ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುವಾದಿ ಶಕ್ತಿಗಳಿಗೆ ಅಧಿಕಾರ ನೀಡಬೇಡಿ

Last Updated 6 ಜನವರಿ 2018, 6:58 IST
ಅಕ್ಷರ ಗಾತ್ರ

ಬೀದರ್: ‘ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ಎಲ್ಲ ರಾಜಕೀಯಪಕ್ಷಗಳು  ಒಗ್ಗೂಡುವ ಅಗತ್ಯ ಇದೆ. ದೇಶದ ಸಂವಿಧಾನವನ್ನು ಎತ್ತಿ ಹಿಡಿಯುವುದು ಸವಾಲಾಗಿದ್ದು, ಬರುವ ಚುನಾವಣೆಗಳಲ್ಲಿ ಮತದಾರರು ಏಕತೆ, ಸೌಹಾರ್ದ ಹಾಗೂ ಒಕ್ಕೂಟದ ಪರವಾಗಿ ಮತಾಧಿಕಾರ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು’ ಎಂದು ಸಿಪಿಐ ರಾಜ್ಯ ಘಟಟಕದ ಕಾರ್ಯದರ್ಶಿ ಪಿ.ವಿ.ಲೋಕೇಶ ಹೇಳಿದರು.

ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಬೆಳೆಯಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲುವ ಭ್ರಮೆಯಿಂದ ಹೊರಬರಬೇಕು. ರೈತರು ಹಾಗೂ ದಲಿತರನ್ನು ಒಗ್ಗೂಡಿಸಿ ಹೊಸ ರಾಜಕೀಯ ಪಕ್ಷಗಳನ್ನು ಕಟ್ಟುವ ಕೆಲಸವನ್ನು ಮಾಡಬೇಕು. ಎಲ್ಲ ಪಕ್ಷಗಳು ಒಂದಾಗಿ ಬಿಜೆಪಿ ಶಕ್ತಿಯನ್ನು ತಡೆಯಬೇಕು. ಸಂವಿಧಾನದ ಜಾತ್ಯತೀತ, ಧರ್ಮನಿರಪೇಕ್ಷವನ್ನು ಉಳಿಸಿಕೊಳ್ಳಬೇಕು ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ, ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರಿಗೆ ದಿನ ಬಳಕೆ ವಸ್ತುಗಳು ಕಡಿಮೆ ಬೆಲೆ(ಗೆ) ಸಿಗುವಂತೆ ಮಾಡಲಾಗುವುದು. ವಿದೇಶದ ಬ್ಯಾಂಕ್‌ಗಳಲ್ಲಿನ ಭಾರತೀಯರ ಕಪ್ಪು ಹಣ ವಾಪಸ್‌ ತರಲಾಗುವುದು ಹಾಗೂ
2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಮರೆತು ಬಿಟ್ಟಿದೆ’ ಎಂದು ಟೀಕಿಸಿದರು.

‘ಬೇನಾಮಿ ಆಸ್ತಿ ಸಂಗ್ರಹ ತಡೆಯಲು ಕ್ರಮ ಕೈಗೊಂಡಿಲ್ಲ. ಬಿಜೆಪಿ 2019ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಜನ ಸಾಮಾನ್ಯರಿಗೆ ಮಾರಕವಾದ ಕಾನೂನುಗಳನ್ನು ರೂಪಿಸಲಿದೆ. ಕಾರ್ಪೋರೇಟ್ ಕಂಪನಿಗಳಿಗೆ ಸಾಲ ಕೊಟ್ಟಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿ ಅಂಚಿನಲ್ಲಿವೆ. ಬ್ಯಾಂಕ್‌ ದಿವಾಳಿ ಆಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಸೇವಾ ನಿವೃತ್ತರು, ಮಧ್ಯಮ ವರ್ಗದವರು ತಮ್ಮ ಭವಿಷ್ಯಕ್ಕಾಗಿ ಇಟ್ಟಿರುವ ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳಲು ಯೋಜನೆ ರೂಪಿಸುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದುಡಿಯುವ ವರ್ಗದ ಮೇಲೆ ದಬ್ಬಾಳಿಕೆ ನಡೆಸಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸ್ವಾಮಿನಾಥನ್‌ ಆಯೋಗದ ವರದಿಯ ಶಿಫಾರಸು ಜಾರಿ ಮಾಡುವುದಾಗಿ ಹೇಳಿದ್ದ ಬಿಜೆಪಿ ಇದೀಗ ಶಿಫಾರಸುಗಳನ್ನು ಜಾರಿ ಮಾಡಲಾಗದು ಎಂದು ಉಲ್ಟಾ ಹೊಡೆದಿದೆ. ಜೆಎಸ್‌ಟಿ ಹಾಗೂ ಆಧಾರ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಈಗ ಅವುಗಳನ್ನೇ ಅನುಷ್ಠಾನಗೊಳಿಸಿದೆ. ದ್ವಿಮುಖ ನೀತಿ ಅನುಸರಿಸುತ್ತಿರುವ ಇಂತಹ ಪಕ್ಷಗಳಿಂದ ದೇಶದ ಜನ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಮುಕ್ತ ಭಾರತ ಘೋಷಣೆ ಮೂಲಕ ದೇಶದಲ್ಲಿ ಯಾವುದೇ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಇರುಬಾರದು ಎನ್ನುವ ಹುನ್ನಾರ ನಡೆಸಿದೆ. ರಾಜಕೀಯದಲ್ಲಿ ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಏಕಚಕ್ರಾಧಿಪತ್ಯದ ಆಡಳಿತ ನಡೆಸಲು ಹೊರಟಿದೆ. ವಿರೋಧ ಪಕ್ಷ ಇಲ್ಲದ ಸಂಸತ್ತು ರಚಿಸಲು ಮುಂದಾಗಿದೆ. ಮೀಸಲಾತಿ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕು ಮೊಟಕುಗೊಳಿಸಲು ಸಂಘ ಪರಿವಾರ ಕುತಂತ್ರ ನಡೆಸಿವೆ’ ಎಂದು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿದ್ದಾರೆ. ಕೇಂದ್ರದ ಸಚಿವರು ಒಂದೊಂದು ರಾಜ್ಯದಲ್ಲಿ ಒಂದೊಂದು ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟು ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಬಂಡವಾಳಶಾಹಿಗಳ ವಿರುದ್ಧ ಭಾರತ ಕಮುನಿಸ್ಟ್ ಪಕ್ಷವು ಅನೇಕ ಹೋರಾಟಗಳನ್ನು ನಡೆಸುತ್ತಾ ದೇಶದ ರಾಜಕೀಯ ಇತಿಹಾಸಕ್ಕೆ ಅನೇಕ ತಿರುವುಗಳನ್ನು ನೀಡಿದೆ. ಸಂವಿಧಾನದ ರಕ್ಷಣೆ ಹಾಗೂ ಜನಹಿತಕ್ಕಾಗಿ ತನ್ನ ಹೋರಾಟ ಮುಂದುವರಿಸಲಿದೆ. ಕೇರಳದ ಕೊಲಂನಲ್ಲಿ ಏಪ್ರಿಲ್‌ ಕೊನೆಯ ವಾರದಲ್ಲಿ ನಡೆಯುವ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜ್ಯದ ವಿಧಾನಸಭೆ ಚುನಾವಣೆ ಎದುರಿಸುವ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳ ಲಾಗುವುದು’ ಎಂದು ತಿಳಿಸಿದರು. ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಬಾಬುರಾವ್‌ ಹೊನ್ನಾ, ಡಾ.ಜನಾರ್ಧನ, ಮೌಲಾ ಮುಲ್ಲಾ ಇದ್ದರು.

* * 

2018–2019 ನೇ ವರ್ಷವು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಪ್ರಮುಖ ಘಟ್ಟವಾಗಿದೆ. ಈ ಅವಧಿಯಲ್ಲಿ ಸಾಕಷ್ಟು ರಾಜಕೀಯ ಬದಲಾವಣೆ ಆಗುವ ಸಾಧ್ಯತೆ ಇದೆ.
ಪಿ.ವಿ.ಲೋಕೇಶ, ಕಾರ್ಯದರ್ಶಿ, ಸಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT