ಶನಿವಾರ, ಆಗಸ್ಟ್ 8, 2020
22 °C
ಸ್ಪಂದಿಸದ ಚುನಾವಣಾ ಆಯೋಗದ ದೂರು ವಿಭಾಗ

ಹೆಸರು ಸೇರಿಸಲು ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರಿಸಿ ಎಂದು ಚುನಾವಣಾ ಆಯೋಗ ಸಾರ್ವಜನಿಕರಿಗೆ ಪದೇ ಪದೇ ಮನವಿ ಮಾಡುತ್ತಿದೆ. ಆದರೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಮತದಾರರ ಹೆಸರು ವರ್ಗಾವಣೆ ಕಷ್ಟದ ಕೆಲಸವಾಗಿದೆ.

ಮತದಾರ ಪಟ್ಟಿಗೆ ಹೆಸರು ಸೇರಿಸಲು ಪರಾಡುತ್ತಿರುವ ಕೆಲವರು ‘ಪ್ರಜಾವಾಣಿ’ಗೆ ತಮ್ಮ ಅಹವಾಲು ತೋಡಿಕೊಂಡಿದ್ದಾರೆ. ಒಬ್ಬರಂತೂ ಸತತ ನಾಲ್ಕು ವರ್ಷಗಳಿಂದ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದರೂ ಈ ಕ್ಷಣದವರೆಗೂ ಸಫಲರಾಗಿಲ್ಲ.

ರಘುನಾಥ ಎಂಬುವವರು ನಾಲ್ಕು ವರ್ಷಗಳ ಹಿಂದೆ ತುಮಕೂರಿನಿಂದ ವರ್ಗಾವಣೆಯಾಗಿ ಬೆಂಗಳೂರಿಗೆ ಬಂದರು. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸಂಬಂಧಪಟ್ಟ ಕಂದಾಯ ಅಧಿಕಾರಿ ಕಚೇರಿಗೆ ಹೋದಾಗ, ತುಮಕೂರಿನಲ್ಲಿರುವ ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ಸೂಚಿಸಿದರು. ಅದೇ ರೀತಿ ಮಾಡಿ, ಬೆಂಗಳೂರಿನಲ್ಲಿ ಹೊಸ ಅರ್ಜಿ ಸಲ್ಲಿಸಿದರು. ಆದರೆ ಪಟ್ಟಿಗೆ ಹೆಸರು ಸೇರಲೇ ಇಲ್ಲ. ಈ ವಿಷಯ ಬಿಬಿಎಂಪಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಮತ್ತೊಮ್ಮೆ ಅರ್ಜಿ ಸಲ್ಲಿಸಲು ತಿಳಿಸಿದರು. ಆ ಪ್ರಕಾರ ಅರ್ಜಿ ಸಲ್ಲಿಸಲಾಯಿತು. 2018 ರ ಕರಡು ಪಟ್ಟಿಯಲ್ಲಿ ನೋಡಿದಾಗ, ಅವರ ಹೆಸರು ಬೇರೊಂದು ವಾರ್ಡ್‌ನ ಪಟ್ಟಿಯಲ್ಲಿ ಸೇರಿದೆ. ಈಗ ಮತ್ತೊಮ್ಮೆ ಮತದಾರರ ಪಟ್ಟಿಯಿಂದ ತೆಗೆಸಿ ಹೊಸ ಅರ್ಜಿ ಸಲ್ಲಿಸಲು ಅಧಿಕಾರಿಗಳು ಸೂಚಿಸಿದ್ದಾರೆ.

ಇದು ರಘುನಾಥ ಒಬ್ಬರ ಕಥೆಯಲ್ಲ. ಬೆಂಗಳೂರಿನ ಬಿಬಿಎಂಪಿ ಕಂದಾಯ ಕಚೇರಿಗೆ ಭೇಟಿ ನೀಡಿದರೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಪರದಾಡುತ್ತಿರುವ ಹಲವರನ್ನು ಕಾಣಬಹುದು. ಸದಾನಂದ ಎಂಬುವರು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಹೊಸದಾಗಿ ಬಂದಿದ್ದಾರೆ. ತಮ್ಮ ಕುಟುಂಬದ ನಾಲ್ವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಬಸವನಗುಡಿ ಬಿಬಿಎಂಪಿ ಕಂದಾಯ ಕಚೇರಿಗೆ ಬಂದಿದ್ದರು. ಸಿಬ್ಬಂದಿ ಅರ್ಜಿ ಸ್ವೀಕರಿಸಿದರು. ಆದರೆ, ಹೆಚ್ಚಿನ ಯಾವುದೇ ಮಾಹಿತಿ ಕೇಳಿದರೂ ಅವರಿಂದ ಉತ್ತರವಿಲ್ಲ. ಅರ್ಜಿಸ್ವೀಕರಿಸಿದ್ದಕ್ಕೆ ಸ್ವೀಕೃತಿ ಚೀಟಿಯನ್ನೂ ನೀಡುತ್ತಿಲ್ಲ ಎಂಬ ಅಳಲು ಅವರದು.

‘ಚುನಾವಣಾ ಆಯೋಗದ ದೂರು ವಿಭಾಗದ ಹೆಲ್ಪ್‌ ಡೆಸ್ಕ್‌ಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ, ಮೂರರಲ್ಲಿ ಎರಡು ಕೆಟ್ಟು ಹೋಗಿವೆ. ಇನ್ನೊಂದು ಸಂಖ್ಯೆಗೆ ಕರೆ ಮಾಡಿದರೆ ‘ಕಾರ್ಯನಿರತವಾ ಗಿದೆ’ ಎಂಬ ಸಂದೇಶ ಕೇಳಿ ಬರುತ್ತದೆ. ಪರಿಸ್ಥಿತಿ ಈ ರೀತಿ ಇದ್ದರೆ,  ಹೆಸರು ನೋಂದಣಿ ಮಾಡಿಸಿಕೊಳ್ಳಲು ಯಾರು ಬರುತ್ತಾರೆ. ಸಾರ್ವಜನಿಕರಿಗೆ ಆಸಕ್ತಿ ಇದ್ದರೂ ಅಧಿಕಾರಿಗಳ ನಿರುತ್ಸಾಹದ ನಡೆಗೆ ಬೇಸತ್ತು ಹಿಂದಕ್ಕೆ ಹೋಗುವ ಸ್ಥಿತಿ ಇದೆ. ಮತದಾನ ಕಡಿಮೆ ಆದಾಗ, ಮತದಾರರನ್ನೇ ದೂರುತ್ತಾರೆ’ ಎಂದು ಅವರು ತಿಳಿಸಿದರು.

ಕೆಲವು ಕಂದಾಯ ಕಚೇರಿಗಳಲ್ಲಿ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸದೇ ಸ್ವೀಕರಿಸಲಾಗುತ್ತಿದೆ. ಈ ರೀತಿ ಮಾಡುವುದರಿಂದ ಮಾಹಿತಿ ವ್ಯತ್ಯಾಸವಾಗಿ ಪಟ್ಟಿಯಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ರಾಜೇಶ್‌ ಎಂಬುವರು ಹೇಳಿದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಳಹಂತದ ಅಧಿಕಾರಿಗಳು ಸಮಜಾಯಿಷಿ ನೀಡಿದರು. ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯೆಗೆ ಸಿಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.