ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸೌಲಭ್ಯ ಮರೀಚಿಕೆ, ನಿವಾಸಿಗಳ ಕನವರಿಕೆ

Last Updated 5 ಜನವರಿ 2018, 6:30 IST
ಅಕ್ಷರ ಗಾತ್ರ

ತುಮಕೂರು: ನೈಮರ್ಲ್ಯದ ದೃಷ್ಟಿಯಿಂದ ಜನರೇ ನಿರ್ಮಿಸಿಕೊಂಡಿದ್ದ ಚರಂಡಿಯನ್ನು ಕಿತ್ತು ಹಾಕಿ, ಪಾಲಿಕೆ ಹೊಸ ಚರಂಡಿ ನಿರ್ಮಿಸಿತ್ತು. ಆದರೆ ನಿರ್ಮಿಸಿ ತಿಂಗಳು ಕಳೆಯುವ ಮುನ್ನವೇ ಚರಂಡಿಗಳು ಕುಸಿಯ ತೊಡಗಿರುವುದರಿಂದ ಇಂತಹ ಕಾಮಗಾರಿಗಳ ಬಗ್ಗೆ ಜನರೇ ಅನುಮಾನಪಡುವಂತಾಗಿದೆ.

ಹೌದು, ಈ ಪರಿಸ್ಥಿತಿ ಎದುರಾಗಿರುವುದು ನಗರದ 2ನೇ ವಾರ್ಡಿನ ಹೊಂಬಯ್ಯನಪಾಳ್ಯದಲ್ಲಿ. ಶಿರಾ ಗೇಟ್‌ ವೃತ್ತದಿಂದ ಎಡಕ್ಕೆ ತೆರಳುವ ರಸ್ತೆಯಲ್ಲಿ ಸ್ವಲ್ಪವೇ ದೂರದಲ್ಲಿರುವ ಈ ಪ್ರದೇಶದಲ್ಲಿ ನೂರಾರು ಕುಟುಂಬಗಳು ಅಚ್ಚುಕಟ್ಟಾಗಿ ಮನೆಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ ಪಾಲಿಕೆ ವತಿಯಿಂದ ಇಲ್ಲಿ ಸಿಗಬೇಕಾಗಿದ್ದ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿದ್ದು, ಇದು ಜನರಲ್ಲಿ ಬೇಸರ ಉಂಟು ಮಾಡಿದೆ. ಈ ಬಡಾವಣೆಯಲ್ಲಿ ಚರಂಡಿ ಮತ್ತು ರಸ್ತೆ ಅವ್ಯವಸ್ಥೆಯಿಂದ ನಿವಾಸಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಮನೆಗಳ ಎದುರುಗಡೆಯೇ ಹಾದು ಹೋಗಿರುವ ತೆರೆದ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು, ಈ ನೀರಿನಲ್ಲಿ ಕ್ರಿಮಿಕೀಟಗಳು, ಸೊಳ್ಳೆಗಳು ವಾಸ ಮಾಡುತ್ತಿವೆ. ಜತೆಗೆ ನೀರು ಕೊಳೆತು ದುರ್ವಾಸನೆ ಬೀರುವಂತಾಗಿದೆ.

ಹೊಂಬಯ್ಯನಪಾಳ್ಯದಲ್ಲಿ ಟೂಡಾ ಬಡಾವಣೆಯನ್ನು ನಿರ್ಮಿಸಲಾಗಿದೆ. ಖಾಲಿ ಇರುವ ಈ ಬಡಾವಣೆಯ ರಸ್ತೆಗಳಿಗೆ ಮಾತ್ರ ಡಾಂಬರೀಕರಣ ಮಾಡಲಾಗಿದ್ದು, ಮನೆಗಳಿರುವ ರಸ್ತೆಗಳು ಮಾತ್ರ ಡಾಂಬರು ಕಾಣದೇ  ಧೂಳು ಉಗುಳುತ್ತಿವೆ. ನಿತ್ಯ ವಾಹನ ಸಂಚಾರದಿಂದ ಅತಿರೇಖ ಧೂಳು ಏಳುತ್ತಿದ್ದು, ಅಕ್ಕಪ‍ಕ್ಕದ ಮನೆಗಳಲ್ಲಿ ಧೂಳು ತುಂಬಿಕೊಳ್ಳುವಂತಾಗಿದೆ.

ನಗರದ ಬಹುತೇಕ ಬಡಾವಣೆಗಳಲ್ಲಿ ಕಾಂಕ್ರಿಟ್‌ ರಸ್ತೆಗಳೇ ನಿರ್ಮಾಣವಾಗಿವೆ. ಆದರೆ ನಮ್ಮ ಬಡಾವಣೆಯ ರಸ್ತೆಗಳಿಗೆ ಮಾತ್ರ ಇನ್ನೂ ಡಾಂಬರು ಭಾಗ್ಯವೇ ದೊರೆತಿಲ್ಲ ಎನ್ನುತ್ತಾರೆ ನಿವಾಸಿ ಶಿವಕುಮಾರ್‌.

ಇನ್ನೂ ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಕೂಡ ಸಮರ್ಪಕವಾಗಿರದ ಕಾರಣ, ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಹರಿದು ಜನರು ನಡೆದಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಹೀಗಾಗಿ ಇಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಡಾಂಬರು ರಸ್ತೆಯ ನಿರ್ಮಾಣವನ್ನಾದರೂ ಮಾಡಬೇಕು ಎಂದು ಸ್ಥಳೀಯ ದೇವರಾಜು ಆಗ್ರಹಿಸುತ್ತಾರೆ.

‘ನಮ್ಮ ಬಡಾವಣೆಯಲ್ಲಿ ಮೊದಲು ಅಚ್ಚುಕಟ್ಟಾದ ಚರಂಡಿಯನ್ನು ನಾಗರಿಕರೇ ಮಾಡಿಕೊಂಡಿದ್ದೇವು. ಆದರೆ ಇದ್ದಕ್ಕಿದ್ದ ಹಾಗೆಯೇ ಪಾಲಿಕೆ ವತಿಯಿಂದ ಉತ್ತಮ ಚರಂಡಿ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಬಂದ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಮೊದಲಿದ್ದ ಚರಂಡಿಯನ್ನು ಕಿತ್ತು ಹಾಕಿದ್ದಾರೆ. ಮತ್ತು ಯಾವುದೇ ಉತ್ತಮ ಗುಣಮಟ್ಟವಿಲ್ಲದ ಚರಂಡಿಯನ್ನು ಬಹಳ ಅವೈಜ್ಞಾನಿಕವಾಗಿ ನಿರ್ಮಿಸಿ ಹೋಗಿದ್ದಾರೆ. ಹೀಗಾಗಿ ಬಡಾವಣೆಯಲ್ಲಿ ಕೊಳಚೆ ನೀರು ನಿಂತುಕೊಳ್ಳುತ್ತಿದೆ’ ಎಂದು ನಿವಾಸಿ ಪುಷ್ಪಲತಾ ಆರೋಪಿಸುತ್ತಾರೆ.

‘ನಮ್ಮ ಮನೆ ರಸ್ತೆಯ ಪಕ್ಕವೇ ಇದೆ. ರಸ್ತೆಯು ಡಾಂಬರೀಕರಣ ಆಗದೇ ಇರುವುದರಿಂದ ವಾಹನಗಳು ಸಂಚರಿಸಿದಾಗ ರಸ್ತೆಯ ಧೂಳು ಮನೆಯನ್ನು ತುಂಬಿಕೊಳ್ಳುತ್ತಿದೆ. ಎಷ್ಟು ಬಾರಿ ಮನೆಯನ್ನೂ ಸ್ವಚ್ಛಗೊಳಿಸಿದರೂ ಪ್ರಯೋಜನವಾಗುವುದಿಲ್ಲ. ಮನೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರಿದ್ದರಂತೂ ಅವರಿಗೆ ಅಲರ್ಜಿ ಉಂಟಾಗಿ ಅನಾರೋಗ್ಯಕ್ಕೆ ತುತ್ತಾಗಬಹುದಾದ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ಜಯಮ್ಮ.

ನಾಗರಿಕರಿಂದಲೇ ಬೀದಿ ದೀಪ ಅಳವಡಿಕೆ

ಬಡಾವಣೆಯ ಯಾವುದೇ ರಸ್ತೆಗೆ ಇದುವರೆಗೂ ಪಾಲಿಕೆ ವತಿಯಿಂದ ಬೀದಿ ದೀಪಗಳನ್ನು ಅಳವಡಿಸಲಾಗಿಲ್ಲ. ಹೀಗಾಗಿ ನಾಗರಿಕರೇ ಖುದ್ದಾಗಿ, ತಮ್ಮ ತಮ್ಮ ಮನೆಗಳ ಎದುರು ಬೀದಿ ದೀಪಗಳನ್ನು ಹಾಕಿಸಿಕೊಂಡಿದ್ದಾರೆ. ಹೀಗೆ ಎಲ್ಲವನ್ನೂ ನಮ್ಮ ಖರ್ಚಿನಲ್ಲಿಯೇ ಮಾಡಿಕೊಳ್ಳುವುದಾದರೇ ಸರ್ಕಾರಕ್ಕೆ, ಪಾಲಿಕೆಗೆ ತೆರಿಗೆ ಕಟ್ಟುವುದಾದರೂ ಯಾಕೆ? ಎನ್ನುವುದು ನಾಗರಿಕರ ಪ್ರಶ್ನೆ.

‘ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೆಲೆಸಿರುವ ಬಡಾವಣೆಗಳಲ್ಲಿ ಒಂದೇ ಒಂದು ಬೀದಿ ದೀಪ ಕೆಲಸ ಮಾಡದೇ ಇದ್ದರೂ, ತಟ್ಟನೇ ದುರಸ್ಥಿ ಮಾಡಿಸಿಕೊಡುವ ಪಾಲಿಕೆಗೆ ನಮ್ಮಂಥಹ ಬಡಾವಣೆಗಳ ಮೇಲೆ ಮಾತ್ರ ತಾತ್ಸಾರ ಯಾಕೆ ಎನ್ನುವುದು ತಿಳಿಯುತ್ತಿಲ್ಲ’ ಎನ್ನುವುದು ಅವರ ಆತಂಕ.

ಕಾಲ್ನಡಿಗೆ ಪಥ ನಿರ್ಮಿಸಿದರೆ ಅನುಕೂಲ

ನಗರದ ಪ್ರಮುಖ ಆಕರ್ಷಣೆಯಾಗಿರುವ ಸುಮಾರು 512 ಎಕರೆ ವಿಸ್ತಾರದ ಅಮಾನಿಕೆರೆಯ 25 ಎಕರೆಯನ್ನು ಈಗಾಗಲೇ ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಕೆರೆಯ ದಕ್ಷಿಣ ಭಾಗದಲ್ಲಿ ಉದ್ಯಾನವನ ಮತ್ತು ನಡಿಗೆ ಪಥ ನಿರ್ಮಾಣ ಮಾಡಿರುವಂತೆ ಉತ್ತರದ ಶಿರಾಗೇಟ್ ಭಾಗದಲ್ಲೂ ಉದ್ಯಾನವನ ನಿರ್ಮಾಣ ಮಾಡಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ’ ಎನ್ನುವುದು ನಿವಾಸಿಗಳ ಅಭಿಪ್ರಾಯ.

‘ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡುವವರಿಗೆ ಇಲ್ಲಿ ಯಾವುದೇ ಉದ್ಯಾನವನ ಕೂಡ ಇಲ್ಲ. ಹೀಗಾಗಿ ಕೇವಲ ನಗರವಾಸಿಗಳಿಗೆ ಮಾತ್ರ ಸೀಮಿತವಾಗಿ ಕೆರೆ ಅಭಿವೃದ್ಧಿ ಪಡಿಸುವ ಬದಲು, ಕೆರೆಯ ಉತ್ತರ ದಿಕ್ಕಿನಲ್ಲಿಯೂ ಅಭಿವೃದ್ಧಿ ಪಡಿಸಿದರೆ ಒಳ್ಳೆಯದು’ ಎನ್ನುತ್ತಾರೆ ಶಿವಕುಮಾರ್‌.

* * 

ನಾವು ಪಾಲಿಕೆಗೆ ತೆರಿಗೆ ಕಟ್ಟುತ್ತೇವೆ. ಆದರೆ ಪಾಲಿಕೆಯ ಪ್ರಮುಖ ಬಡಾವಣೆಗಳಿಗೆ ಮಾತ್ರ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಾ ಉಳಿದ ಬಡಾವಣೆಗಳನ್ನು ಕಡೆಗಣಿಸಲಾಗುತ್ತಿದೆ
ಹನುಮಂತಯ್ಯ, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT