 5ರಂದು ಬಿಡುಗಡೆಗೊಳಿಸುವುದಾಗಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿತ್ತು. ಆದರೆ, ಕೊನೇ ಕ್ಷಣದಲ್ಲಿ ತನ್ನ ಆದೇಶ ಬದಲಿಸಿ, ಬಿಡುಗಡೆ ಮಾಡದಿರಲು ತೀರ್ಮಾನಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಹೊಸದಾಗಿ ತಾಂತ್ರಿಕ ಸಿಬ್ಬಂದಿ ನೇಮಕ ಆಗುವ ತನಕ ವರ್ಗಾವಣೆಗೊಂಡ ಸಿಬ್ಬಂದಿ ಮೂಲ ಸ್ಥಳದಲ್ಲಿಯೇ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದೆ. ಇದರಿಂದ ಬೇರೆ ನಿಗಮದ ತಾಂತ್ರಿಕ ಸಿಬ್ಬಂದಿ ಬಿಡುಗಡೆಗೊಳ್ಳಲು ಸಾಧ್ಯವಾಗುತ್ತಿಲ್ಲ.

ಕೆಎಸ್‌ಆರ್‌ಟಿಸಿಯಿಂದ 430 ಸಿಬ್ಬಂದಿ ಬಿಡುಗಡೆಯಾಗಬೇಕಿದ್ದು, ಬಿಎಂಟಿಸಿಯಿಂದ 367 ಸಿಬ್ಬಂದಿ ಕೆಎಸ್‌ಆರ್‌ಟಿಸಿಗೆ ಬರಬೇಕಿದೆ. ಅವರು ಬಂದು ವರದಿ ಮಾಡಿಕೊಳ್ಳದೆ ಬಿಡುಗಡೆ ಮಾಡಿದರೆ ವಾಹನಗಳ ನಿರ್ವಹಣೆ ಕಷ್ಟವಾಗಲಿದೆ. ಹೀಗಾಗಿ, ತಾಂತ್ರಿಕ ಸಿಬ್ಬಂದಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.

‘ಇದೇ 5ಕ್ಕೆ ಬಿಡುಗಡೆಯಾಗುವುದು ಖಾತ್ರಿಯಾಗಿದ್ದರಿಂದ ಮನೆಗಳನ್ನು ಖಾಲಿ ಮಾಡಿ, ವರ್ಗಾವಣೆಗೊಂಡಿರುವ ಊರುಗಳಲ್ಲಿ ಮನೆ ಮಾಡಿದ್ದೇವೆ. ಈಗ ಬಿಡುಗಡೆ ಮಾಡದಿದ್ದರೆ ಅತಂತ್ರರಾಗಲಿದ್ದೇವೆ. ಹೀಗಾಗಿ ಹೊಸ ಆದೇಶ ಹಿಂಪಡೆಯಬೇಕು’ ಎಂದು ತಾಂತ್ರಿಕ ಸಿಬ್ಬಂದಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.