ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ತಳಿಯ ಜಾನುವಾರುಗಳ ಆಕರ್ಷಣೆ

Last Updated 5 ಜನವರಿ 2018, 10:04 IST
ಅಕ್ಷರ ಗಾತ್ರ

ಅರಕಲಗೂಡು: ಪಟ್ಟಣದಲ್ಲಿ ಗುರುವಾರ ಆರಂಭಗೊಂಡ ರಾಜ್ಯಮಟ್ಟದ ಪಶುಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದಲೂ ವಿವಿಧ ತಳಿಗಳ ಪಶುಗಳನ್ನು ಮೇಳಕ್ಕೆ ಕರೆತರಲಾಗಿದೆ.

ಆರೋಗ್ಯಮೇಳ, ಕೃಷಿ ಮೇಳದ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪಶುಮೇಳ ಆಯೋಜಿಸಲಾಗಿದೆ. ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ.

ಕಲಬುರ್ಗಿ, ರಾಯಚೂರು, ವಿಜಯಪುರ, ದಾವಣಗೆರೆ ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದಲೂ ಜಾನುವಾರುಗಳನ್ನು ಕರೆತರಲಾಗಿದೆ.

ಕೃಷ್ಣವ್ಯಾಲಿ, ಗಿರ್‌ ತಳಿಯ ಹೋರಿಗಳು, ಗುರಸಾಹಿವಾಲ್ ತಳಿಯ ಹಸು, ಕಂಬಳದ ಕೋಣ, ಮುರ್ರಾ, ಪಂಡ್ರಾಪುರಿ, ಸುರತಿ, ಜಾಫರಾಬಾದಿ ತಳಿಯ ಎಮ್ಮೆಗಳು, ಶಿರೋಹಿ, ಬಾರ್ ಬಾರಿ, ಬೀಟಲ್, ಬಾಲವಾಡಿ ತಳಿಯ ಮೇಕೆಗಳು, ಬಂಡೂರು ಕುರಿ, ಡೆಕ್ಕನ್‌ ಕುರಿ ತಳಿ, ಬೋಯರ್ ತಳಿ ಆಡು, ಗಿರಿರಾಜ, ಗಿರಿರಾಣಿ ತಳಿಯ ಕೋಳಿಗಳು, ರಷ್ಯನ್ ಗ್ರೆಜೆಂಟ್ ತಳಿಯ ಮೊಲ, ಯಾರ್ಕ್‌ಶೈರ್,→ಬ್ಯಾರಾಕ್, ಲ್ಯಾಂಡ್ರೇಸ್ →ತಳಿ ಹಂದಿಗಳು, ಮುಧೋಳ್‌ ತಳಿಯ ಶ್ವಾನಗಳು ಇಲ್ಲಿ ಕಾಣಬಹುದು.

ಪಶುಮೇಳದಲ್ಲಿ ನೂರಕ್ಕೂ ಹೆಚ್ಚಿನ ಮಳಿಗೆ ತೆರೆಯಲಾಗಿತ್ತು. ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿರುವ ಕಾರಣ, ಹೆಚ್ಚುವರಿಯಾಗಿ ಶಾಮಿಯಾನ ಹಾಕಿ ಸ್ಥಳಾವಕಾಶ ಒದಗಿಸಲಾಗುತ್ತಿದೆ. ಮೇಳದಲ್ಲಿ ಪಾಲ್ಗೊಂಡಿರುವ ಪಶುಗಳಿಗಾಗಿ ಮೊದಲ ದಿನಕ್ಕೆ 12 ಟನ್ ಒಣ ಹಾಗೂ 6 ಟನ್ ಹಸಿರು ಮೇವು, 3 ಕ್ವಿಂಟಲ್‌ ಪಶು ಆಹಾರಗಳನ್ನು ಪೂರೈಸಲಾಗಿದೆ.

ಹಾಲು ಕರೆಯುವ ಸ್ಪರ್ಧೆ: ಮೇಳದ ಅಂಗವಾಗಿ ಆಯೋಜಿಸಿರುವ ಈ ಸ್ಪರ್ಧೆಗೆ ಆನೆಕಲ್, ಮಂಡ್ಯ, ಬೆಂಗಳೂರು ಕಡೆಗಳಿಂದಲೂ ಮಿಶ್ರ ತಳಿಯ ರಾಸುಗಳನ್ನು ಕರೆತರಲಾಗಿದೆ.

ಅಲ್ಲದೆ ಪಶುಸಂಗೋಪನಾ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ, ಮೀನುಗಾರಿಕೆ , ಕೆಎಂಎಫ್ ಹಾಗೂ ಮೂರು ಪಶುವೈದ್ಯಕೀಯ ವಿಶ್ವವಿದ್ಯಾನಿಲಯಗಳ ಮಳಿಗೆಗಳಿದ್ದು, ವಿವಿಧ ಯೋಜನೆಗಳ ಮಾಹಿತಿ ಲಭ್ಯವಿದೆ. ರಸಮೇವು, ಅಜೋಲಾ ಮೇವು ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಪಶು ವೈದ್ಯರನ್ನು ಮುಂಜಾಗ್ರತೆಯಾಗಿ ಇರಲಿಸಲಾಗಿದೆ.

ಬೆಳಗ್ಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವೀಣಾ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ. ಮಂಥರ್‌ಗೌಡ, ಎಸ್‌.ಪಿ.ರೇವಣ್ಣ, ಬಿ.ಎಂ ರವಿ, ಪ.ಪಂ ಅಧ್ಯಕ್ಷ ಎಚ್‌.ಎಸ್‌.ಮಂಜುನಾಥ್ ಅವರು ಗೋವು ಪೂಜೆ ನಡೆಸುವ ಮೂಲಕ ಮೇಳಕ್ಕೆ ಬಂದ ಪಶುಗಳನ್ನು ಸ್ವಾಗತಿಸಿದರು.

ಗಮನಸೆಳೆದ ಹೋರಿಗಳು

ಅರಕಲಗೂಡು: ಸಚಿವ ವಿನಯಕುಲಕರ್ಣಿ ಸಾಕಿರುವ ಆಂಗೋರ್ ತಳಿಯ ಹೋರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿರುವ ಕಂಬಳದ ಕೋಣಗಳು ಮೇಳದಲ್ಲಿ ಜನಾಕರ್ಷಣೆಯ ರಾಸುಗಳಾಗಿವೆ.

ಜನರು ಉತ್ಸಾಹದಿಂದ ಮೇಳದಲ್ಲಿ ಪಾಲ್ಗೊಂಡಿದ್ದು, ವಿವಿಧ ತಳಿಯ ಜಾನುವಾರುಗಳನ್ನು ಕುರಿತು ಮಾಹಿತಿ ಪಡೆದರು. ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಸಾರ್ವಜನಿಕರಿಗೆ ಉಪಾಹಾರದ ವ್ಯವಸ್ಥೆ ಮಾಡಿದ್ದು, ಕೆಎಂಎಫ್‌ ಸಿಬ್ಬಂದಿ ಮಜ್ಜಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT