ಕಾರಿನಲ್ಲಿ ಶಾಲೆಗೆ ಹೊರಟಿದ್ದ ಬಾಲಕ; ತಂದೆಗೆ ದಂಡ

7

ಕಾರಿನಲ್ಲಿ ಶಾಲೆಗೆ ಹೊರಟಿದ್ದ ಬಾಲಕ; ತಂದೆಗೆ ದಂಡ

Published:
Updated:

ಬೆಂಗಳೂರು: ಕಾರು ಚಾಲನೆ ಮಾಡಿಕೊಂಡು ಶಾಲೆಗೆ ಹೊರಟಿದ್ದ 16 ವರ್ಷದ ಬಾಲಕನನ್ನು ತಡೆದು ತಪಾಸಣೆ ನಡೆಸಿದ ಹೆಬ್ಬಾಳ ಸಂಚಾರ ಪೊಲೀಸರು, ಆತನ ತಂದೆಗೆ ₹3,000 ದಂಡ ವಿಧಿಸಿದ್ದಾರೆ.

‘ಏರ್‌ಪೋರ್ಟ್‌ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕ, ಕೆಂಪಾಪುರ ಬಳಿಯ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದಾನೆ. ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆತ ಕಾರು ಚಾಲನೆ ಮಾಡಿಕೊಂಡು ಶಾಲೆಗೆ ಹೊರಟಿದ್ದ’ ಎಂದು ಪೊಲೀಸರು ತಿಳಿಸಿದರು.

‘ಮೇಲ್ಸೇತುವೆ ಬಳಿ ಸಾಗುವಾಗ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದ್ದಾನೆ. ಅದನ್ನು ಕಂಡ ನಮ್ಮ ಸಿಬ್ಬಂದಿ, ವಾಹನ ನಿಲ್ಲಿಸುವಂತೆ ಸಂಜ್ಞೆ ಮಾಡಿದ್ದಾರೆ. ಆತ ನಿಲ್ಲಿಸದೆ ಕೆಂಪಾಪುರ ಸಮೀಪದ ಸರ್ವಿಸ್ ರಸ್ತೆಗೆ ನುಗ್ಗಿದ್ದಾನೆ. ಅಲ್ಲಿದ್ದ ಇತರೆ ಸಿಬ್ಬಂದಿ ಕಾರನ್ನು ತಡೆದಿದ್ದಾರೆ.’

‘ಚಾಲನಾ ಪರವಾನಗಿ ಹಾಗೂ ಕಾರಿನ ದಾಖಲೆ ಕೊಡುವಂತೆ ಕೇಳಿದಾಗ ಆತ ತೊದಲಿಕೆಯ ಉತ್ತರ ಕೊಟ್ಟ. ಶಾಲೆಯ ಗುರುತಿನ ಚೀಟಿ ಪರಿಶೀಲಿಸಿದಾಗ ಆತನ ವಯಸ್ಸು ಇನ್ನೂ 16 ಎಂಬುದು ಗೊತ್ತಾಯಿತು. ಹೀಗಾಗಿ ಬಾಲಕ ಹಾಗೂ ಆತನ ತಂದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾರು ಜಪ್ತಿ ಮಾಡಿದ್ದೆವು. ಠಾಣೆಗೆ ಬಂದ ತಂದೆ, ₹3,000 ದಂಡ ಕಟ್ಟಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry