ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಗೆ ತ್ಯಾಜ್ಯ, ಬಗೆಹರಿಯದ ವ್ಯಾಜ್ಯ

ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಸಾಧುಮಠದ ರಸ್ತೆಯ ಕರ್ನಾಟಕದ ಸಮುದಾಯದ ಭವನ ಬಳಿಯ ಚರಂಡಿ ತೆರೆದ ತ್ಯಾಜ್ಯದ ತೊಟ್ಟಿಯಂತಾಗಿ ಮಾರ್ಪಟ್ಟಿದ್ದು, ಹರಿಯದೆ ಮಡುಗಟ್ಟಿ ನಿಂತಿರುವ ಕೊಳಚೆ ನೀರಿಗೆ ತ್ಯಾಜ್ಯ ಬೆರೆತು ದಿನೇ ದಿನೇ ಅಸಹ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ.

ಸಮೀಪದಲ್ಲಿಯೇ ಇರುವ ಮಾಂಸದ ಅಂಗಡಿಗಳಲ್ಲಿ ಅಳಿದುಳಿದ ಮಾಂಸದ ತ್ಯಾಜ್ಯವನ್ನು ರಾತ್ರಿ ವೇಳೆ ಇಲ್ಲಿ ಸುರಿಯಲಾಗುತ್ತಿದ್ದು, ಇದರಿಂದ ಹುಳುಗಳು ಕಾಣಿಸಿಕೊಳ್ಳಲು ಆರಂಭಿಸಿವೆ. ಹೀಗೆ ಬಿಟ್ಟರೆ ಇಲ್ಲಿನ ಪರಿಸ್ಥಿತಿ ಸಾಂಕ್ರಾಮಿಕ ರೋಗಗಳನ್ನು ತಂದರೂ ಅಚ್ಚರಿಯಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಚರಂಡಿಯಲ್ಲಿ ದುರ್ವಾಸನೆ ಮನೆ ಮಾಡಿದೆ. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ವಿಪರೀತ ಎನಿಸುವ ಮಟ್ಟಿಗೆ ಹೆಚ್ಚುತ್ತದೆ. ಆಹಾರ, ಮಾಂಸದ ಆಸೆಗೆ ಚರಂಡಿ ಬಳಿ ಬರುವ ಬೀದಿ ನಾಯಿಗಳು ಚರಂಡಿ ಪಕ್ಕದಲ್ಲಿ ಸುರಿದ ತ್ಯಾಜ್ಯವನ್ನೆಲ್ಲ ಕೆದಕಿ ಎಲ್ಲೆಂದರಲ್ಲಿ ಹರಡಿ ಹೋಗುತ್ತವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಈ ಬಗ್ಗೆ ಗಮನ ಹರಿಸಬೇಕಾದ ನಗರಸಭೆಯವರು ಮಾತ್ರ ತಮ್ಮ ಕೆಲಸ ಮರೆತಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

‘ನೀರು ಹರಿಯಲು ದಾರಿ ಇಲ್ಲದೆ ಚರಂಡಿಯಲ್ಲಿ ಹೂಳು ತುಂಬಿದೆ. ನಗರಸಭೆಯವರಂತೂ ಚರಂಡಿ ಸ್ವಚ್ಛತೆ ಕೆಲಸ ಮರತೆ ಬಿಟ್ಟಿದ್ದಾರೆ. ಇದು ಸ್ಥಳೀಯ ಮಾಂಸದ ಅಂಗಡಿಯವರಿಗೆ ಅನುಕೂಲವಾಗಿದ್ದು ಮತ್ತಷ್ಟು ಸಮಸ್ಯೆ ತಂದಿಡುತ್ತಿದೆ. ನಗರಸಭೆ ಕೂಗಳತೆ ದೂರದಲ್ಲೇ ಇಂತಹ ಅಧ್ವಾನವಾಗಿದೆ. ಇನ್ನೂ ದೂರದಲ್ಲಿ ವಾಸಿಸುವವರ ಪಾಡೇನು’ ಎಂದು ಸ್ಥಳೀಯ ನಿವಾಸಿ ಮುಬಾರಕ್‌ ಪಾಷಾ ತಿಳಿಸಿದರು.

‘ರಾತ್ರಿ ವೇಳೆಯಲ್ಲಂತೂ ಗಾಳಿ ಸುಳಿದರೆ ಸಾಕು ಗಬ್ಬು ವಾಸನೆಗೆ ಊಟ ಸೇರುವುದಿಲ್ಲ. ತೆರಿಗೆಯ ವಸೂಲಿ ಬರುವ ನಗರಸಭೆಯವರು ಕಣ್ತೆರೆದು ಇಂತಹ ಸಮಸ್ಯೆಗಳನ್ನು ನೋಡಿ, ಪರಿಹರಿಸಲು ಮುಂದಾಗಬೇಕು. ಸಮೀಪದಲ್ಲೇ ಅಂಗನವಾಡಿ ಕೇಂದ್ರವಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮವಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಇಲ್ಲಿನ ಸ್ಥಳೀಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಚರಂಡಿ ಇಷ್ಟೊಂದು ಗಬ್ಬೆದ್ದು ಹೋದರೂ ಒಂದೇ ಒಂದು ಬಾರಿ ನಗರಸಭೆಯವರಾಗಲಿ, ಆರೋಗ್ಯ ಇಲಾಖೆಯವರಾಗಲಿ ಇತ್ತ ಇಣುಕಿ ನೋಡುತ್ತಿಲ್ಲ’ ಎಂದು ಬಡಾವಣೆಯ ನಿವಾಸಿ ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

‘ಮಳೆಗಾಲದಲ್ಲಿ ತುಂಬಿ ಹರಿದರೆ ಮಾತ್ರ ಶುಚಿಗೊಳ್ಳುವ ಚರಂಡಿ ಉಳಿದಂತೆ ವರ್ಷಪೂರ್ತಿ ತುಂಬಿಕೊಂಡೇ ಇರುತ್ತದೆ. ಪೌರಕಾರ್ಮಿಕರು ವಾರಕ್ಕೊಮ್ಮೆ ಈ ಭಾಗದಲ್ಲಿ ಕಸ ವಿಲೇವಾರಿ ಮಾಡಲು ಬಂದರೂ ಇದನ್ನೆಲ್ಲ ಕಂಡರೂ ಕಾಣದಂತೆ ವರ್ತಿಸುತ್ತಾರೆ. ವಾರಕ್ಕೆ ಎರಡು ಬಾರಿ ಚರಂಡಿ ಪಕ್ಕದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸುವ ಪೌರ ಕಾರ್ಮಿಕರು ಚರಂಡಿಯನ್ನು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ’ ಎಂದೂ ಅವರು ದೂರಿದರು.

‘ನಗರಸಭೆಯವರು ಕೆಲ ತಿಂಗಳ ಹಿಂದೆ ಮಾಂಸದ ಅಂಗಡಿಗಳನ್ನು ತೆರವು ಮಾಡಿಸುತ್ತೇವೆ ಎಂದು ಪ್ರಚಾರ ಮಾಡಿದರೂ. ಈವರೆಗೆ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಲ್ಲಿ ನೋಡಿದರೆ ಮಾಂಸದ ಆಸೆಗಾಗಿ ಬರುವ ಬೀದಿ ನಾಯಿಗಳಿಂದ ರಾತ್ರಿ ವೇಳೆ ಜನರು ಈ ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರೆಲ್ಲ ಎಚ್ಚೆತ್ತುಕೊಂಡು ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ’ ಎಂದು ಸ್ಥಳೀಯ ಚಿಲ್ಲರೆ ಅಂಗಡಿ ಮಾಲೀಕ ಮಧುಕುಮಾರ್‌ ತಿಳಿಸಿದರು.

* * 

ಕೂಗಳತೆಯಲ್ಲಿರುವ ನಗರಸಭೆ ಅಧಿಕಾರಿಗಳಿಗೆ ಜಾಣ ಕುರುಡು. ಅದರ ಪರಿಣಾಮ ದಿನವೂ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಿದ್ದೇವೆ
ಮಧುಕುಮಾರ್‌ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT