ಬುಧವಾರ, ಜೂಲೈ 8, 2020
29 °C

ವೀರ್ಯ ಪ್ರಮಾಣ ಯೋಚಿಸಲೇಬೇಕಾದ ವಿಷಯ

ಡಾ. ಎಸ್.ಎಸ್. ವಾಸನ್ Updated:

ಅಕ್ಷರ ಗಾತ್ರ : | |

‘ಸ್ಪರ್ಮ್ ಏಜ್ ಕ್ಯಾಲ್ಕುಲೇಟರ್’ – ವೀರ್ಯದ ‌ಲೆಕ್ಕಾಚಾರವನ್ನು ಕುರಿತು, ಅದರ ಹಲವು ಉಪಯೋಗಗಳು‌‌, ಈ ಬೆಳವಣಿಗೆ ತರಬಹುದಾದ ಬದಲಾವಣೆಗಳನ್ನು ಕುರಿತು ಈ ಹಿಂದಿನ ಅಂಕಣದಲ್ಲಿ ಚರ್ಚಿಸಲಾಗಿತ್ತು. ಈ ಬಾರಿ ವೀರ್ಯಸಾಂದ್ರತೆಯ ಬಗ್ಗೆ ತಿಳಿದುಕೊಳ್ಳೋಣ.

ತಜ್ಞರು ಮೊದಲು ‘ವೀರ್ಯದ ಗುಣಮಟ್ಟ ಮತ್ತು ಪ್ರಮಾಣ’ಕ್ಕೆ ಸಂಬಂಧಿಸಿದಂತೆ ವಿಮರ್ಶೆಯನ್ನು ನಡೆಸಿದರು. ಆದರೆ ಅದರಿಂದ ದೊರೆತ ಫಲಿತಾಂಶ ಆಘಾತಕಾರಿ ಅಂಶವೊಂದನ್ನೂ ಹೊರಹಾಕಿತ್ತು.

ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಹಲವು ಪಾಶ್ಚಾತ್ಯ ದೇಶಗಳಲ್ಲಿ 40ಕ್ಕೂ ಕಡಿಮೆ ವಯಸ್ಸಿನ ಪುರುಷರಲ್ಲಿ ವೀರ್ಯದ ಸಾಂದ್ರತೆಯು ಶೇ 50ರಷ್ಟು ಇಳಿಕೆಯಾಗಿದೆ ಎಂಬುದು ಆ ಫಲಿತಾಂಶದಿಂದ ತಿಳಿದುಬಂದಿತ್ತು. ಈ ಅಧ್ಯಯನ ಈ ಅಪಾಯಕಾರಿ ಬದಲಾವಣೆಗೆ ಎಚ್ಚರಿಕೆ ಗಂಟೆಯಾಗಿಯೂ ಕಂಡಿತು.

‘ಪುರುಷನ ಫಲವಂತಿಕೆ ಹಾಗೂ ಒಟ್ಟಾರೆ ಆರೋಗ್ಯ ಸಂಬಂಧಿತವಾಗಿ ಪ್ರಾಮುಖ್ಯ ನೀಡಲಾಗಿದ್ದು, ವೀರ್ಯದ ಪ್ರಮಾಣದಲ್ಲಿನ ಇಳಿಕೆ, ಈ ಸಮಸ್ಯೆಯ ನಿಖರ ಕಾರಣ ಹಾಗೂ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶ್ವದ ಸಂಶೋಧಕರಿಗೆ ಹಾಗೂ ಆರೋಗ್ಯ ಸಂಸ್ಥೆಗಳಿಗೆ ಈ ಅಧ್ಯಯನ ತುರ್ತು ಎಚ್ಚರಿಕೆ ಗಂಟೆಯೂ ಆಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಜೆರುಸಿಲಂನ ಹೀಬ್ರೂ ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು.

ವೀರ್ಯಸಾಂದ್ರತೆ ಅಥವಾ ವೀರ್ಯಪ್ರಮಾಣದ ಪರೀಕ್ಷೆಯು ಪುರುಷರ ಫಲವಂತಿಕೆಯ ಸಾಮರ್ಥ್ಯದ ಸೂಚಕವೂ ಆಗಿದೆ. ಈಗ ವೀರ್ಯದ ಗುಣಮಟ್ಟವನ್ನು ಪರೀಕ್ಷಿಸುವುದು ಕಷ್ಟಕರವಾಗೇನೂ ಉಳಿದಿಲ್ಲ. ಮಿಲಿಲೀಟರಿಗೆ 15 ಮಿಲಿಯನ್ ವೀರ್ಯಾಣು ಇದ್ದರೆ ಅದನ್ನು ಸಹಜ ಎಂದು ಪರಿಗಣಿಸಲಾಗುವುದು.

ವೀರ್ಯದ ಪ್ರಮಾಣದಲ್ಲಿನ ಇಳಿತವು ಅನಾರೋಗ್ಯದ ಸೂಚಕವೂ ಹೌದು. ಕೆಲವೊಮ್ಮೆ ಅನಾರೋಗ್ಯಕರ ಆಹಾರಪದ್ಧತಿ, ಜೀವನಶೈಲಿಗೂ ಇದು ಸಂಬಂಧಿಸಿರುತ್ತದೆ. ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಗಳಿಗೂ ಎಡೆ ಮಾಡಿಕೊಡುವುದರಲ್ಲಿ ಸಂಶಯವಿಲ್ಲ. 1992ರವರೆಗೂ ವೀರ್ಯದ ಪ್ರಮಾಣದಲ್ಲಿನ ಕುಸಿತದ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳು ನಡೆದರೂ ಸಮಗ್ರ ಅಧ್ಯಯನಗಳ ಕೊರತೆಯಿಂದ ಕೆಲವು ವಿಚಾರಗಳು ವಿವಾದಾತ್ಮಕವಾಗಿಯೇ ಉಳಿದವು.

ಇದೇ ಹಿನ್ನೆಲೆಯಿಟ್ಟುಕೊಂಡು, ತಜ್ಞರ ಒಂದು ತಂಡ, ಮೊತ್ತಮೊದಲ ಬಾರಿಗೆ ಸಮಗ್ರ ವಿಮರ್ಶೆಯನ್ನು ಕೈಗೊಂಡಿತು. 1973–2011ರವರೆಗೆ ಪಾಶ್ಚಾತ್ಯ ದೇಶದ ಪುರುಷರಲ್ಲಿ ವೀರ್ಯದ ಸಾಂದ್ರತೆಯು ಶೇ 52.4 ಕಡಿಮೆಯಾಗಿದ್ದು, ಒಟ್ಟಾರೆ ವೀರ್ಯ ಪ್ರಮಾಣದಲ್ಲಿ  ಶೇ 59.3ರಷ್ಟು ಇಳಿಕೆಗೊಂಡಿರುವುದಾಗಿ ವಿಮರ್ಶೆ ತಿಳಿಸಿಕೊಟ್ಟಿತು.

ಈ ಅಧ್ಯಯನದ ಫಲಿತಾಂಶಗಳು, ಮುಂಬರುವ ದಿನಗಳಲ್ಲಿ ಪುರುಷರ ಲೈಂಗಿಕ ಆರೋಗ್ಯದ ಕುರಿತು ಭೀತಿ ಹುಟ್ಟಿಸುವುದಷ್ಟೇ ಅಲ್ಲ, ಆ ದೇಶಗಳಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯ ಬಿಕ್ಕಟ್ಟು ಎದುರಾಗುವ ಸೂಚನೆಯನ್ನೂ ನೀಡಿತ್ತು. ಇಷ್ಟೆಲ್ಲಾ ಅಧ್ಯಯನಗಳು, ವಿಮರ್ಶೆಗಳು ನಡೆದರೂ ವೀರ್ಯದ ಪ್ರಮಾಣದಲ್ಲಿನ ಇಳಿಕೆಗೆ ನಿಖರ ಕಾರಣಗಳೇನು ಎಂಬುದರ ಕುರಿತು ತಜ್ಞರಲ್ಲಿ ಇನ್ನೂ ಅಸ್ಪಷ್ಟತೆ ಉಳಿದುಕೊಂಡಿದೆ. ಆದರೆ ರಾಸಾಯನಿಕಗಳಿಗೆ ತೆರೆದುಕೊಳ್ಳುವ ಸಂದರ್ಭಗಳು ಹೆಚ್ಚಾಗಿರುವುದು ಬಹುಮುಖ್ಯ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ಈ ಸಮಸ್ಯೆಯು ಗಂಭೀರ ಸ್ಥಿತಿಯನ್ನು ತಲುಪುವ ಹಾದಿಯೂ ದೂರವಿಲ್ಲ. ಆದ್ದರಿಂದ ಪುರುಷರೇ, ನಿಮ್ಮ ಜೀವನಶೈಲಿಯನ್ನು ಕುರಿತೂ ನೀವು ಯೋಚಿಸಬೇಕಾದ ದಿನಗಳು ಹತ್ತಿರ ಬಂದಿವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಲೈಂಗಿಕಕ್ರಿಯೆ ನಡೆಸುವ ಸಮಯದಲ್ಲಿ, ಪುರುಷನು ಮಿಲಿಯನ್‌ಗಟ್ಟಲೆ ವೀರ್ಯವನ್ನು ಸ್ಖಲಿಸುತ್ತಾನೆ ಎಂಬುದು ತಿಳಿದಿರುವ ವಿಚಾರವೇ. ಇಷ್ಟು ಸಂಖ್ಯೆಯಲ್ಲಿ ಬಿಡುಗಡೆಯಾದರೂ ಒಂದೇ ಒಂದು ವೀರ್ಯಾಣು ಮಾತ್ರ ಯಶಸ್ವಿಯಾಗಿ ಹೋಗಿ ಅಂಡಾಣುವನ್ನು ಫಲಿಸಲು ಸಾಧ್ಯ.

ವೀರ್ಯಾಣು ವೇಗವಾಗಿ ಉತ್ಪತ್ತಿಯಾಗುತ್ತವೆ, ಅಷ್ಟೇ ವೇಗವಾಗಿ ಸಾಯುತ್ತವೆ. ಅವುಗಳ ಜೀವಿತಾವಧಿ ಕಡಿಮೆ ಇರುವುದರಿಂದ ಅದರ ಬದಲಿಯಾಗಿ ವೀರ್ಯ ಪೂರೈಕೆಯೂ ನಿರಂತರವಾಗರಬೇಕು. ಆಗ ಲೈಂಗಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಉತ್ತಮ ಗುಣಮಟ್ಟದ ವೀರ್ಯ ಆರೋಗ್ಯಕರ ಭ್ರೂಣವನ್ನು ಸೃಷ್ಟಿಸುವಲ್ಲಿ ಎಷ್ಟು ಪ್ರಮುಖವಾಗಿರುತ್ತದೆ ಎಂಬುದು ಈ ಅಂಶಗಳಿಂದ ಮನದಟ್ಟಾಗುತ್ತದೆ. ವೀರ್ಯದ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ.

* ಸ್ಖಲನಗೊಂಡ ಶೇ 90ರಷ್ಟು ವೀರ್ಯವು ವಿರೂಪದ್ದಾಗಿರುತ್ತದೆ. ಎಲ್ಲಾ ವೀರ್ಯವೂ ಒಂದೇ ಸಮನಾಗಿ ಉತ್ಪತ್ತಿಯಾಗುವುದಿಲ್ಲ. ತಲೆ, ಕುತ್ತಿಗೆ, ಬಾಲದಲ್ಲಿ ದೋಷಗಳನ್ನು ಹೊಂದಿರುವ ವೀರ್ಯಾಣುಗಳೂ ಇರುತ್ತವೆ. ಈ ತೊಂದರೆಗಳು ಅಂಡಾಣುವನ್ನು ಫಲಿಸಲು ಬೇಕಾದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ಈ ಒಂದು ಕಾರಣದಿಂದ, ಪುರುಷನಿಗೆ ಲೈಂಗಿಕ ಸಮಸ್ಯೆ ಇದೆ ಎಂದು ಪರಿಗಣಿಸಲಾಗುವುದಿಲ್ಲ. ಸಹಜವಾದ ವೀರ್ಯವು, ಮೊಟ್ಟೆಯಾಕಾರದ ತಲೆಯೊಂದಿಗೆ ಉದ್ದದ ಬಾಲದ ರೀತಿ ಇರುತ್ತದೆ.

* ವೀರ್ಯಾಣುವು ತಣ್ಣಗಿರುತ್ತದೆ. ದೇಹದ ಇನ್ನಿತರ ಭಾಗಗಳಿಗಿಂತ ಜನನೇಂದ್ರಿಯವು 7 ಡಿಗ್ರಿ ಫೆರನ್ ಹೀಟ್‌ ತಣ್ಣಗಿರುತ್ತದೆ. ಈ ತಾಪಮಾನವು ವೀರ್ಯದ ಆರೋಗ್ಯಕ್ಕೂ ಅವಶ್ಯಕವಾಗಿರುತ್ತದೆ.

* ವೈ (ಗಂಡು), ಎಕ್ಸ್‌ (ಹೆಣ್ಣು) ವೀರ್ಯಾಣುಗಳೆರೂ ಇರುತ್ತವೆ. ಹಾರ್ವರ್ಡ್‌ ಹೆಲ್ತ್‌ ಪಬ್ಲಿಕೇಷನ್ ಪ್ರಕಾರ ಎಕ್ಸ್‌ ಕ್ರೋಮೋಸೋಮು ವೈ ಕ್ರೋಮೋಸೋಮಿಗಿಂತ ಹೆಚ್ಚು ಶಕ್ತಿಶಾಲಿ. ಆದ್ದರಿಂದ ಎಕ್ಸ್ ಕ್ರೋಮೋಸೋಮಿನಿಂದ ಬೇಗನೆ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ.

* ವೀರ್ಯ ಉತ್ಪತ್ತಿಗೆ ಎರಡು ತಿಂಗಳು ಅಗತ್ಯವಿರುತ್ತದೆ. ವೀರ್ಯಾಣು ಬಿಡುಗಡೆ ಕೇವಲ ಸೆಕೆಂಡುಗಳಲ್ಲಿ ಆಗಿಬಿಡಬಹುದು. ಆದರೆ ಅದು ಪಕ್ವಗೊಳ್ಳಲು ಒಂದು ತಿಂಗಳೇ ಹಿಡಿಯಬಹುದು. ಈ ಪುನರುತ್ಪತ್ತಿ ಪ್ರಕ್ರಿಯೆಯು ಪೂರ್ಣ ಪಕ್ವತೆ ಪಡೆಯಲು ಎರಡೂವರೆ ತಿಂಗಳು ಅಥವಾ ಮೂರು ತಿಂಗಳು ತೆಗೆದುಕೊಳ್ಳಬಹುದು. ಆರೋಗ್ಯಕರ ವೀರ್ಯವು ಹೊಸ ವೀರ್ಯ ಉತ್ಪತ್ತಿಯಾಗುವವರೆಗೂ ಅಂಡಾಣುವನ್ನು ಫಲಿತಗೊಳಿಸಲು ಸಾಧ್ಯವಿಲ್ಲ.

ಮುಂದುವರಿಯುವುದು...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.