ಶುಕ್ರವಾರ, ಆಗಸ್ಟ್ 14, 2020
21 °C

ಶಾಂತಿಗಾಗಿ ಹೋರಾಟ

ಫಾ. ಚೇತನ್ ಕಾಪುಚಿನ್ Updated:

ಅಕ್ಷರ ಗಾತ್ರ : | |

ಆಧುನಿಕ ಜಗತ್ತು ಕಂಡ ಯುದ್ಧಗಳಲ್ಲಿ ಕಳೆದ ಶತಮಾನದ ಎರಡು ಮಹಾಯುದ್ಧಗಳು ಉಲ್ಲೇಖನೀಯ. ಮೊದಲನೇ ಜಾಗತಿಕ ಯುದ್ಧದಲ್ಲಿ ಅಂದಾಜು 160  ಲಕ್ಷ ಜನರು ಮೃತಪಟ್ಟರು; ಎರಡನೇ ಮಹಾಯುದ್ಧದಲ್ಲಿ ಅಂದಾಜು 5–8 ಕೋಟಿ ಜನರು ಅಂದರೆ, ಆಗಿನ ಜಗತ್ತಿನ ಶೇಕಡ 3 ಜನಸಂಖ್ಯೆಯು ನಾಶವಾಗಿಹೋಯಿತು. ಈ ಯುದ್ಧಗಳನ್ನು ವಿಶ್ಲೇಷಿಸಿ ವಾರ್ ಫಾರ್ ಪೀಸ್ ಎಂಬ ಗ್ರಂಥವನ್ನು ರಚಿಸಿದ ಥಾಮಸ್ ಮುಲ್ಲಿಗನ್ ಎಂಬ ಲೇಖಕ, ಈ ಯುದ್ಧಗಳು ನಡೆದದ್ದು ಶಾಂತಿ ಸ್ಥಾಪನೆಗಾಗಿ, ಎಂದು ಬರೆದಿದ್ದಾನೆ.

ಶಾಂತಿಸ್ಥಾಪನೆಗಾಗಿ ಯುದ್ಧ ಎಂಬ ಪರಿಕಲ್ಪನೆ ಎಷ್ಟೊಂದು ವಿಚಿತ್ರವಾದುದು ಆದರೂ ಈ ಆಧುನಿಕ ನಾಗರಿಕ ಜಗತ್ತೂ ಇದನ್ನು ಮುಂದುವರಿಸಿಕೊಂಡು ಹೋಗುತ್ತಾ ಇದೆ. ವೈರಿಗಳನ್ನು ಹಾಗೂ ನಮ್ಮ ಚಿಂತನೆಗೆ ವ್ಯತಿರಿಕ್ತವಾಗಿ ಇರುವವರನ್ನು ನಿರ್ನಾಮ ಮಾಡಿ ಶಾಂತಿ ಸ್ಥಾಪನೆಯ ಪ್ರಯತ್ನಗಳು ನಡೆಯುತ್ತಿರುವುದು ಖೇದಕರ. ಕೈಯಲ್ಲಿ ತಲ್ವಾರ್, ಬಾಂಬ್, ಬಂದೂಕುಗಳನ್ನು ಹಿಡಿದು ಶಾಂತಿ ಸ್ಥಾಪನೆಗೆ ಪ್ರಯತ್ನಗಳನ್ನು ನಡೆಸುವುದು ನೀರಿನಲ್ಲಿ ಹೋಮ ಮಾಡಿದಂತೆ.ಕಳಿಂಗ ಯುದ್ಧದಲ್ಲಿ ಜಯಿಸಿದ ಚಕ್ರವರ್ತಿ ಅಶೋಕ, ಘಟಿಸಿದ ಸಾವು-ನೋವು ಗಳನ್ನು ಕಂಡು ಮನಮರುಗಿ ಮುಂದೆಂದೂ ಯುದ್ಧ ಮಾಡಲಾರೆ ಎಂದು ಶಸ್ತ್ರಸನ್ಯಾಸ ಮಾಡಿದ್ದು ಚರಿತ್ರೆಯ ಅತ್ಯಮೂಲ್ಯ ಅಧ್ಯಾಯಗಳಲ್ಲಿ ಒಂದು. ಶಸ್ತ್ರಸನ್ಯಾಸ ಮಾಡಿದ ಚಕ್ರವರ್ತಿ ಅಶೋಕ ಚರಿತ್ರೆಯಲ್ಲಿ ಧೈರ್ಯಶಾಲಿ ಎಂದು ಅಜರಾಮರ. ಹನ್ನೆರಡನೇ ಶತಮಾನದಲ್ಲಿ ಕ್ರೈಸ್ತರ ಪವಿತ್ರ ತಾಣಗಳಿರೋ ಪಾಲೆಸ್ತೀನ್ ಇನ್ನಿತರ ಸ್ಥಳಗಳನ್ನು ಮುಸ್ಲಿಮರ ಕೈಯಿಂದ ಸ್ವತಂತ್ರಗೊಳಿಸಿ ಆ ಸ್ಥಳಗಳಲ್ಲಿ ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ಸೈನ್ಯವನ್ನು ಸೇರಿ ಶಸ್ತ್ರಧಾರಿಯಾಗಿ ಯುದ್ಧಕ್ಕೆ ಸಾಗಿದ ಇಟಲಿಯ ಆಸ್ಸಿಸಿ ಪಟ್ಟಣದ ಫ್ರಾನ್ಸಿಸ್ ಎಂಬ ಯುವಕ ದಾರಿಯಲ್ಲಿ ತನಗಾದ ದೈವಾನುಭವದ ಪರಿಣಾಮವಾಗಿ ಅರ್ಧದಾರಿಯಿಂದ ಹಿಂತಿರುಗಬೇಕಾಯಿತು.ಶಾಲೋಮ್ - ಹೀಬ್ರೂ ಶಬ್ದದ ನಿಜವಾದ ಅರ್ಥ, ಶಾಂತಿ, ಸಮಾನತೆ, ನ್ಯಾಯ ಹಾಗೂ ವಿಮೋಚನೆ. ಇದು ಶಾಂತಿಯ ಸಮಗ್ರತೆಯಾಗಿದೆ. ಶಾಂತಿಗಾಗಿ ಹೋರಾಟ ನಡೆಯಬೇಕು. ಕತ್ತಿ, ಬಂದೂಕು, ಬಾಂಬ್‌ನಂತಹ ಶಸ್ತ್ರಗಳಿಂದ ಅಲ್ಲ, ಪ್ರೀತಿ, ಕರುಣೆ, ಸಂವಾದ, ಸಮಾನತೆ, ಸೋದರತ್ವ ಎಂಬ ಅಸ್ತ್ರಗಳ ಮೂಲಕ. ನೈಜ ಶಾಂತಿ ಸ್ಥಾಪನೆಯಾಗಬೇಕಾದರೆ ಅದರ ಆರಂಭ ಮಾನವ ಹೃದಯಗಳಲ್ಲಿ ಆಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.