ಶನಿವಾರ, ಜೂಲೈ 4, 2020
21 °C

ಖಾಸಗಿ ವೈದ್ಯಕೀಯ ಮಸೂದೆಗೆ ರಾಜ್ಯಪಾಲರ ಅಂಕಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ವೈದ್ಯಕೀಯ ಮಸೂದೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು: ರಾಜ್ಯದಾದ್ಯಂತ ತೀವ್ರ ಚರ್ಚೆ ಹಾಗೂ ಸಂಘರ್ಷಕ್ಕೆ ಕಾರಣವಾಗಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ವಜುಭಾಯ್‌ ವಾಲಾ ಅಂಕಿತ ಹಾಕಿದ್ದಾರೆ.

ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದ ಪರಿಷ್ಕೃತ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು.

‘ಕೆಪಿಎಂಇ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಗುರುವಾರ ಅನುಮೋದನೆ ನೀಡಿದ್ದಾರೆ. ರಾಜಭವನದಿಂದ ಕಡತ ಮರಳಿ ಬಂದ ತಕ್ಷಣ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು. ಆರೋಗ್ಯ ಇಲಾಖೆಯು ಮಸೂದೆಗೆ ನಿಯಮಗಳನ್ನು ರಚಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಿದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಅಧಿಸೂಚನೆ ಹೊರಬೀಳಲಿದೆ’ ಎಂದು ಸಂಸದೀಯ ಇಲಾಖೆ ಮೂಲಗಳು ತಿಳಿಸಿವೆ.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳು ರೋಗಿಗಳನ್ನು ಸುಲಿಗೆ ಮಾಡುವುದಕ್ಕೆ ಕಡಿವಾಣ ಹಾಕಲು ತಂದ ಈ ಮಸೂದೆ, ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯರು ಮಧ್ಯೆ ಜಟಾಪಟಿಗೆ ಕಾರಣವಾಗಿತ್ತು.

ಸರ್ಕಾರ ನಿಗದಿಪಡಿಸುವುದಕ್ಕಿಂತ ಹೆಚ್ಚಿನ ದರವನ್ನು ಖಾಸಗಿ ಆಸ್ಪತ್ರೆಗಳು ಸಂಗ್ರಹಿಸಿದರೆ ₹ 25,000 ದಿಂದ ₹ 5 ಲಕ್ಷದವರೆಗೆ ದಂಡ ವಿಧಿಸುವ ಮತ್ತು ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಸೇರಿದಂತೆ, ಮಸೂದೆಯಲ್ಲಿದ್ದ ಕೆಲವು ಅಂಶಗಳಿಗೆ ಖಾಸಗಿ ವೈದ್ಯರಿಂದ ವಿರೋಧ ವ್ಯಕ್ತವಾಗಿತ್ತು.

ಹೀಗಾಗಿ ಈ ಮಸೂದೆಯನ್ನು ವಿಧಾನಮಂಡಲದ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಆದರೆ, ಸಮಿತಿ ಸೂಚಿಸಿದ್ದ ಕೆಲವು ಬದಲಾವಣೆಗಳಿಗೂ ಭಾರತೀಯ ವೈದ್ಯಕೀಯ ಸಂಘ ‌(ಐಎಂಎ) ವಿರೋಧ ವ್ಯಕ್ತಪಡಿಸಿತ್ತು. ವೈದ್ಯರ ಸಂಘದ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಮಾತುಕತೆ ನಡೆಸಿದ ಬಳಿಕ, ಜೈಲು ಮತ್ತು ದಂಡ ವಿಧಿಸುವ ಪ್ರಸ್ತಾವ ಸೇರಿದಂತೆ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು.

ಮಸೂದೆಯಲ್ಲಿ ಏನಿದೆ?

* ದುಬಾರಿ ದರ ಸಂಗ್ರಹಿಸಿದ ಆಸ್ಪತ್ರೆಗಳಿಗೆ ಮೇಲೆ ದಂಡ.

* ನೋಂದಾಯಿಸದೆ ಆಸ್ಪತ್ರೆ ನಡೆಸುವವರಿಗೆ 3 ವರ್ಷ ಜೈಲು, ₹ 10 ಸಾವಿರ ದಂಡ.

* ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರ ರಚನೆ.

* ತುರ್ತು ಸಂದರ್ಭದಲ್ಲಿ ಮುಂಗಡ ಕೇಳದೆ ಚಿಕಿತ್ಸೆ ನೀಡಬೇಕು.

* ಬಿಲ್‌ ಪಾವತಿಸದೆ ಶವ ನೀಡುವುದಿಲ್ಲ ಎಂಬ ಷರತ್ತು ವಿಧಿಸುವಂತಿಲ್ಲ.

*

‘ನನ್ನ ರಾಜಕೀಯ ಜೀವನದ ಸುದಿನ’

‘ಕೆಪಿಎಂಇ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದು ಸಂತಸ ತಂದಿದೆ. ನನ್ನ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ಇದೊಂದು ಸುದಿನ’ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಪ್ರತಿಕ್ರಿಯಿಸಿದರು.

ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 15 ದಿನದಲ್ಲಿ ಕಾಯ್ದೆ ಜಾರಿಗೊಳಿಸಲಾಗುವುದು ಎಂದರು.

‘ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಈ ಮಸೂದೆ ರೂಪಿಸಲಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳವರು ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಶುಲ್ಕ ನಿಗದಿಪಡಿಸಿದ್ದರು. ಬಡ ರೋಗಿಗಳು ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದೆ, ಚಿಕಿತ್ಸೆ ಸಹ ಪಡೆಯಲಾಗದೆ ಕಾಯಿಲೆಯಿಂದ ನರಳಾಡಿ ಸಾಯುತ್ತಿದ್ದರು. ಈ ನೋವು ಯಾರಿಗೂ ಅರ್ಥವಾಗಲಿಲ್ಲವೇ’ ಎಂದೂ ಅವರು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.