ಸೋಮವಾರ, ಜೂಲೈ 6, 2020
21 °C

ಸತತ ಕಾರ್ಯಾಚರಣೆ; ಪತ್ತೆಯಾಗದ ಹುಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತತ ಕಾರ್ಯಾಚರಣೆ; ಪತ್ತೆಯಾಗದ ಹುಲಿ

ಎಚ್.ಡಿ.ಕೋಟೆ: ಮೈಸೂರು– ಮಾನಂದವಾಡಿ ರಸ್ತೆಯ ಸೋಗಹಳ್ಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ಬುಧವಾರ ಕಾಣಿಸಿಕೊಂಡಿದ್ದ ಹುಲಿ ಗುರುವಾರ ಪತ್ತೆಯಾಗಲಿಲ್ಲ. ಅರಣ್ಯ ಇಲಾಖೆಯವರು ದಸರಾ ಆನೆ ಅಭಿಮನ್ಯು ಸೇರಿದಂತೆ ಇತರೆ ನಾಲ್ಕು ಆನೆಗಳೊಂದಿಗೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಬುಧವಾರ ಮಧ್ಯಾಹ್ನ ಸೋಗಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಹುಲಿ ಕಂಡ ಬಸ್ಸಿನಲ್ಲಿದ್ದ ಪ್ರಯಾಣಿಕರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಬಳಿಕ ಕಾರ್ಯಾಚರಣೆ ಆರಂಭಿಸಲಾಯಿತು. ಪೊದೆಯೊಳಗೆ ಕಾಣುವಂತೆ ಹುಲಿ ಕುಳಿತಿದ್ದರೂ ಸ್ಥಳದಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡುವ ವೈದ್ಯರಾಗಲಿ, ಹುಲಿ ಸೆರೆಗೆ ಬೇಕಾಗುವ ಸಿಬ್ಬಂದಿಯಾಗಲಿ ಸ್ಥಳದಲ್ಲಿ ಇಲ್ಲದ ಕಾರಣ ಹಾಗೂ ಸಂಜೆಯಾದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಯಿತು.

ಅರ್ಜುನ ಆನೆ ಸೇರಿದಂತೆ ನಾಲ್ಕು ಆನೆಗಳಿದ್ದರೂ ಹುಲಿ ಸಮೀಪ ಹೋಗಲು ಹಿಂಜರಿಯುತ್ತಿದ್ದವು. ಇದರಿಂದ ಇಂತಹ ಕಾರ್ಯಾಚರಣೆಯಲ್ಲಿ ಪಳಗಿ ರುವ ಅಭಿಮನ್ಯು ಆನೆ ಕರೆಸಿಕೊಳ್ಳಲು ತೀರ್ಮಾನಿಸಲಾಯಿತು. ಗುರುವಾರ ಬೆಳಿಗ್ಗೆ 11 ಗಂಟೆಗೆ ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ, ಹುಲಿ ಪತ್ತೆಯಾಗಲಿಲ್ಲ. ಅದರ ಹೆಜ್ಜೆ ಗುರುತು ಸಹ ಕಂಡುಬರಲಿಲ್ಲ.

ಸುತ್ತಮುತ್ತಲ ಎಲ್ಲ ಗ್ರಾಮಗಳಿಗೂ ಮಾಹಿತಿ ನೀಡಿದ್ದು, ಸುಳಿವು ಸಿಕ್ಕ ತಕ್ಷಣ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕೋರಿದ್ದಾರೆ.

ಸ್ಥಳಕ್ಕೆ ಪಿಸಿಸಿಎಫ್ ಪುನಟಿ ಶ್ರೀಧರ್ ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು. ಹುಲಿ ದಾಳಿಯಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಕಳೆದ ಮೂರು ತಿಂಗಳಿನಿಂದ ಸುಮಾರು 40ಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡಲಾಗಿದೆ. ಹುಲಿ ಸ್ವಲ್ಪ ಗಾಯಗೊಂಡಿರುವ ಬಗ್ಗೆ ಸಿಬ್ಬಂದಿ ತಿಳಿಸಿದ್ದು, ಅದು ಕಾಣಿಸಿಕೊಂಡ ತಕ್ಷಣ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿ ಯಲಾಗುವುದು ಎಂದು ತಿಳಿಸಿದರು.

ರೈತರ ಅಸಮಾಧಾನ: ಐದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವವರು ಹುಲಿ ಕಾಣಿಸಿಕೊಂಡಾಗ ಏನು ಮಾಡುತ್ತಿದ್ದರು. ತುರ್ತು ಸಂದರ್ಭದಲ್ಲಿ ಬೇಕಾಬಿಟ್ಟಿ ಕೆಲಸ ಮಾಡುತ್ತಾರೆ. ಕಾರ್ಯಾಚರಣೆ ನೆಪದಲ್ಲಿ ಅಧಿಕಾರಿಗಳು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ರೈತ ಚನ್ನನಾಯಕ ಹಾಗೂ ಇತರರು ಆರೋಪಿಸಿದರು.

ಹುಲಿಯಿಂದ ಪ್ರಾಣ ಹಾನಿ ಯಾದರೆ ಯಾರು ಹೊಣೆ ಯಾರು ಎಂದು ಪ್ರಶ್ನಿಸಿದರು. ಈಗಾಗಲೇ 4– 5 ಜಾನುವಾರು ಬಲಿ ಪಡೆದಿದೆ. ರೈತರು ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಕೂಡಲೇ ಹುಲಿ ಹಿಡಿಯುವಂತೆ ವಿಠಲ್ ಆಚಾರ್ ಒತ್ತಾಯಿಸಿದರು.

ಸ್ಥಳದಲ್ಲಿ ನಾಗರಹೊಳೆ ಸಿಎಫ್ ಮಣಿಕಂಠ, ಎಸಿಎಫ್ ಪೂವಯ್ಯ, ಆರ್ಎಫ್ಒ ವಿನಯ್. ವನ್ಯಜೀವಿ ವಾರ್ಡನ್ ಕೃತಿಕಾ, ಎಸ್ಟಿಪಿಎಫ್, ಅರಣ್ಯ ಇಲಾಖೆಯ ಪಶುವೈದ್ಯ ಡಾ.ಮುಜೀಬ್, ಎಸ್ಟಿಪಿಎಫ್ ಸಿಬ್ಬಂದಿ ಮತ್ತು ಅರಣ್ಯ ಇಲಾಖಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ದಮ್ಮನಕಟ್ಟೆ ಬಳಿ ಕಾಡಾನೆ ಇರಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.