ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ದೇಗುಲ ಕಾಯಕಲ್ಪಕ್ಕೆ ಕೂಡಿಬಂತು ಕಾಲ

Last Updated 5 ಜನವರಿ 2018, 6:17 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸನಗರ ಸಮೀಪದ ದಟ್ಟ ಕಾನನದ ಮಧ್ಯೆ ಅವಶೇಷದ ಸ್ವರೂಪದಲ್ಲಿದ್ದ ಹೊಯ್ಸಳರು, ಕೆಳದಿ ಅರಸರ ಕಾಲದ ವಾಸ್ತುಶಿಲ್ಪವಿರುವ ಅಪರೂಪದ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಮೂಹೂರ್ತ ಕೂಡಿಬಂದಿದೆ.

ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿ, ನಂತರ ವಿಜಯನಗರದ ಅರಸರು, ಕೆಳದಿ ದೊರೆಗಳ ಕಾಲದಲ್ಲಿ ಪುನರ್‌ನಿರ್ಮಾಣವಾದ ವೀರಭದ್ರೇಶ್ವರ ದೇಗುಲ ಹಲವು ವರ್ಷಗಳಿಂದ ಪಾಳುಬಿದ್ದಿತ್ತು. ಬಸಾಪುರ, ಮಾರುತಿಪುರ, ಬಟ್ಟೆಮಲ್ಲಪ್ಪ, ಪಟಗುಪ್ಪೆ ಗ್ರಾಮಸ್ಥರ ಮನವಿಯ ಮೇರೆಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದೆ.

ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಈ ದೇವಸ್ಥಾನ 66 ಕಿ.ಮೀ. ದೂರ, ಹೊಸನಗರ ತಾಲ್ಲೂಕು ಕೇಂದ್ರದಿಂದ 3 ಕಿ.ಮೀ. ದೂರದಲ್ಲಿದೆ. ಹಿಂದೆ ಈ ದೇಗುಲ ಇದ್ದ ಸ್ಥಳ ವೀರಭದ್ರಾಪುರ ಅಗ್ರಹಾರಕ್ಕೆ ಸೇರಿತ್ತು. ಹರಿದ್ರಾ ನದಿ ತಟದಲ್ಲಿ ನಿರ್ಮಾಣ ಮಾಡಲಾಗಿತ್ತು. ಒಂದು ಕಾಲದಲ್ಲಿ ನಿತ್ಯವೂ ಪೂಜೆ, ಮಂತ್ರಘೋಷಗಳ ಸದ್ದು ಕೇಳುತ್ತಿದ್ದ ಇಲ್ಲಿ ಈಗ ಸಂಪೂರ್ಣ ನಿಶ್ಯಬ್ದ ಆವರಿಸಿದೆ.

ಮಲೆನಾಡಿನ ಶೈಲಿಯಲ್ಲೇ ನಿರ್ಮಾಣ: ಹೊಯ್ಸಳರ ಶೈಲಿಯಲ್ಲಿ ಐದು ಸ್ತರದ ನಕ್ಷತ್ರಾಕಾರದ ಜಗುಲಿಯ ಮೇಲೆ ಸುಂದರವಾದ ದೇವಾಲಯ ನಿರ್ಮಿಸಲಾಗಿದೆ. ಪ್ರವೇಶ ದ್ವಾರ ದಾಟಿದ ತಕ್ಷಣ ಚಿಕ್ಕ ವರಾಂಡ, ಮಧ್ಯಭಾಗದಲ್ಲಿ ಪ್ರಾಂಗಣ, ಕೊನೆಯಲ್ಲಿ ಗರ್ಭಗುಡಿ ನಿರ್ಮಿಸಲಾಗಿದೆ. ಆಕರ್ಷಕ ಕೆತ್ತನೆಯ ಕಲ್ಲಿನ ಕಂಬಗಳ ಮೇಲೆ ಇಡೀ ದೇಗುಲ ನಿಂತಿದೆ. ಅಂತರಾಳ, ಮುಖಮಂಟಪ, ಗರ್ಭಗುಡಿಯ ಮೇಲೆ ಭುವನೇಶ್ವರ ವಿಗ್ರಹವಿದೆ.

ಬುನಾದಿ ಹಾಗೂ ಜಗುಲಿಗಳು ಹೊಯ್ಸಳರು ಹಾಗೂ ಕೆಳದಿ ಶೈಲಿಯ ಸಮ್ಮಿಶ್ರಣದಲ್ಲಿದ್ದರೆ ಮೇಲ್ಚಾಚಣಿಗೆ ಮಲೆನಾಡಿನ ಮನೆಗಳ ಸ್ಪರ್ಶ ನೀಡಲಾಗಿದೆ. ಮೇಲ್ಭಾಗದಲ್ಲಿ ಬಿದ್ದ ನೀರು ಸರಾಗವಾಗಿ ಹರಿದುಹೋಗಲು ಇಳಿಜಾರು ಚಾವಣಿ ನಿರ್ಮಿಸಲಾಗಿದೆ.

ಕೆಳದಿ ಅರಸರ ಅವಧಿಯಲ್ಲಿ ಪುನರ್‌ನಿರ್ಮಾಣ: ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇಗುಲವನ್ನು 14–15ನೇ ಶತಮಾನದಲ್ಲಿ ವಿಜಯನಗರದ ಅರಸರು, ನಂತರ ಕೆಳದಿ ಅರಸರು ಪುನರ್ ನಿರ್ಮಾಣ ಮಾಡಿರುವ ಕುರುಹುಗಳು ದೊರೆಯುತ್ತವೆ. ಕೆಳದಿ ದೊರೆ ವೀರಭದ್ರಪ್ಪ ನಾಯಕರ ಅವಧಿಯಲ್ಲಿ ಜಮೀನು ಉಂಬಳಿ ನೀಡಿ, ದೇವಸ್ಥಾನ ಪುನರ್‌ ನಿರ್ಮಿಸಿರುವುದಕ್ಕೆ ದಾಖಲೆಗಳು ಲಭ್ಯವಾಗಿವೆ.

ಮುಕ್ಕಾಗದ ಗರ್ಭಗುಡಿ: ಒಂದು ಕಾಲದಲ್ಲಿ ಸುತ್ತಲ ಜನರ ಆರಾಧ್ಯ ದೈವವಾಗಿದ್ದ ವೀರಭದ್ರಶ್ವರ ದೇಗುಲ ಸುಮಾರು ಒಂದು ಶತಮಾನದಿಂದ ಈಚೆಗೆ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದೆ. ವರಾಂಡ, ಪ್ರಾಂಗಣದ ಕಲ್ಲಿನ ಗೋಡೆಗಳು ಸಂಪೂರ್ಣ ಕುಸಿದುಬಿದ್ದಿವೆ. ಕಲ್ಲುಕಂಬಗಳು ಮೊದಲ ಸ್ಥಿತಿಯಲ್ಲೇ ಇವೆ. ಗರ್ಭಗುಡಿ, ಮುಖಮಂಟಪಕ್ಕೆ ಸ್ವಲ್ಪವೂ ಹಾನಿಯಾಗಿಲ್ಲ. ಆದರೆ, ಹಲವು ವರ್ಷಗಳ ಹಿಂದೆಯೇ ಇಲ್ಲಿದ್ದ ದೇವರಮೂರ್ತಿಯನ್ನು ಮಾರುತಿಪುರದ ವೀರಭದ್ರೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಹಾಗಾಗಿ, ಈ ಪುರಾತನ ದೇಗುಲ ದೇವರಿಲ್ಲದ ಸ್ಥಾನವಾಗಿದೆ.

‘ದೇವಸ್ಥಾನದ ಹೊರ ಭಾಗದಲ್ಲಿ ದೊರೆತಿರುವ ಇಟ್ಟಿಗೆ, ಗಾರೆಯ ಅವಶೇಷಗಳು ದೇವಸ್ಥಾನದ ಸುತ್ತಲೂ ಕೋಟೆ ಕಟ್ಟಿರುವ ಸಾಧ್ಯತೆಯ ಕುರಿತು ಚಿಂತನೆಗೆ ಹಚ್ಚುತ್ತವೆ. ಈಗಲೂ ಹಸಿರು ಕಾನನದ ಮಧ್ಯೆ ಸುಂದರವಾಗಿ ಕಾಣುವ ಈ ಐತಿಹಾಸಿಕ ತಾಣದ ಕುರಿತು ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ’ ಎನ್ನುತ್ತಾರೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ.

ಎಲ್ಲಿದೆ ಈ ದೇವಸ್ಥಾನ?

ಶಿವಮೊಗ್ಗದಿಂದ ಸಾಗಿ ಹೊಸನಗರ ಸಮೀಪಿಸುವ ಮೊದಲು ಒಂದು ಕಿ.ಮೀ. ಮೊದಲು ಸಿಗುವ ಶಂಕರ್ ಗ್ಯಾರೇಜ್ ಬಳಿ ಬಲಕ್ಕೆ ತಿರುಗಿದರೆ ಪಟಗುಪ್ಪೆ ಸಿಗುತ್ತದೆ. ಅಲ್ಲಿಂದ ಆನಂದಪುರಂ ರಸ್ತೆಯ ಕಡೆಗೆ ಮಣ್ಣಿನ ಹಾದಿಯಲ್ಲಿ ಒಂದು ಕಿ.ಮೀ. ಸಾಗಿದರೆ ದೇವಸ್ಥಾನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT