ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಗೊಳ್ಳದ ರೈಲ್ವೆ ಮೇಲ್ಸೇತುವೆ !

Last Updated 7 ಜನವರಿ 2018, 8:48 IST
ಅಕ್ಷರ ಗಾತ್ರ

ಬೆಳಗಾವಿ: ‘ಸೇತುವೆ ಕೆಲ್ಸ ಸಾವಕಾಶ ನಡ್ಯಾಕ ಹತೈತ್ರಿ.. ಹೋದ ವರ್ಷದಿಂದ ನಡೆದಿದ್ದರೂ ಪೂರ್ಣ ಆಗಿಲ್ಲ... ಇದು ಮುಗಿಯವವರೆಗೆ ನಮ್ಗ ವ್ಯಾಪಾರ ಇಲ್ಲ ನೋಡ್ರಿ...’ ಇಲ್ಲಿನ ಹಳೇ ಪಿ.ಬಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳದ ಅಕ್ಕಪಕ್ಕದ ವ್ಯಾಪಾರಸ್ಥರ ಮಾತಿದು. ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿರುವುದಾರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಯಾವಾಗ ಕಾಮಗಾರಿ ಪೂರ್ಣಗೊಳ್ಳುತ್ತದೆ, ಯಾವಾಗ ತಮ್ಮ ವ್ಯಾಪಾರ ಮೊದಲಿನಂತೆ ಚಿಗುರುತ್ತದೆ ಎನ್ನುವುದನ್ನು ಕಾಯುತ್ತಿದ್ದಾರೆ.

ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಇಲ್ಲಿನ ಜೀಜಾ ಮಾತಾ ವೃತ್ತದಿಂದ ಮಾಣಿಕ್‌ಬಾಗ್‌ ವೃತ್ತದವರೆಗೆ ಇದೇ ಸ್ಥಿತಿಯಿದೆ. ಈ ಸ್ಥಳದಲ್ಲಿ ಮುಖ್ಯವಾಗಿ ಆಟೊಮೊಬೈಲ್‌ಗೆ ಸಂಬಂಧಿಸಿದಂತೆ ಹತ್ತಾರು ಅಂಗಡಿ ಮಳಿಗೆಗಳಿವೆ. ಹೋಟೆಲ್‌ಗಳು, ಪಾನ್‌ ಶಾಪ್‌ ಹಾಗೂ ಇತರೆ ಚಿಕ್ಕಪುಟ್ಟ ಅಂಗಡಿಗಳಿವೆ.

ಕಳೆದ ವರ್ಷ ಜನವರಿಯಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಒಂಭತ್ತು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆಯ ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ, ಈಗ ಒಂದು ವರ್ಷ ಕಳೆದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ.

₹ 12.50 ಕೋಟಿ ವೆಚ್ಚ: ಫೋರ್ಟ್‌ ರಸ್ತೆಯ ಜೀಜಾ ಮಾತಾ ವೃತ್ತ ಹಾಗೂ ಮಾಣಿಕ್‌ಬಾಗ್‌ ವೃತ್ತದ ನಡುವೆ ರೈಲ್ವೆ ಹಳಿ ಹಾದುಹೋಗಿದೆ. ಇಲ್ಲಿ ಮಾನವ ಸಹಿತ ರೈಲ್ವೆ ಗೇಟ್‌ ಅಳವಡಿಸಲಾಗಿತ್ತು. ಪ್ರತಿದಿನ ಅಂದಾಜು 30ಕ್ಕೂ ಹೆಚ್ಚು ರೈಲ್ವೆಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ರೈಲ್ವೆ ಸಂಚರಿಸುವ ಸಮಯದಲ್ಲಿ ರಸ್ತೆ ಸಂಚಾರವನ್ನು ಬಂದ್‌ ಮಾಡಲು ರೈಲ್ವೆ ಗೇಟ್‌ ಹಾಕಲಾಗುತ್ತದೆ. ಕನಿಷ್ಠ 6ರಿಂದ 8 ನಿಮಿಷಗಳವರೆಗೆ ಗೇಟ್‌ ಹಾಕಿರುವುದರಿಂದ ವಾಹನಗಳ ಸಂಚಾರ ಬಂದ್‌ ಆಗಿ, ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ತೀರ್ಮಾನಿಸಲಾಯಿತು.

ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಂಸದ ಸುರೇಶ ಅಂಗಡಿ ಅವರ ಸತತ ಪ್ರಯತ್ನದ ಫಲವಾಗಿ ಕಳೆದ ವರ್ಷ ಜನವರಿಯಲ್ಲಿ ಕಾಮಗಾರಿಯು ಆರಂಭಗೊಂಡಿತ್ತು. ಸುಮಾರು ₹ 12.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭ
ಗೊಂಡಿದೆ. ಮೇಲ್ಸೇತುವೆಯು ಸುಮಾರು 40 ಅಡಿ ಅಗಲ ವಿಸ್ತರಣೆ ಹೊಂದಿದ್ದು, ದ್ವಿಪಥ ರಸ್ತೆ ನಿರ್ಮಿಸಲಾಗುತ್ತಿದೆ. ಸುಮಾರು 15 ಪಿಲ್ಲರ್‌ಗಳನ್ನು ನಿಲ್ಲಿಸಲಾಗಿದೆ. ಇವುಗಳ ಮೇಲೆ ರಸ್ತೆ ನಿರ್ಮಿಸುವ ಕೆಲಸ ಇನ್ನಷ್ಟೇ ಆರಂಭಗೊಳ್ಳಬೇಕಾಗಿದೆ.

ದೂಳುಮಯ: ಪಿಲ್ಲರ್‌ಗಳನ್ನು ನಿಲ್ಲಿಸಲು ಭೂಮಿ ಅಗೆದಿದ್ದರಿಂದ ಸಾಕಷ್ಟು ಮಣ್ಣು ಹರಡಿಕೊಂಡಿದೆ. ಇದರಿಂದಾಗಿ ಇಡೀ ವಾತಾವರಣ ದೂಳುಮಯವಾಗಿದೆ. ಗಾಳಿ ಬೀಸಿದ ತಕ್ಷಣ ದೂಳು ಸುತ್ತಮುತ್ತಲಿನ ಅಂಗಡಿಗಳ ಮೇಲೆ ಹರಡಿಕೊಳ್ಳುತ್ತಿದೆ. ಇದರಿಂದ ಬೇಸರಗೊಂಡ ಹಲವು ಮಾಲೀಕರು ಅಂಗಡಿ, ಮಳಿಗೆಗಳನ್ನು ಮುಚ್ಚಿಕೊಂಡು ಹೋಗಿದ್ದಾರೆ. ಇನ್ನುಳಿದ ಕೆಲವು ಅಂಗಡಿಗಳು ಗ್ರಾಹಕರು ಇಲ್ಲದೇ ಬಿಕೋ ಎನ್ನುತ್ತಿವೆ.

ಸುತ್ತುಬಳಸಿ ಪ್ರಯಾಣ: ವಡಗಾಂವ, ಖಾಸಭಾಗ, ಶಹಾಪುರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಫೋರ್ಟ್‌ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಕಾಮಗಾರಿ ನಡೆಯುತ್ತಿರುವುದರಿಂದ ಸಂಪರ್ಕ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ದ್ವಿಚಕ್ರ ವಾಹನ, ಕಾರು, ಆಟೊ ಸೇರಿದಂತೆ ಎಲ್ಲ ರೀತಿಯ ವಾಹನಗಳು ಸುತ್ತುಬಳಸಿ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ ಎಂದು ವಾಹನ ಸಂಚಾರರು ಬೇಸರ ವ್ಯಕ್ತಪಡಿಸಿದರು.

ವಡಗಾಂವ ಕಡೆ ಹೊರಟಿದ್ದ ಬೈಕ್‌ ಸವಾರ ರಮೇಶ ಜಾಧವ ಮಾತನಾಡಿ, ‘ನಾವೀಗ ಸುತ್ತುಬಳಸಿ ಹೋಗಬೇಕಾಗಿದೆ. ಒಂದು ವರ್ಷದಿಂದ ನಾವು ಈ ತೊಂದರೆ
ಯನ್ನು ಅನುಭವಿಸುತ್ತಿದ್ದೇವೆ. ಕಾಮಗಾರಿ ವಿಳಂಬವಾದಷ್ಟು ನಮಗೆ ತೊಂದರೆ ಉಂಟಾಗುತ್ತಿದೆ. ಆದಷ್ಟು ಬೇಗನೇ ಪೂರ್ಣಗೊಳಿಸಿಕೊಡಿ’ ಎಂದು ಕೇಳಿಕೊಂಡರು. ರೈಲ್ವೆ ಇಲಾಖೆಯ ಎಂಜಿನಿಯರ್‌ಗಳು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

* * 

ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ನಮ್ಮ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ.
ಕುಮಾರ ಶೆಟ್ಟಿ
ಸ್ಥಳೀಯ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT