ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣದ ರಾಜಕಾರಣ ಬಹಿಷ್ಕರಿಸಿ’: ಸಿ.ಎಂ

Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಅಧಿಕಾರ ಮತ್ತು ಸ್ವಾರ್ಥ ಸಾಧನೆಗಾಗಿ ಹೆಣದ ರಾಜಕಾರಣ ಮಾಡುವವರನ್ನು ಜನರು ಬಹಿಷ್ಕರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಬೆಳ್ತಂಗಡಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹೆಣವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವವರನ್ನು ನಾಗರಿಕ ಸಮಾಜ ಖಂಡಿಸಬೇಕು. ಇಂತಹ ರಾಜಕಾರಣವನ್ನು ಕೊನೆಗಾಣಿಸಲೇಬೇಕು’ ಎಂದರು.

‘ಸಂಘಟಿತ ಅಪರಾಧ ಕೃತ್ಯಗಳನ್ನು ಎಸಗುವವರು ಮತ್ತು ಗೂಂಡಾಗಿರಿ ಮಾಡುವವರು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಅವರನ್ನು ಖಂಡಿಸಬೇಕು. ಅಮಾಯಕರನ್ನು ಕೊಂದು ಶಾಂತಿ ಕದಡುವ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಜನರು ಸರಿಯಾದ ಪಾಠ ಕಲಿಸಬೇಕು. ಕೋಮುವಾದಿಗಳಿಗೆ ಮಣೆ ಹಾಕಬೇಡಿ. ಅವರನ್ನು ಯಾವತ್ತೂ ಬೆಂಬಲಿಸಬೇಡಿ. ಕೋಮುವಾದಿಗಳಿಂದ ದಾರಿ ತಪ್ಪಬೇಡಿ’ ಎಂದು ಹೇಳಿದರು.

‘ವಿಭಿನ್ನ ಧರ್ಮಗಳ ಜನರನ್ನು ಎತ್ತಿಕಟ್ಟಿ, ಅವರ ನಡುವೆ ಸಂಘರ್ಷ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಹವಣಿಸುವವರು ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ. ಅಂತಹವರು ಯಾವುದೇ ಪಕ್ಷದಲ್ಲಿದ್ದರೂ ಗ್ರಾಮ ಪಂಚಾಯಿತಿ ಸದಸ್ಯರಾಗುವುದಕ್ಕೂ ನಾಲಾಯಕ್‌’ ಎಂದರು.

‘ಇಲ್ಲಿ ನಡೆಯುತ್ತಿರುವ ಅಮಾನುಷ ಹತ್ಯೆಗಳ ವಿಚಾರದಲ್ಲಿ ಬಿಜೆಪಿಯವರು ಕುರಿಮರಿ ಮತ್ತು ತೋಳದ ಕತೆಯಂತೆ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಗೆ ಬೆಂಕಿ ಹಾಕಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರುದ್ಧ ಆರೋಪ ಮಾಡುತ್ತಾರೆ. ಮುಖ್ಯಮಂತ್ರಿ ಹೋದ ಕಡೆಯಲ್ಲೆಲ್ಲ ಹೆಣ ಬೀಳುತ್ತದೆ ಎಂದು ಸುಳ್ಳು ಆರೋಪ ಮಾಡುತ್ತಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಆತ್ಮವಂಚನೆಯ ಮಾತುಗಳನ್ನು ಆಡುತ್ತಿದ್ದಾರೆ. ಅವರೇ ಸೃಷ್ಟಿಸಿದ ಹಿಂಸಾಚಾರವನ್ನು ಕಾಂಗ್ರೆಸ್‌ ಪಕ್ಷದ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಯೋಗಶಾಲೆ ಆಗದಿರಲಿ:

‘ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಇಲ್ಲಿ ಒಳ್ಳೆಯ ಶಿಕ್ಷಣ ಲಭ್ಯವಿದೆ. ಶಿಕ್ಷಣ ಮನುಷ್ಯನ ವಿಕಾಸಕ್ಕೆ ಬಳಕೆ ಆಗಬೇಕು. ಸ್ವಾರ್ಥ, ಸಂಕುಚಿತ ಭಾವನೆ, ಪರಧರ್ಮ ದ್ವೇಷ, ಅಮಾನವೀಯ ನಡೆಗಳು ಶಿಕ್ಷಣದ ಪ್ರಭಾವದಿಂದ ದೂರ ಆಗಬೇಕು. ಈ ಜಿಲ್ಲೆ ಕೋಮುವಾದದ ಪ್ರಯೋಗಶಾಲೆ ಆಗಬಾರದು’ ಎಂದು ಮುಖ್ಯಮಂತ್ರಿ ಹೇಳಿದರು.

ಇದು ನಾರಾಯಣ ಗುರುಗಳು ನಡೆದಾಡಿದ ನೆಲ. ಅವರು ಬಿತ್ತಿದ ಚಿಂತನೆಯ ಫಲ ಇಲ್ಲಿ ಬೆಳೆಯಬೇಕು. ಕುವೆಂಪು ಅವರ ವಿಶ್ವಮಾನವ ಸಂದೇಶ ಇಲ್ಲಿ ಸಾಕಾರಗೊಳ್ಳಬೇಕು. ಒಬ್ಬ ವ್ಯಕ್ತಿ ತನ್ನ ಧರ್ಮವನ್ನು ಆಚರಿಸಬೇಕು. ಬದಲಾಗಿ ಪರಧರ್ಮ ದ್ವೇಷವೇ ಧರ್ಮಾಚರಣೆ ಎಂಬ ನಂಬಿಕೆಯಲ್ಲಿ ಬದುಕಬಾರದು ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.

‘ಜನರು ಭಯಪಡುವ ಅಗತ್ಯವಿಲ್ಲ’

‘ಈಗ ನಡೆಯುತ್ತಿರುವ ಕೆಲವು ಘಟನೆಗಳಿಂದ ಜನರು ಭಯಪಡಬೇಕಾದ ಅಗತ್ಯವಿಲ್ಲ. ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಅವರ ವಿರುದ್ಧ ರಾಜ್ಯ ಸರ್ಕಾರ ನಿಶ್ಚಿತವಾಗಿ ಕಠಿಣವಾದ ಕ್ರಮ ಜರುಗಿಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

‘ಕಾನೂನು ಪಾಲಿಸುವವರಿಗೆ ಸರ್ಕಾರ ರಕ್ಷಣೆ ನೀಡುತ್ತದೆ. ಹಿಂಸಾಚಾರ ನಡೆಸಿ ಸಾವು, ನೋವಿಗೆ ಕಾರಣವಾಗುವವರನ್ನು ಬಲಿ ಹಾಕುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT