ಶನಿವಾರ, ಜೂಲೈ 4, 2020
21 °C
ಬೃಹಸ್ಪತಿ

ಅಸ್ತವ್ಯಸ್ತ ನೆರಳಚ್ಚು

ಪದ್ಮನಾಭ್ ಭಟ್ Updated:

ಅಕ್ಷರ ಗಾತ್ರ : | |

ಅಸ್ತವ್ಯಸ್ತ ನೆರಳಚ್ಚು

ಸಿನಿಮಾ: ಬೃಹಸ್ಪತಿ

ನಿರ್ಮಾಪಕ: ರಾಕ್‌ಲೈನ್‌ ವೆಂಕಟೇಶ್‌

ನಿರ್ದೇಶಕ: ನಂದಕಿಶೋರ್‌

ತಾರಾಗಣ: ಮನೋರಂಜನ್‌ ರವಿಚಂದ್ರನ್‌, ಮಿಸ್ತಿ ಚಕ್ರವರ್ತಿ, ಸಾಯಿಕುಮಾರ್‌, ಸಿತಾರ, ಸಾಧುಕೋಕಿಲ

ಇಂಜಿನಿಯರ್‌ ಕಲಿತ ಪ್ರತಿಭಾವಂತ, ನಿರುದ್ಯೋಗಿ ಹುಡುಗನೊಬ್ಬನ ವ್ಯಥೆ ಮತ್ತು  ಪ್ರಾಮಾಣಿಕರನ್ನು ಹತ್ತಿಕ್ಕಲು ಸದಾ ಷಡ್ಯಂತ್ರ ನಡೆಸುತ್ತಿರುವ ಭ್ರಷ್ಟ ವ್ಯವಸ್ಥೆಯ ಕಥೆ ಎರಡನ್ನೂ ಸೇರಿಸಿ ಹೆಣೆದ ತಮಿಳು ಸಿನಿಮಾ ‘ವಿಐಪಿ’ 2014ರಲ್ಲಿ ತೆರೆಕಂಡಿತ್ತು. ಧನುಷ‌್ ನಾಯಕನಾಗಿ ನಟಿಸಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನೂ ಕಂಡಿತ್ತು. ಅದರ ಯಶಸ್ಸನ್ನೇ ಗಮನದಲ್ಲಿಟ್ಟುಕೊಂಡು, ‘ಇದ್ದದ್ದು ಇದ್ದ ಹಾಗೆ’ ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ನಂದಕಿಶೋರ್‌.

ಇದು ಮೂಲ ಚಿತ್ರದ ನೆರಳಚ್ಚು. ಆದರೆ ಆ ನೆರಳಚ್ಚು ಅಚ್ಚುಕಟ್ಟಾಗಿದ್ದರೂ ಕನ್ನಡಕ್ಕೆ ಒಂದು ಒಳ್ಳೆಯ ಎರವಲು ಸಿನಿಮಾ ಸಿಗುತ್ತಿತ್ತೇನೋ. ಆದರೆ ಯಾವ ಹಂತದಲ್ಲಿಯೂ ‘ಬೃಹಸ್ಪತಿ’ ಮೂಲಚಿತ್ರದ ಎತ್ತರಕ್ಕೆ ಏರುವುದೇ ಇಲ್ಲ. ಅಷ್ಟೇ ಅಲ್ಲ, ಮೂಲವನ್ನು ನೋಡದ ಪ್ರೇಕ್ಷಕ, ಮೈಮರೆತು ಆಸ್ವಾದಿಸುವಷ್ಟು ಅಚ್ಚುಕಟ್ಟುತನ ಗಳಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಹಾಗಾಗಿ ಇದೊಂದು ರೀತಿಯಲ್ಲಿ ಅಸ್ತವ್ಯಸ್ತ ನೆರಳಚ್ಚು.

ಒಂದು ಒಳ್ಳೆಯ ಸಿನಿಮಾ ಆಗಲು ಬೇಕಾದ ಹಲವು ಅಂಶಗಳನ್ನು ಒಳಗೊಂಡಿರುವ ಕಥೆ, ಪ್ರತಿಭಾವಂತರ ತಾಂತ್ರಿಕ ತಂಡ ಎರಡೂ ಇಲ್ಲಿದೆ. ಆದರೆ ಅವುಗಳನ್ನು ಬೆಸೆಯುವ ಹಂತದಲ್ಲಿ ಹದ ತಪ್ಪಿರುವುದಕ್ಕೆ ಸಿನಿಮಾದುದ್ದಕ್ಕೂ ಪುರಾವೆಗಳು ದೊರೆಯುತ್ತವೆ. ನಂದಕಿಶೋರ್‌ ಕೂಡ ಮೂಲ ಚಿತ್ರವನ್ನು ಯಥಾವತ್‌ ಇಲ್ಲಿ ಮರುಚಿತ್ರೀಕರಿಸುವುದಕ್ಕಷ್ಟೇ ತಮ್ಮ ಪ್ರತಿಭೆಯನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಈ ಹಂತದಲ್ಲಿ ತೆರೆಯ ಮೇಲಿನ ಕಥನಕ್ಕೆ ಸಮರ್ಥ ಭಿತ್ತಿ ಒದಗಿಸಿಕೊಡಬೇಕಾದ ಛಾಯಾಗ್ರಹಣ (ಸತ್ಯ ಹೆಗಡೆ) ಮತ್ತು ಕಥೆಯ ಆತ್ಮದಂತೆ ಕಾಡಬೇಕಾದ ಸಂಗೀತ (ಹರಿಕೃಷ್ಣ) ಎರಡೂ ಹೇಗೆ ಸಿನಿಮಾಗೆ ಶತ್ರುವೂ ಆಗಬಲ್ಲವು ಎಂಬುದಕ್ಕೆ ‘ಬೃಹಸ್ಪತಿ’ ಒಳ್ಳೆಯ ನಿದರ್ಶನ. ಮೂಲ ಸಿನಿಮಾ ನೋಡಿದವರಿಗಂತೂ ಇದರ ಹಿನ್ನೆಲೆ ಸಂಗೀತ ಕಿರಿಕಿರಿ ಹುಟ್ಟಿಸುತ್ತದೆ.

ಕಥೆಯೇ ಈ ಸಿನಿಮಾದ ಜೀವಾಳ. ನಿರುದ್ಯೋಗಿ ಎಂಜಿನಿಯರ್‌ ಹುಡುಗ ಮನೆಯಲ್ಲಿ, ಹೊರಗಿನ ಸಮಾಜದಲ್ಲಿ ಅನುಭವಿಸುವ ಕಿರಿಕಿರಿಯಿಂದ ಶುರುವಾಗುವ ಸಿನಿಮಾ ದ್ವಿತೀಯಾರ್ಧದಲ್ಲಿ ವ್ಯವಸ್ಥೆಯಲ್ಲಿನ ಭ್ರಷ್ಟ ಹುಳುಕುಗಳ ವಿರುದ್ಧ ಸಿಡಿದೆದ್ದ ಪ್ರಾಮಾಣಿಕನ ಕಥೆಯಾಗಿ ಬದಲಾಗುತ್ತದೆ. ಪೋಕರಿ ಹುಡುಗನಾಗಿ, ಅಮ್ಮನನ್ನು ಕಳೆದುಕೊಂಡ ಅನಾಥನಾಗಿ, ಜಬಾಬ್ದಾರಿಯುತ ಇಂಜಿನಿಯರ್‌ ಆಗಿ ಮನೋರಂಜನ್‌ ರವಿಚಂದ್ರನ್‌ ಇಷ್ಟವಾಗುತ್ತಾರೆ. ಅವರ ಮೊದಲ ಸಿನಿಮಾ ‘ಸಾಹೇಬ’ಕ್ಕೆ ಹೋಲಿಸಿದರೆ ಅಭಿನಯದಲ್ಲಿ ಇನ್ನಷ್ಟು ಮಾಗಿರುವುದು ಕಾಣುತ್ತದೆ. ಉಸಿರುಗಟ್ಟಿಗೊಂಡು ಉದ್ದುದ್ದ ಡೈಲಾಗ್‌ ಅನ್ನೂ ಅವರು ನಿರರ್ಗಳವಾಗಿ ಒಪ್ಪಿಸಿದ್ದಾರೆ. ಆದರ ಅವರ ಬಾಯಲ್ಲಿ ಕನ್ನಡವನ್ನು ಕೇಳುವುದು ತುಸು ಕಷ್ಟವೇ.

ಒಳಗೊಳಗೆ ಪ್ರೀತಿ ಇರಿಸಿಕೊಂಡು ಹೊರಗೆ ಸಿಡುಕುವ ತಂದೆಯಾಗಿ ಸಾಯಿಕುಮಾರ್‌, ಅಕ್ಕರೆಯ ಅಮ್ಮನಾಗಿ ಸಿತಾರ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿ ಮಿಸ್ತಿ ಮುದ್ದು ಮುಖ, ಚೆಂದ ನಗೆಯಿಂದ ಮನಕದಿಯುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.