ಬುಧವಾರ, ಆಗಸ್ಟ್ 5, 2020
21 °C

ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

ತುಕಾರಾಂರಾವ್‌ ಬಿ.ವಿ Updated:

ಅಕ್ಷರ ಗಾತ್ರ : | |

ಬಿಸಿಲ ನಾಡಿನಲ್ಲೂ ಜೇನಿನ ಹೊಳೆ

ಜೇನು ಸಾಕಾಣಿಕೆ ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೆಚ್ಚು. ಆದರೆ ಬಿಸಿಲ ನಾಡು ಎನಿಸಿದ ಕೊಪ್ಪಳ ಜಿಲ್ಲೆಯ ರೈತರೂ ಜೇನು ಕೃಷಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಜಿಲ್ಲೆಯ ಬಸವಾಪಟ್ಟಣದ ಅನಿಲಕುಮಾರ್ ಹಾಗೂ ಇಂದರಗಿಯ ನಿಂಗಪ್ಪ ಜೇನು ಕೃಷಿಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಅಲ್ಲದೆ ಹೈದರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿ ಮೊದಲ ಜೇನು ಕೃಷಿಕರ ಸಂಘವನ್ನು ಸಹ ಸ್ಥಾಪಿಸಿದ್ದಾರೆ. ಸಂಘ ದಲ್ಲಿ ಈಗಾಗಲೆ 25 ರೈತರು ಸದಸ್ಯರಾಗಿದ್ದಾರೆ.

ಅನಿಲಕುಮಾರ್ ಅವರು ಮೇಟಿಕುರ್ಕೆಯಲ್ಲಿ ಶಾಂತವೀರಯ್ಯ ಎಂಬುವವರಿಂದ ಜೇನು ಕೃಷಿಯ ತರಬೇತಿ ಪಡೆದು, ಅವರಿಂದಲೇ ಎರಡು ಜೇನು ಪೆಟ್ಟಿಗೆ ಪಡೆದುಕೊಂಡು ಬಂದು, ತಮ್ಮ ತೋಟದಲ್ಲಿ ಜೇನು ಸಾಕಾಣಿಕೆ ಪ್ರಾರಂಭಿಸಿದರು. ಮೊದ–ಮೊದಲು ವಿಫಲ ವಾದರೂ, ಮತ್ತೆ ಯತ್ನಮಾಡಿ ಯಶಸ್ಸು ಕಂಡರು. 20 ಎಕರೆ ಜಮೀನು ಹೊಂದಿರುವ ಇವರದು ಸಮಗ್ರ ಕೃಷಿ. ಮಾವು, ಪಪ್ಪಾಯಿ ಮರಗಳಿದ್ದು, ಭತ್ತವನ್ನೂ ಬೆಳೆಯುತ್ತಾರೆ.

ಸಾವಯವ ಕೃಷಿ ವಿಧಾನ ಅನುಸರಿಸುವ ಇವರು ಯಾವುದೇ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಇದೀಗ ತಮ್ಮ ತೋಟದಲ್ಲಿ ಸುಮಾರು 40ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಇತರರಿಗೂ, ಜೇನು ಕೃಷಿಗೆ ಉತ್ತೇಜಿಸುತ್ತಿದ್ದು, ಜೇನು ಕೃಷಿಗೆ ಬೇಕಾದ ಪರಿಕರಗಳನ್ನು ನೀಡುವುದಲ್ಲದೆ, ಅಗತ್ಯ ತರಬೇತಿಯನ್ನೂ ಇವರೇ ನೀಡುತ್ತಿದ್ದಾರೆ. ಹೈದರಾಬಾದ್-ಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳಿಂದ ರೈತರು ಇವರಲ್ಲಿ ಬಂದು ಜೇನು ಸಾಕಾಣಿಕೆಯ ತರಬೇತಿ ಪಡೆದುಕೊಂಡು ಹೋಗುತ್ತಿದ್ದಾರೆ.

ಪ್ರತಿ ಜೇನು ಪೆಟ್ಟಿಗೆಯಿಂದ ವರ್ಷಕ್ಕೆ ಕನಿಷ್ಠ ₹5 ಸಾವಿರ ಆದಾಯ ಗಳಿಸಲು ಸಾಧ್ಯವಿದೆ. ಆದರೆ ಜೇನು ಸಾಕಾಣಿಕೆಯ ಪ್ರಮುಖ ಉದ್ದೇಶ ಕೃಷಿ ಇಳುವರಿ ಹೆಚ್ಚಿಸಿಕೊಳ್ಳುವುದು. ಜೇನು ಹುಳುಗಳು ಕೈಗೊಳ್ಳುವ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿಯಲ್ಲಿ ಶೇ 40ರಷ್ಟು ಇಳುವರಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಜೇನು ಸಾಕಾಣಿಕೆ ಜೇನು ತುಪ್ಪದ ಹಣ ತಂದುಕೊಟ್ಟರೆ, ಅದರ ಇನ್ನೊಂದು ಲಾಭವೆಂದರೆ, ಕೃಷಿ ಬೆಳೆ ಹೆಚ್ಚು ಇಳುವರಿ ತಂದು, ಲಾಭವನ್ನು ಇಮ್ಮಡಿಗೊಳಿಸುತ್ತದೆ ಎನ್ನುತ್ತಾರೆ ಅನಿಲ್‌ಕುಮಾರ್‌.

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ರಾಸಾಯನಿಕ ಹಾಗೂ ಕೀಟನಾಶಕ ಬಳಕೆಯಿಂದ ಜೇನು ಹುಳುಗಳ ಪೀಳಿಗೆ ಸಂಕಷ್ಟದಲ್ಲಿದೆ. ಜೇನು ಹುಳುಗಳ ಕಣ್ಮರೆಯಿಂದ ಇಡೀ ಕೃಷಿ ಚಟುವಟಿಕೆಯೇ ಆತಂಕಕ್ಕೆ ಸಿಲುಕಲಿದೆ ಎಂದು ಅವರು ಹೇಳುತ್ತಾರೆ.

ಶುದ್ಧ ಜೇನು ತುಪ್ಪ ಸಿಗುವ ಕಡೆ, ಜನ ಹುಡುಕಿಕೊಂಡು ಬಂದು ಖರೀದಿಸುತ್ತಾರೆ. ಕೃಷಿ ಚಟುವಟಿಕೆಯ ಜೊತೆಗೆ ಜೇನು ಸಾಕಾಣಿಕೆ ನಿಜಕ್ಕೂ ಒಳ್ಳೆಯ ಉಪಕಸುಬು. ಹೆಚ್ಚು ದೈಹಿಕ ಪರಿಶ್ರಮವಿಲ್ಲದ ಕಾರಣ ರೈತ ಮಹಿಳೆಯರಿಗೂ ಇದು ಅತ್ಯಂತ ಸೂಕ್ತವಾಗಿದೆ ಎಂದು ಅವರು ವಿವರಿಸುತ್ತಾರೆ.

ಜೇನು ಸಾಕಾಣಿಕೆಯನ್ನು ಇತರೆ ರೈತರಿಗೂ ಪರಿಚಯಿಸುವ ಉದ್ದೇಶದಿಂದ ಇಂದರಗಿ ಗ್ರಾಮದ ರೈತ ನಿಂಗಪ್ಪ ಅವರನ್ನು ತೋಟಗಾರಿಕೆ ಇಲಾಖೆಯಿಂದ ಜೇನುಕೃಷಿ ಪ್ರೇರಕರನ್ನಾಗಿ ನೇಮಿಸಲಾಗಿದೆ. ಒಂದು ಆರೋಗ್ಯವಂತ ರಾಣಿ ಜೇನು ನಿತ್ಯ 500ರಿಂದ 1000 ಮೊಟ್ಟೆಗಳನಿಡುತ್ತದೆ. ಪ್ರತಿ ರಾಣಿ ಜೇನಿನ ಜೀವಿತಾವಧಿ 2ರಿಂದ 3 ವರ್ಷಗಳಾಗಿದ್ದು, ಇತರೆ ಜೇನು ಹುಳುಗಳು ಸುಮಾರು ಒಂದು ಕಿ.ಮೀ. ವಿಸ್ತೀರ್ಣದಲ್ಲಿ ಸಂಚರಿಸಿ, ಮಕರಂದವನ್ನು ಹೀರಿ ತರುತ್ತವೆ. ಒಂದು ಜೇನು ಪೆಟ್ಟಿಗೆಯಲ್ಲಿ ಎಂಟು ಸೂಪರ್ ಫ್ರೇಮ್ ಹಾಗೂ ಅಷ್ಟೇ ಸಂಖ್ಯೆಯ ಇತರೆ ಫ್ರೇಮ್‌ಗಳನ್ನು ಇರಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಜೇನು ಸಿಗುತ್ತದೆ ಎಂದು ನಿಂಗಪ್ಪ ಹೇಳುತ್ತಾರೆ.

ಜಿಲ್ಲೆಯಲ್ಲಿ ಯಾವುದೇ ಗ್ರಾಮದ ರೈತರು ಜೇನು ಸಾಕಾಣಿಕೆಗೆ ಆಸಕ್ತಿ ತೋರಿದರೆ, ಅವರ ತೋಟಕ್ಕೇ ಹೋಗಿ, ಮಾಹಿತಿ ಹಾಗೂ ತರಬೇತಿ ನೀಡಲು ಸಿದ್ಧ ಎನ್ನುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿ ಮಧು ಮೇಳವನ್ನು ಆಯೋಜಿಸಿ, ಜೇನು ಕೃಷಿ ಬಗ್ಗೆ ರೈತರಿಗೆ ಮಾಹಿತಿ ಹಾಗೂ ಶುದ್ಧ ಜೇನು ತುಪ್ಪ ಮಾರಾಟ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಜೇನು ಸಾಕಾಣಿಕೆಗೆ ಇಲಾಖೆಯಿಂದ ಪ್ರತಿ ಜೇನು ಪೆಟ್ಟಿಗೆಗೆ ಸಾಮಾನ್ಯ ರೈತರಿಗೆ ₹1,800 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ₹ 3,600 ಸಹಾಯಧನ ನೀಡಲಾಗುತ್ತಿದೆ. ಅಲ್ಲದೆ ಜೇನು ಸಾಕಾಣಿಕೆಯನ್ನು ಹೆಚ್ಚಿಸಿಕೊಂಡು ಮಧುವನ ಮಾಡಿಕೊಳ್ಳಲು ಬಯಸುವವರಿಗೆ ₹ 50 ಸಾವಿರ ಸಹಾಯಧನ ನೀಡಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ.

ಮಾಹಿತಿಗೆ ಅನಿಲಕುಮಾರ್- 9900440777 ಅಥವಾ ನಿಂಗಪ್ಪ- 9901499701.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.