ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಪೂರೈಕೆ: ಕೇಂದ್ರದಿಂದ ತಾರತಮ್ಯ ನೀತಿ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಲಿದ್ದಲು ಪೂರೈಕೆ ಮತ್ತು ಗಣಿ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದರು.

‘ಕಲ್ಲಿದ್ದಲು ಗಣಿ ವಿಚಾರವಾಗಿ ಕರ್ನಾಟಕದ ಇಂಧನ ಸಚಿವರು ಯಾವುದೇ ಚರ್ಚೆ ಮಾಡಿಲ್ಲ ಎಂದು ಕೇಂದ್ರ ಇಂಧನ ಸಚಿವ ಪೀಯೂಷ್ ಗೋಯಲ್ ಲೋಕಸಭೆಯಲ್ಲಿ ಸುಳ್ಳು ಹೇಳಿದ್ದಾರೆ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ 5 ಬಾರಿ ಗೋಯಲ್ ಅವರನ್ನು ಭೇಟಿಯಾಗಿದ್ದೇವೆ. ಇಲಾಖೆಯಿಂದ 55 ಬಾರಿ ಪತ್ರ ಬರೆಯಲಾಗಿದೆ. ಆದರೆ, ಯಾವುದಕ್ಕೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ’ ಎಂದು ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಬೇಸಿಗೆಯಲ್ಲಿ ಎದುರಾಗಬಹುದಾದ ವಿದ್ಯುತ್ ಅಭಾವ ಎದುರಿಸಲು ಜಲಾಶಯಗಳಲ್ಲಿ ನೀರು ಉಳಿಸಿಕೊಳ್ಳಲಾಗಿದೆ. ವಿದೇಶಿ ಕಲ್ಲಿದ್ದಲು ಖರೀದಿಗೂ ಚಿಂತನೆ ನಡೆದಿದೆ. ರಾಜ್ಯಕ್ಕೆ ಮಹಾರಾಷ್ಟ್ರದಿಂದ ಹಂಚಿಕೆ ಆಗಬೇಕಿದ್ದ ಕಲ್ಲಿದ್ದಲು ಸಂಧಾನ ಅಥವಾ ಟೆಂಡರ್ ಮೂಲಕ ಪಡೆಯಬೇಕೇ ಎಂಬ ವಿವಾದ ಸುಪ್ರೀಂಕೋರ್ಟ್‍ನಲ್ಲಿದೆ. ಇದು ಅಂತಿಮವಾಗುವವರೆಗೂ ಖರೀದಿಗೆ ತೊಂದರೆ ಆಗಲಿದೆ. ಈ ಮಧ್ಯೆ, ರಾಜ್ಯಕ್ಕೆ ಮಂಜೂರಾದ ಕಲ್ಲಿದ್ದಲು ಗಣಿ ರದ್ದು ಮಾಡುವ ಬಗ್ಗೆ ಕೇಂದ್ರ ನೋಟಿಸ್ ನೀಡಿದೆ. ಆ ಗಣಿ ಬಳಸಿಕೊಳ್ಳುವ ಸಂಬಂಧ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದವೂ ಆಗಿದೆ ಎಂದರು.

ರಾಜ್ಯಕ್ಕೆ 119.57 ಲಕ್ಷ ಟನ್ ಕಲ್ಲಿದ್ದಲು ಮಂಜೂರಾಗಿದ್ದರೂ ಈವರೆಗೆ 63.9 ಲಕ್ಷ ಟನ್ (ಶೇ 53.01) ಮಾತ್ರ ಪೂರೈಕೆಯಾಗಿದೆ. ಜನವರಿಯಿಂದ ಮಾರ್ಚ್‍ವರೆಗೆ 55.7 ಲಕ್ಷ ಟನ್ ಬೇಡಿಕೆ ಇದೆ. ಇದರಲ್ಲಿ 45.22 ಲಕ್ಷ ಟನ್ ಪೂರೈಕೆಯಾಗುವ ವಿಶ್ವಾಸವಿದೆ. 12.88 ಲಕ್ಷ ಟನ್‌ ಕೊರತೆ ಉಂಟಾಗ
ಬಹುದು ಎಂದು ಮಾಹಿತಿ ನೀಡಿದರು.

ಡಿ.ಕೆ.ಶಿ ಚರ್ಚೆಯೇ ಮಾಡಿಲ್ಲ: ಗೋಯಲ್‌

ಕರ್ನಾಟಕದಲ್ಲಿ ಕಲ್ಲಿದ್ದಲು ಸಮಸ್ಯೆ ಇರುವ ಬಗ್ಗೆ ಅಲ್ಲಿನ ವಿದ್ಯುತ್ ಸಚಿವರು ಎಂದೂ ತಮ್ಮೊಂದಿಗೆ ಚರ್ಚೆ ಮಾಡಿಲ್ಲ. ಸಮಸ್ಯೆ ರಾಜ್ಯದ್ದೇ ಆಗಿರುವುದರಿಂದ ಅವರು ಈ ಬಗ್ಗೆ ಚರ್ಚೆ ಮಾಡಿಲ್ಲದಿರಬಹುದು ಎಂದು ಕೇಂದ್ರ ಇಂಧನ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಕರ್ನಾಟಕದ ಕಲ್ಲಿದ್ದಲು ಸಮಸ್ಯೆಯನ್ನು ಪರಿಹರಿಸುವಂತೆ ರಾಜ್ಯದ ವಿದ್ಯುತ್‌ ಸಚಿವ ಡಿ.ಕೆ. ಶಿವಕುಮಾರ್‌ ಪದೇ ಪದೇ ವಿನಂತಿಸಿದ್ದಾರೆಯೇ ಎಂದು ಕೋಲಾರದ ಕಾಂಗ್ರೆಸ್‌ ಸಂಸದ ಕೆ.ಎಚ್‌. ಮುನಿಯಪ್ಪ ಕೇಳಿದ ಪ್ರಶ್ನೆಗೆ ಗೋಯಲ್‌ ಲೋಕಸಭೆಯಲ್ಲಿ ಹೀಗೆ ಉತ್ತರಿಸಿದರು.

ಕಲ್ಲಿದ್ದಲು ಸಚಿವಾಲಯವು ಕರ್ನಾಟಕಕ್ಕೆ ಆರು ಕಲ್ಲಿದ್ದಲು ಗಣಿಗಳನ್ನು ಮಂಜೂರು ಮಾಡಿದೆ. ಆದರೆ, ಕರ್ನಾಟಕ ಸರ್ಕಾರ ಆಯ್ಕೆ ಮಾಡಿಕೊಂಡಿರುವ ಸಹಭಾಗಿ ಸಂಸ್ಥೆ ಮೈನಿಂಗ್‌ ಡೆವಲಪ್‌ಮೆಂಟ್‌ ಆಪರೇಟರ್‌ (ಎಂಡಿಒ) ಜತೆ ಸರ್ಕಾರ ಹೊಂದಿರುವ ವಿವಾದದಿಂದಾಗಿ ಕಳೆದ ಎರಡು ವರ್ಷಗಳಿಂದ ಈ ಗಣಿಗಳ ಉಪಯೋಗ ಪಡೆದುಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

‘ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಕರ್ನಾಟಕ ಸರ್ಕಾರ ಪಾರದರ್ಶಕವಾದ ಪ್ರಕ್ರಿಯೆ ನಡೆಸುತ್ತಿಲ್ಲ’ ಎಂದೂ ಗೋಯಲ್‌ ಆರೋಪಿಸಿದ್ದಾರೆ.

‘ನವೀಕರಿಸಬಹುದಾದ ಇಂಧನ ಮತ್ತು ಅದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ನಿಗದಿ ಮಾಡುವುದಕ್ಕಾಗಿಯೇ ಕರ್ನಾಟಕದ ಇಂಧನ ಸಚಿವ ತಮ್ಮನ್ನು ಭೇಟಿಯಾಗಿದ್ದಾರೆ. ಮಾರ್ಗದರ್ಶಿಸೂತ್ರ ನಿಗದಿಯಾದರೆ ರಾಜ್ಯವು ವಿದ್ಯುತ್‌ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದನ್ನು ಪಾರದರ್ಶಕವಾಗಿ ಮಾಡಲಾಗಿಲ್ಲ. ಹಾಗಾಗಿ ನಿಯಂತ್ರಣ ಸಂಸ್ಥೆಯ ಕಡೆಯಿಂದ ಸಮಸ್ಯೆ ಎದುರಾಗಿರಬಹುದು’ ಎಂದು ಗೋಯಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT