ಸೋಮವಾರ, ಆಗಸ್ಟ್ 3, 2020
25 °C

ಕಣ್ಮನ ಸೆಳೆಯುತ್ತಿವೆ ಸೀರೆ, ಕುರ್ತಾ

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಕಣ್ಮನ ಸೆಳೆಯುತ್ತಿವೆ ಸೀರೆ, ಕುರ್ತಾ

ತುಮಕೂರು: ನಗರದ ಶೃಂಗೇರಿ ಶಂಕರ ಮಠದ ಸಭಾ ಭವನದಲ್ಲಿ ರೇಷ್ಮೆ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮ ಆಯೋಜಿಸಿರುವ ಕೈ ಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ದಿನದಿಂದ ದಿನಕ್ಕೆ ಜನರನ್ನು ಸೆಳೆಯುತ್ತಿದೆ. ಬಣ್ಣ ಬಣ್ಣದ ಕುರ್ತಾ, ಜುಬ್ಬಾ, ಟವಲ್, ಕಾಟನ್, ರೇಷ್ಮೆ ಸೀರೆಗಳು ಹೀಗೆ ನಾನಾ ಧಿರಿಸುಗಳ ಖರೀದಿಗೆ ಜನರು ಎಡತಾಕುತ್ತಿದ್ದಾರೆ.

ಕಾಟನ್, ಅಪ್ಪಟ ರೇಷ್ಮೆ, ಎಂಬ್ರಾಯಿಡರಿ ರೇಷ್ಮೆ ಹೀಗೆ ನಾನಾ ವಿಧದ, ಬಣ್ಣಗಳ ಸೀರೆಗಳು ಮಹಿಳೆಯರ ಮನವನ್ನು ಅರಳಿಸಿ ಖರೀದಿಸಲು ಪ್ರೇರೇಪಿಸುತ್ತಿವೆ. ಜ.5ರಿಂದ ಆರಂಭವಾಗಿರುವ ಪ್ರದರ್ಶನ ಮತ್ತು ಮಾರಾಟಕ್ಕೆ ನಿತ್ಯ ಸರಾಸರಿ ಐದು ಸಾವಿರ ಜನರು ಭೇಟಿ ನೀಡುತ್ತಿದ್ದಾರೆ. ವಹಿವಾಟು ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜ.10ರ ವರೆಗೆ ಪ್ರದರ್ಶನ ಇರಲಿದೆ.

ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ನಗರ ಹೀಗೆ ನಾನಾ ಜಿಲ್ಲೆಗಳ 20 ಮಳಿಗೆಗಳಿದ್ದು ಒಂದಕ್ಕಿಂತ ಮತ್ತೊಂದರಲ್ಲಿ ಚೆಂದದ ಬಟ್ಟೆಗಳಿಗೆ ಎನ್ನುವಂತೆ ಗಮನ ಸೆಳೆಯುತ್ತಿವೆ. ಬೆಳಿಗ್ಗೆ 10.30ಕ್ಕೆ ಆರಂಭವಾಗುವ ವ್ಯಾಪಾರದ ಭರಾಟೆ ಕಳೆ ಗಟ್ಟುತ್ತಿರುವುದು ಸಂಜೆ. ರಾತ್ರಿ 9ರ ವರೆಗೆ ನಡೆಯುವ ವಹಿವಾಟು ವ್ಯಾಪಾರಿಗಳ ಮುಖದಲ್ಲಿ ತೃಪ್ತಿಯನ್ನು ಮೂಡಿಸಿದೆ.

ಶಂಕರ ಮಠಕ್ಕೆ ನಗರದ ಎಲ್ಲ ಕಡೆಯಿಂದಲೂ ಉತ್ತಮ ಸಾರಿಗೆ ವ್ಯವಸ್ಥೆ ಇರುವುದರಿಂದ ಜನ ಸಂದಣಿ ಹೆಚ್ಚಲು ಪ್ರಮುಖ ಕಾರಣ.  ‘ಶುಕ್ರವಾರ ₹ 40 ಸಾವಿರ, ಶನಿವಾರ ₹ 50 ಸಾವಿರ ವ್ಯಾಪಾರ ಆಯಿತು. ಇಲ್ಲಿ ವ್ಯಾಪಾರಕ್ಕೆ ಬಂದಿರುವುದು ಖುಷಿ ತಂದಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎನ್ನುವರು ಚಿಕ್ಕಬಳ್ಳಾಪುರ ಕ್ಲಸ್ಟರ್‌ನಿಂದ ವ್ಯಾಪಾರಕ್ಕೆ ಬಂದಿರುವ ಚಿಂತಾಮಣಿಯ ಎ.ರವಿಕುಮಾರ್.

ರವಿಕುಮಾರ್ ರೇಷ್ಮೆ ಮತ್ತು ಕಾಟನ್ ಸೀರೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಬೆಳಿಗ್ಗೆ 11ರ ವೇಳೆಯಲ್ಲಿಯೇ ಅವರ ಅಂಗಡಿಗೆ ಜನಸಂದಣಿ ಹೆಚ್ಚಿತ್ತು. ತುಮಕೂರು ಜಿಲ್ಲೆಯಲ್ಲಿ ಚಿಕ್ಕನಾಯಕನಹಳ್ಳಿಯ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ, ಕಂಬಳಿ ಮಾರುಕಟ್ಟೆಯಲ್ಲಿ ಪ್ರಮುಖವಾದುದು. ದೇವರ ಕಂಬಳಿ, ಗದ್ದಿಗೆ ಕಂಬಳಿ, ಹೊದಿಯುವ ಕಂಬಳಿ, ಮಿಲಿಟರಿ ಕಂಬಳಿ ಹೀಗೆ ನಾನಾ ವಿಧದ ಕಂಬಳಿಗಳನ್ನು ಮಳಿಗೆಯನ್ನು ಹರಡಿ ಕುಳಿತ್ತಿದ್ದ ಸೊಸೈಟಿ ಕಾರ್ಯದರ್ಶಿ ಕೋದಂಡಯ್ಯ ಅವರೂ ವ್ಯಾಪಾರ ಲಾಭದಾಯವಾಗುತ್ತಿರುವ ಬಗ್ಗೆ ಹೇಳುವರು.

‘ಈ ಹಿಂದೆಯೂ ನಗರದಲ್ಲಿ ಕಂಬಳಿ ಮಾರಾಟ ಮಾಡಿದ್ದೆವು. ಅದಕ್ಕಿಂತಲೂ ಈ ಬಾರಿ ಒಳ್ಳೆಯ ವ್ಯಾಪಾರ ಆಗಿದೆ. ನಿತ್ಯ ಏಳೆಂಟು ಸಾವಿರ ವಹಿವಾಟು ನಡೆಯುತ್ತಿದೆ’ ಎಂದು ತಿಳಿಸಿದರು ಕೋದಂಡಯ್ಯ. ಅವರ ಮಳಿಗೆ ಎದುರೇ ಚಳ್ಳಕೆರೆಯ ಸಿದ್ದಲಿಂಗೇಶ್ವರ ಸೊಸೈಟಿಯ ಕಂಬಳಿ ಮತ್ತು ಸೀರೆಗಳ ಮಾರಾಟ ಮಳಿಗೆ ಇದೆ.

ರೇಷ್ಮೆ ಸೀರೆಗಳು, ಕಾರ್ಪೆಟ್‌ಗಳು ಭರಾಟೆಯಲ್ಲಿ ಮಾರಾಟವಾಗುತ್ತಿದ್ದರೂ ಅದಕ್ಕಿಂತ ಹೆಚ್ಚು ವಹಿವಾಟು ನಡೆಯುತ್ತಿರುವುದು ಜುಬ್ಬಾ, ಕೋಟ್, ಕುರ್ತಾಗಳದ್ದು. ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ರಾಜೇಂದ್ರ ಮತ್ತು ಅರವಿಂದ್ ಅಕ್ಕ ಪಕ್ಕದಲ್ಲಿಯೇ ಮಳಿಗೆ ತೆರೆದಿದ್ದಾರೆ. ಒಂದು ಬದಿ ಸೀರೆ ಮತ್ತೊಂದು ಬದಿ ಜುಬ್ಬಾ, ಪೈಜಾಮ್, ಕುರ್ತಾ ವ್ಯಾಪಾರ.

‘ಎರಡು ದಿನಕ್ಕೆ ₹ 60 ಸಾವಿರಕ್ಕಿಂತ ಹೆಚ್ಚು ಜುಬ್ಬಾ, ಕೋಟ್‌ಗಳನ್ನು ಮಾರಿದ್ದೇವೆ. ಜನರೂ ಸಹ ಬಣ್ಣ ಬಣ್ಣದ ಕುರ್ತಾಕ್ಕೆ ಆಕರ್ಷಿತರಾಗುತ್ತಿದ್ದಾರೆ’ ಎಂದರು ಅರವಿಂದ್. ಒಬ್ಬರ ನಂತರ ಮತ್ತೊಬ್ಬರಿಗೆ ಕೋಟು, ಜುಬ್ಬಗಳನ್ನು ತೋರಿಸುತ್ತಿದ್ದರು ರಾಜೇಂದ್ರ.

₹ 10 ಲಕ್ಷ ವ್ಯಾಪಾರ

‘ಭಾನುವಾರ ಮಧ್ಯಾಹ್ನದ ವರೆಗೆ ₹ 10 ಲಕ್ಷ ವ್ಯಾಪಾರವಾಗಿದೆ. ಎಲ್ಲ ಬಟ್ಟೆಗಳಿಗೂ ಶೇ 20ರಷ್ಟು ರಿಯಾಯಿತಿ ಇದೆ. ಇಲ್ಲಿ ಪ್ರದರ್ಶನವನ್ನು ಆಯೋಜಿಸಬೇಕು ಎಂದು ಒಂದು ತಿಂಗಳಿನಿಂದಲೇ ತಯಾರಿ ನಡೆಸಿದ್ದೆವು’ ಎಂದು ಮಾಹಿತಿ ನೀಡುವರು ರೇಷ್ಮೆ ಮತ್ತು ಕೈ ಮಗ್ಗ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕ ಸಂತೋಷ್.

‘ಶಂಕರ ಮಠ ನಗರದ ನಡುವೆ ಇರುವುದರಿಂದ ಜನರು ಬರಲು ಅನುಕೂಲವಾಗಿದೆ. ಅಲ್ಲದೆ ಪಕ್ಕದ ಸಭಾ ಭವನದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲಿಗೆ ಬಂದವರು ಇಲ್ಲಿಗೂ ಭೇಟಿ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.