ಸೋಮವಾರ, ಆಗಸ್ಟ್ 3, 2020
25 °C

ದಕ್ಷಿಣ ಆಫ್ರಿಕಾ ವೇಗಿಗಳಿಗೆ ಪಾಂಡ್ಯ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಆಫ್ರಿಕಾ ವೇಗಿಗಳಿಗೆ ಪಾಂಡ್ಯ ಉತ್ತರ

ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ವೇಗಿಗಳ ಅಪಾಯಕಾರಿ ಬೌನ್ಸರ್‌ಗಳಿಗೆ ದಿಟ್ಟ ಉತ್ತರ ನೀಡಿದ ಹಾರ್ದಿಕ್ ಪಾಂಡ್ಯ ಕೇವಲ ಏಳು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 77 ರನ್‌ಗಳ ಹಿನ್ನಡೆ ಅನುಭವಿಸಿತು.

ಇಲ್ಲಿ ನಡೆಯುತ್ತಿರುವ ದಕ್ಷಿಣ ಫ್ರೀಡಂ ಟ್ರೋಫಿ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 209 ರನ್‌ಗಳಿಗೆ ಆಲೌಟ್‌ ಆಯಿತು. ಶುಕ್ರವಾರ ದಕ್ಷಿಣ ಆಫ್ರಿಕಾ ತಂಡವು 286 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‌ ಆರಂಭಿಸಿರುವ ದಕ್ಷಿಣ ಆಫ್ರಿಕಾ ದಿನದಾಟ ಮುಕ್ತಾಯದ ವೇಳೆ ಎರಡು ವಿಕೆಟ್ ಕಳೆದುಕೊಂಡು 65 ರನ್‌ ಗಳಿಸಿದೆ. ಹೀಗಾಗಿ ತಂಡ ಒಟ್ಟು 142 ರನ್‌ಗಳ ಮುನ್ನಡೆ ಗಳಿಸಿದೆ. ಆತಿಥೇಯರ ಎರಡೂ ವಿಕೆಟ್‌ಗಳನ್ನು ಪಾಂಡ್ಯ ಕಬಳಿಸಿದರು.

ಎರಡನೇ ದಿನ 92 ರನ್‌ಗಳಿಗೆ ಏಳು ವಿಕೆಟ್‌ ಕಳೆದುಕೊಂಡಿದ್ದ ಭಾರತದ ಇನಿಂಗ್ಸ್‌ಗೆ ಪಾಂಡ್ಯ ಮತ್ತು ಭುವನೇಶ್ವರ್‌ ಜೀವ ತುಂಬಿದರು. ಎಂಟನೇ ವಿಕೆಟ್‌ಗೆ 99 ರನ್‌ ಸೇರಿಸಿದ ಈ ಜೋಡಿ ತಂಡವನ್ನು 200 ರನ್‌ಗಳ ಸನಿಹ ತಲುಪಿಸಿದರು.

ಪರಿಸ್ಥಿತಿಯ ಗಾಂಭೀರ್ಯ ಅರಿತು ತಾಳ್ಮೆಯ ಬ್ಯಾಟಿಂಗ್ ಮಾಡಿದ ಭುವನೇಶ್ವರ್‌ ಕುಮಾರ್‌ ಮೊದಲ ರನ್ ಗಳಿಸಲು 34 ಎಸೆತಗಳನ್ನು ತೆಗೆದುಕೊಂಡರು. ಆದರೆ ಲಯ ಕಂಡುಕೊಂಡ ನಂತರ ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿದರು.

ಶುಕ್ರವಾರ ಔಟಾಗದೇ ಉಳಿದಿದ್ದ ಚೇತೇಶ್ವರ ಪೂಜಾರ ಮತ್ತು ರೋಹಿತ್ ಶರ್ಮಾ ಶನಿವಾರ ಬೆಳಿಗ್ಗೆ 30 ರನ್ ಸೇರಿಸಿ ಭರವಸೆ ಮೂಡಿಸಿದರು. ಆದರೆ 11 ರನ್‌ ಗಳಿಸಿದ ರೋಹಿತ್ ಶರ್ಮಾ ಔಟಾದ ನಂತರ ತಂಡ ನಿರಂತರ ವಿಕೆಟ್ ಕಳೆದುಕೊಳ್ಳತೊಡಗಿತು. ಪೂಜಾರ ಮತ್ತು ರವಿಚಂದ್ರನ್ ಅಶ್ವಿನ್ ಎರಡಂಕಿ ದಾಟಿದರೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಶೂನ್ಯಕ್ಕೆ ಮರಳಿದರು. ಭೋಜನ ವಿರಾಮದ ನಂತರದ ಒಂದು ತಾಸಿನಲ್ಲಿ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಪಾಂಡ್ಯ ಮತ್ತು ಭುವನೇಶ್ವರ್‌ ಕುಮಾರ್‌ ಎದುರಾಳಿಗಳ ವೇಗದ ದಾಳಿಗೆ ದಿಟ್ಟ ಉತ್ತರ ನೀಡಿದರು. 74 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ಆಡಿದರು. ವೇಗದ ದಾಳಿಯನ್ನು ಲೆಕ್ಕಿಸದೆ ಬ್ಯಾಟ್ ಬೀಸಿದ ಪಾಂಡ್ಯ ಬೌಂಡರಿಗಳನ್ನು ಸಿಡಿಸಿ ಎದುರಾಳಿ ಪಾಳಯದಲ್ಲಿ ಆತಂಕ ಮೂಡಿಸಿದರು. 93 ರನ್‌ ಗಳಿಸಲು ಅವರು ಬಳಸಿಕೊಂಡದ್ದು ಕೇವಲ 95 ಎಸೆತ. 14 ಬೌಂಡರಿ ಬಾರಿಸಿದ ಅವರು ಒಂದು ಸಿಕ್ಸರ್‌ ಮೂಲಕವೂ ರಂಜಿಸಿದರು.

ಎರಡು ಜೀವದಾನ: ಐದು ರನ್‌ ಗಳಿಸಿದ್ದಾಗ ಅಂಪೈರ್ ತೀರ್ಪು ಮರುಪಿಶೀಲನೆಯಲ್ಲಿ ಪೂರಕ ತೀರ್ಪು ಪಡೆದ ಪಾಂಡ್ಯ 15 ರನ್‌ ಗಳಿಸಿದ್ದಾಗ ಡೀನ್ ಎಲ್ಗರ್‌ ಕ್ಯಾಚ್ ಕೈಚೆಲ್ಲಿದ್ದರಿಂದ ಜೀವದಾನ ಪಡೆದರು. 46 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾಂಡ್ಯ 71 ರನ್‌ ಗಳಿಸಿದ್ದಾಗ ಸ್ಟಂಪ್ ಔಟಾಗುವ ಸಾಧ್ಯತೆಯಿಂದಲೂ ತಪ್ಪಿಸಿಕೊಂಡರು.

ಅರ್ಧಶತಕದ ಜೊತೆಯಾಟ

ಎರಡನೇ  ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಜೋಡಿ ಏಡನ್ ಮರ್ಕರಮ್ ಮತ್ತು ಡೀನ್‌ ಎಲ್ಗರ್‌ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 52 ರನ್‌ ಸೇರಿಸಿದರು. ಆದರೆ ತಮ್ಮ ಎರಡು ಓವರ್‌ಗಳಲ್ಲಿ ಎರಡು ವಿಕೆಟ್‌ ಕಬಳಿಸಿದ ಪಾಂಡ್ಯ ಎದುರಾಳಿಗಳಿಗೆ ಪೆಟ್ಟು ನೀಡಿದರು.

ನೋವಿನಿಂದ ಮರಳಿದ ಸ್ಟೇನ್‌

ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಪಂದ್ಯದ ನಡುವೆ ಹಿಮ್ಮಡಿ ನೋವಿನಿಂದ ಅಂಗಣ ತೊರೆದರು. ಭುಜದ ಮೂಳೆ ಮುರಿತದಿಂದಾಗಿ ಒಂದು ವರ್ಷ ಕಣಕ್ಕೆ ಇಳಿಯದಿದ್ದ ಅವರು 18ನೇ ಓವರ್‌ನ ಮೂರನೇ ಎಸೆತ ಹಾಕಿದ ನಂತರ ನೋವಿನಿಂದ ಬಳಲಿ ಡ್ರೆಸಿಂಗ್ ಕೊಠಡಿಯತ್ತ ತೆರಳಿದರು. 51 ರನ್‌ಗಳಿಗೆ ಎರಡು ವಿಕೆಟ್ ಕಬಳಿಸಿದ ಅವರು ನಂತರ ವಾಪಸಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.