ಮಂಗಳವಾರ, ಜೂಲೈ 7, 2020
23 °C

16 ವರ್ಷಗಳ ನಂತರ ಬಡಾವಣೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ರೈತರು ಹಾಗೂ ಗೃಹ ಮಂಡಳಿ ನಡುವೆ ಇದ್ದ ಗೊಂದಲವನ್ನು ನಿವಾರಿಸಿ, 92 ಎಕರೆ ಜಮೀನು ಸ್ವಾಧೀನ ಮಾಡಿಕೊಂಡು ಬಡಾವಣೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ವಡ್ನಾಳ್‌ ರಾಜಣ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ಗೃಹ ಮಂಡಳಿ ಹಾಗೂ ರೈತರ ನಡುವಿನ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ  ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸಮ್ಮುಖದಲ್ಲಿ ಸಭೆ ನಡೆಸಿ, ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ರೈತರ ಸಮ್ಮತಿ ಪಡೆಯಲಾಗಿದೆ. ಇದರಿಂದ 16 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗೃಹ ಮಂಡಳಿ ಬಡಾವಣೆ ನಿರ್ಮಾಣ ಕಾರ್ಯಕ್ಕೆ ಮರುಜೀವ ಸಿಕ್ಕಿದೆ ಎಂದು ಹೇಳಿದರು.

ಚಿಕ್ಕೂಲಿಕೆರೆ ಗ್ರಾಮ ವ್ಯಾಪ್ತಿಯ ಭದ್ರಾವತಿ ರಸ್ತೆಯ ಬಾಪೂಜಿ ಆಸ್ಪತ್ರೆ ಎದುರಿನ 29 ರೈತರ 92 ಎಕರೆ ಜಮೀನನ್ನು ಗೃಹ ಮಂಡಳಿ ಸ್ವಾಧೀನಪಡಿಸಿಕೊಂಡಿದೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 65:35ರ ಅನುಪಾತದಲ್ಲಿ ಬಡಾವಣೆ ನಿರ್ಮಿಸಲು ಚರ್ಚಿಸಲಾಗಿತ್ತು. ಶುಕ್ರವಾರ ನಡೆದ ಸಭೆಯಲ್ಲಿ 60:40ರ ಅನುಪಾತದಲ್ಲಿ ಬಡಾವಣೆ ನಿರ್ಮಿಸಲು ರೈತರು ಸಮ್ಮತಿ ನೀಡಿದ್ದಾರೆ ಎಂದರು.

ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಸರ್ಕಾರಕ್ಕೆ ಕಳುಹಿಸಿ, ಅಂತಿಮ ಒಪ್ಪಿಗೆ ಪಡೆದುಕೊಳ್ಳಲಾಗುವುದು. ಆದಷ್ಟು ಶೀಘ್ರದಲ್ಲಿ ಗೃಹ ಮಂಡಳಿ ಬಡಾವಣೆಯನ್ನು ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು.

ವಿಶೇಷ ಭೂ ಸ್ವಾಧೀನ ಅಧಿಕಾರಿ ದಯಾನಂದ್ ಮಾತನಾಡಿ, ‘92 ಎಕರೆ ಜಮೀನಿನಲ್ಲಿ ಮಸೀದಿ, ದೇವಸ್ಥಾನ ಹಾಗೂ ಶಾಲೆ ನಿರ್ಮಿಸಲು ಜಾಗ ಕಾಯ್ದಿರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಅದರಂತೆ ಶೇ 15ರಷ್ಟು ಜಾಗವನ್ನು ಕಾಯ್ದಿರಿಸಲಾಗುವುದು. 2002ರ ಗೃಹ ಮಂಡಳಿಯ ದರದಂತೆ 1 ಎಕರೆಗೆ ₹ 13.60 ಲಕ್ಷ ಹಣವನ್ನು ರೈತರಿಗೆ ನೀಡಲಾಗುತ್ತದೆ. ಈಗಾಗಲೇ ಹಲವಾರು ರೈತರು ಒಪ್ಪಿಗೆ ಪತ್ರವನ್ನು ಕೂಡಾ ನೀಡಿದ್ದಾರೆ’ ಎಂದರು.

ಈ ಬಡಾವಣೆ ನಿರ್ಮಾಣ ಮಾಡುವ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 13 ಹಾದು ಹೋಗಲಿದ್ದು, ರೈತರಿಗೆ ನಿರ್ಮಿಸಿಕೊಡುವ ನಿವೇಶನಗಳಿಗೆ ಉತ್ತಮ ದರ ಸಿಗಲಿದೆ. ಇದರಿಂದ ರೈತರಿಗೆ ಅನ್ಯಾಯ ಆಗುವುದಿಲ್ಲ. ಅದೇ ರೀತಿ 2002ರಲ್ಲಿ 1,230 ಜನ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಮೊದಲ ಆದ್ಯತೆ ನೀಡಲಾಗುವುದು. 92 ಎಕರೆ ಜಮೀನಿನಲ್ಲಿ ಎಷ್ಟು ನಿವೇಶನಗಳು ಆಗುತ್ತವೆ ಎಂಬುದನ್ನು ಪರಿಶೀಲಿಸಿ, ಲಾಟರಿ ಮೂಲಕ ನಿವೇಶನಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎಸ್.ಶ್ರೀನಿವಾಸ್, ಮುಖಂಡರಾದ ಅಮಾನುಲ್ಲಾ, ಅಫ್ರೋಜ್, ತಾವರೆಕೆರೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಯೋಗೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವೈ.ರವಿಕುಮಾರ್, ಸದಸ್ಯ ಜಬೀವುಲ್ಲಾ, ಶಿವಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.