ಬುಧವಾರ, ಆಗಸ್ಟ್ 5, 2020
21 °C

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಕನ್ನಡಕ್ಕೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಕನ್ನಡಕ್ಕೆ ಧಕ್ಕೆ

ರಾಯಚೂರು: ‘ಕನ್ನಡ ಭಾಷೆ ಕಲಿಸುವುದಿಲ್ಲ ಎನ್ನುವ ಖಾಸಗಿ ಶಿಕ್ಷಣ ಸಂಸ್ಥೆಗಳ ಧೋರಣೆಯಿಂದಾಗಿಯೆ ಕನ್ನಡ ಭಾಷೆಗೆ ಧಕ್ಕೆ ಬಂದಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಟೀಚರ್’ ಶೈಕ್ಷಣಿಕ ಮಾಸ ಪತ್ರಿಕೆಯ 15ನೇ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ಎರಡು ದಿನಗಳ ಶೈಕ್ಷಣಿಕ ಹಬ್ಬದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಶಿಕ್ಷಣ ಸಂಸ್ಥೆಗಳ ಖಾಸಗೀಕರಣ ನಿಯಂತ್ರಿಸದಿದ್ದಲ್ಲಿ ಸರ್ಕಾರಿ ಶಾಲೆ ಬಾಗಿಲನ್ನು ಮುಚ್ಚಬೇಕಾಗುತ್ತದೆ. ಸರ್ಕಾರದ ನಿಯಂತ್ರಣಕ್ಕೆ ಬಾರದಷ್ಟು ದೊಡ್ಡ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಗಳು ಬೆಳೆದಿವೆ ಎಂದರು.

ದೇಶದ ಅಭಿವೃದ್ಧಿಗೆ ಪ್ರಾಥಮಿಕ ಶಿಕ್ಷಣ ತುಂಬಾ ಮುಖ್ಯ. ಶಿಕ್ಷಣದಿಂದ ಜ್ಞಾನ ಹಾಗೂ ಸಮೃದ್ಧಿ ಬರುತ್ತದೆ. ಜ್ಞಾನಾರ್ಜನೆಯ ಹೆಸರಿನಲ್ಲಿ ವ್ಯಾಪಾರೀಕರಣಕ್ಕೆ ಇಳಿದಿರುವ ಖಾಸಗಿ ಶಿಕ್ಷಣವನ್ನು ನಿಯಂತ್ರಿಸುವ ತುರ್ತು ಅಗತ್ಯವಿದೆ. ಕನ್ನಡ ಭಾಷೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ನೀಡಿದ್ದರೂ ಅದನ್ನು ಜಾರಿಯಾಗದಂತೆ ನೋಡಿಕೊಳ್ಳುವ ಅಧಿಕಾರಿಗಳೂ ಇದ್ದಾರೆ ಎಂದು ಹೇಳಿದರು.

ಕನ್ನಡ ಭಾಷೆ ಕಲಿಸುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ಸಿಎ ನಿವೇಶನ ಪಡೆದುಕೊಂಡಿದ್ದ ಆರು ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಬೆಳೆಸುವ ಯಾವ ಕೆಲಸವನ್ನು ಮಾಡದಿರುವುದು ಈಚೆಗೆ ಪತ್ತೆಯಾಗಿದೆ. ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಲು ಸರ್ಕಾರ ಏನೆಲ್ಲಾ ಪ್ರಯತ್ನ ನಡೆಸಿದರೂ ಶಾಲೆಗಳ ಬಲವರ್ಧನೆಯನ್ನು ದುರ್ಬಲಗೊಳಿಸಲಾಗುತ್ತಿದ್ದು, ಇದರ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಹುನ್ನಾರ ಅಡಗಿದೆ ಎಂದು ತಿಳಿಸಿದರು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಮಾತನಾಡಿ, ಇಂದಿನ ಮಕ್ಕಳಿಗೆ ಬೋಧನೆ ಇಷ್ಟವಾಗದ ಸಂಗತಿ. ಹಲವು ಸಾಮಾಜಿಕ ಮಾಧ್ಯಮಗಳಿಗೆ ತಮ್ಮನ್ನು ತೆರೆದುಕೊಂಡಿರುವ ಮಕ್ಕಳು ಕ್ರಮೇಣ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಅವರು ಶಾಲಾ ಗಂಟೆ ಬಾರಿಸುವ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು.

‘ಐಎಎಸ್‌ ಅಧಿಕಾರಿ ಅನಿತಾ ಕೌರ್‌’ ‘ಜೇನುಗೂಡು’ ಹಾಗೂ ‘ಕುವೆಂಪು ಚಿಂತನೆಗಳು’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ವಿಜ್ಞಾನಿ ಸುಬ್ರಹ್ಮಣ್ಯಂ, ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ್‌, ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು.

ವೇದಿಕೆಯಲ್ಲಿ ಟೀಚರ್ ಮಾಸಪತ್ರಿಕೆ ಪ್ರಧಾನ ಸಂಪಾದಕ ಬಿ.ಗಂಗಾಧರ ಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಹಿರಿಯ ವಿಜ್ಞಾನಿ ಡಾ.ಬಾಲಸುಬ್ರಹ್ಮಣ್ಯಂ, ಮುಖಂಡರಾದ ಪಾರಸಮಲ್ ಸುಖಾಣಿ, ಈ.ಆಂಜನೇಯ, ಜಿ.ವಿನುತಾ, ಜಯಕುಮಾರ, ಡಿಡಿಪಿಐ ನಂದನೂರು, ಎಚ್.ಎಲ್.ಮೋಹನ್, ಕೆ.ಸತ್ಯನಾರಾಯಣ, ಸೈಯದ್ ಹಫಿಜುಲ್ಲಾ ಇದ್ದರು.

ವಸತಿ ಶಾಲೆ ಅನುಮತಿಗೆ ಹೊಸ ಕಾಯ್ದೆ

ರಾಯಚೂರು: ‘ಖಾಸಗಿ ಶಿಕ್ಷಣ ಸಂಸ್ಥೆಗಳು ವಸತಿ ಕೇಂದ್ರ ತೆರೆಯಲು ಅನುಮತಿ ನೀಡುವುದಕ್ಕೆ ಈಗಿರುವ ಯಾವ ಕಾಯ್ದೆಯಲ್ಲೂ ಅವಕಾಶವಿಲ್ಲ. ವಸತಿ ಶಾಲೆ ಇರುವ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶಕ್ಕಾಗಿ ಹೊಸ ಕಾಯ್ದೆ ರೂಪಿಸಲು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ನೇತೃತ್ವದ ಸಮಿತಿ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ್‌ ಹೇಳಿದರು.

* * 

ಭೋಗ ಸಂಸ್ಕೃತಿಯಿಂದಾಗುವ ವಿನಾಶವನ್ನು ಮಕ್ಕಳಿಗೆ ಮನವರಿಕೆ ಮಾಡಿ, ಅವರನ್ನು ಜೀವನಮುಖಿ ಮಾಡುವುದು ನಮ್ಮ ಮುಂದಿರುವ ಸವಾಲು.

ಪ್ರೊ.ಸಬಿಹಾ ಭೂಮಿಗೌಡ

ಕುಲಪತಿ, ಮಹಿಳಾ ವಿವಿ ವಿಜಯಪುರ</p>

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.