ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಕ್‌ ರಾವ್‌ ಕೊಲೆ ಪ್ರಕರಣ: ಹಂತಕರಿಗೆ ಹಣ ಸಂದಾಯದ ಸುಳಿವು

Last Updated 4 ಜನವರಿ 2018, 20:21 IST
ಅಕ್ಷರ ಗಾತ್ರ

ಮಂಗಳೂರು: ಕಾಟಿಪಳ್ಳದಲ್ಲಿ ಬುಧವಾರ ಮಧ್ಯಾಹ್ನ ದೀಪಕ್‌ ರಾವ್‌ ಎಂಬ ಬಿಜೆಪಿ ಕಾರ್ಯಕರ್ತನನ್ನು ಕೊಚ್ಚಿ ಕೊಲೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ನಾಲ್ವರಿಗೆ ಕೆಲವು ದಿನಗಳಿಂದ ಈಚೆಗೆ ದೊಡ್ಡ ಮೊತ್ತದ ಹಣ ಸಂದಾಯ ಆಗಿರುವ ಸುಳಿವು ತನಿಖಾ ತಂಡಕ್ಕೆ ಲಭ್ಯವಾಗಿದೆ.

ಕೃತ್ಯ ಎಸಗಿದ ಕೆಲವೇ ಗಂಟೆಗಳಲ್ಲಿ ನಾಲ್ವರನ್ನೂ ಸೆರೆ ಹಿಡಿದಿರುವ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಹಾರಿಸಿದ ಗುಂಡುಗಳು ತಗುಲಿ ಗಾಯಗೊಂಡಿರುವ ಪಿಂಕಿ ನವಾಝ್‌ ಮತ್ತು ರಿಜ್ವಾನ್‌ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಮೊಹಮ್ಮದ್ ನೌಷಾದ್‌ ಮತ್ತು ಮೊಹಮ್ಮದ್ ಇರ್ಷಾನ್‌ ವಿಚಾರಣೆ ನಡೆಯುತ್ತಿದ್ದು, ಹಣ ಸಂದಾಯದ ಕುರಿತು ಇಬ್ಬರೂ ಮಹತ್ವದ ಮಾಹಿತಿ ಹೊರಗೆಡವಿದ್ದಾರೆ ಎಂಬುದು ಪೊಲೀಸ್‌ ಮೂಲಗಳಿಂದ ಗೊತ್ತಾಗಿದೆ.

‘ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಝ್‌ಗೆ ಮೊದಲು ದೊಡ್ಡ ಮೊತ್ತದ ಹಣ ತಲುಪಿದೆ. ಅದನ್ನು ನಾಲ್ವರೂ ಹಂಚಿಕೊಂಡಿದ್ದಾರೆ. ಈ ಹಣ ಬ್ಯಾಂಕ್‌ ಖಾತೆಗಳಲ್ಲಿ ವರ್ಗಾವಣೆ ಆಗಿರುವುದು ಮತ್ತು ಆರೋಪಿಗಳ ನಡುವೆ ಕೈ ಬದಲಾಗಿರುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಸುಪಾರಿ ನೀಡಲಾಗಿತ್ತೇ?: ದೀಪಕ್‌ ಕೊಲೆ ಮಾಡುವುದಕ್ಕಾಗಿಯೇ ಆರೋಪಿಗಳಿಗೆ ಹಣ ಸಂದಾಯವಾಗಿತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮೃತ ವ್ಯಕ್ತಿ ಬಿಜೆಪಿ, ಬಜರಂಗದಳ ಅಥವಾ ಇತರ ಯಾವುದೇ ಸಂಘಟನೆಗಳ ಮುಂಚೂಣಿ ಮುಖಂಡನೇನೂ ಆಗಿರಲಿಲ್ಲ. ಸದ್ಯ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ. ಆದರೆ, ಆತನ ಕೊಲೆಗಾಗಿ ದೊಡ್ಡ ಮೊತ್ತದ ಹಣ ಸಂದಾಯವಾಗಿದ್ದರೆ ಅದರ ಹಿಂದಿರುವ ಉದ್ದೇಶವೇನು ಎಂಬುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ತನಿಖಾ ತಂಡದ ಭಾಗವಾಗಿರುವ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ಆರೋಪಿ ಪಿಂಕಿ ನವಾಝ್‌ ನಗರದಲ್ಲಿ ಸಕ್ರಿಯವಾಗಿರುವ ಕೆಲವು ರೌಡಿಗಳ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ. ಆ ನಂಟಿನ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈದ್‌ ಮಿಲಾದ್ ಸಂದರ್ಭದಲ್ಲಿ ಬಂಟಿಂಗ್ಸ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಮತ್ತು ಆ ನಂತರದ ಬೆಳವಣಿಗೆಗಳ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದೆ.

ಹಲವು ದಿನಗಳಿಂದ ಸಂಚು?: ಹಲವು ದಿನಗಳ ಹಿಂದೆಯೇ ನವಾಝ್‌ ಇಂತಹ ಕೃತ್ಯವೊಂದನ್ನು ಎಸಗಲು ತಯಾರಿ ಮಾಡಿಕೊಂಡಿದ್ದ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ. ಆತ ಮತೀಯವಾದಿ ಸಂಘಟನೆಗಳ ಜತೆ ನಂಟು ಹೊಂದಿದ್ದ ಎಂಬ ಆರೋಪ ಒಂದು ಕಡೆಯಿಂದ ವ್ಯಕ್ತವಾಗಿದ್ದರೆ, ಮತ್ತೊಂದು ಕಡೆಯಿಂದ ರಾಜಕೀಯ ನಂಟಿನ ಆರೋಪ ಕೇಳಿಬಂದಿದೆ. ಈ ಎಲ್ಲ ಅಂಶಗಳ ಬಗ್ಗೆಯೂ ತನಿಖೆ ನಡೆಸುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್‌ ಪಂತ್‌ ಮಂಗಳೂರು ನಗರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT