ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ನರ ಮಣಿಸುವ ಕಾತರ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೋದ ವರ್ಷದ ಕೊನೆಯ ದಿನ ನಡೆದಿದ್ದ ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಅದರದ್ದೇ ನೆಲದಲ್ಲಿ ಕಟ್ಟಿಹಾಕಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಈಗ ಅಟ್ಲೆಟಿಕೊ ಡಿ ಕೋಲ್ಕತ್ತ ತಂಡದ ರಕ್ಷಣಾ ಕೋಟೆ ಭೇದಿಸಲು ಸನ್ನದ್ಧವಾಗಿದೆ.

ಹೊಸ ವರ್ಷಕ್ಕೆ ಕಾಲಿಟ್ಟ ನಂತರ ಸುನಿಲ್‌ ಚೆಟ್ರಿ ಪಡೆ ಆಡುತ್ತಿರುವ ಮೊದಲ ಪಂದ್ಯ ಇದು. ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ಅಟ್ಲೆಟಿಕೊ ಸವಾಲು ಮೀರಿ ನಿಲ್ಲಲು ಬಿಎಫ್‌ಸಿ ಹವಣಿಸುತ್ತಿದೆ. ಐ ಲೀಗ್‌ ಮತ್ತು ಫೆಡರೇಷನ್‌ ಕಪ್‌ಗಳಲ್ಲಿ ಪ್ರಶಸ್ತಿ ಗೆದ್ದು ಭಾರತದ ಫುಟ್‌ಬಾಲ್‌ ಲೋಕದಲ್ಲಿ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಬೆಂಗಳೂರಿನ ತಂಡ ಮೊದಲ ಬಾರಿಗೆ ಐಎಸ್‌ಎಲ್‌ನಲ್ಲಿ ಆಡುತ್ತಿದೆ.

ಚೆಟ್ರಿ ಪಡೆ ಇದುವರೆಗೆ 8 ಪಂದ್ಯಗಳಲ್ಲಿ ಸೆಣಸಿದೆ. ಈ ಪೈಕಿ ಐದರಲ್ಲಿ ಗೆದ್ದಿದ್ದು ಮೂರರಲ್ಲಿ ಸೋತಿದೆ. ಒಟ್ಟಾರೆ 15 ಪಾಯಿಂಟ್ಸ್‌ ಕಲೆಹಾಕಿರುವ ತಂಡ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ. ಅಗ್ರಸ್ಥಾನಕ್ಕೇರಲು ಬಿಎಫ್‌ಸಿಗೆ ಈಗ ಉತ್ತಮ ಅವಕಾಶವಿದೆ. ಇದಕ್ಕಾಗಿ ಅಟ್ಲೆಟಿಕೊ ಎದುರು ಜಯದ ಸಿಹಿ ಸವಿಯುವುದು ಅಗತ್ಯ.

ಹಿಂದಿನ ಐದು ಪಂದ್ಯಗಳ ಪೈಕಿ ಬಿಎಫ್‌ಸಿ ಮೂರರಲ್ಲಿ ಗೆದ್ದಿದೆ. ಹೀಗಾಗಿ ಆಟಗಾರರ ಮನೋಬಲವೂ ಹೆಚ್ಚಿದೆ. ಸುನಿಲ್‌ ಚೆಟ್ರಿ, ಮಿಕು, ಎರಿಕ್‌ ಪಾರ್ಟಲು ತಂಡದ ಆಧಾರ ಸ್ತಂಭಗಳಾಗಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದ ಇವರು ತವರಿನ ಅಂಗಳದಲ್ಲೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ಮಿಕು ಈ ಬಾರಿ ಒಟ್ಟು ಎಂಟು ಗೋಲುಗಳನ್ನು ಬಾರಿಸಿದ್ದಾರೆ. ವೆನಿಜುವೆಲಾದ ಈ ಆಟಗಾರ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಲೆನ್ನಿ ರಾಡ್ರಿಗಸ್‌, ಎಡು ಗಾರ್ಸಿಯಾ ಕೂಡ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.

ಜಯದ ಜಪ: ಲೀಗ್‌ನಲ್ಲಿ ಎರಡು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆ ಹೊಂದಿರುವ ಅಟ್ಲೆಟಿಕೊ ಈ ಬಾರಿ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲವಾಗುತ್ತಿದೆ. ಏಳು ಪಂದ್ಯಗಳನ್ನು ಆಡಿರುವ ಈ ತಂಡ 10 ಪಾಯಿಂಟ್ಸ್‌ ಕಲೆಹಾಕಿದ್ದು ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಎಟಿಕೆ ಕೂಡ ಜಯದ ಹಂಬಲ ಹೊತ್ತಿದೆ. ಈ ತಂಡದ ರಾಬ್ಬಿ ಕೀನ್‌, ಬಿಎಫ್‌ಸಿಗೆ ಸವಾಲಾಗಬಲ್ಲರು. ಡೆಲ್ಲಿ ಡೈನಾಮೊಸ್‌ ಮತ್ತು ಎಫ್‌ಸಿ ಗೋವಾ ಎದುರು ಇವರು ಕಾಲ್ಚಳಕ ತೋರಿದ್ದರು.

ರಾಬಿನ್‌ ಸಿಂಗ್‌, ಕೀಗನ್‌ ಪೆರೇರಾ ಮತ್ತು ಶಂಕರ್‌ ಸಂಪಂಗಿರಾಜ್‌ ಅವರೂ ಎಟಿಕೆಯ ಬಲ ಎನಿಸಿದ್ದಾರೆ. ಈ ಹಿಂದೆ ಬಿಎಫ್‌ಸಿ ತಂಡದಲ್ಲಿದ್ದ ಇವರು ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆ.

ಆರಂಭ: ರಾತ್ರಿ 8
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT