ಬುಧವಾರ, ಜೂಲೈ 8, 2020
23 °C

ಆಟಗಾರ, ಮಾರ್ಗದರ್ಶಕ ಮತ್ತು ಮನಶಾಸ್ತ್ರಜ್ಞ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಆಟಗಾರ, ಮಾರ್ಗದರ್ಶಕ ಮತ್ತು ಮನಶಾಸ್ತ್ರಜ್ಞ...

‘ಆಟಗಾರರ ಸರ್ವತೋಮುಖ ಬೆಳವಣಿಗೆಯಲ್ಲಿ ತಂಡದ ಕೋಚ್‌ಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ಆಟಗಾರರ ವಿಚಾರ,ಯೋಚನಾ ಕ್ರಮ, ದೃಷ್ಟಿಕೋನ ಮತ್ತು ನಂಬಿಕೆಗಳನ್ನು ತಿಳಿದು, ಅವು ಸರಿಯಾಗಿಲ್ಲದಿದ್ದರೆ ಬದಲಿಸುವ ಪ್ರಯತ್ನವನ್ನು ಕೋಚ್ ಆದವರು ಮಾಡಬೇಕು. ತಪ್ಪುಗಳನ್ನು ಮನವರಿಕೆ ಮಾಡಿಕೊಡದಿದ್ದರೆ ಹೊಸ ವಿಷಯಗಳನ್ನು ಕಲಿಯಲು ಆಗುವುದಿಲ್ಲ’... ಕರ್ನಾಟಕದ ಹಿರಿಯ ಕ್ರಿಕೆಟಿಗ ಸುಜಿತ್‌ ಸೋಮಸುಂದರ್‌ ಅವರ ಮಾತುಗಳಿವು.

1996, ಅಕ್ಟೋಬರ್‌ 17ರಂದು ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಆಡಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬೆಂಗಳೂರಿನ ಸುಜಿತ್‌, ಪ್ರಥಮ ದರ್ಜೆಯಲ್ಲಿ 99 ಪಂದ್ಯಗಳನ್ನು ಆಡಿದ್ದಾರೆ. ಹಲವು ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಯೂ ಅವರದ್ದಾಗಿದೆ.

ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಕಾರ್ಪೊರೇಟ್‌ ಕ್ಷೇತ್ರದಲ್ಲೂ ಕೆಲಸ ಮಾಡಿದ್ದ ಸುಜಿತ್‌, ಅಂತರರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟಿಗರು ಹಾಗೂ ಪ್ರಮುಖ ಗಾಲ್ಫರ್‌ಗಳಿಗೆ ಲೈಫ್‌ ಮತ್ತು ಮೈಂಡ್‌ ಕೋಚ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿಗೆ ಉತ್ತರ ಪ್ರದೇಶ ಕ್ರಿಕೆಟ್‌ ತಂಡದ ಕೋಚ್‌ ಆಗಿ ನೇಮಕವಾಗಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ನಿವೃತ್ತಿಯ ಬಳಿಕ ಐದು ವರ್ಷಗಳ ಕಾಲ ವಿಪ್ರೊ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೀರಿ. ಈ ಬದಲಾವಣೆಗೆ ಕಾರಣ?

ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದಾಗ ಕರ್ನಾಟಕ ತಂಡದ ನಾಯಕನಾಗಿದ್ದೆ. ಅದಾಗಲೇ 20 ವರ್ಷಗಳ ಕಾಲ ಕ್ರಿಕೆಟ್‌ ಆಡಿದ್ದೆ. ನಿವೃತ್ತಿಯ ನಂತರ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಂಡರೆ ಹೊಸತನ ಇರುತ್ತದೆ ಎಂದು ಅನಿಸಿತು. ಬಿ.ಇ. ಮತ್ತು ಎಂ.ಬಿ.ಎ ಓದಿದ್ದರಿಂದ ವಿಪ್ರೊ ಸಂಸ್ಥೆಗೆ ಅರ್ಜಿ ಹಾಕಿದ್ದೆ, ಅರ್ಹತೆ ಇದ್ದಿದ್ದರಿಂದ ಕೆಲಸ ಮಾಡುವ ಅವಕಾಶ ಸಿಕ್ಕಿತು. ವಿಪ್ರೊದಲ್ಲಿ ಐದು ವರ್ಷ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದೆ. ಇದರಿಂದ ಹೊಸ ವಿಷಯಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.

* ನೀವು ಕ್ರೀಡಾ ಮನಶಾಸ್ತ್ರದಲ್ಲಿ ಪಿ.ಎಚ್‌.ಡಿ ಮಾಡುತ್ತಿದ್ದೀರಿ. ಇದರ ಬಗ್ಗೆ ಹೇಳಿ?

ಮನಶಾಸ್ತ್ರದಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. 2012ರಲ್ಲಿ ಕೇರಳ ತಂಡದ ಕೋಚ್‌ ಆಗಿದ್ದಾಗ ಮೆಂಟಲ್‌ ಟಫ್‌ನೆಸ್‌ ಕೋಚಿಂಗ್‌ ವಿಷಯದಲ್ಲಿ ಅಧ್ಯಯನ ನಡೆಸುತ್ತಿದ್ದೆ. ಅದಕ್ಕೂ ಮುನ್ನ ಅಮೆರಿಕದ ಕ್ರೀಡಾ ಮನಶಾಸ್ತ್ರಜ್ಞ ಪ್ಯಾಟ್ರಿಕ್‌ ಕೊಹ್ನ್‌ ಅವರ ಬಳಿ ‘ಸರ್ಟಿಫಿಕೇಷನ್‌ ಕೋರ್ಸ್‌’ ಮಾಡಿದ್ದೆ.  ಈ ವಿಷಯದಲ್ಲಿ ಇನ್ನೂ ಆಳವಾಗಿ ಅಧ್ಯಯನ ನಡೆಸಬೇಕು ಎಂಬ ಉದ್ದೇಶದಿಂದ ಕ್ರೀಡಾ ಮನಶಾಸ್ತ್ರ ವಿಷಯದಲ್ಲಿ ಪಿ.ಎಚ್‌.ಡಿ ಮಾಡುತ್ತಿದ್ದೇನೆ.

* ಮನಶಾಸ್ತ್ರ ಓದಿಕೊಂಡಿರುವುದರಿಂದ ಕೋಚ್‌ ಆಗಿ ನಿಮಗೆ ಆಗಿರುವ ಲಾಭಗಳೇನು?

ಆಟಗಾರರ ಮನಸ್ಥಿತಿ, ವರ್ತನೆಗಳನ್ನು ಅರಿತು ಅದಕ್ಕೆ ಅನುಗುಣವಾಗಿ ಪರಿಹಾರ ಸೂಚಿಸಲು ಮತ್ತು ಅವರ ಮನೋಬಲ ಹೆಚ್ಚಿಸಲು ಮನಶಾಸ್ತ್ರ ತುಂಬಾ ನೆರವಾಗಿದೆ.

* ನೀವು ಈ ಹಿಂದೆ ಯುವ ಗಾಲ್ಫರ್‌ಗಳ ಮೈಂಡ್‌ ಕೋಚ್‌ ಆಗಿ ಕೆಲಸ ಮಾಡಿದ್ದೀರಿ. ಆ ಅನುಭವ ಹೇಗಿತ್ತು?

ಯುವ ಗಾಲ್ಫರ್‌ಗಳು ಮಾತ್ರವಲ್ಲ. ಭಾರತ ಕ್ರಿಕೆಟ್‌ ತಂಡದ ಕೆಲ ಆಟಗಾರರು, ಪ್ರಥಮ ದರ್ಜೆ ಕ್ರಿಕೆಟಿಗರು ಮತ್ತು ಕೆಲ ಹಿರಿಯ ಗಾಲ್ಫರ್‌ಗಳಿಗೆ ಈಗಲೂ ಮೈಂಡ್‌ ಕೋಚ್‌ ಮತ್ತು ಲೈಫ್‌ ಕೋಚ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಕ್ರಿಕೆಟ್‌ನಲ್ಲಿ ಲೆವಲ್‌–3 ಕೋಚಿಂಗ್‌ ಕೂಡ ಮಾಡಿದ್ದೇನೆ. ಅಕ್ಟೋಬರ್‌ನಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಕೋಚಿಂಗ್‌ ಪ್ರಮಾಣ ಪತ್ರ ಪಡೆದಿದ್ದೇನೆ.

* ಉತ್ತರ ಪ್ರದೇಶ ತಂಡದ ಮುಖ್ಯ ಕೋಚ್‌ ಹುದ್ದೆಗೆ ನೇಮಕವಾಗಿದ್ದು ಹೇಗೆ?

ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕೋಚ್‌ ಬದಲಾವಣೆ ಮಾಡಲು ನಿರ್ಧರಿಸಿದಾಗ ನನ್ನ ಹೆಸರನ್ನು ಯಾರೋ ಶಿಫಾರಸು ಮಾಡಿದ್ದರಂತೆ. ನನ್ನ ಹೆಸರು ಕೇಳಿ ಬಂದ ಬೆನ್ನಲ್ಲೆ ಸಂಸ್ಥೆಯಿಂದ ಕರೆ ಬಂತು. ಎರಡು ತಿಂಗಳ ಕಾಲ ತಂಡದ ಕೋಚ್‌ ಆಗಿ ಕೆಲಸ ಮಾಡುತ್ತೀರಾ ಎಂದು ಕೇಳಿಕೊಂಡರು. ಅ‌ವರು ಕೇಳಿದ ಅವಧಿಯಲ್ಲಿ ನಾನು ಯಾವುದೇ ಕೆಲಸ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಮಾರ್ಗದರ್ಶಕನ ಜವಾಬ್ದಾರಿ ನಿಭಾಯಿಸಲು ಒಪ್ಪಿದೆ.

* ಉತ್ತರ ಪ್ರದೇಶ ತಂಡ ಈ ಬಾರಿಯ ರಣಜಿಯಲ್ಲಿ ಒಂದೂ ಪಂದ್ಯ ಗೆದ್ದಿರಲಿಲ್ಲ. ಹೊಸ ಕೋಚ್‌ ಆಗಿ ನಿಮ್ಮ ಮುಂದಿರುವ ಸವಾಲು?

ರಣಜಿಗೂ ಮುನ್ನ ತಂಡದಲ್ಲಿ ಸಾಕಷ್ಟು ಮಂದಿ ಹೊಸಬರಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಅನುಭವದ ಕೊರತೆ ಎದ್ದುಕಂಡಿತ್ತು. ಟೂರ್ನಿಯಲ್ಲಿ ಲೀಗ್‌ ಹಂತದಲ್ಲೇ ಹೊರಬಿದ್ದಿರುವುದರಿಂದ ಸಹಜವಾಗಿಯೇ ಒತ್ತಡ ಇದ್ದೇ ಇರುತ್ತದೆ. ಸೈಯದ್‌ ಮುಷ್ತಾಕ್ ಅಲಿ ಮತ್ತು ವಿಜಯ್‌ ಹಜಾರೆ ಟ್ರೋಫಿಗೆ ಬಲಿಷ್ಠ ತಂಡ ಕಟ್ಟುವ ಹೊಣೆ ನಮ್ಮ ಮೇಲಿದೆ. ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಹಿಂದಿನ ನಿರಾಸೆ ಮರೆತು ತಂಡವನ್ನು ಹೊಸ ಸವಾಲಿಗೆ ಸಜ್ಜುಗೊಳಿಸಲು ಮುಂದಾಗಿದ್ದೇವೆ.

* ಈ ಹಿಂದೆ ಕೇರಳ ತಂಡದ ಕೋಚ್‌ ಆಗಿದ್ದೀರಿ. ಆ ಅನುಭವ ಹೇಗಿತ್ತು?

2012ರಿಂದ 2014ರವರೆಗೆ ಕೇರಳ ತಂಡದ ಕೋಚ್‌ ಆಗಿದ್ದೆ. ಮೊದಲ ಬಾರಿಗೆ ತಂಡವೊಂದರ ಮಾರ್ಗದರ್ಶಕನಾಗಿ ಕೆಲಸ ಮಾಡಿದ್ದು ವಿಶೇಷ ಅನುಭವ ನೀಡಿತ್ತು. ಕೇರಳದ ಕೋಚ್‌ ಆಗಿದ್ದಾಗ ತಂಡದಲ್ಲಿ ಹೊಸಬರೇ ಹೆಚ್ಚಿದ್ದರು. ಬಹುತೇಕರಿಗೆ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವ ಇರಲಿಲ್ಲ.  ಹೀಗಿದ್ದರೂ ಟ್ವೆಂಟಿ-20 ಟೂರ್ನಿಯಲ್ಲಿ ಪಂಜಾಬ್‌, ದೆಹಲಿ, ತಮಿಳುನಾಡಿನಂತಹ ಬಲಿಷ್ಠ ತಂಡಗಳ ಎದುರು ತಂಡ ಗೆದ್ದಿತ್ತು. ಆಟಗಾರರ ವೈಯಕ್ತಿಕ ಸಾಮರ್ಥ್ಯವೂ ವೃದ್ಧಿಸಿತ್ತು. ನನ್ನ ಅವಧಿಯಲ್ಲಿ ಹಲವು ಮಂದಿ ಭಾರತ ‘ಎ’ ತಂಡಕ್ಕೂ ಆಯ್ಕೆಯಾದರು. ಅದು ನಿಜಕ್ಕೂ ಹೆಮ್ಮೆಯ ವಿಷಯ.

* ಉತ್ತರ ಪ್ರದೇಶದ ಜೊತೆ ಎರಡು ತಿಂಗಳ ಅವಧಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದೀರಿ. ನಂತರದ ಹಾದಿ?

ಎರಡು ತಿಂಗಳ ಅವಧಿಗೆ ಕೋಚ್‌ ಆಗಿ ಕೆಲಸ ಮಾಡಿ ಅಂತ ಕೇಳಿಕೊಂಡಿದ್ದರಿಂದಲೇ ಈ ಜವಾಬ್ದಾರಿ ಒಪ್ಪಿಕೊಂಡಿದ್ದೇನೆ. ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿಲ್ಲ. ಸೈಯದ್‌ ಮುಷ್ತಾಕ್‌ ಅಲಿ ಮತ್ತು ವಿಜಯ್‌ ಹಜಾರೆ ಟ್ರೋಫಿ ಮುಗಿದ ನಂತರ ಇದರ ಬಗ್ಗೆ ಯೋಚಿಸುತ್ತೇನೆ.

* ತಂಡದಲ್ಲಿ ಸುರೇಶ್‌ ರೈನಾ ಅವರಂತಹ ಹಿರಿಯ ಆಟಗಾರರ ಜೊತೆ ಹೊಸಬರು ಇದ್ದಾರೆ. ಅವರನ್ನೆಲ್ಲಾ ಒಂದುಗೂಡಿಸಿಕೊಂಡು ಹೋಗಲು ಏನು ಯೋಜನೆ ಹೆಣೆದಿದ್ದೀರಿ?

ತಂಡದಲ್ಲಿರುವ ಆಟಗಾರರ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸುವುದು, ಪರಸ್ಪರರ ಮೇಲೆ ನಂಬಿಕೆ, ಗೌರವ ಮೂಡುವಂತೆ ಮಾಡುವುದು ನನ್ನ ಮೊದಲ ಆದ್ಯತೆ. ಆಗ ಮಾತ್ರ ತಂಡ ಸ್ಫೂರ್ತಿ ಕಾಣಬಹುದು. ಅರ್ಹತೆಯ ವಿಚಾರಕ್ಕೆ ಬಂದಾಗ ಎಲ್ಲರೂ ಸಮಾನರೆ. ಆದರೆ ಅನುಭವದಲ್ಲಿ ವ್ಯತ್ಯಾಸ ಇರುತ್ತದೆ. ಒಗ್ಗಟ್ಟಾಗಿ ಆಡಿದಾಗ ಎಂತಹುದೇ ತಂಡವನ್ನು ಬೇಕಾದರೂ ಮಣಿಸಬಹುದು. ವೈಯಕ್ತಿಕ ಸಾಮರ್ಥ್ಯದಿಂದ ಪಂದ್ಯ ಗೆಲ್ಲಬಹುದಷ್ಟೇ. ಪ್ರಶಸ್ತಿ ಎತ್ತಿಹಿಡಿಯಬೇಕಾದರೆ ಒಂದು ತಂಡವಾಗಿ ಆಡುವುದು ತುಂಬಾ ಮುಖ್ಯ. ಈ ಕುರಿತು ಆಟಗಾರರಲ್ಲಿ ಅರಿವು ಮೂಡಿಸುತ್ತೇನೆ.

* ಬೌಲಿಂಗ್‌ ಕೋಚ್‌ ಮನ್ಸೂರ್‌ ಅಲಿ ಖಾನ್‌ ಅವರ ಬಗ್ಗೆ ಹೇಳಿ?

ನಾನು ಕರ್ನಾಟಕ ತಂಡದ ನಾಯಕನಾಗಿದ್ದಾಗಿನಿಂದಲೂ ಮನ್ಸೂರ್‌ ಅವರನ್ನು ನೋಡುತ್ತಾ ಬಂದಿದ್ದೇನೆ. ಅವರ ಬದ್ಧತೆ, ಪರಿಶ್ರಮ ನೋಡಿ ಮೆಚ್ಚಿದ್ದೇನೆ. ಅವರಿಗೆ ಕರ್ನಾಟಕ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ ಅನುಭವವೂ ಇದೆ. ಮುಖ್ಯ ಕೋಚ್‌ ಆದವರೇ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಹಾಗೊಮ್ಮೆ ಮಾಡಿದರೂ ಅದು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ನನ್ನ ನಂಬಿಕೆ. ಒಂದು ತಂಡವಾಗಿ ಕೆಲಸ ಮಾಡಿದಾಗ ಎಲ್ಲರೂ ಅವರ ಜವಾಬ್ದಾರಿ ಮತ್ತು ಪಾತ್ರ ಅರಿತುಕೊಳ್ಳುತ್ತಾರೆ. ಇದರಿಂದ ತಂಡಕ್ಕೆ ಹೆಚ್ಚು ಲಾಭವಾಗುತ್ತದೆ. ಹೀಗಾಗಿ ಬೌಲಿಂಗ್‌ ಕೋಚ್‌ ಹುದ್ದೆಗೆ ಮನ್ಸೂರ್‌ ಅವರ ಹೆಸರನ್ನು ನಾನೇ ಶಿಫಾರಸು ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.