ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆ: ನೋಂದಣಿಗೆ ರೈತರ ನೂಕುನುಗ್ಗಲು

Last Updated 5 ಜನವರಿ 2018, 6:36 IST
ಅಕ್ಷರ ಗಾತ್ರ

ತಾಳಿಕೋಟೆ: ಪಟ್ಟಣದಲ್ಲಿ ಪ್ರಸಕ್ತ ಸಾಲಿನ ತೊಗರಿ ಖರೀದಿಗಾಗಿ ಎಪಿಎಂಸಿ ಆವರಣದಲ್ಲಿನ ಟಿಎಪಿಸಿಎಂಎಸ್‌ನಲ್ಲಿ ಆರಂಭಗೊಂಡ ತೊಗರಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ರೈತರು ಮುಗಿ ಬಿದ್ದುದರಿಂದ ಬುಧವಾರ ನೂಕುನುಗ್ಗಲು ಉಂಟಾಯಿತು.

ಕೇಂದ್ರದ ಮುಂದೆ ನೂರಾರು ರೈತರು ಜಮಾಯಿಸಿ ಸರದಿಯಲ್ಲಿ ನಿಲ್ಲಲು ನೂಕುನುಗ್ಗಲು ಹೆಚ್ಚಿದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಜಿ.ಎಸ್‌.ಬಿರಾದಾರ ಗದ್ದಲವನ್ನು ನಿಯಂತ್ರಸಿದರಲ್ಲದೇ, ಖರೀದಿ ಕೇಂದ್ರದ ಸೀಲ್ ಇರುವ ಕ್ರಮ ಸಂಖ್ಯೆಗಳನ್ನೊಳಗೊಂಡ ಚೀಟಿಗಳನ್ನು ನೀಡಿ ಸರದಿಯಲ್ಲಿ ಬರುವಂತೆ ಕ್ರಮ ಕೈಗೊಂಡರು.

ಈ ಬಾರಿ ತಾಲ್ಲೂಕಿನಲ್ಲಿ ಟಿಎಪಿಸಿ ಎಂಎಸ್‌ನಿಂದ ಮೂರು ಖರೀದಿ ಕೇಂದ್ರಗಳು ತಾಳಿಕೋಟೆ, ಮುದ್ದೇ ಬಿಹಾಳ, ನಾಲತವಾಡದಲ್ಲಿ ಹಾಗೂ ಪಿಕೆಪಿಎಸ್ ನಿಂದ ಹಡಲಗೇರಿ ಕೊಣ್ಣೂರ, ಹಿರೂರ, ಬ.ಸಾಲವಾಡಗಿ, ಢವಳಗಿ, ರಕ್ಕಸಗಿಯಲ್ಲಿ ಪ್ರಾರಂಭವಾಗಿವೆ ಎಂದು ಎಪಿಎಂಸಿ ಅಧ್ಯಕ್ಷ ಗುರು ತಾರನಾಳ ತಿಳಿಸಿದರು.

ತಾಂತ್ರಿಕ ತೊಂದರೆಯಿಂದ 30 ರಿಂದ 40 ರೈತರ ನೋಂದಣಿ ಮಾತ್ರ ನಡೆಯುತ್ತಿದೆ. ಸಮಸ್ಯೆ ಉಂಟಾಗದಿದ್ದರೆ 100ಕ್ಕೂ ಅಧಿಕ ರೈತರ ನೋಂದಣಿ ನಡೆಯಲಿದೆ. ರೈತರ ಅನುಕೂಲಕ್ಕಾಗಿ ಬಿಡುಗಡೆಗೊಳಿಸಲಾದ ಆ್ಯಪ್ ರೈತರಿಗೆ ನೆರವಾಗಲಿದೆ. ಜ.15 ರವರೆಗೆ ನೋಂದಣಿ ಅವಕಾಶ ನೀಡಲಾಗಿದೆ. ನಂತರ ದಿನಗಳಲ್ಲಿ ತೊಗರಿ ಖರೀದಿ ಕಾರ್ಯ ಆರಂಭಗೊಳ್ಳಲಿದೆ ಎಂದು ತಾರನಾಳ ತಿಳಿಸಿದರು.

ಬಂಡೆಪ್ಪನ ಸಾಲವಾಡಗಿ ಸೇರಿದಂತೆ ತಾಳಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ತೊಗರಿ ಕಟಾವು ಇದೀಗ ನಡೆದಿದ್ದು, ರಾಶಿ ಮಾಡಲಾಗಿಲ್ಲ. ರಾಶಿ ಮಾಡಿದ ನಂತರ ಅದನ್ನು ಒಣಗಿಸಲೂ ಸಮಯ ಬೇಕಾಗುತ್ತದೆ. ಹೀಗಾಗಿ ರೈತರು ನಿಖರವಾಗಿ ತಮ್ಮ ಬೆಳೆ ಇಷ್ಟೆಂದು ನೋಂದಣಿ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ರೈತರ ಎಲ್ಲ ಜಮೀನುಗಳಲ್ಲಿ ಕಟಾವಣೆ ಮುಗಿಯುವವರೆಗೆ ನೋಂದಣಿಗೆ ಅವಕಾಶ ನೀಡಬೇಕು ಎಂದು ಬಂಡೆಪ್ಪನ ಸಾಲವಾಡಗಿ ರೈತರು ಮನವಿ ಮಾಡಿದರು.

