ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆಗೊಳಗಾಗಿದ್ದ ಅಹಮ್ಮದ್ ಬಶೀರ್ ಸಾವು

ಮೃತರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಘೋಷಿಸಿದ ಜಿಲ್ಲಾಡಳಿತ
Last Updated 7 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಕಾಟಿಪಳ್ಳದಲ್ಲಿ ಬುಧವಾರ ನಡೆದ ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ಯುವಕರ ಗುಂಪೊಂದು ಅದೇ ದಿನ ರಾತ್ರಿ ಕೊಟ್ಟಾರ ಚೌಕಿಯಲ್ಲಿ ನಡೆಸಿದ ಭೀಕರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಕಾಶಭವನ ನಿವಾಸಿ ಅಹಮ್ಮದ್ ಬಶೀರ್ (48) ಎ.ಜೆ.ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟರು.

ದಾಳಿಯಲ್ಲಿ ಕುತ್ತಿಗೆ, ತಲೆ, ಎಡಕೈ, ಹೊಟ್ಟೆ ಸೇರಿದಂತೆ ಹಲವೆಡೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಬಶೀರ್‌ ಭಾನುವಾರ ಬೆಳಿಗ್ಗೆ 8.05ಕ್ಕೆ ಕೊನೆಯುಸಿರೆಳೆದರು.

ಮೃತರಿಗೆ ತಾಯಿ ಹಾಜಿರಾ, ಪತ್ನಿ ಕುಲ್ಸೂಮ್‌, ನಾಲ್ವರು ಮಕ್ಕಳು ಇದ್ದಾರೆ. ಹಿರಿಯ ಮಗ ಇಮ್ರಾನ್‌ ನಾಲ್ಕು ವರ್ಷಗಳಿಂದ ವಿದೇಶದಲ್ಲಿದ್ದು, ಖಾಸಗಿ ಕಂಪೆನಿಯಲ್ಲಿ ವ್ಯವಸ್ಥಾಪಕರ ಹುದ್ದೆಯಲ್ಲಿದ್ದಾರೆ. ಎರಡನೇ ಮಗ ಇರ್ಫಾನ್‌ ಮೂರು ತಿಂಗಳ ಹಿಂದಷ್ಟೇ ಅಬುದಾಭಿಗೆ ತೆರಳಿದ್ದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಪಡೆದಿದ್ದಾರೆ. ಪುತ್ರಿ ಇಮ್ರಾಜ್‌ ದ್ವಿತೀಯ ಪಿಯುಸಿ ಓದುತ್ತಿದ್ದು, ಕೊನೆಯ ಪುತ್ರ ಇಜ್ವಾನ್‌ 8ನೇ ತರಗತಿಯಲ್ಲಿದ್ದಾನೆ.

ನಿಧನದ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಮಂದಿ ಆಸ್ಪತ್ರೆ ಬಳಿ ಬಂದರು. ಸಚಿವ ಯು.ಟಿ.ಖಾದರ್‌, ಶಾಸಕ ಬಿ.ಎ.ಮೊಯಿದ್ದೀನ್ ಬಾವ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರೂ ದೌಡಾಯಿಸಿದರು. ಬೆಳಿಗ್ಗೆ 11 ಗಂಟೆವರೆಗೆ ಸಂಬಂಧಿಕರಿಗೆ, ಆಪ್ತರಿಗೆ ಶವಾಗಾರದಲ್ಲಿಯೇ ಮೃತರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಶೀರ್‌ ಅವರ ಹೆಂಡತಿ ಮತ್ತು ಮಗಳು ಕಣ್ಣೀರು ಹಾಕುತ್ತಾ ಶವಾಗಾರದಿಂದ ಹೊರಬಂದ ದೃಶ್ಯ ಮನಕಲಕುವಂತಿತ್ತು.

ಮೆರವಣಿಗೆಗೆ ಕುಟುಂಬದ ವಿರೋಧ: ಶವವನ್ನು ಮನೆಗೆ ಕೊಂಡೊಯ್ಯುವಾಗ ಮೆರವಣಿಗೆ ನಡೆಸುವುದು ಬೇಡ ಎಂಬ ತೀರ್ಮಾನವನ್ನು ಬಶೀರ್‌ ಕುಟುಂಬ ಮೊದಲೇ ಕೈಗೊಂಡಿತ್ತು. ಅದರಂತೆ, ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಆಕಾಶಭವನದ ಮನೆಗೆ ಕೊಂಡೊಯ್ಯಲಾಯಿತು.

ಅಲ್ಲಿ ವಿವಿಧ ಧರ್ಮಗಳ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಸಂಜೆ 4.30ಕ್ಕೆ ಮನೆಯಿಂದ ಆರಂಭವಾದ ಶವಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಕೂಳೂರಿನ ಮುಹಿಯುದ್ದೀನ್‌ ಜುಮಾ ಮಸೀದಿಯಲ್ಲಿ ಮತ್ತೊಮ್ಮೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಸಂಜೆ 6.30ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಯಿತು. ವಿದೇಶದಲ್ಲಿದ್ದ ಎರಡನೆಯ ಮಗ ಇರ್ಫಾನ್‌ ಬಂದ ಬಳಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮಸೀದಿ ಆವರಣದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಹಸ್ರಾರು ಮಂದಿ ಬಶೀರ್‌ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು, ಮಸೀದಿ ಸುತ್ತಲಿನ ಎತ್ತರದ ಕಟ್ಟಡಗಳ ಮೇಲೆ ನೂರಾರು ಜನರು ನಿಂತು ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದರು.

₹ 10 ಲಕ್ಷ ಪರಿಹಾರ ಘೋಷಣೆ:  ಆಸ್ಪತ್ರೆಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮೃತ ಬಶೀರ್ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಸ್ಥಳದಲ್ಲಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮುಖಂಡರು ಮೃತರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಇರ್ಫಾನ್ ತಕ್ಷಣ ಊರಿಗೆ ಮರಳಲು ರಾಜತಾಂತ್ರಿಕ ಸಮಸ್ಯೆ ಎದುರಾಗಿತ್ತು. ಯು.ಟಿ. ಖಾದರ್, ಮೊಯಿದ್ದೀನ್‌ ಬಾವ, ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನೆರವು ಕೋರಿದರು. ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಇರ್ಫಾನ್‌ ಅಲ್ಲಿಂದ ಹೊರಟು ಸಂಜೆ ಮಂಗಳೂರು ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT