ಗುರುವಾರ , ಜೂಲೈ 2, 2020
27 °C

ಚುನಾವಣೆ ಬ್ಯಾನರ್‌; ಕಲಾವಿದರಿಗಿಲ್ಲ ಬೇಡಿಕೆ

ಮನೋಜಕುಮಾರ ಗುದ್ದಿ Updated:

ಅಕ್ಷರ ಗಾತ್ರ : | |

ಚುನಾವಣೆ ಬ್ಯಾನರ್‌; ಕಲಾವಿದರಿಗಿಲ್ಲ ಬೇಡಿಕೆ

ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿವೆ. ಅಬ್ಬರದ ಪ್ರಚಾರ ಶುರುವಾಗುತ್ತಿದೆ. ಆಟೊ, ಗೋಡೆ, ಮರಗಳ ಮೇಲೆ ಭಾರಿ ಗಾತ್ರದ ಫ್ಲೆಕ್ಸ್‌ಗಳೂ ಗಮನ ಸೆಳೆಯುತ್ತಿವೆ. ಇದೆಲ್ಲವನ್ನೂ ನೋಡಿಕೊಂಡು ಒಂದು ವರ್ಗ ಸಂಕಟ ಪಡುತ್ತಿದೆ. ಅವರೇ ಚುನಾವಣಾ ಬ್ಯಾನರ್‌ ಬರೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಲಾವಿದು!

ಟಿ.ಎನ್‌. ಶೇಷನ್‌ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಅವಧಿಯಲ್ಲಿ ಚುನಾವಣೆಗಳ ಸ್ವರೂಪವೇ ಬದಲಾಯಿತು. ಎಲ್ಲೆಂದರಲ್ಲಿ ಬ್ಯಾನರ್‌ಗಳನ್ನು ಅಳವಡಿಸುವುದಕ್ಕೆ, ದುಂದು ವೆಚ್ಚಕ್ಕೆ, ವಿಪರೀತ ಧ್ವನಿವರ್ಧಕಗಳ ಬಳಕೆಯ ಮೇಲೆ ನಿಯಂತ್ರಣ ಹೇರಿದರು. ಚುನಾವಣೆಗಳ ಸಂದರ್ಭಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಬಟ್ಟೆ ಬ್ಯಾನರ್‌ ಮೇಲೆ ಅಕ್ಷರಗಳನ್ನು ಬರೆದುಕೊಡುವುದಕ್ಕೂ ಮಿತಿ ಹೇರಲಾಯಿತು.

‘ಬೇಡಿಕೆಗೆ ತಕ್ಕಷ್ಟು ಫ್ಲೆಕ್ಸ್‌ಗಳನ್ನು ಕೆಲವೇ ಕ್ಷಣಗಳಲ್ಲಿ ಮುದ್ರಿಸಿಕೊಡುವ ಡಿಜಿಟಲ್‌ ಉದ್ಯಮ ಬೆಳವಣಿಗೆಯಾದ ಬಳಿಕವಂತೂ ಬ್ಯಾನರ್‌ ಬರೆದುಕೊಡುತ್ತಿದ್ದ ಕಲಾವಿದರು ಅತಂತ್ರರಾದರು’ ಎನ್ನುತ್ತಾರೆ ಸದ್ಯ ಬೆಂಗಳೂರಿನಲ್ಲಿ ಸಿನಿಮಾಗಳ ಕಟೌಟ್‌ ತಯಾರಿಕೆ ಮಾಡುತ್ತಿರುವ ಹುಬ್ಬಳ್ಳಿಯ ಕಲಾವಿದ ಚಂದ್ರಶೇಖರ ಯಡ್ರಾಮಿ.

‘ಚಂದ್ರಶೇಖರ ಅವರಷ್ಟು ಅದೃಷ್ಟವಂತರೂ ಬಹುತೇಕ ಕಲಾವಿದರು ಇಲ್ಲ. ಏಕೆಂದರೆ, ಉನ್ನತ ಶಿಕ್ಷಣವನ್ನೂ ಪಡೆಯದ ಕಲಾವಿದರು ಹೆಚ್ಚು ಅವಕಾಶಗಳನ್ನು ಅರಸಿಕೊಂಡು ಬೆಂಗಳೂರಿನಂತಹ ನಗರಗಳಿಗೆ ಹೋಗಲಿಲ್ಲ. ಸ್ಥಳೀಯವಾಗಿ ಫ್ಲೆಕ್ಸ್‌ ಪ್ರಿಟಿಂಗ್‌ ಯಂತ್ರಗಳನ್ನು ಹಾಕಲು ಬೇಕಾದ ಲಕ್ಷಾಂತರ ರೂಪಾಯಿ ಬಂಡವಾಳವೂ ಇರಲಿಲ್ಲ. ಹೀಗಾಗಿ, ಸಣ್ಣ ಪುಟ್ಟ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ವಿಜಯ ಮಹಾಂತೇಶ ಕಲಾ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಚೆಟ್ಟಿ.

‘ಸಿಬಿಟಿಯಲ್ಲಿ ಯೂಸುಫ್‌ ಎಂಬ ಬ್ಯಾನರ್‌ ಬರೆಯುವ ಅದ್ಭುತ ಕಲಾವಿದರಿದ್ದಾರೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಆಗದೇ ಇರುವುದರಿಂದ ಅನಿವಾರ್ಯವಾಗಿ ಇಂದು ಶಾಮಿಯಾನ ಹಾಕುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದೂ ಚೆಟ್ಟಿ ಅವರು ವಿಷಾದದಿಂದ ಹೇಳಿದರು.

ಫ್ಲೆಕ್ಸ್‌ ಯಂತ್ರ ಖರೀದಿ ಅಸಾಧ್ಯ: ‘ನಿತ್ಯ ಬ್ಯಾನರ್‌ ಬರೆದು ಬದುಕಿನ ಬಂಡಿ ನಡೆಸುವ ಕಲಾವಿದರಿಗೆ ಫ್ಲೆಕ್ಸ್‌ ಯಂತ್ರ ಖರೀದಿ ಮಾಡುವುದೂ ಅಸಾಧ್ಯ. ಏಕೆಂದರೆ, ಒಂದು ಯಂತ್ರಕ್ಕೆ ₹ 12 ಲಕ್ಷದಿಂದ ₹ 30 ಲಕ್ಷದವರೆಗೆ ಇರುತ್ತದೆ. ಇಷ್ಟೊಂದು ಬಂಡವಾಳವನ್ನು ಕೂಡಿಸುವುದು ಸುಲಭದ ಮಾತಲ್ಲ’ ಎನ್ನುತ್ತಾರೆ ಕಲಾ ಶಿಕ್ಷಕ ಚಂದ್ರಕಾಂತ ಜಟ್ಟೆಣ್ಣವರ.

‘ಕಳೆದ ಚುನಾವಣೆ ಸಂದರ್ಭದಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖಂಡರಾಗಿದ, ಪ್ರಸ್ತುತ ಬಿಜೆಪಿ ಸಂಸದರಾಗಿರುವ ಬಿ. ಶ್ರೀರಾಮುಲು ಅವರು ಪಕ್ಷದ ಪ್ರಚಾರಕ್ಕಾಗಿ ಬಟ್ಟೆ ಬ್ಯಾನರ್‌ಗಳನ್ನು ಬಳಸಿದ್ದರು. ಆದರೆ, ಬೇರೆ ಪಕ್ಷದವರು ಫ್ಲೆಕ್ಸ್ ಬಳಕೆಗೇ ಒಲವು ತೋರಿದ್ದರಿಂದ ಬಹುತೇಕ ಕಲಾವಿದರು ನಿರುದ್ಯೋಗಿಗಳಾಗಬೇಕಾಯಿತು. ಇಲ್ಲವೇ, ಸಣ್ಣ ಪುಟ್ಟ ಕೆಲಸಗಳನ್ನು ನೋಡಿಕೊಳ್ಳಬೇಕಾಯಿತು ಎನ್ನುತ್ತಾರೆ’ ಕಲಾವಿದ ಪ್ರತಾಪ ಬಹುರೂಪಿ.

ಬೈಕ್‌ ಸ್ಟಿಕ್ಕರ್‌ ಅಂಟಿಸುವ ಕಲಾವಿದ

ಚುನಾವಣೆಗಳ ಸಂದರ್ಭಗಳಲ್ಲಿ ಹಲವು ಪಕ್ಷಗಳ ಮುಖಂಡರ ಪರ ಅಂದದ ಬ್ಯಾನರ್‌ಗಳನ್ನು ಬರೆದುಕೊಟ್ಟ ಕಲಾವಿದ ರಾಮನಾಥ ಬಿ. ಕಬಾಡಿ ಇಂದು ಗದಗ–ಬೆಟಗೇರಿಯಲ್ಲಿ ಬೈಕ್‌ಗಳ ನಂಬರ್‌ ಪ್ಲೇಟ್‌ಗಳ ಮೇಲೆ ಸ್ಟಿಕ್ಕರ್‌ ಅಂಟಿಸುತ್ತಿದ್ದಾರೆ.

‘ನಮಗೆ ಬೇರೆ ಕೆಲಸ ಗೊತ್ತಿಲ್ಲ. ಹಿಂದೆಲ್ಲ ಎಲೆಕ್ಷನ್‌ ಇದ್ದಾಗ ಸಾಕಷ್ಟು ದುಡಿಯುತ್ತಿದ್ದೆವು. ಇಂದು ನಮ್ಮನ್ನು ಕೇಳುವವರೇ ಇಲ್ಲವಾಗಿದೆ. ಇನ್ನೇನು ನಾಲ್ಕೈದು ವರ್ಷ ಕೆಲಸ ಮಾಡಬಹುದು. ಆದರೆ, ಮುಂದೆ ಏನು ಮಾಡುವುದು ಎಂಬ ಚಿಂತೆ ಮೂಡಿದೆ’ ಎಂದು ಕಬಾಡಿ ಅಸಹಾಯಕರಾಗಿ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.