ಗುರುವಾರ , ಜೂಲೈ 9, 2020
26 °C
ಇಲ್ಲದೇ ಇರುವ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ

32 ಎಕರೆ ಕಬಳಿಸಲು ಯತ್ನ ಕ್ರಿಮಿನಲ್‌ ಮೊಕದ್ದಮೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಮಾದಪ್ಪನಹಳ್ಳಿಯ ಸರ್ವೆ ನಂಬರ್‌ 62ರಲ್ಲಿ ನಕಲಿ ದಾಖಲೆ ಸೃಷ್ಟಿಸಿ 32 ಎಕರೆ ಭೂಮಿಯ ಖಾತಾ ಮಾಡಿಸಿಕೊಂಡಿರುವುದು ದೃಢಪಟ್ಟಿರುವುದರಿಂದ ದಿವಂಗತ ನರಸಿಂಹಯ್ಯ ಹಾಗೂ ಅವರ ಕುಟುಂಬದ ಒಂಬತ್ತು ಮಂದಿಯ ವಿರುದ್ಧ ಜಿಲ್ಲಾಡಳಿತವು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ.

ನರಸಿಂಹಯ್ಯ, ರಾಧಮ್ಮ, ಸವಿತಾ, ಕವಿತಾ, ನರಸಿಂಹಮೂರ್ತಿ, ಲಕ್ಷ್ಮಿ, ಅನಿತಾ, ಟಿ.ಎಂ.ಅರವಿಂದ್‌ ಹಾಗೂ ಚರಣ್‌ ವಿರುದ್ಧ ಉತ್ತರ ತಾಲ್ಲೂಕಿನ ತಹಶೀಲ್ದಾರ್‌ ಮಂಜುನಾಥ್‌ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ನರಸಿಂಹಯ್ಯ ಹಾಗೂ ಅವರ ಕುಟುಂಬದ ಸದಸ್ಯರು ನಕಲಿ ದಾಖಲೆ ಸೃಷ್ಟಿಸಿ ಸುಮಾರು ₹400 ಕೋಟಿ ಮೌಲ್ಯದ ಸರ್ಕಾರಿ ಬಂಜರು ಭೂಮಿಯನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಏನಿದು ಪ್ರಕರಣ?

‘ಮಾದಪ್ಪನಹಳ್ಳಿಯ ಸರ್ವೆ ನಂಬರ್ 62ರಲ್ಲಿ ನನ್ನ ತಂದೆ ದಾಳಬೈಲಪ್ಪ ಅವರು 32 ಎಕರೆ ಜಮೀನು ಹೊಂದಿದ್ದರು. ಆದರೆ, ಭೂ ಕಂದಾಯ ಪಾವತಿಸದ ಕಾರಣ ಸರ್ಕಾರ ಆ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದೆ. ಪಿತ್ರಾರ್ಜಿತವಾಗಿ ನನಗೆ ಸೇರಬೇಕಿದ್ದ ಈ ಜಮೀನನ್ನು ಮತ್ತೆ ನನ್ನ ಹೆಸರಿಗೆ ಮಂಜೂರು ಮಾಡಬೇಕು’ ಎಂದು ಕೋರಿ ಮಾದಪ್ಪನಹಳ್ಳಿಯ ನರಸಿಂಹಯ್ಯ ಎಂಬುವರು 2012ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ‘32 ಎಕರೆ ಜಮೀನು ನರಸಿಂಹಯ್ಯ ಅವರಿಗೆ ಸೇರಬೇಕಾದ ಸ್ವತ್ತು. ಅವರು ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿ ಈ ಜಮೀನನ್ನು ಅವರಿಗೆ ಮಂಜೂರು ಮಾಡಲಾಗಿದೆ’ ಎಂದು ಆದೇಶ ಹೊರಡಿಸಿದ್ದರು. ಬಳಿಕ, ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಹೈಕೋರ್ಟ್ ಆದೇಶದ ಬಳಿಕ ತಮ್ಮ ಆದೇಶವನ್ನು ಹಿಂದಕ್ಕೆ ಪಡೆದಿದ್ದ ಜಿಲ್ಲಾಧಿಕಾರಿ, ‘ಅದು ಸರ್ಕಾರಿ ಜಮೀನು’ ಎಂದು ಮತ್ತೊಂದು ಆದೇಶ ಹೊರಡಿಸಿದ್ದರು. ಆದರೆ, ಇದರ ವಿರುದ್ಧವೂ ನರಸಿಂಹಯ್ಯ ಕುಟುಂಬ ಸದಸ್ಯರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌, ‘ಜಿಲ್ಲಾಧಿಕಾರಿ ಒಮ್ಮೆ ಆದೇಶ ಮಾಡಿದ ಬಳಿಕ ಮರು ಆದೇಶ ಮಾಡುವ ಅಧಿಕಾರ ಅವರಿಗೆ ಇಲ್ಲ’ ಎಂದು ಅರ್ಜಿಯನ್ನು ವಜಾ ಮಾಡಿತ್ತು.

ಇದನ್ನು ಪ್ರಶ್ನಿಸಿದ್ದ ಜಿಲ್ಲಾಡಳಿತವು ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಪಡೆಯಬೇಕು ಎಂದು ಕೋರಿ ಕುಟುಂಬದ ಸದಸ್ಯರು ಕೇವಿಯಟ್‌ ಸಲ್ಲಿಸಿದ್ದರು.

ಮುಳುವಾಯ್ತು ಮರಣ ಪ್ರಮಾಣಪತ್ರ

ಈ ನಡುವೆ ನರಸಿಂಹಯ್ಯ ಮೃತಪಟ್ಟಿದ್ದರು. ತಂದೆಯ ಹೆಸರಿನಲ್ಲಿರುವ ಭೂಮಿಯನ್ನು ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ನರಸಿಂಹಯ್ಯ ಅವರ ಮಕ್ಕಳು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ನರಸಿಂಹಯ್ಯ ಅವರ ಮರಣ ಪ್ರಮಾಣಪತ್ರವನ್ನೂ ಕೋರ್ಟ್‌ಗೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಕಾನೂನುಬದ್ಧ ವಾರಸುದಾರರ ಮಾಹಿತಿ ನೀಡುವಂತೆ ಸೂಚಿಸಿತ್ತು. ಆದೇಶದ ಪ್ರತಿಯೊಂದಿಗೆ ನರಸಿಂಹಯ್ಯ ಅವರ ಮರಣ ಪ್ರಮಾಣಪತ್ರವನ್ನೂ ಲಗತ್ತಿಸಲಾಗಿತ್ತು. ಇದರಲ್ಲಿ ಉಲ್ಲೇಖಿಸಿದ್ದ ವಿಳಾಸವು ಯಲಹಂಕ ತಾಲ್ಲೂಕಿನಲ್ಲಿರುವುದು ಕಂಡುಬಂದಿತ್ತು. ಕಂದಾಯ ಅಧಿಕಾರಿಯು ಆ ವಿಳಾಸಕ್ಕೆ ಹೋಗಿ ನೋಡಿದರೆ ಅಲ್ಲಿ ಇದ್ದದ್ದು ಖಾಲಿ ನಿವೇಶನ! ಅಲ್ಲಿ ಯಾರೂ ವಾಸ ಮಾಡುತ್ತಿಲ್ಲ ಎಂದು ಕಂದಾಯ ಅಧಿಕಾರಿಯು ವರದಿ ನೀಡಿದ್ದರು.

ನರಸಿಂಹಯ್ಯ ಅವರ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಜಿಲ್ಲಾಡಳಿತವು ಪತ್ರ ಬರೆದಿತ್ತು. ರಾಜಾನುಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಸ್ಮಶಾನದಲ್ಲಿ ಹೆಣವನ್ನು ಹೂಳಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೀಡಿರುವ ಪ್ರಮಾಣಪತ್ರ, ಅಶ್ವಿನಿ ಆಸ್ಪತ್ರೆಯಲ್ಲಿ ನರಸಿಂಹಯ್ಯ ಚಿಕಿತ್ಸೆ ಪಡೆದಿದ್ದ ದಾಖಲೆ ಹಾಗೂ ನರಸಿಂಹಯ್ಯ ಅವರ ಮತದಾರರ ಗುರುತಿನ ಚೀಟಿಯನ್ನು ಪಾಲಿಕೆಯು ನೀಡಿತ್ತು. ಇದರಿಂದ ಅನುಮಾನಗೊಂಡ ಜಿಲ್ಲಾಡಳಿತವು ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿತ್ತು.

ಈ ಬಗ್ಗೆ ಪಿಡಿಒ ಅವರಿಗೆ ವಿಚಾರಿಸಿದಾಗ, ‘ನಾನು ಈ ಪ್ರಮಾಣಪತ್ರ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ‘ನರಸಿಂಹಯ್ಯ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿಲ್ಲ’ ಎಂದು ಅಶ್ವಿನಿ ಆಸ್ಪತ್ರೆಯು ತಿಳಿಸಿತ್ತು. ಹೀಗಾಗಿ, ನಕಲಿ ದಾಖಲೆ ಸೃಷ್ಟಿಸಿ ಮರಣ ಪ್ರಮಾಣಪತ್ರ ಪಡೆಯಲಾಗಿದೆ ಎಂದು ಉತ್ತರ ತಾಲ್ಲೂಕಿನ ತಹಶೀಲ್ದಾರರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

ಮತದಾರರ ಪಟ್ಟಿಯಲ್ಲಿತ್ತು ನರಸಿಂಹಯ್ಯ ಚಿತ್ರ

ನರಸಿಂಹಯ್ಯ ಯಾರು ಎಂಬ ಪ್ರಶ್ನೆ ಜಿಲ್ಲಾಡಳಿತವನ್ನು ಕಾಡುತ್ತಿತ್ತು. ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ನರಸಿಂಹಯ್ಯ ಅವರ ಹೆಸರು ಇದೆಯೇ ಎಂಬುದರ ಬಗ್ಗೆ ಹುಡುಕಾಟ ನಡೆಸಲು ಅಧಿಕಾರಿಗಳು ಮುಂದಾದರು. ಆದರೆ, ನರಸಿಂಹಯ್ಯ ಅವರ ಮತದಾರರ ಗುರುತಿನ ಚೀಟಿಗೂ ಮತದಾರರ ಪಟ್ಟಿಯಲ್ಲಿದ್ದ ಹೆಸರುಗಳಿಗೂ ತಾಳೆ ಆಗುತ್ತಿರಲಿಲ್ಲ.

‘ಈ ನಡುವೆ, ಕುಂದಾಣ ಹೋಬಳಿಯಲ್ಲಿ ನರಸಿಂಹಯ್ಯ ಎಂಬ ಹೆಸರಿನ ವ್ಯಕ್ತಿಯೊಬ್ಬರಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದಾರೆ ಎಂದು ಕಂದಾಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಆ ಪಟ್ಟಿಯನ್ನು ತೆಗೆದು ನೋಡಿದಾಗ, ಗುರುತಿನ ಚೀಟಿಯಲ್ಲಿದ್ದ ನರಸಿಂಹಯ್ಯ ಅವರ ಚಿತ್ರಕ್ಕೂ, ಮತದಾರರ ಪಟ್ಟಿಯಲ್ಲಿದ್ದ ಚಿತ್ರಕ್ಕೂ ಹೋಲಿಕೆಯಾಗುತ್ತಿತ್ತು. ಆ ಪಟ್ಟಿಯಲ್ಲಿ ನರಸಿಂಹಯ್ಯ ಅವರ ತಂದೆಯ ಹೆಸರು ಕದಿರಪ್ಪ ಎಂದಿತ್ತು. ಅಲ್ಲಿಗೆ, ನರಸಿಂಹಯ್ಯ ಅವರ ತಂದೆ ದಾಳಬೈಲಪ್ಪ ಅಲ್ಲ, ಕದಿರಪ್ಪ ಎಂಬುದು ಸ್ಪಷ್ಟವಾಗಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಪ್ರಕರಣದಲ್ಲಿ ರಾಜಕಾರಣಿಯೊಬ್ಬರ ಕೈವಾಡ ಇದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.