ಸೋಮವಾರ, ಜೂಲೈ 6, 2020
22 °C

‘ಅಡಿಗರದ್ದು ಸಮನ್ವಯ ಪಂಥ’

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

‘ಅಡಿಗರದ್ದು ಸಮನ್ವಯ ಪಂಥ’

ಬೆಂಗಳೂರು: ಅಧಿಕಾರಕ್ಕೆ ಜೋತುಬಿದ್ದ ವ್ಯಕ್ತಿಗಳ ವಿರುದ್ಧ ತಮ್ಮ ಕಾವ್ಯದ ಮೂಲಕ ಸತತ ದಾಳಿ ನಡೆಸಿದ ಕಾರಣಕ್ಕೆ ಕವಿ ಗೋಪಾಲಕೃಷ್ಣ ಅಡಿಗರನ್ನು ಕೆಲವರು ಬಲಪಂಥೀಯನೆಂದು ಬಿಂಬಿಸಿದರು. ಆದರೆ ಅವರು ಎಡಪಂಥೀಯನೂ ಆಗಿರಲಿಲ್ಲ, ಬಲಪಂಥೀಯನೂ ಆಗಿರಲಿಲ್ಲ ಎಂದು ತಮಿಳಿನ ಹಿರಿಯ ಲೇಖಕ ಸಿರ್ಪಿ ಬಾಲಸುಬ್ರಹ್ಮಣ್ಯಂ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ‘ಮೊಗೇರಿ ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ’ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿವಿಧ ಸ್ತರಗಳಲ್ಲಿ ಹಾಗೂ ದ್ವಂದ್ವಗಳಲ್ಲಿ ನಾವು ಜೀವಿಸುತ್ತಿದ್ದು, ಆ ದ್ವಂದ್ವಗಳ ನಡುವೆ ಸಮನ್ವಯ ಸಾಧಿಸುವುದು ಲೇಖಕನ ಕರ್ತವ್ಯವಾಗಿದೆ. ಎಡ ಅಥವಾ ಬಲ ಸಿದ್ಧಾಂತಗಳಲ್ಲಿ ಯಾವುದಾದರೊಂದರ ಪ್ರಾಬಲ್ಯ ಹೆಚ್ಚಾದಾಗ, ಮತ್ತೊಂದು ಪಂಥದಲ್ಲಿನ ಒಳ್ಳೆಯ ಅಂಶಗಳನ್ನು ಮುನ್ನೆಲೆಗೆ ತರುವ ಮೂಲಕ ಸಮನ್ವಯ ಸಾಧಿಸಬೇಕು ಎನ್ನುವುದು ಅಡಿಗರ ನಂಬಿಕೆಯಾಗಿತ್ತು. ತಮ್ಮನ್ನು ತಾವೇ ಮೀರುತ್ತಾ ನಡೆದ ಅವರು, ಆಡಳಿತ ವರ್ಗದ ಸೆಟೆದು ನಿಲ್ಲುವ ಧೈರ್ಯ ವ್ಯಕ್ತಪಡಿಸಿದ ಅಪರೂಪದ ಕವಿ ಎಂದು ಬಣ್ಣಿಸಿದರು.

‘ನೆಹರೂ ನಿವೃತ್ತರಾಗುವುದಿಲ್ಲ’, ‘ಪ್ರಾರ್ಥನೆ’, ‘ಇಂದು ನಮ್ಮೀ ನಾಡು’ ರೀತಿಯ ಕವಿತೆಗಳಲ್ಲಿ ಪ್ರಭುತ್ವದ ವಿರುದ್ಧ ಕವಿಯ ಸಿಟ್ಟು ಪ್ರಖರವಾಗಿ ವ್ಯಕ್ತವಾಗಿದೆ. ಹಿಂದೂ ಮುಸ್ಲಿಂ ನಡುವಣ ಹಿಂಸೆಯಿಂದ ಘಾಸಿಗೊಂಡ ಅವರ ಮನಸ್ಸನ್ನು ‘ಕಾಳಿ’ ಕವಿತೆಯಲ್ಲಿ ಗಮನಿಸಬಹುದು ಎಂದರು.

ದೇಶದೆಲ್ಲೆಡೆ ಶತಮಾನೋತ್ಸವ ನಡೆಯಲಿ: ಆಧುನಿಕ ಭಾರತೀಯ ಸಾಹಿತ್ಯದ ನಿರ್ಮಾಪಕರಲ್ಲಿ ಒಬ್ಬರಾದ ಅಡಿಗರ ಶತಮಾನೋತ್ಸವ ಬೆಂಗಳೂರಿನಲ್ಲಿ ಮಾತ್ರವಲ್ಲದೆ, ದೇಶದ ಎಲ್ಲ ರಾಜಧಾನಿ ನಗರಗಳಲ್ಲಿ ನಡೆಯಬೇಕು. ಈ ಮೂಲಕ ಪ್ರಾದೇಶಿಕ ಸಾಹಿತ್ಯಕ್ಕೆ ರಾಷ್ಟ್ರೀಯ ಸಾಹಿತ್ಯವಾಗುವ ಸಾಮರ್ಥ್ಯವಿರುವುದರ ಬಗ್ಗೆ ದೇಶದ ಗಮನ ಸೆಳೆದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮತ್ತೆ ಮತ್ತೆ ಪ್ರಸ್ತುತ: ‘ಅಡಿಗರು ನಮ್ಮ ಕಾಲದ ಅನೇಕ ತಲ್ಲಣಗಳಿಗೆ ಪರಿಹಾರ ನೀಡುವ ಶಕ್ತಿಶಾಲಿ ಕವಿ. ಪ್ರಜಾಪ್ರಭುತ್ವದ ಪ್ರಾಣಶಕ್ತಿಯಾದ ಭಿನ್ನಮತವನ್ನು ಹಣಿಯುವ ಶಕ್ತಿ ಪ್ರಬಲವಾಗುತ್ತಿರುವ ದಿನಗಳಲ್ಲಿ ಅವರ ಕಾವ್ಯ ಹೆಚ್ಚು ಸಮಕಾಲೀನ ಅನ್ನಿಸುತ್ತಿದೆ’ ಎಂದುವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

‘ತನಗಿಂತ ಬೇರೆಯಾಗಿ ಯೋಚಿಸುವವನನ್ನು, ತನಗಿಂತ ಭಿನ್ನವಾದ ಶ್ರದ್ಧೆಯುಳ್ಳವನನ್ನು, ತನಗಿಂತ ಬೇರೆಯಾಗಿ ಬದುಕುವಂಥವನನ್ನು ತದಕಿ ಹಾಕುತ್ತೇವೆ, ಹೊಸಕಿ ಹಾಕುತ್ತೇವೆ, ನಿರ್ನಾಮ ಮಾಡುತ್ತೇವೆ ಎನ್ನುವ ಮಾತು ಈಗ ಎಲ್ಲ ಕಡೆಗಳಲ್ಲಿ ಕೇಳಿಬರುತ್ತಿದೆ’ ಎಂದು ಎಪ್ಪತ್ತರ ದಶಕದಲ್ಲಿ ಅಡಿಗರು ಆತಂಕ ವ್ಯಕ್ತಪಡಿಸಿದ್ದರು. ಆ ಆತಂಕ ಈಗ ಅನುಭವಕ್ಕೆ ಬರುತ್ತಿದೆ ಎಂದರು.

ಭಾಷೆಯ ಮೂಲಕ ಸ್ವವಿಮರ್ಶೆ: ಕವಿ ಚಂದ್ರಶೇಖರ ಕಂಬಾರ ಅವರು ಅಡಿಗರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾದರು. ‘ಅವರು ನಂಬಿದ್ದು ನಂಬಿದ್ದು, ನಡೆದಿದ್ದು, ಮಾತನಾಡಿದ್ದು ಎಲ್ಲವೂ ಒಂದೇ ಆಗಿತ್ತು. ಭಾಷೆ-ಸಾಹಿತ್ಯದ ಮೂಲಕ ತಮ್ಮನ್ನು ತಾವು ನೋಡಿಕೊಂಡವರರಲ್ಲಿ ವಚನಕಾರರನ್ನು ಹೊರತುಪಡಿಸಿದರೆ ಅಡಿಗರೇ ಮುಖ್ಯರಾದವರು’ ಎಂದರು.

ಬಂಗಾಳಿಯ ರಾಮಕುಮಾರ್‍ ಮುಖ್ಯೋಪಾಧ್ಯಾಯ, ಮಲಯಾಳಂನ ಕೆ.ಜಿ. ಶಂಕರ ಪಿಳ್ಳೈ ಹಾಗೂ ಮರಾಠಿಯ ಗೋವಿಂದ ಕಾಜರೇಕರ್ ಅವರು ತಂತಮ್ಮ ಭಾಷೆಗಳಲ್ಲಿ ಅಡಿಗರ ಸಮಕಾಲೀನರು ನಡೆಸಿದ ಪ್ರಯೋಗಗಳನ್ನು ವಿವರಿಸಿದರು. ಈ ಮೂಲಕ ಸಮಾನಮನಸ್ಕ ಮನಸ್ಸುಗಳು ವಿವಿಧ ಭಾಷೆಗಳಲ್ಲಿ ಒಂದೇ ರೀತಿಯ ಕೆಲಸ ಮಾಡುವ ಬಗೆಯನ್ನು ವಿಶ್ಲೇಷಿಸಲು ಪ್ರಯತ್ನಿಸಿದರು.

ನೂರರ ಸಂಭ್ರಮ, ನೀರಸ ಸ್ಪಂದನ

ಕನ್ನಡದ ಪ್ರಮುಖ ಕವಿಗೆ ಶತಮಾನೋತ್ಸವದ ಗೌರವ ಸಲ್ಲಿಸುವ ಅಕಾಡೆಮಿಯ ಎರಡು ದಿನಗಳ ವಿಚಾರ ಸಂಕಿರಣಕ್ಕೆ ಮೊದಲ ದಿನ ವ್ಯಕ್ತವಾದ ಸಹೃದಯರ ಸ್ಪಂದನ ನೀರಸವಾಗಿತ್ತು. ಆಹ್ವಾನಿತರು, ಉಪನ್ಯಾಸಕರು, ಕಚೇರಿ ಸಿಬ್ಬಂದಿ ಸೇರಿದಂತೆ ಸಭಾಂಗಣದಲ್ಲಿ ಹಾಜರಿದ್ದವರ ಸಂಖ್ಯೆ ಐವತ್ತು ಮೀರಿರಲಿಲ್ಲ.

ಯುವ ತಲೆಮಾರಿಗೆ ಅಡಿಗರನ್ನು ಪರಿಚಯಿಸುವುದು ಈ ಸಂಕಿರಣದ ಉದ್ದೇಶವಾಗಿದ್ದರೂ, ಒಬ್ಬಿಬ್ಬರು ಸಂಶೋಧನಾ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ತಾರುಣ್ಯದ ಕೊರತೆ ಸಭಾಂಗಣದಲ್ಲಿ ಎದ್ದುಕಾಣುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.