ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಬಲ್ಯವಿರುವ ಕಡೆ ಟಿಕೆಟ್‌ ನೀಡಲು ಅಹವಾಲು

Last Updated 6 ಜನವರಿ 2018, 5:15 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ವಿಭಾಗದಲ್ಲಿ 49 ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲೆಲ್ಲಿ ವೀರಶೈವ ಲಿಂಗಾಯತ ಸಮುದಾಯ ಹೆಚ್ಚಿದೆಯೋ ಅಲ್ಲಿ ಇದೇ ಸಮಾಜಕ್ಕೆ ಟಿಕೆಟ್‌ ನೀಡುವಂತೆ ಕೋರಿ, ಮೂರು ಪ್ರಮುಖ ಪಕ್ಷಗಳ ಮುಖಂಡರ ಬಳಿ ನಿಯೋಗ ಹೋಗಲು ನಿರ್ಧರಿಸಲಾಗಿದೆ’ ಎಂದು ವೀರಶೈವ– ಲಿಂಗಾಯತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಪಿ.ತಮ್ಮಣ್ಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ವಿಭಾಗಮಟ್ಟದ ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ‘ಮೈಸೂರು ವಿಭಾಗಕ್ಕೆ ಸೇರಿದ ಎಂಟೂ ಜಿಲ್ಲೆಗಳಲ್ಲಿ ನಮ್ಮ ಸಮಾಜದ ಮತದಾರರೇ ಹೆಚ್ಚಿದ್ದಾರೆ. ಆದರೆ, ಒಬ್ಬರೇ ಶಾಸಕರನ್ನು ನಮಗೆ ಆಯ್ಕೆ ಮಾಡಲು ಸಾಧ್ಯವಾಗಿದೆ. ಈ ಬಾರಿ ಚುನಾವಣೆಯಲ್ಲಿ ಪ್ರಾತಿನಿಧ್ಯ ನೀಡುವಂತೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ವರಿಷ್ಠರನ್ನು ಭೇಟಿ ಮಾಡಲಾಗುವುದು’ ಎಂದು ಹೇಳಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಮಾತನಾಡಿ, ‘ವಿಭಾಗದಲ್ಲಿ ಸಮಾಜದ 12 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಮೈಸೂರು ಜಿಲ್ಲೆಯಲ್ಲಿ 3.5 ಲಕ್ಷ, ಚಾಮರಾಜನಗರ– 2.20 ಲಕ್ಷ, ಮಂಡ್ಯ– 2 ಲಕ್ಷ, ಕೊಡಗು– 50 ಸಾವಿರ, ಹಾಸನ– 2.5 ಲಕ್ಷ, ಚಿಕ್ಕಮಗಳೂರು– 2 ಲಕ್ಷ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ತಲಾ 1 ಲಕ್ಷ ಮತದಾರರು ಇದ್ದಾರೆ. ಆದರೂ ಯಾವುದೇ ಪಕ್ಷದಿಂದ ಟಿಕೆಟ್‌ ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕನಿಷ್ಠ 13 ಕ್ಷೇತ್ರಗಳಲ್ಲಿ ನಮ್ಮ ಸಮಾಜದವರೇ ಗೆಲ್ಲಲು ಸಾಧ್ಯವಿದೆ. ಆದರೆ, ಇತರ ಸಮುದಾಯದ ನಾಯಕರು ನಮ್ಮನ್ನು ಛಿದ್ರ ಮಾಡಿದ್ದಾರೆ. ಲಿಂಗಾಯತರ ಮತಗಳಿಂದಲೇ ಆಯ್ಕೆಯಾಗಿ ಇದೇ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಈಗಲಾದರೂ ಸಮಾಜ ಒಂದಾಗಿ, ಸಂಘಟನಾತ್ಮಕ ಶಕ್ತಿ ಪ್ರದರ್ಶಿಸಿದರೆ ಪ್ರಾಬಲ್ಯ ಮೆರೆಯಲು ಸಾಧ್ಯ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಗೆಲ್ಲುತ್ತ ಬಂದಿದ್ದಾರೆ. ಸಣ್ಣ ಸಮುದಾಯಕ್ಕೆ ಸೇರಿದ ಅವರನ್ನು 45 ಸಾವಿರ ಲಿಂಗಾಯತರು ಮತ ಹಾಕಿ ಗೆಲ್ಲಿಸಿದ್ದಾರೆ. ಆದರೆ, ಈಗ ನಮ್ಮದೇ ಸಮುದಾಯಕ್ಕೆ ಸೆಡ್ಡು ಹೊಡೆಯುವ, ನಾಯಕರನ್ನು ತುಳಿಯುವ ಮಾತನಾಡುತ್ತಿದ್ದಾರೆ. ನಮ್ಮಲ್ಲಿ ರಾಜಕೀಯ ನಿರಾಸಕ್ತಿಯೇ ಇದಕ್ಕೆ ಕಾರಣ.

ಹನೂರು ಕ್ಷೇತ್ರದಲ್ಲಿ 45 ಸಾವಿರ ಲಿಂಗಾಯತ ಮತದಾರರಿದ್ದಾರೆ. ಆದರೆ, ಕೇವಲ 5 ಸಾವಿರ ಮತಬಲ ಹೊಂದಿದ ಒಕ್ಕಲಿಗ ವ್ಯಕ್ತಿ ಆಯ್ಕೆಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕುರುಬ ಸಮಾಜ ನಮಗಿಂತ ಕಡಿಮೆ ಸಂಖ್ಯೆಯಲ್ಲಿದೆ. ಆದರೂ 7 ಕ್ಷೇತ್ರಗಳಲ್ಲಿ ಪ್ರಬಲ ಆಕಾಂಕ್ಷಿಗಳು ಮುನ್ನುಗ್ಗಿದ್ದಾರೆ. ಅವರೆಲ್ಲ ಅವಲಂಬಿಸಿರುವುದು ಲಿಂಗಾಯತ ಮತಗಳನ್ನೇ. ಒಗ್ಗಟ್ಟು ಪ್ರದರ್ಶಿಸಿದರೆ ಇಂಥ ಕಡೆ ನಾವೇ ಗೆಲ್ಲಬಹುದು’ ಎಂದು ವಿಶ್ಲೇಷಿಸಿದರು.

ಮಾಜಿ ಶಾಸಕರಾದ ಗುರುದೇವ್‌, ಎಚ್‌.ಸಿ.ಬಸವರಾಜು, ಮಲ್ಲಿಕಾರ್ಜುನಸ್ವಾಮಿ, ವೇದಿಕೆ ಕೋಶಾಧ್ಯಕ್ಷ ಯು.ಎಂ.ಪ್ರಭುಸ್ವಾಮಿ ಉಡಿಗಾಲ, ಕಾರ್ಯದರ್ಶಿ ಸಿ.ಎಂ.ಪ್ರಕಾಶ್‌, ಮಹಿಳಾ ಘಟಕದ ಅಧ್ಯಕ್ಷೆ ಕುಮುದಾ ಮಾತನಾಡಿದರು.

ದೇವೇಗೌಡ ವಿರುದ್ಧ ಕಿಡಿ

ಮೈಸೂರು: ‘ಎಚ್‌.ಡಿ.ದೇವೇಗೌಡ ಅವರು ಹಿಂದಿನಿಂದಲೂ ವೀರಶೈವ – ಲಿಂಗಾಯತ ಸಮಾಜವನ್ನು ತುಳಿಯುತ್ತಲೇ ಬಂದಿದ್ದಾರೆ’ ಎಂದು ಸಭೆಯಲ್ಲಿ ಸೇರಿದ ಬಹುಪಾಲು ಮುಖಂಡರು ಕಿಡಿ ಕಾರಿದರು.

‘ಎಚ್‌.ಡಿ.ಕುಮಾರಸ್ವಾಮಿ ಅಥವಾ ಡಿ.ಕೆ.ಶಿವಕುಮಾರ್‌ ಅಥವಾ ಆರ್‌.ಅಶೋಕ್‌; ಈ ಮೂವರಲ್ಲಿ ಯಾರಾದರೊಬ್ಬರು ಮುಂದಿನ ಸಿ.ಎಂ ಆಗಲೇಬೇಕು’ ಎಂದು ದೇವೇಗೌಡರು ಈಚೆಗೆ ಹೇಳಿಕೆ ನೀಡಿದ್ದಾರೆ. ಅವರು ಎಂಥ ಜಾತಿವಾದಿ ಎಂಬುದು ಈ ಮಾತಲ್ಲೇ ಗೊತ್ತಾಗುತ್ತದೆ’ ಎಂದು ಮಹದೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವರೂ ಹೌದು, ಲಿಂಗಾಯತರೂ ಹೌದು

ಮೈಸೂರು: ‘ನಾವು ವೀರಶೈವರೂ ಹೌದು, ಲಿಂಗಾಯತರೂ ಹೌದು. ಸಮಾಜ ಒಡೆಯುವ ಯಾವುದೇ ಸ್ವಾಮಿ ಅಥವಾ ರಾಜಕಾರಣಿ ಹಿಂದೆ ನಾವು ಹೋಗುವುದಿಲ್ಲ. ನಾವು ಇಷ್ಟಲಿಂಗವನ್ನೂ ಪೂಜೆ ಮಾಡುತ್ತೇವೆ, ಶಿವನ ದೇವಸ್ಥಾನಕ್ಕೂ ಹೋಗುತ್ತೇವೆ. ಸಮಾಜವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬ ಕೂಗು ಸಭೆಯಲ್ಲಿ ಕೇಳಿಬಂತು.

ಮೀಸಲಾತಿ ಬದಲಾಗಲಿ

ಮೈಸೂರು: ಕೆಲವು ಕ್ಷೇತ್ರಗಳನ್ನು ನಿರಂತರವಾಗಿ ಮೀಸಲು ಕ್ಷೇತ್ರಗಳಾಗಿಯೇ ಮುಂದುವರಿಸಲಾಗಿದೆ. ಇದರಿಂದ ಅಲ್ಲಿರುವ ಬಹುಸಂಖ್ಯಾತರಿಗೆ ಅನ್ಯಾಯ ಆಗುತ್ತಿದೆ. ನಾವು ಮೀಸಲಾತಿ ವಿರೋಧಿಗಳಲ್ಲ. ಆದರೆ, ಪ್ರತಿ ಚುನಾವಣೆಗೆ ಕ್ಷೇತ್ರವಾರು ಮೀಸಲಾತಿ ಬದಲಾಗಬೇಕು. ಈ ಬಗ್ಗೆ ಹೋರಾಟ ರೂಪಿಸಬೇಕು ಎಂಬ ಧ್ವನಿ ಸಭೆಯಲ್ಲಿ ಕೇಳಿಸಿತು.

* * 

ಕೃಷ್ಣರಾಜ ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿದ್ದಾರೆ. ಆದ್ದರಿಂದ ಚಾಮರಾಜ ಕ್ಷೇತ್ರದಲ್ಲಿ ಬ್ರಾಹ್ಮಣರಿಗೂ, ಕೃಷ್ಣರಾಜ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಗೂ ಟಿಕೆಟ್‌ ನೀಡುವಂತೆ ಬಿಜೆಪಿ ಮುಖಂಡರನ್ನು ಒತ್ತಾಯಿಸಲಾಗುವುದು
ಕೆ.ಪಿ.ಮಹದೇವಸ್ವಾಮಿ
ಪ್ರಧಾನ ಕಾರ್ಯದರ್ಶಿ, ವೀರಶೈವ– ಲಿಂಗಾಯತ ಹಿತರಕ್ಷಣಾ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT