ಬುಧವಾರ, ಆಗಸ್ಟ್ 5, 2020
21 °C

ಐಪಿಎಲ್‌: ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ರಿಕಿ ಪಾಂಟಿಂಗ್‌ ಆಯ್ಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಐಪಿಎಲ್‌: ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ರಿಕಿ ಪಾಂಟಿಂಗ್‌ ಆಯ್ಕೆ

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ದಿಗ್ಗಜ ರಿಕಿ ಪಾಂಟಿಂಗ್‌ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ಆಯ್ಕೆ ಮಾಡಲಾಗಿದೆ.

ಈ ಮೊದಲು ಕನ್ನಡಿಗ ರಾಹುಲ್‌ ದ್ರಾವಿಡ್‌ ಈ ತಂಡದ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಸದ್ಯ ಭಾರತ ಕಿರಿಯರ ತಂಡದ ಮುಖ್ಯ ಕೋಚ್‌ ಆಗಿರುವ ಅವರ ಸ್ಥಾನಕ್ಕೆ ಇದೀಗ ಪಾಂಟಿಂಗ್‌ರನ್ನು ನೇಮಕ ಮಾಡಲಾಗಿದೆ.

‘ರಿಕಿ ಪಾಂಟಿಂಗ್‌ ನಮ್ಮ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ನಾವು ಹೊಸ ಕೋಚ್‌, ಹೊಸ ತಂಡ ಹಾಗೂ ಹೊಸ ಯೋಜನೆಯೊಂದಿಗೆ ಮುಂದುವರಿಯಲಿದ್ದೇವೆ. ಈ ಬಾರಿ ಇಬ್ಬರು ಯುವ ಆಟಗಾರರನ್ನು ಉಳಿಸಿಕೊಂಡಿದ್ದು, ಅವರ ಸುತ್ತಲೇ ಇಡೀ ತಂಡವನ್ನು ಕಟ್ಟಲಿದ್ದೇವೆ. ತಂಡದಲ್ಲಿರುವ ಕ್ರಿಸ್‌ ಮೋರಿಸ್‌ ಶ್ರೇಷ್ಠ ಆಲ್ರೌಂಡರ್‌’ ಎಂದು ಡೆಲ್ಲಿ ಡೇರ್‌ಡೆವಿಲ್ಸ್‌ ಸಿಇಒ ಹೇಮಂತ್‌ ದುವಾ ಹೇಳಿದ್ದಾರೆ.

ಡೆಲ್ಲಿ ತಂಡದಲ್ಲಿ ಈ ಬಾರಿ ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಹಾಗೂ ಕ್ರಿಸ್‌ ಮೋರಿಸ್‌ ಮಾತ್ರವೇ ಉಳಿದುಕೊಂಡಿದ್ದಾರೆ. ಜನವರಿ 27–28ರಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಪ್ರಾಂಚೈಸಿಗಳು ಹೊಸದಾಗಿ ಆಟಗಾರರನ್ನು ಖರೀದಿಸಲಿವೆ.

2015 ಹಾಗೂ 2016ರ ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಕೋಚ್‌ ಆಗಿದ್ದ‌ ಪಾಂಟಿಂಗ್‌ ಅವರನ್ನು ಆಸ್ಟ್ರೇಲಿಯಾದ ರಾಷ್ಟ್ರೀಯ ಟಿ20 ತಂಡದ ಕೋಚ್‌ ಆಗಿಯೂ ನೇಮಕ ಮಾಡುವ ಕುರಿತು ಮಾತುಕತೆ ನಡೆದಿವೆ. ಇವರ ಮಾರ್ಗದರ್ಶನದಲ್ಲಿ ಮುಂಬೈ ತಂಡ 2015ರ ಐಪಿಎಲ್‌ ಸೀಸನ್‌ನ ಚಾಂಪಿಯನ್‌ ಆಗಿತ್ತು.

ಆಸ್ಟ್ರೇಲಿಯಾ ಮಾಧ್ಯಮಗಳ ವರದಿಗಳ ಪ್ರಕಾರ ಮುಂದಿನ ಟಿ20 ವಿಶ್ವಕಪ್‌ ವೇಳೆಗೆ ಪಾಂಟಿಂಗ್‌ ಮಾರ್ಗದರ್ಶನದಲ್ಲಿ ಪ್ರಬಲ ತಂಡ ಕಟ್ಟುವ ಕುರಿತು ಮಾತುಕತೆಗಳು ನಡೆದಿವೆ ಎನ್ನಲಾಗಿದೆ.

ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳು ಪಾಲ್ಗೊಳ್ಳುವ ತ್ರಿಕೋನ ಟಿ20 ಸರಣಿಗೆ ಪಾಂಟಿಂಗ್‌ ಆಸ್ಟ್ರೇಲಿಯಾ ತಂಡದ ಸಲಹೆಗಾರರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.