ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಹತ್ತಲು ಜನರ ಹಿಂಜರಿಕೆ

Last Updated 13 ಜನವರಿ 2018, 8:36 IST
ಅಕ್ಷರ ಗಾತ್ರ

ಬಳ್ಳಾರಿ: ನಗರದಲ್ಲಿ ಚಿರತೆಯ ಭಯ ಇನ್ನೂ ದೂರವಾಗಿಲ್ಲ. 31ನೇ ವಾರ್ಡಿನ ಎಂ.ಕೆ.ನಗರದ ಮೇಲಿನ ಗುಡ್ಡದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡು ಹದಿನೈದು ದಿನ ಕಳೆದರೂ, ಸುತ್ತಮುತ್ತಲಿನ ಜನರಲ್ಲಿ ಚಿರತೆಯ ಭಯ ಮನೆ ಮಾಡಿದೆ.

ಪರಿಣಾಮವಾಗಿ, ನಗರದ ಪ್ರಮುಖ ಪ್ರವಾಸಿ ತಾಣವಾದ ಕೋಟೆ ಗುಡ್ಡವನ್ನು ಹತ್ತಲು ಜನ ಹಿಂಜರಿಯುತ್ತಿದ್ದಾರೆ, ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ಮಾತ್ರ ಪ್ರವಾಸಿಗರಿಗಾಗಿ ಕಾಯುತ್ತಾ ದಿನಗಳನ್ನು ನೂಕುತ್ತಿದ್ದಾರೆ. ಚಿರತೆ ಭಯದ ಕಾರಣಕ್ಕೆ ಆದಾಯವೂ ಕುಸಿದಿದೆ.

ಭಾನುವಾರ ಮತ್ತು ಇತರೆ ರಜಾ ದಿನಗಳಲ್ಲಿ ಕೋಟೆಗೆ ನೂರಾರು ಮಂದಿ ಭೇಟಿ ನೀಡುತ್ತಾರೆ, ಯುವಕ–ಯುವತಿಯರು, ಸಾಹಸಿ ಚಾರಣಿಗರು, ಯೋಗಾಸನ ಅಭ್ಯಾಸಿಗಳು, ಕುಟುಂಬಸ್ಥರು ಸೇರಿದಂತೆ ವಿವಿಧ ವಯೋಮಾನದ ಮಂದಿ ಕೋಟೆಯನ್ನು ಹತ್ತಿ ಸಂಭ್ರಮಿಸುತ್ತಾರೆ.

ಆದರೆ ಭಾನುವಾರ ಕೋಟೆಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಂಡು ಬಂದರು. ಪ್ರತಿ ವರ್ಷ ನಾಡಧ್ವಜ ಹಾರಾಡುವ ಕೋಟೆಯ ಮೇಲ್ಭಾಗದ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ನಿರ್ಜನವಾಗಿತ್ತು.

ಮಾರ್ಗಮಧ್ಯೆ ಎದುರಾದ ಯುವಕರಿಬ್ಬರು ‘ಚಿರತೆ ಇರಬಹುದು ಎಂಬ ಭಯ ಇನ್ನೂ ಹೋಗಿಲ್ಲ. ಹೀಗಾಗಿ ಮೇಲ್ಭಾಗದಲ್ಲಿ ಜನರಿಲ್ಲ. ನೀವು ಕೋಟೆಯ ಒಳಭಾಗಕ್ಕೆ ಹೋಗಬೇಡಿ’ ಎಂದು ಎಚ್ಚರಿಕೆ ನೀಡಿ ಕೆಳಗಿಳಿದು ಹೋದರು.

‘ಭಾನುವಾರ ನಸುಕಿನಿಂದಲೇ ಕೋಟೆಗೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಎರಡು ವಾರದಿಂದ ಜನರೇ ಬಾರದಂತಾಗಿದೆ. ಹೊಸ ವರ್ಷದ ದಿನವೂ ನಿರೀಕ್ಷೆಯಷ್ಟು ಜನ ಬರಲಿಲ್ಲ’ ಎಂದು ಟಿಕೆಟ್‌ ಕೌಂಟರಿನ ಸಿಬ್ಬಂದಿ ತಿಳಿಸಿದರು.

ಚಿರತೆ ಭಯ ಕಾರಣ: ‘ಜನ ಏಕೆ ಕೋಟೆ ಹತ್ತಲು ಬರುತ್ತಿಲ್ಲ’ ಎಂದು ಕೇಳಿದರೆ ಅಲ್ಲಿನ ಭದ್ರತಾ ಸಿಬ್ಬಂದಿ, ‘ಡಿ.24ರಂದು ಕಾಣಿಸಿಕೊಂಡಿದ್ದ ಚಿರತೆಗಳು ಆ ಕಡೆಯ ಗುಡ್ಡದಿಂದ ಈ ಕೋಟೆ ಕಡೆಗೆ ಬಂದಿರಬಹುದು ಎಂಬ ಭಯವೇ ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಜನರು ಕೋಟೆ ಹತ್ತಿದರೆ ಮಾತ್ರ ನಾವು ಭದ್ರತೆ ಸಲುವಾಗಿ ಕೋಟೆಯನ್ನು ಹತ್ತುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಜನ ಬರುತ್ತಿಲ್ಲ. ನಾವೂ ಮೇಲೆ ಹತ್ತಿ ಹೋಗಿ ಏನು ಮಾಡುವುದು?’ ಎಂದು ಕೇಳಿದರು.

ಭದ್ರತೆ: ಭದ್ರತೆ ಸಲುವಾಗಿ ಇಲಾಖೆಯು ಮೂರು ಪಾಳಿಯಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ, ಮಧ್ಯಾಹ್ನದಿಂದ ರಾತ್ರಿ 10ರವರೆಗೆ, ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಯಲ್ಲಿ ತಲಾ ಮೂವರು, ರಾತ್ರಿ ಪಾಳಿಯಲ್ಲಿ ನಾಲ್ವರು ಕಾರ್ಯನಿರ್ವಹಿಸುತ್ತಾರೆ, ಅವರೊಂದಿಗೆ ಗೃಹರಕ್ಷಕ ಸಿಬ್ಬಂದಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಒಬ್ಬ ಸಿಬ್ಬಂದಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚಿರತೆ ಸಿಕ್ಕರೆ ಭಯ ದೂರ: ‘ಗುಡ್ಡದಲ್ಲಿ ಕಾಣಿಸಿಕೊಂಡ ಚಿರತೆಗಳಿಗೆ ಸಂಬಂಧವಿಲ್ಲದ ವೀಡಿಯೋಗಳು ವಾಟ್ಸ್‌ ಆಪ್‌ಗಳಲ್ಲಿ ಹರಿದಾಡುತ್ತಿರುವುದು ಭಯಕ್ಕೆ ಕಾರಣವಾಗಿದೆ. ಚಿರತೆಗಳು ನಂತರ ಕಾಣಿಸಿಕೊಂಡಿಲ್ಲ. ಅವುಗಳನ್ನು ಹಿಡಿದ ಸುದ್ದಿ ಬಂದರೆ ಮಾತ್ರ ಜನರ ಭಯ ದೂರವಾಗಬಹುದು’ ಎಂದು ಸ್ಥಳೀಯ ನಿವಾಸಿ ರಾಜಣ್ಣ ಅಭಿಪ್ರಾಯಪಟ್ಟರು.

‘ಚಿರತೆ ಕೋಟೆಗೆ ಬರುವ ಸಾಧ್ಯತೆ ಇಲ್ಲ’

‘ಚಿರತೆಗಳು ಕೋಟೆ ಪ್ರದೇಶದ ಗುಡ್ಡದ ಕಡೆಗೆ ಬರುವ ಸಾಧ್ಯತೆ ಇಲ್ಲ’ ಎಂದು ವಲಯ ಅರಣ್ಯಾಧಿಕಾರಿ ಡಿ.ಎಲ್‌.ಹರ್ಷ ತಿಳಿಸಿದರು. ‘ಕೋಟೆಯ ಗುಡ್ಡಕ್ಕೂ ಮತ್ತು ಈಗಾಗಲೇ ಚಿರತೆಗಳು ಕಾಣಿಸಿಕೊಂಡಿದ್ದ ಗುಡ್ಡಕ್ಕೂ ನಡುವೆ ಇನ್‌ಫ್ಯಾಂಟ್ರಿ ರಸ್ತೆ ಹರಡಿದೆ. ಚಿರತೆಗಳು ಕೋಟೆಯ ಕಡೆಗೆ ಬರಬೇಕೆಂದರೆ ಈ ರಸ್ತೆಯನ್ನು ದಾಟಿಯೇ ಬರಬೇಕು. ಜನವಸತಿ ಪ್ರದೇಶವಿರುವುದರಿಂದ ಅದು ಸಾಧ್ಯವಿಲ್ಲ’ ಎಂದು ಖಚಿತ ಅಭಿಪ್ರಾಯ ವ್ಯಕ್ತಪಡಿಸಿದರು.

‘ಗುಡ್ಡದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡ ಬಳಿಕ, ಕೊಳಗಲ್ಲು ಗ್ರಾಮದಲ್ಲಿ, ಹರಗಿನಡೋಣಿ ಪ್ರದೇಶದಲ್ಲಿಯೂ ಒಂದು ಚಿರತೆ ಕಾಣಿಸಿಕೊಂಡಿತ್ತು. ಆದರೆ ಅದು ಗುಡ್ಡದಲ್ಲಿ ಕಾಣಿಸಿಕೊಂಡ ಚಿರತೆಯೇ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ’ ಎಂದರು.

* * 

ಈಗಲೂ ಮೂರು ಬೋನು ಗುಡ್ಡದಲ್ಲಿವೆ, ಸಿಬ್ಬಂದಿ ಗಸ್ತೂ ಇದೆ. ಚಿರತೆಗಳು ಇಲ್ಲ ಎಂದು ಖಚಿತವಾಗುವವರೆಗೂ ಗಸ್ತು ಮುಂದುವರಿಯುತ್ತದೆ
ಡಿ.ಎಲ್‌.ಹರ್ಷ, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT