ಗುರುವಾರ , ಜೂಲೈ 9, 2020
24 °C

ಹಿಂದೂ–ಮುಸಲ್ಮಾನರ ನಡುವೆ ಶಾಂತಿ ಸಭೆ ಅಗತ್ಯ: ಪ್ರತಾಪ್‌ ಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೂ–ಮುಸಲ್ಮಾನರ ನಡುವೆ ಶಾಂತಿ ಸಭೆ ಅಗತ್ಯ: ಪ್ರತಾಪ್‌ ಸಿಂಹ

ಮಂಗಳೂರು: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಎ.ಜೆ. ಆಸ್ಪತ್ರೆಯಲ್ಲಿ ಭಾನುವಾರ ಅಹಮ್ಮದ್ ಬಶೀರ್ ನಿಧನರಾದರು. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್‌ ಸಿಂಹ, ‘ಕಣ್ಣಿಗೆ ಕಣ್ಣು ಎಂದು ಹೊರಟರೆ ಇಡೀ ಜಗತ್ತು ಅಂಧತ್ವದಲ್ಲಿ ಮುಳುಗುತ್ತದೆ’ ಎಂದು ಟ್ವೀಟಿಸಿದ್ದಾರೆ.

ನಗರದ ಕೊಟ್ಟಾರ ಚೌಕಿ ಬಳಿ ಬುಧವಾರ ರಾತ್ರಿ ಹಲ್ಲೆಗೊಳಗಾಗಿದ್ದ ಆಕಾಶಭವನ ನಿವಾಸಿ ಅಹಮ್ಮದ್ ಬಶೀರ್ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಸಾವಿನ ಸುದ್ದಿ ಕುರಿತು ಸಂಸದ ಪ್ರತಾಪ್‌ ಸಿಂಹ ’ಕಣ್ಣಿಗೆ ಕಣ್ಣು ಎಂದು ಹೊರಟರೆ ಇಡೀ ಜಗತ್ತು ಅಂಧತ್ವದಲ್ಲಿ ಮುಳುಗುತ್ತದೆ. ದೀಪಕ್‌ ರಾವ್ ಹತ್ಯೆಗೆ ಉತ್ತರವಾಗಿ ಬಶೀರ್‌ ಕೊಲೆಯಾಗುವುದು ಸರಿಯಲ್ಲ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಶಾಂತಿ ನೆಲೆಸಲು ಸೂಕ್ತ ಕ್ರಮಕೈಗೊಳ್ಳುವುದರ ಕುರಿತು ಚಿಂತಿಸಿಲ್ಲ, ಹಿಂದೂ–ಮುಸಲ್ಮಾನರ ನಡುವೆ ಶಾಂತಿ ಸಭೆ ಏರ್ಪಡಿಸುವುದು ಅಗತ್ಯವಾಗಿದೆ.’ ಎಂದು ಟ್ವೀಟಿಸಿದ್ದಾರೆ.

ಕುಳೂರು ಮಸೀದಿಯಲ್ಲಿ ಅಂತ್ಯಕ್ರಿಯೆ

ಅಹಮ್ಮದ್ ಬಶೀರ್ ಅವರ ಅಂತ್ಯಸಂಸ್ಕಾರವನ್ನು ಕುಳೂರು ಮಸೀದಿಯಲ್ಲಿ ನಡೆಸಲಾಗುವುದು ಎಂದು ಮೃತರ ತಮ್ಮ ಹಕೀಂ ಹೇಳಿದರು.
ಬಶೀರ್ ನಿಧನವಾದ ಸುದ್ದಿ ಹಬ್ಬುತ್ತಿದ್ದಂತೆ ಆಸ್ಪತ್ರೆಯ ಶವಾಗಾರದ ಬಳಿ ನೂರಾರು ಮಂದಿ ನೆರೆದಿದ್ದರು. ಈ ಸಂದರ್ಭ ಮಾತನಾಡಿದ ಅವರು, ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡಬೇಕು. ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಆಕಾಶಭವನದಲ್ಲಿರುವ ಮನೆಗೆ ಕೊಂಡೊಯ್ದು, ಮಹಿಳೆಯರಿಗೆ ಅಂತಿಮದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಕುಳೂರು ಮಸೀದಿಯಲ್ಲಿ ಎಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.

ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಬಿಗಿಭದ್ರತೆಗೆ ನೂರಾರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಡಿಜಿಪಿ ಕಮಲ್ ಪಂತ್ ಆಸ್ಪತ್ರೆಗೆ ಭೇಟಿ ನೀಡಿದರು. ಶಾಸಕ ಮೊಯಿದ್ದೀನ್ ಬಾವ ಸ್ಥಳದಲ್ಲಿದ್ದಾರೆ.

ಬಶೀರ್ ಪಾರ್ಥಿವ ಶರೀರದ ಮೆರವಣಿಗೆ ಇಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಶಾಂತಿಯುತವಾಗಿ ಎಲ್ಲವೂ ಕೊನೆಗೊಳ್ಳಲಿ ಎಂದು ಆಶಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸಚಿವ ಯು.ಟಿ.ಖಾದರ್ ಕುಟುಂಬದವರ ನಿರ್ಧಾರವನ್ನು ಶ್ಲಾಘಿಸಿದ್ದು, ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. ಬಶೀರ್ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವುದಾಗಿ ಆಸ್ಪತ್ರೆಗೆ ಬಂದಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.