ಗುರುವಾರ , ಆಗಸ್ಟ್ 13, 2020
27 °C

ಬಂದ್‌ಗೆ ಉತ್ತಮ ಪ್ರತಿಕ್ರಿಯೆ; ಹೆಚ್ಚಿದ ಕಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂದ್‌ಗೆ ಉತ್ತಮ ಪ್ರತಿಕ್ರಿಯೆ; ಹೆಚ್ಚಿದ ಕಾವು

ಕುಶಾಲನಗರ: ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ಕೈಗೊಂಡಿರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಚೇಂಬರ್ ಆಫ್ ಕಾಮರ್ಸ್ ಗುರುವಾರ ಕರೆ ನೀಡಿದ್ದ ಕುಶಾಲನಗರ ಪಟ್ಟಣದ ಅರ್ಧದಿನ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವರ್ತಕರು ಸ್ವಯಂಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಬಸ್ಸುಗಳ ಸಂಚಾರ, ಆಟೊ ಮತ್ತು ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿಗಳ ಸಂಚಾರ ಎಂದಿನಂತೆ ನಡೆಯಿತು. ಸಿನಿಮಾ ಮಂದಿರ, ಹೋಟೆಲ್‌ಗಳು ಬಂದ್ ಆಗಿದ್ದವು. ಔಷಧಿ ಅಂಗಡಿ, ಹಾಲಿನ ಅಂಗಡಿಗಳಿಗೆ ಬಂದ್‌ನಿಂದ ವಿನಾಯತಿ ನೀಡಲಾಗಿತ್ತು. ಜನಸಂಚಾರ ಕೂಡ ವಿರಳವಾಗಿತ್ತು.

ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬ್ಯಾಂಕ್‌ಗಳು ಬಾಗಿಲು ಮುಚ್ಚಿಕೊಂಡು ಕಾರ್ಯ ನಿರ್ವಹಿಸಿದವು. ಹೋಟೆಲ್‌ಗಳು ಮುಚ್ಚಿದ್ದರಿಂದ ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಹಾಗೂ ಪ್ರವಾಸಿಗರು ಊಟ ತಿಂಡಿಗಾಗಿ ಪರದಾಡಿದರು.

ರಸ್ತೆತಡೆದು ಪ್ರತಿಭಟನೆ: ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಸದಸ್ಯರು ಹಾಗೂ ವಿವಿಧ ಗ್ರಾ.ಪಂ. ವ್ಯಾಪ್ತಿಯ ಸ್ಥಾನೀಯ ಸಮಿತಿ ಸದಸ್ಯರು ಪಟ್ಟಣದ ಮಸೀದಿ ವೃತ್ತ ಮತ್ತು ಟಿಎಂಸಿ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದರು.

ಒಂದು ತಾಸಿಗೂ ಹೆಚ್ಚು ಕಾಲ ರಸ್ತೆಯಲ್ಲಿ ಕುಳಿತ ಪ್ರತಿಭಟನಕಾರರು, ‘ಬೇಕೇ ಬೇಕು ತಾಲ್ಲೂಕು ಬೇಕು’, ‘ಕಾವೇರಿ ತಾಲ್ಲೂಕು ನಮ್ಮ ಜನ್ಮಸಿದ್ಧ ಹಕ್ಕು’, ‘ಕಾವೇರಿ ತಾಲ್ಲೂಕು ಹೋರಾಟಕ್ಕೆ ಜಯವಾಗಲಿ’, ‘ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ’ ಎಂಬ ಘೋಷಣೆಗಳನ್ನು ಮೊಳಗಿಸಿದರು.

ರಸ್ತೆತಡೆಯಿಂದಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಬಿಎಂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೈಸೂರು– ಮಡಿಕೇರಿ ಕಡೆಗೆ ಸಂಚರಿಸುವ ವಾಹನಗಳಲ್ಲಿ ವ್ಯತ್ಯಯ ಉಂಟಾಯಿತು. ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ತೊಂದರೆ ಆಯಿತು.

ಶಿರಂಗಾಲ, ಕೂಡಿಗೆ, ಗುಡ್ಡೆಹೊಸೂರು, ನೆಲ್ಲಿಹುದಿಕೇರಿ, ಸುಂಟಿಕೊಪ್ಪ ಗ್ರಾಮಗಳ ಗ್ರಾಮಸ್ಥರು ಕುಶಾಲನಗರದವರೆಗೆ ಪಾದಯಾತ್ರೆ ನಡೆಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಿವಿಧ ಘೋಷಣೆಗಳನ್ನು ಕೂಗಿದರು.

ಜಿ.ಪಂ. ಸದಸ್ಯರಾದ ಪಿ.ಎಂ.ಲತೀಪ್, ಕುಮುದಾ ಧರ್ಮಪ್ಪ, ಸುನೀತಾ ಮಂಜುನಾಥ್, ಪ.ಪಂ. ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್, ಸದಸ್ಯರಾದ ಎಚ್.ಜೆ.ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಮಧಸೂದನ್, ಎನ್.ಎನ್. ಚರಣ್, ಹೋರಾಟ ಸಮಿತಿ ಕಾರ್ಯದರ್ಶಿ ಕೆ.ಎನ್.ದೇವರಾಜ್, ಸದಸ್ಯರಾದ ಅಬ್ದುಲ್ ಖಾದರ್, ಜಿ.ಎಲ್.ನಾಗರಾಜು,

ಎಂ.ವಿ.ನಾರಾಯಣ್, ಎನ್.ಕೆ.ಮೋಹನ್ ಕುಮಾರ್, ಕೆ.ಎಸ್.ನಾಗೇಶ್, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಅಮೃತ್ ರಾಜ್, ಕಾವಲು ಪಡೆ ಅಧ್ಯಕ್ಷ

ಎಂ.ಕೃಷ್ಣ, ಜಯಕರ್ನಾಟಕ ಸಂಘಟನೆ ನಗರಾಧ್ಯಕ್ಷ ಗುರು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ.ರಾಜು, ನೆಲ್ಲಿಹುದಿಕೇರಿ ಸ್ಥಾನೀಯ ಸಮಿತಿ ಅಧ್ಯಕ್ಷ ಭರತ್, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಭವ್ಯಾ, ಎನ್.ಎಸ್.ರಮೇಶ್, ಉಪಾಧ್ಯಕ್ಷ ಕುಞ್ಞಕುಟ್ಟಿ, ಸದಸ್ಯರಾದ ಜಗದೀಶ್, ರುದ್ರಾಂಬಿಕೆ, ಶಶಿ ಭೀಮಯ್ಯ ಇದ್ದರು.

ಸತ್ಯಾಗ್ರಹ ನಡೆಸುತ್ತಿದ್ದ ಮುಸ್ತಾಫ್‌ ಅಸ್ವಸ್ಥ

ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ತಾಲ್ಲೂಕು ಹೋರಾಟ ಸಮಿತಿ ಸದಸ್ಯ ಎಂ.ಇ.ಮುಸ್ತಾಫ್‌ ಗುರುವಾರ ಮಧ್ಯಾಹ್ನ ಅಸ್ವಸ್ಥಗೊಂಡರು. ಅರ್ಧದಿನ ಬಂದ್ ನಡೆಸಿ ಕಾರು ನಿಲ್ದಾಣದ ಸಮಾವೇಶ ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ರಸ್ತೆಯಲ್ಲಿಯೇ ಮುಸ್ತಾಫ್‌ ಕುಸಿದು ಬಿದ್ದರು.

ತಕ್ಷಣ ಕಾರ್ಯಕರ್ತರು ಅವರನ್ನು ಸತ್ಯಾಗ್ರಹ ವೇದಿಕೆಗೆ ಎತ್ತಿಕೊಂಡು ತಂದು ಮಲಗಿಸಿದರು. ಅರ್ಧ ಗಂಟೆಯಾದರೂ ವೈದ್ಯರು ಸ್ಥಳಕ್ಕೆ ಬರದಿದ್ದ ಕಾರಣ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ನಂತರ ಸ್ಥಳಕ್ಕೆ ಬಂದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಪ್ರಸಾದ್ ಹಾಗೂ ಸಿಬ್ಬಂದಿ ಮುಸ್ತಾಫ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರಗೆ ಕಳುಹಿಸಿದರು.

ತಹಶೀಲ್ದಾರ್‌ಗೆ ತರಾಟೆ:ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸ್ಥಳದಲ್ಲಿ ವೈದ್ಯರನ್ನು ನಿಯೋಜಿಸದೆ ನಿರ್ಲಕ್ಷ್ಯ ತೋರಿಸಿರುವ ತಹಶೀಲ್ದಾರ್ ಮಹೇಶ್ ಅವರನ್ನು ಪ್ರತಿಭಟನಕಾರರು ತರಾಟೆ ತೆಗೆದುಕೊಂಡು.

‘ತಾಲ್ಲೂಕು ರಚನೆ ಆಗುವವರೆಗೂ ಉಪವಾಸ’

ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಕನಸಾಗಿರುವ ಕಾವೇರಿ ತಾಲ್ಲೂಕು ರಚನೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಘೋಷಣೆ ಆಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಕಾವೇರಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು. ಸಮಿತಿ ಸದಸ್ಯ ಕೆ.ಎಸ್.ರಾಜಶೇಖರ್, ನಂಜರಾಯಪ್ಪ ಅಸುಬೋಪಣ್ಣ ಮಾತನಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.