ಈ ಬಾರಿ ಖರೀದಿ ಕೇಂದ್ರ ಪ್ರಾರಂಭವಾಗುವ ಸುದ್ದಿ ತಿಳಿದು ಬೆಳಿಗ್ಗೆ ನಾಲ್ಕು ಗಂಟೆಗೆಲ್ಲ ಸರದಿ ಕಾಯುತ್ತಿದ್ದೇವೆ. ಕೆಲ ಬಲಾಢ್ಯರಾದವರು ನಮ್ಮನ್ನು ಹಿಂದಕ್ಕೆ ತಳ್ಳಿ ಮುಂದೆ ನಿಂತಿದ್ದಾರೆ ಎಂದು ಕಾರಗನೂರಿನ ಗೌಡಪ್ಪಗೌಡ ಬಿರಾದಾರ ಅಸಮದಾನ ವ್ಯಕ್ತಪಡಿಸಿದರು.

ಖರೀದಿ ಕೇಂದ್ರಕ್ಕೆ ಒತ್ತಾಯ

ಮುದ್ದೇಬಿಹಾಳ: ತಾಲ್ಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಲು ಆಗ್ರಹಿಸಿ ನೂರಾರು ರೈತರು ಬುಧವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ತಾಲ್ಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು.

ಢವಳಗಿ ಪಿಕೆಪಿಎಸ್‌ನಲ್ಲಿ ಪ್ರಾರಂಭಿಸಲಾದ ಖರೀದಿ ಕೇಂದ್ರದಲ್ಲಿರುವ ಸಿಬ್ಬಂದಿ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ಢವಳಗಿ ರೈತರ ಹೆಸರನ್ನು ಮೊದಲು ನೋಂದಣಿ ಮಾಡಿಕೊಂಡು ಆಮೇಲೆ ಇನ್ನುಳಿದ ಗ್ರಾಮಗಳ ರೈತರ ಹೆಸರು ನೋಂದಾಯಿ ಸಿಕೊಳ್ಳು ವುದಾಗಿ ಹೇಳುತ್ತಿದ್ದಾರೆ. ಇದರಿಂದ ಸರದಿಯಲ್ಲಿ ನಿಂತ ಇತರೆ ಗ್ರಾಮಗಳ ರೈತರಿಗೆ ನಿರಾಶೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ತಹಶೀಲ್ದಾರ್, ಎಲ್ಲ 9 ಕೇಂದ್ರಗಳಿಗೆ ಹಳ್ಳಿಗಳನ್ನು ಒಡೆದು ಹಾಕಲಾಗಿದೆ. ಆಯಾ ಹಳ್ಳಿಗಳ ರೈತರು ತಮಗೆ ನಿಗದಿಪಡಿಸಿದ ಕೇಂದ್ರಗಳಲ್ಲಿ ಮಾತ್ರ ಹೆಸರು ನೋಂದಾಯಿಸಬೇಕು. ಹೀಗೆ ಮಾಡಿದರೆ ಸಮಸ್ಯೆ ಆಗುವುದಿಲ್ಲ. ರೈತರು ತಮಗೆ ನಿಗದಿಪಡಿಸಿದ ವ್ಯಾಪ್ತಿಯ ಕೇಂದ್ರ ಬಿಟ್ಟು ಬೇರೆ ಕೇಂದ್ರಕ್ಕೆ ಬಂದರೆ ಮಾತ್ರ ಸಮಸ್ಯೆ ತಲೆದೋರುತ್ತದೆ.

ಯಾವ ಹಳ್ಳಿಗಳ ವ್ಯಾಪ್ತಿ ಬರುತ್ತದೆ ಎನ್ನುವುದನ್ನು ಆಯಾ ಕೇಂದ್ರಗಳ ಮುಂದೆ ಪ್ರಕಟಿಸಲಾಗುತ್ತದೆ. ಇದನ್ನು ಗಮನಿಸಿ ರೈತರು ತಮಗೆ ನಿಗದಿಪಡಿಸಿದ ಕೇಂದ್ರಗಳಲ್ಲಿ ಮಾತ್ರ ಹೆಸರು ನೋಂದಾಯಿಸುವ ಮೂಲಕ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಕೋರಿಕೆ ತಿರಸ್ಕರಿಸಿದ ರೈತರು ಎಲ್ಲ ಪಿಕೆಪಿಎಸ್‌ಗಳಲ್ಲೂ ಖರೀದಿ ಕೇಂದ್ರ ತೆರೆಯದೇ ಹೋದಲ್ಲಿ ಈಗಿರುವ 9 ಕೇಂದ್ರಗಳನ್ನು ಬಂದ್ ಮಾಡಿ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು. ಬಿ.ಎಚ್.ಮಾಗಿ, ಗುರುನಾಥ ಬಿರಾದಾರ, ಎಂ.ಬಿ.ಮಾಗಿ, ಎಚ್.ಎಸ್.ಪಾಟೀಲ, ಹಣಮಂತ್ರಾಯ ದೇವರಳ್ಳಿ, ಸೋಮಶೇಖರ ಚೀರಲದಿನ್ನಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

* * 

ಈ ಬಾರಿ ಖರೀದಿ ಕೇಂದ್ರ ಪ್ರಾರಂಭವಾಗುವ ಸುದ್ದಿ ತಿಳಿದು ಬೆಳಿಗ್ಗೆ ನಾಲ್ಕು ಗಂಟೆಯಿಂದ ಖರೀದಿ ಕೇಂದ್ರದ ಮುಂದೆ ಕಾಯುತ್ತಿದ್ದೇವೆ
ಗೌಡಪ್ಪಗೌಡ ಬಿರಾದಾರ ರೈತ, ಕಾರಗನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT