ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಶೀರ್‌ ಜೀವ ಉಳಿಸಿದ ಶೇಖರ್–ರೋಹಿತ್‌

Last Updated 5 ಜನವರಿ 2018, 19:55 IST
ಅಕ್ಷರ ಗಾತ್ರ

ಮಂಗಳೂರು: ಹತ್ಯೆ, ಕೊಲೆ ಯತ್ನ ಪ್ರಕರಣಗಳ ಮಧ್ಯೆಯೂ ಮಾನವೀಯತೆಯ ತೋರಿಸುತ್ತಿರುವ ಘಟನೆಗಳೂ ನಿರಂತರವಾಗಿ ನಡೆಯುತ್ತಿವೆ. ಜಾತಿ, ಮತದ ಭೇದವನ್ನು ಬದಿಗಿಟ್ಟು ಮಾನವೀಯತೆಯ ಆಧಾರದಲ್ಲಿ ಸಹಾಯ ಹಸ್ತ ಚಾಚಿದ ಅನೇಕ ಉದಾಹರಣೆಗಳು ಇದೀಗ ಚರ್ಚೆಯ ವಿಷಯವಾಗಿವೆ.

ದೀಪಕ್‌ ರಾವ್‌ ಕೊಲೆ, ಬಶೀರ್‌ ಕೊಲೆಯ ಯತ್ನ ಪ್ರಕರಣಗಳಲ್ಲಿ ಮಾನವೀಯತೆಯ ದರ್ಶನವಾಗಿದೆ. ದೀಪಕ್‌ ರಾವ್‌ ಪ್ರಕರಣದಲ್ಲಿ ಮಜೀದ್‌ ಅವರು ನೆರವಿಗೆ ಧಾವಿಸಿದ್ದರೆ, ಬಶೀರ್‌ ಅವರ ಪ್ರಕರಣದಲ್ಲಿ ಶೇಖರ್‌ ಮತ್ತು ರೋಹಿತ್‌ ನೆರವಿನ ಹಸ್ತ ಚಾಚಿದ್ದಾರೆ. ಒಂದು ಕಡೆ ಪ್ರಾಣ ಉಳಿಸಲು ಆಗದಿದ್ದರೆ, ಇನ್ನೊಂದು ಕಡೆ ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಪ್ರಾಣ ರಕ್ಷಿಸಲಾಗಿದೆ.

ಏಕಾಏಕಿ ಹಲ್ಲೆಗೆ ಒಳಗಾದ ದೀಪಕ್‌ ಮೊದಲು ಕೂಗಿದ್ದೇ ಮಜೀದ್‌ ಅವರನ್ನು. ಮಜೀದ್‌ ಅವರ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್‌, ಅವರ ಮನೆಯಿಂದ ಸಿಮ್‌ ಕಾರ್ಡ್‌ನ ದಾಖಲೆಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಹಲ್ಲೆ ಮಾಡಲಾಗಿತ್ತು. ಮಜೀದ್ ಅವರ ಮನೆ ಬಳಿಯೇ ಈ ಘಟನೆ ನಡೆದಿದ್ದು, ದೀಪಕ್‌ ಅವರ ಕೂಗು ಕೇಳಿ ನೆರವಿಗೆ ಬಂದಿದ್ದು ಮಜೀದ್‌.

ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಿದ ಮಜೀದ್‌, ಕೂಡಲೇ ದೀಪಕ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ದೀಪಕ್‌ ಜೀವವನ್ನು ಉಳಿಸಲಾಗಲಿಲ್ಲ ಎನ್ನುವ ಬೇಸರ ಮಜೀದ್‌ ಅವರನ್ನು ಈಗಲೂ ಕಾಡುತ್ತಿದೆ.

‘ಒಳ್ಳೆಯ ಹುಡುಗ ನನ್ನ ಬಳಿ ಏಳು ವರ್ಷದಿಂದ ಕೆಲಸ ಮಾಡುತ್ತಿದ್ದ. ಯಾರ ಬಳಿಯೂ ಗಲಾಟೆ ಮಾಡಿಕೊಂಡವನಲ್ಲ. ಅಂಥವನಿಗೆ ಈ ಸ್ಥಿತಿ ಬಂದಿದ್ದು ದುಃಖವನ್ನು ತಂದಿದೆ’ ಎಂದು ಅವರು ಹೇಳುತ್ತಾರೆ.

ಆಸ್ಪತ್ರೆ ಸೇರಿದ ಬಶೀರ್‌: ದೀಪಕ್‌ ರಾವ್ ಹತ್ಯೆ ನಡೆದ ಬುಧವಾರ ರಾತ್ರಿ ಕೊಟ್ಟಾರ ಚೌಕಿ ಬಳಿ ಹಲ್ಲೆಗೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್‌ ಅವರನ್ನು ರಕ್ಷಿಸುವ ಮೂಲಕ ಶೇಖರ್‌ ಮತ್ತು ರೋಹಿತ್‌ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.

ಇಬ್ಬರೂ ಆಂಬುಲೆನ್ಸ್‌ ಚಾಲಕರು. ರಾತ್ರಿ ಕೊಟ್ಟಾರ ಚೌಕಿ ಮಾರ್ಗವಾಗಿ ಹೋಗುತ್ತಿದ್ದಾಗ, ಬಶೀರ್‌ ಅವರು ತೀವ್ರ ಗಾಯಗೊಂಡಿದ್ದರು. ಹತ್ತಿರ ಹೋಗಿ ನೋಡಿದಾಗ ತೀವ್ರ ರಕ್ತಸ್ರಾವ ಆಗುತ್ತಿತ್ತು. ಕೂಡಲೇ ಅವರನ್ನು ಸಮೀಪದ ಎ.ಜೆ. ಆಸ್ಪತ್ರೆಗೆ ದಾಖಲಿಸಿದರು. ಬಶೀರ್‌ ಅವರ ಪ್ರಾಣಕ್ಕೆ ಏನೂ ಆಗದೇ ಇದ್ದುದು ಇಬ್ಬರಲ್ಲಿ ಸಾರ್ಥಕ ಭಾವ ಮೂಡಿಸಿದೆ.

ಈ ಕುರಿತು ‘ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಶೇಖರ್‌, ‘ಮನುಷ್ಯನೊಬ್ಬನ ಜೀವ ಉಳಿಸಿದ ಸಂತೃಪ್ತಿ ನಮಗಿದೆ. ಬಶೀರ್ ಅವರ ಮನೆಯವರೂ ನಮಗೆ ಧನ್ಯವಾದ ತಿಳಿಸಿದ್ದಾರೆ. ಬೆಳಿಗ್ಗೆ ನಾನೂ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ’ ಎಂದು ತಿಳಿಸಿದರು.

‘ಅಂತಹ ಸಮಯದಲ್ಲಿ ಯಾರೂ, ಏನಾಗಿದೆ ಎಂದು ಯೋಚನೆ ಮಾಡುತ್ತ ಕುಳಿತುಕೊಳ್ಳುವುದಿಲ್ಲ. ಇದಕ್ಕೂ ಮೊದಲು ಅನೇಕ ಘಟನೆಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಬಶೀರ್‌ ಅವರು ರಸ್ತೆಯಲ್ಲಿ ನರಳಾಡುತ್ತಿದ್ದರು. ನನ್ನ ಜತೆಗಿದ್ದ ರೋಹಿತ್‌ ಜತೆಗೆ ಸೇರಿ, ಆಸ್ಪತ್ರೆಗೆ ಸೇರಿಸಿದೆವು. ಅವರು ಚೇತರಿಸಿಕೊಳ್ಳಬೇಕು. ಅದೊಂದು ನಮಗೆ ದೊಡ್ಡ ತೃಪ್ತಿ’ ಎಂದು ಹೇಳುವಾಗ ಅವರಲ್ಲಿ ಮಾನವೀಯತೆ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT