ನನ್ನ ವಿರುದ್ಧ ಷಡ್ಯಂತ್ರ: ಸಚಿವ ಖಾದರ್‌

7

ನನ್ನ ವಿರುದ್ಧ ಷಡ್ಯಂತ್ರ: ಸಚಿವ ಖಾದರ್‌

Published:
Updated:
ನನ್ನ ವಿರುದ್ಧ ಷಡ್ಯಂತ್ರ: ಸಚಿವ ಖಾದರ್‌

ಮಂಗಳೂರು: ಕೆಲವು ಸಮಾಜಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೊಟೋಗಳನ್ನು ಹಾಕುವ ಮೂಲಕ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿವೆ ಎಂದು ಆಹಾರ ಸಚಿವ ಯು.ಟಿ. ಖಾದರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೊಟೋದಲ್ಲಿರುವ ವ್ಯಕ್ತಿಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದರು.

‘ಊಟ ಮಾಡುವ ಫೊಟೋ ಇಟ್ಟು ಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ ನಾವೇನು ಮಾಡುವುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸದಸ್ಯನಾಗಿದ್ದ ಇಲ್ಯಾಸ್‌, ಯುವ ಕಾಂಗ್ರೆಸ್ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದ. ಈ ವಿಷಯದಲ್ಲಿ ಶಾಸಕರಾಗಲಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಸದಸ್ಯರಾಗಲಿ, ಸ್ವತಃ ನಾನಾಗಲಿ ಯಾವುದೇ ಶಿಫಾರಸು ಮಾಡಿಲ್ಲ’ ಎಂದ ಅವರು, ‘ಪಕ್ಕದಲ್ಲಿ ಬಂದು ಊಟಕ್ಕೆ ಕೂತರೆ, ನಾನು ಏನು ಮಾಡುವುದು. ಸಮಾಜ ಘಾತುಕ ಶಕ್ತಿಗಳಿಗೆ ನಾನು ಎಂದಿಗೂ ಬೆಂಬಲ ಕೊಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಟಾರ್ಗೆಟ್ ಗ್ರೂಪ್ ಈಗ ಉಳ್ಳಾಲ ದಲ್ಲಿ ಇಲ್ಲ. ಪೊಲೀಸರು ಹಾಗೂ ಅಲ್ಲಿನ ಸ್ಥಳೀಯರು, ಟಾರ್ಗೆಟ್ ಗ್ರೂಪ್ ಅನ್ನು ಓಡಿಸಿದ್ದಾರೆ. ಕೆಲ ತಿಂಗಳಿಂದ ಇಲ್ಯಾಸ್ ಕಾಟಿಪಳ್ಳಕ್ಕೆ ಸ್ಥಳಾಂತರವಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಟಾರ್ಗೆಟ್ ಗ್ರೂಪ್ ಜತೆಗೆ ನನಗೆ ನಂಟಿದೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಉಳ್ಳಾಲದಲ್ಲಿ ನಡೆದ ಜುಬೈರ್ ಕೊಲೆ ಸಂದರ್ಭದಲ್ಲಿಯೂ ಇದೇ ರೀತಿ ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ಇದೆಲ್ಲ ರಾಜಕೀಯ ಪ್ರೇರಿತ ಆರೋ ಪಗಳು, ಕ್ಷೇತ್ರ ಜನರು ತಮ್ಮವರಲ್ಲಿ ಒಬ್ಬ ನಾಗಿ ನನ್ನನ್ನು ಕಂಡಿದ್ದಾರೆ. ಇಂತಹ ಕೀಳು ರಾಜಕೀಯಕ್ಕೆ ಜನರು ಸೊಪ್ಪು ಹಾಕುವುದಿಲ್ಲ’ ಎಂದು ಹೇಳಿದರು.

ಪಿಎಫ್ಐ ನಿಷೇಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಶಾಂತಿ ಕದಡುವ, ಕೊಲೆ, ಕೊಲೆ ಯತ್ನದಂತಹ ಪ್ರಕರಣಗಳಲ್ಲಿ ಭಾಗಿ ಯಾಗಿರುವ ಸಂಘಟನೆಗಳ ವಿರುದ್ಧ ನಿಷೇಧ ಹೇರಬೇಕು. ಕೇಂದ್ರ ಸರ್ಕಾರ ಇಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಕೇವಲ ಕರ್ನಾಟಕದಲ್ಲಿ ನಿಷೇಧ ಮಾಡುವು ದರಿಂದ ಇದು ಸಾಧ್ಯವಾಗುವುದಿಲ್ಲ. ಬೇರೆಡೆ ಅವರು ಸಕ್ರಿಯರಾಗುತ್ತಾರೆ. ಹಾಗಾಗಿ ಕೇಂದ್ರ ಸರ್ಕಾರವೇ ಈ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.

ದೀಪಕ್ ಹತ್ಯೆಗೆ ಖಂಡನೆ: ‘ದೀಪಕ್ ರಾವ್ ಹತ್ಯೆಯನ್ನು ಕಠೋರ ಶಬ್ದಗಳಲ್ಲಿ ಖಂಡಿಸುತ್ತೇನೆ. ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿ ಸುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

‘ರಾಜ್ಯ ಸರ್ಕಾರ ಮಂಜೂರು ಮಾಡಿರುವ ಪರಿಹಾರದಿಂದ ದೀಪಕ್‌ ಕುಟುಂಬಕ್ಕೆ ಆದ ನಷ್ಟವನ್ನು ತುಂಬಿ ಕೊಡಲು ಸಾಧ್ಯವಿಲ್ಲ. ಆದರೆ, ಆ ಕುಟುಂಬದ ಕಠಿಣ ಸಮಯದಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎನ್ನುವ ಭರವಸೆ ನೀಡುತ್ತೇನೆ’ ಎಂದು ತಿಳಿಸಿದರು.

‘ಸಮಗ್ರ ತನಿಖೆ’

ಒಂದು ವರ್ಷದಲ್ಲಿ ನಡೆದ ಎಲ್ಲಕೊಲೆ, ಕೊಲೆಯತ್ನ ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗುವುದು ಸಚಿವ ಯು.ಟಿ. ಖಾದರ್‌ ತಿಳಿಸಿದರು. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಶೀಘ್ರದಲ್ಲಿಯೇ ಸಭೆ ನಡೆಸಿ, ಈ ಎಲ್ಲ ಅಪರಾಧಗಳ ಹಿಂದಿರುವ ವ್ಯಕ್ತಿಗಳು, ಅವರಿಗೆ ಹಣಕಾಸು

ನೆರವು ನೀಡುತ್ತಿರುವವರು, ಅಪರಾಧಿಗಳ ಹಿನ್ನೆಲೆ, ಜೈಲಿನಲ್ಲಿ ಈ ವ್ಯಕ್ತಿಗಳನ್ನು ಭೇಟಿ ಮಾಡಿದವರ ವಿವರಗಳನ್ನು ಕಲೆ ಹಾಕಲಾಗುವುದು ಎಂದರು. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಈಗಾಗಲೇ ಮನವಿ ಮಾಡಿದ್ದೇನೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry