ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿವುಮುಕ್ತ ರಾಜ್ಯ ನಿರ್ಮಾಣ ಗುರಿ’

Last Updated 6 ಜನವರಿ 2018, 8:49 IST
ಅಕ್ಷರ ಗಾತ್ರ

ಅಜ್ಜಂಪುರ: ‘ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಉಚಿತವಾಗಿ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ. ಇಂತಹ ಮಹತ್ವ ಪೂರ್ಣ ಯೋಜನೆ ಬಿಜೆಪಿ ಅಧಿಕಾರದಲ್ಲಿರುವ 19 ರಾಜ್ಯಗಳ ಪೈಕಿ ಯಾವೊಂದು ರಾಜ್ಯದಲ್ಲಿಯೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಟ್ಟಣದ ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯವನ್ನು ಹಸಿವು ಮುಕ್ತ, ಬರ ಮುಕ್ತ, ಅಪೌಷ್ಟಿಕತೆ ಮುಕ್ತ, ಗುಡಿಸಲು ಮುಕ್ತ, ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬುದು ಸರ್ಕಾರದ ಗುರಿಯಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದೇನೆ’ ಎಂದರು.

‘ಬಡವರಾದ ಕಾರಣಕ್ಕೆ ಯಾರೊಬ್ಬರೂ ಶಿಕ್ಷಣದಿಂದ ವಂಚಿತ ಆಗಬಾರದು. ಎಲ್ಲರೂ ಭೇದ ಭಾವವಿಲ್ಲದ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಪದವಿ ವಿದ್ಯಾರ್ಥಿಗಳಿಗೆ ₹ 1,500 ಮಾಸಿಕ ವಿದ್ಯಾರ್ಥಿ ವೇತನ ನಿಗದಿಪಡಿಸಿದ್ದೇನೆ. ಇನ್ನು ರಾಜ್ಯದ 1.82 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ಜತೆಗೆ ನಿರುದ್ಯೋಗ ಸಮಸ್ಯೆ ತೊಲಗಿಸಲು ಕೌಶಲ ತರಬೇತಿ ಯೋಜನೆಯಡಿ ಪ್ರತೀ ವರ್ಷ 5 ಲಕ್ಷ ಯುವಜನರಿಗೆ ತರಬೇತಿ ನೀಡಲಾಗುತ್ತಿದೆ’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯಿಂದ 55 ಸಾವಿರ ಎಕರೆ ರೈತರ ಜಮೀನಿಗೆ ನೀರು ಒದಗಿಸಲು 1.65 ಟಿಎಂಸಿ ನೀರು ನೀಡಲಾಗುತ್ತದೆ. ಉಬ್ರಾಣಿ- ಅಮೃತಾಪುರ ಏತನೀರಾವರಿ ಯೋಜನೆಯಡಿ 16 ಕೆರೆಗಳಿಗೆ ನೀರು ನೀಡಲು ₹ 20ಕೋಟಿ ವೆಚ್ಚಮಾಡಲಾಗಿದೆ. ಗ್ರಾಮೀಣ ಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು 80 ಶುದ್ಧ ನೀರಿನ ಘಟಕ ತೆರೆಯಲಾಗಿದೆ’ ಎಂದು ಹೇಳಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ‘ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. 80ಕ್ಕೂ ಅಧಿಕ ಸಮುದಾಯ ಭವನ ನಿರ್ಮಿಸಲಾಗಿದೆ. ಅನೇಕ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಸಾವಿರಾರು ಜನರಿಗೆ ಆಶ್ರಯ ನಿವೇಶನ ವಿತರಿಸಲಾಗಿದೆ. 300 ಜನರಿಗೆ ಬಗರ್‌ಹುಕುಂ ಭೂ ಹಕ್ಕುಪತ್ರ ಹಂಚಿಕೆ ಮಾಡಲಾಗಿದೆ. ಜತೆಗೆ ಅಜ್ಜಂಪುರವನ್ನು ತಾಲ್ಲೂಕು ಕೇಂದ್ರವಾಗಿ ರೂಪಿಸಲಾಗಿದೆ. ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ನೀಡಿದ್ದಾರೆ. ಅವರಿಗೆ ಸದಾ ಚಿರ ಋಣಿಯಾಗಿರುತ್ತೇನೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್, ವಿಹಾರ ಧಾಮ ನಿಗಮ ಅಧ್ಯಕ್ಷ ಎ.ಎನ್.ಮಹೇಶ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮೋಹನ್, ಭದ್ರಾ ಕಾಡಾ ಅಧ್ಯಕ್ಷ ಸುಂದರೇಶ್, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಡಾ.ಡಿ.ಎಲ್.ವಿಜಯ್ ಕುಮಾರ್, ಮಾಜಿ ಶಾಸಕ ಎಸ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಬಸಮ್ಮ, ಮುಖಂಡ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT