ಸೋಮವಾರ, ಜೂಲೈ 13, 2020
29 °C

ಮೌಲ್ಯ, ರಾಜಕಾರಣ ಮತ್ತು ಧರ್ಮ

ಟಿ.ಎನ್‌. ವಾಸುದೇವಮೂರ್ತಿ Updated:

ಅಕ್ಷರ ಗಾತ್ರ : | |

ರಾಜಾರಾಮ ತೋಳ್ಪಾಡಿ ಹಾಗೂ ನಿತ್ಯಾನಂದ ಬಿ. ಶೆಟ್ಟಿಯವರು ಪಶ್ಚಿಮದ ಸೆಕ್ಯುಲರ್ ವಾದವನ್ನು ಸಹನಾಧರ್ಮದ ಹಿನ್ನೆಲೆಯಲ್ಲಿ ಸ್ವೀಕರಿಸುವ ಸಾಧ್ಯತೆಗಳನ್ನು ನಿರೂಪಿಸಿದ್ದಾರೆ (ಪ್ರ.ವಾ., ಸಂಗತ, ಜ. 3). ಆದರೆ ಎರಡು ವಿಭಿನ್ನ ಸಂಸ್ಕೃತಿಯ ಮುಖ್ಯ ಪರಿಕಲ್ಪನೆಗಳನ್ನು ಹಾಗೆ ಸಮನ್ವಯಿಸುವಾಗ ಅವೆರಡರ ನಡುವೆ ಇರುವ ಗುರುತರವಾದ ಕೆಲವು ವ್ಯತ್ಯಾಸಗಳನ್ನು ಅವರು ಪರಿಶೀಲಿಸಿದಂತೆ ಕಾಣಿಸುವುದಿಲ್ಲ.

ಮೊದಲನೆಯದಾಗಿ ಪಶ್ಚಿಮದ ಪ್ರತೀ ಮೌಲ್ಯವೂ ಪಾಲಿಟಿಕ್ಸ್ (ರಾಜಕಾರಣ?) ಸುತ್ತಲೇ ಸುತ್ತುವ ಮೌಲ್ಯವಾಗಿದೆ. ಎಥಿಕ್ಸ್-ಮೊರಾಲಿಟಿ, ಇಂಡಿವಿಜುವಲಿಸಂ (ವ್ಯಕ್ತಿವಾದ), ಹಿಸ್ಟರಿ, ಸೆಕ್ಯುಲರಿಸಂ, ರಿಲಿಜಿಯನ್ ಮುಂತಾದ ಪ್ರತೀ ಚಿಂತನೆಯೂ ಒಂದಲ್ಲ ಒಂದು ರೂಪದಲ್ಲಿ ರಾಜಕಾರಣದೊಂದಿಗೆ ಅವಿನಾ ಸಂಬಂಧ ಹೊಂದಿವೆ. ರಾಜಕಾರಣವನ್ನು ಬಿಟ್ಟು ಈ ಪರಿಕಲ್ಪನೆಗಳ ಕುರಿತು ಯೋಚಿಸಲೂ ಸಾಧ್ಯವಾಗುವುದಿಲ್ಲ.

ಆದರೆ ಪೂರ್ವ ದೇಶಗಳ ಮೌಲ್ಯಗಳಿಗೆ ರಾಜಕಾರಣದ ಹಂಗಿಲ್ಲ. ಇಲ್ಲಿ ರಾಜಕಾರಣದ ಸ್ಥಾನವನ್ನು ಧರ್ಮ ಪಡೆದುಕೊಂಡಿದೆ. ಧರ್ಮವೆಂದರೆ ಮತಧರ್ಮ (ರಿಲಿಜಿಯನ್) ಎಂದಲ್ಲ, ವ್ಯಕ್ತಿ (ಸಮಾಜವಲ್ಲ) ತಾನು ಶ್ರೇಯೋ ಮಾರ್ಗದಲ್ಲಿ ನಡೆಯಲು ಪಾಲಿಸುವ ಕರ್ತವ್ಯ ಅಥವಾ ವಿವೇಕ ಎಂದರ್ಥ. ಭಾರತದಲ್ಲಿ ಜನಿಸಿದ ಪ್ರತೀ ಮೌಲ್ಯವೂ ಸಮಾಜದ ಹಿತಕ್ಕಿಂತಲೂ ಮಿಗಿಲಾಗಿ ವ್ಯಕ್ತಿಯ ಶ್ರೇಯಸ್ಸನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರೂಪು ತಳೆದ ಮೌಲ್ಯವಾಗಿದೆ. ಅಲ್ಲಿಯ ಚಿಂತನೆಗೆ ರಾಜಕಾರಣ ತಳಹದಿಯಾಗಿರುವಂತೆ ಇಲ್ಲಿಯ ಚಿಂತನೆಗೆ ಧರ್ಮ ತಳಹದಿಯಾಗಿದೆ. ಅಲ್ಲಿಯ ಧರ್ಮ ರಾಜಸೇವಾಸಕ್ತ ಧರ್ಮವಾದರೆ, ಇಲ್ಲಿಯ ರಾಜಕಾರಣ ಧರ್ಮಸೇವಾಸಕ್ತ ರಾಜಕಾರಣವಾಗಿದೆ. ಆದ್ದರಿಂದಲೇ ಗಾಂಧಿ ‘ನಾನು ರಾಜಕಾರಣದ ಸೆಳೆತಕ್ಕೆ ಒಳಗಾದ ಧಾರ್ಮಿಕ ವ್ಯಕ್ತಿಯಲ್ಲ, ಧರ್ಮದ ಸೆಳೆತಕ್ಕೆ ಒಳಗಾದ ಒಬ್ಬ ರಾಜಕಾರಣಿಯಾಗಿದ್ದೇನೆ’ ಎಂದು ಸ್ಪಷ್ಟೀಕರಣ ನೀಡಿದುದು. ಭಾರತೀಯ ಚಿಂತನೆ ತನ್ನ ಸ್ವಭಾವದಲ್ಲೇ ವ್ಯಕ್ತಿ ಕೇಂದ್ರಿತ ಚಿಂತನೆಯಾಗಿದೆ.

ಅಂದಮಾತ್ರಕ್ಕೆ ಭಾರತೀಯರಿಗೆ ಸಾಮಾಜಿಕ ಪ್ರಜ್ಞೆ ಇರಲಿಲ್ಲವೆಂದಲ್ಲ. ಗೀತೆಯಲ್ಲಿ ‘ಜ್ಞಾನಿಯಾದವನು ಬ್ರಾಹ್ಮಣ, ಹಸು, ಆನೆ, ನಾಯಿ, ಶ್ವಪಚ ಮುಂತಾದ ಎಲ್ಲರನ್ನೂ ಸಮಾನವಾಗಿ ಕಾಣುತ್ತಾನೆ’ ಎಂಬ ಮಾತಿದೆ. ಈ ಮಾತುಗಳು ಇಲ್ಲಿನ ಋಷಿಗಳಿಗೆ ಸಾಮಾಜಿಕ ತಾರತಮ್ಯದ ಅರಿವಿತ್ತು ಮತ್ತು ಈ ತಾರತಮ್ಯ ಹುಸಿಯಾದುದು ಎಂಬ ತಿಳಿವಳಿಕೆಯೂ ಇತ್ತು ಎಂಬುದನ್ನು ವ್ಯಕ್ತಪಡಿಸುತ್ತವೆ. ಆದರೆ ನಮ್ಮ ಪುರಾತನರು ಈ ಹುಸಿಯಿಂದ ಅಥವಾ ಕೇಡಿನಿಂದ ತಾವು ನಿರ್ಲಿಪ್ತರಾಗಲು ಪ್ರಯತ್ನಿಸಿದರೇ ವಿನಾ ಸಾಮಾಜಿಕವಾಗಿ ಆ ಕೇಡನ್ನು ಬಗೆಹರಿಸಲು ಅವರು ಪ್ರಯತ್ನ ಪಡಲಿಲ್ಲ. ಇಲ್ಲಿನ ಧರ್ಮ ಹಾಗೆ ಬಗೆಹರಿಸುವ ಉದ್ದೇಶದಿಂದ ರೂಪುಗೊಂಡ ಧರ್ಮವೂ ಅಲ್ಲ.

ಈ ಹಿನ್ನೆಲೆಯಲ್ಲೇ ದೇವನೂರ ಮಹಾದೇವ ಅವರು ತಮ್ಮ ಒಂದು ಲೇಖನದಲ್ಲಿ ‘ಇಲ್ಲಿನ ಸಾಮಾಜಿಕ ತಾರತಮ್ಯವನ್ನು ಸಹಿಸದೆ ಋಷಿಮುನಿಗಳು ಕಾಡು ಮೇಡುಗಳಿಗೆ ಹೋಗಿ ಜೀವಿಸಲಾರಂಭಿಸಿದರೇನೋ...’ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ. ಭಾರತೀಯ ವಿವೇಕವು ಸಾಮಾಜಿಕ ಬದುಕಿನ ಅಸಮಾನತೆಯನ್ನು ಕಂಡು ವ್ಯಕ್ತಿಗತ ಬದುಕಿನ ರಚನೆಯನ್ನು ಬದಲಾಯಿಸಿಕೊಳ್ಳುವ ಮಾರ್ಗವನ್ನು ಶೋಧಿಸುವುದೇ ವಿನಾ ಸಾಮಾಜಿಕ ಬದುಕಿನ ರಚನೆಯನ್ನೇ ಆಮೂಲಾಗ್ರವಾಗಿ ಬದಲಾಯಿಸುವ ನಿಟ್ಟಿನಲ್ಲಿ ಯೋಚಿಸುವಂತೆ ಕಾಣುವುದಿಲ್ಲ.

ಎರಡನೆಯದಾಗಿ, ಪಶ್ಚಿಮದಲ್ಲಿ ರಿಲಿಜಿಯನ್ ಎಂಬುದು ರಾಜಕೀಯ ಅಧಿಕಾರಕ್ಕೆ ಸಮೀಪವಾದಷ್ಟೂ ತನ್ನ ಘನತೆ ಹೆಚ್ಚಿಸಿಕೊಳ್ಳುತ್ತದೆ. ಆದರೆ ಪೂರ್ವದ ಧರ್ಮಗಳು ತಮ್ಮ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಅಧಿಕಾರ ರಾಜಕೀಯದಿಂದ ದೂರ ಸರಿದು ನಿಲ್ಲುತ್ತವೆ. ಅದು ಉಪನಿಷತ್ತಿನ ಋಷಿಗಳಿರಬಹುದು, ಗೌತಮ ಬುದ್ಧನಿರಬಹುದು, ಬಸವಾದಿ ಶರಣರಿರಬಹುದು, ಮಂಟೇಸ್ವಾಮಿ-ಮಾದೇಶ್ವರರಂತಹ ಜಾನಪದ ನಾಯಕರಿರಬಹುದು ಮತ್ತು ಬೇಂದ್ರೆ, ಕುವೆಂಪು ಅವರಂತಹ ರಸಋಷಿಗಳಿರಬಹುದು. ಹಾಗೆ ದೂರ ಸರಿದು ನಿಂತಾಗಲೇ ವ್ಯವಸ್ಥೆಯನ್ನು ಯಥಾರ್ಥವಾಗಿ ಗ್ರಹಿಸಿ ತನ್ನ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಇಲ್ಲಿಯ ಧರ್ಮಕ್ಕೆ (ಹಾಗೆಯೇ ಕಾವ್ಯಧರ್ಮಕ್ಕೆ) ಸಾಧ್ಯವಾಗುವುದು.

ನಮ್ಮ ಈ ಹಿನ್ನೆಲೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ನಾವು ‘ಸೆಕ್ಯುಲರಿಸಂ’ ಎಂಬ ಪರಿಕಲ್ಪನೆಯನ್ನು ಪರಿಭಾವಿಸಬೇಕಾಗುತ್ತದೆ. ‘ಸೆಕ್ಯುಲರಿಸಂ’ ಎಂಬ ಶಬ್ದದ ಪದಶಃ ಅರ್ಥ ‘ಪ್ರತ್ಯೇಕವಾದುದು’ ಎಂಬುದಾಗಿದೆ. ‘ಯಾವುದರಿಂದ ಯಾವುದು ಪ್ರತ್ಯೇಕ’ ಎಂಬ ಪ್ರಶ್ನೆಗೆ ಪಶ್ಚಿಮದ ಸಂದರ್ಭದಲ್ಲಿ ‘ರಾಜಕಾರಣ ‘ಧರ್ಮ’ದಿಂದ ಪ್ರತ್ಯೇಕವಾಯಿತು’ ಎನ್ನಬೇಕಾಗುತ್ತದೆ. ಆದರೆ ಪೂರ್ವದೇಶಗಳಿಗೆ ಧರ್ಮವೇ ತಳಹದಿಯಾಗಿರುವ ಕಾರಣ ‘ಸೆಕ್ಯುಲರಿಸಂ’ ಪರಿಕಲ್ಪನೆ ನಮ್ಮ ರಾಜಕೀಯ ಚಿಂತನೆಗಿಂತ ಧಾರ್ಮಿಕ ಚಿಂತನೆಗೆ ಹೆಚ್ಚು ಪ್ರಸ್ತುತವಾಗಿದೆ. ಅಲ್ಲಿ ರಾಜಕಾರಣ ಧರ್ಮದಿಂದ ಪ್ರತ್ಯೇಕಗೊಂಡು ‘ಸೆಕ್ಯುಲರ್’ ಎನಿಸಿಕೊಂಡರೆ ಇಲ್ಲಿ ಧರ್ಮ ರಾಜಕಾರಣದಿಂದ ಪ್ರತ್ಯೇಕಗೊಂಡು ‘ಸೆಕ್ಯುಲರ್’ ಎನಿಸಿಕೊಳ್ಳಬೇಕಾಗಿದೆ.

ಧರ್ಮದ ಈ ಸೆಕ್ಯುಲರ್ ಸ್ವರೂಪವನ್ನು ಕುರಿತೇ ಅಲ್ಲಮ ‘ಅಂಗವಿಲ್ಲಾಗಿ ಅನ್ಯಸಂಗವಿಲ್ಲಯ್ಯ’ ಎಂದದ್ದು. ಇಲ್ಲಿ ಧರ್ಮ ‘ಅನ್ಯಸಂಗ’ ಮಾಡದಿದ್ದಾಗಲಷ್ಟೇ ಧರ್ಮವಾಗಿ ಉಳಿದಿರಬಲ್ಲದು (ಈ ಹಿನ್ನೆಲೆಯಲ್ಲಿ ತುಷ್ಟೀಕರಣಕ್ಕಾಗಿ, ಪ್ರಚಾರಕ್ಕಾಗಿ ಅಥವಾ ರಾಜಕೀಯ ಅಧಿಕಾರಕ್ಕಾಗಿ ಹಾತೊರೆವ ಧರ್ಮ ಧರ್ಮವಾಗಿ ಉಳಿದಿರುವುದಿಲ್ಲ. ಧರ್ಮಕ್ಕೆ ‘ಅನ್ಯಸಂಗ’ವಿಲ್ಲ ಎಂದ ಮೇಲೆ ಪ್ರಭುತ್ವದಿಂದ ಪ್ರತ್ಯೇಕ ಧರ್ಮದ ಘೋಷಣೆಯಾಗಬೇಕು ಎಂಬ ಕೂಗು ಸಹ– ಅದು ಬ್ರಾಹ್ಮಣರದ್ದಿರಲಿ ಅಥವಾ ಲಿಂಗಾಯತರದ್ದಿರಲಿ- ಅಧರ್ಮವೇ ಆಗುತ್ತದೆ).

ಇನ್ನು ಕೊನೆಯದಾಗಿ, ಸಹನಾಧರ್ಮವೆಂಬುದು ಉದಾತ್ತ ಮೌಲ್ಯದಂತೇನೂ ತೋರುವುದಿಲ್ಲ. ಸಹನೆ, ಸಹಿಷ್ಣುತೆ ಎಂಬ ಪದಗಳು ಆಳದಲ್ಲಿ ಕುದಿಯುತ್ತಿರುವ ಅಸಹಿಷ್ಣುತೆಯನ್ನೇ ಸೂಚಿಸುತ್ತವೆ. ಉದಾಹರಣೆಗೆ, ‘ನಾನು ನಿನ್ನನ್ನು ಸಹಿಸಿಕೊಂಡಿದ್ದೇನೆ’ ಎಂಬ ಮಾತಿನಲ್ಲಿ ‘ನೀನು ಸಹನೀಯ ವ್ಯಕ್ತಿಯಲ್ಲ ಆದರೂ ಸಹಿಸುವ ಕಸರತ್ತು ಮಾಡುತ್ತಿದ್ದೇನೆ’ ಎಂಬ ಇಂಗಿತವೂ ಇರುತ್ತದೆ. ಆದ್ದರಿಂದ ಸಹನೆಯೇ ನಮ್ಮ ಸಾಧನೆಯಾಗಬಾರದು. ಧರ್ಮ ಮಾರ್ಗದಲ್ಲಿ ವ್ಯಕ್ತಿ ಅಂತಿಮವಾಗಿ ಸ್ವಾತಂತ್ರ್ಯವನ್ನು ಹೊಂದುತ್ತಾನೆ. ಆಗ ಸಹನೆಯೆಂಬುದು ಸ್ವಾತಂತ್ರ್ಯದ ಫಲಶ್ರುತಿಯಾಗಿ ಮೂಡಬಲ್ಲದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.