ಮಂಗಳವಾರ, ಆಗಸ್ಟ್ 4, 2020
22 °C

ಪಕ್ಷಿಗಳ ರೋದನ; ಅನಾಥವಾದ ಮರಿ ಹಕ್ಕಿಗಳು..!

ಬಲ್ಲೇನಹಳ್ಳಿ ಮಂಜುನಾಥ್ Updated:

ಅಕ್ಷರ ಗಾತ್ರ : | |

ಪಕ್ಷಿಗಳ ರೋದನ; ಅನಾಥವಾದ ಮರಿ ಹಕ್ಕಿಗಳು..!

ಕೆ.ಆರ್.ಪೇಟೆ: ಗಿಡ ಮರಗಳು ಹೆಚ್ಚಿರುವಲ್ಲಿ ಸಂಜೆ ಹೊತ್ತು ಪಕ್ಷಿಗಳ ಕಲರವ ಹೆಚ್ಚು. ಆದರೆ ಶನಿವಾರ ಸಂಜೆ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಹಕ್ಕಿಗಳ ಕೂಗು ಆಕ್ರಂದನದಂತೆ ಕೇಳುತ್ತಿತ್ತು. ಇದಕ್ಕೆ ನೂರಾರು ಜನರು ಅಲ್ಲಿ ಸೇರಿದ್ದು ಸಾಕ್ಷಿಯಾಗಿತ್ತು.

ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಸುಮಾರು 30 ವರ್ಷಕ್ಕಿಂತ ಹಳೆಯದಾದ ಅತ್ತಿ ಮರವನ್ನು ಕಡಿದಿದ್ದರಿಂದ ಹಾಗೂ ಮತ್ತೊಂದು ಮರವನ್ನು ಭಾಗಶಃ ಕಡಿದು ಹಾಕಿದ್ದರಿಂದ ಹಕ್ಕಿಗಳ ಸಂಸಾರ ಬೀದಿಗೆ ಬಂದಿದ್ದವು ಮರಿ ಹಕ್ಕಿಗಳು ಅನಾಥವಾಗಿ ಬಿದ್ದಿದ್ದವು.

ಹಳೆಯ ಮರದಲ್ಲಿ ಸಂಸಾರ ಕಟ್ಟಿಕೊಂಡು ಹಾಯಾಗಿ ಬದುಕು ಸಾಗಿಸುತ್ತಿದ್ದ ಮೂಕ ಹಕ್ಕಿಗಳು ಒಮ್ಮೆಲೆ ಸಾಮೂಹಿಕ ಸಾವಿನ ಬಾಗಿಲ ತೋರಿದಾಗ ಅವುಗಳ ಕರ್ಕಶ ಕೂಗು ಆಕ್ರಂದನವಾಗಿತ್ತು. ಗೂಡುಗಳನ್ನು ಕಟ್ಟಿಕೊಂಡು ಮೊಟ್ಟೆ ಇಟ್ಟು ಸಂಸಾರ ಸಾಗಿಸುತ್ತಿದ್ದ ಹಲವು ಬಗೆಯ ನೂರಾರು ಪಕ್ಷಿಗಳು ಗೂಡನ್ನು, ಮರಿಗಳನ್ನು ಕಳೆದುಕೊಂಡು ಕೂಗುತ್ತಾ ಹಾರಾಡುತ್ತಿದ್ದರೆ, ಅವುಗಳ ಮರಿಗಳು ರಸ್ತೆ ಮೇಲೆ, ಎಲೆಗಳ ಮಧ್ಯೆ ಬಿದ್ದು ಕಿರುಚಾಡಿದಂತೆ ಬಾಯಿ ಬಿಡುತ್ತಿರುವುದನ್ನು ಕಂಡು ಹಾದಿ ಹೋಕರು ಮರುಗುತ್ತಿದ್ದರೆ, ವಾಹನ ಸವಾರ ಏನು ನಡೆಯುತ್ತಿದೆ ಎಂದು ನೋಡಲು ನಿಂತು ಹಾಗೆ ಹೋಗುತ್ತಿದ್ದರು. ಇದು ಅವು ಬೀದಿಗೆ ಬಂದಿವೆ ಎಂಬುದನ್ನು ಹೇಳುವಂತಿತ್ತು.

ಗೂಡಿನಲ್ಲಿದ್ದ ಬೆಜ್ಜಗೆ ಇದ್ದ ಮೊಟ್ಟೆಗಳು ಒಡೆಯುತ್ತಿದ್ದರೆ, ಪುಟ್ಟ ಪುಟ್ಟ ಮರಿಗಳು ಇನ್ನಷ್ಟು ದಿನ ಕಳೆದಿದ್ದರೆ ತಮ್ಮಷ್ಟಕ್ಕೆ ತಾವು ಆಕಾಶದತ್ತ ಹಾರಿ ಬದುಕು ಕಂಡುಕೊಳ್ಳುತ್ತಿದ್ದವು. ಆದರೆ ಮಾನವನ ಸ್ವಾರ್ಥದಿಂದಾಗಿ ಕೆಲವು ಕಣ್ಣು ಬಿಡುವ ಮುನ್ನ, ಮತ್ತೆ ಕೆಲವು ಹಾರಲಾಗದೇ ಪ್ರಾಣಬಿಟ್ಟವು. ಇವುಗಳನ್ನು ಕಂಡು ತಾಯಿ ಹಕ್ಕಿಗಳು ಕಿರುಚಾಡಿದಂತೆ ಕೂಗುತ್ತಾ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಆದರೆ ಮರವನ್ನು ಕಡಿಸಿದ ಅಧಿಕಾರಿಗಳು, ಮರ ಕಡಿದವರು ಮಾತ್ರ ಇದಾವುದನ್ನು ಲೆಕ್ಕಿಸದೆ, ತಮಗೆ ಸಂಬಂಧವಿಲ್ಲ ಎಂಬಂತೆ ಜಾಗ ಖಾಲಿ ಮಾಡಿದ್ದರು.

ಇಷ್ಟಕ್ಕೂ ಮರ ಕಡಿದಿದ್ಯಾಕೆ: ಹಕ್ಕಿಯ ಹಿಕ್ಕೆಯಿಂದ ವಾಸನೆಯು ಬರುತ್ತಿತ್ತಂತೆ. ಇದನ್ನು ತಪ್ಪಿಸಲು ಮರ ಕಡಿಯಲಾಗಿದೆ ಎಂದು ಅಲ್ಲಿ ಸೇರಿದ್ದ ಜನರು ಮಾತನಾಡುತ್ತಿದ್ದರು.

‘ಏನೇ ಆಗಲಿ ಮರ ಕಡಿಯುವ ಮುನ್ನ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಅಲ್ಲಿದ್ದ ಪಕ್ಷಿಗಳು, ಅವುಗಳ ಗೂಡುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅದ್ಯಾವುದನ್ನು ಮಾಡದೆ ಮರ ಕಡಿಸಿದ್ದು ಮಾತ್ರ ಸರಿಯಲ್ಲ’ ಎಂಬುದು ಪರಿಸರ ಹಾಗೂ ಪಕ್ಷಿ ಪ್ರೇಮಿಗಳು ಅಭಿಪ್ರಾಯಪಟ್ಟರು.

ಕಾನೂನು ಕ್ರಮ–ಭರವಸೆ

ಸಾರ್ವಜನಿಕರಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳಾದ ರವೀಂದ್ರ ಮತ್ತು ರಾಘವೇಂದ್ರ ಸ್ಥಳಕ್ಕೆ ಬಂದು ಸಾರ್ವಜನಿಕರ ನೆರವಿನಿಂದ ಪೋಷಣೆ ಮಾಡಲು ಸ್ವಲ್ಪ ದೊಡ್ಡ ಗಾತ್ರದ ಮರಿ ಪಕ್ಷಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಮರ ಕಡಿದು ಪಕ್ಷಿಗಳ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.

ಹಕ್ಕಿಗಳ ಮೇಲೆ ಮಕ್ಕಳ ಪ್ರೀತಿ

ಕಣ್ಣು ಬಿಡದ ಪುಟ್ಟ ಪಕ್ಷಿಗಳು ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಕೆಲ ಮಕ್ಕಳು ಆ ಪಕ್ಷಿಗಳನ್ನು ರಕ್ಷಿಸುವಂತೆ ತಮ್ಮ ತಂದೆ ತಾಯಿಗಳಿಗೆ ಒತ್ತಾಯ ಮಾಡಿ ಮನೆಗಳಿಂದ ಡಬ್ಬಾ ಹಾಗೂ ಬ್ಯಾಗ್‌ಗಳನ್ನು ತಂದು ಮನೆಗೆ ತೆಗೆದುಕೊಂಡು ಹೋದರೆ, ಮತ್ತೆ ಕೆಲವು ಮಕ್ಕಳು ಸೀರಿಂಜ್ ಮೂಲಕ ಮರಿಗಳಿಗೆ ಹಾಲು ನೀಡಿ ಪೋಷಣೆ ಮಾಡಲು ಪೋಷಕರೊಂದಿಗೆ ಮುಂದಾದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.