ಗುರುವಾರ , ಜೂಲೈ 2, 2020
23 °C
ರಾಜ್ಯ ಸರ್ಕಾರ ಮತ್ತು ಪರಿಸರ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ

ಸಮುದ್ರ ಸಂರಕ್ಷಣೆಗೆ ಕಡಲತೀರ ಜಾಥಾ

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಸಮುದ್ರ ಸಂರಕ್ಷಣೆಗೆ ಕಡಲತೀರ ಜಾಥಾ

ಬೆಂಗಳೂರು: ಮಿತಿಮೀರಿದ ಮಾಲಿನ್ಯದಿಂದ ನಲುಗುತ್ತಿರುವ ಸಮುದ್ರದ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಮತ್ತು ಪರಿಸರ ಸಂಸ್ಥೆ ಜಂಟಿ ಸಹಯೋಗದಲ್ಲಿ ಕರಾವಳಿ ಪ್ರದೇಶದಲ್ಲಿ ಜನವರಿ ತಿಂಗಳ ಅಂತ್ಯದಲ್ಲಿ ‘ಕಡಲತೀರ ಜಾಥಾ’ ನಡೆಸಲು ‌ನಿರ್ಧರಿಸಿವೆ.

‘ಜನವರಿ 26ರಿಂದ ಫೆಬ್ರುವರಿ 2ರವರೆಗೆ ಜಾಥಾ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಾಥಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಸಂಪೂರ್ಣ ಬೆಂಬಲ ನೀಡಿದ್ದಾರೆ’ ಎಂದು ಪರಿಸರ ಸಂಸ್ಥೆ ಸದಸ್ಯ ಡಾ.ಬಿ.ಎಲ್‌.ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭೂಮಿ ಮೇಲೆ ಉತ್ಪತ್ತಿಯಾಗುವ ಇಂಗಾಲದ ಡೈಆಕ್ಸೈಡ್‌ನ ಬಹುಪಾಲನ್ನು ಸಮುದ್ರ ಹೀರಿಕೊಳ್ಳುತ್ತದೆ. ಮಾನ್ಸೂನ್‌ ನಿರ್ಧರಿಸುವಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಣು ತ್ಯಾಜ್ಯ, ಕೀಟನಾಶಕ, ಕಳೆನಾಶಕ, ಅವಧಿ ಮೀರಿದ ಔಷಧವನ್ನು ಸಾಗರಕ್ಕೆ ಸುರಿಯಲಾಗುತ್ತಿದೆ. ಭಾರಿ ಪ್ರಮಾಣದಲ್ಲಿ ತ್ಯಾಜ್ಯ, ವಿಷ ಪದಾರ್ಥಗಳು ಸೇರುತ್ತಿರುವುದರಿಂದ ಅಗಾಧ ಜಲರಾಶಿಗೆ ‘ಕ್ಯಾನ್ಸರ್‌’ ತಗುಲಿದೆ. ಆಳ ಮತ್ತು ದುರಾಸೆಯ ಮೀನುಗಾರಿಕೆಯಿಂದ ಕಡಲಿನ ಜೀವಜಾಲಕ್ಕೂ ಭಾರಿ ಪೆಟ್ಟುಬಿದ್ದಿದೆ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಪ್ರಸಾದ್‌.

ಬಹುತೇಕ ಎಲ್ಲ ನಗರಗಳ ಕೊಳಚೆ ನೀರು ಸಮುದ್ರಕ್ಕೆ ಸೇರುತ್ತಿವೆ. ಇಡೀ ಜಗತ್ತಿನ ಒಟ್ಟು ಬಳಕೆಯೆ ಆಹಾರದಲ್ಲಿ ಶೇ ಅರ್ಧದಷ್ಟು ಸುಸ್ಥಿರ ಆಹಾರ, ಶೇ 80ರಷ್ಟು ಔಷಧ ಹಾಗೂ ಬಹುಪಾಲು ಕಚ್ಚಾ ತೈಲ ನೀಡುತ್ತಿರುವ ಜಲರಾಶಿಯನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ 100 ವರ್ಷಗಳಲ್ಲಿ ಅದರ ಅಸ್ತಿತ್ವಕ್ಕೇ ಧಕ್ಕೆ ಉಂಟಾಗಲಿದೆ. ಇನ್ನಷ್ಟು ತಡಮಾಡದೆ ನಾವು ಇದನ್ನು ಕಾಪಾಡಬೇಕಿದೆ ಎನ್ನುತ್ತಾರೆ ಅವರು.

ಜಾಥಾ ಸ್ವರೂಪ: ಜಾಥಾದಲ್ಲಿ ಸ್ವಯಂ ಆಸಕ್ತಿಯಿಂದ ಜನ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಪ್ರಯಾಣ ವೆಚ್ಚವನ್ನೂ ಅವರೇ ಭರಿಸಲಿದ್ದಾರೆ. ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಮೇಲ್ವಿಚಾರಣೆಯಲ್ಲೇ ಸಮುದ್ರ ತೀರದಲ್ಲಿರುವ ಪ್ಲಾಸ್ಟಿಕ್‌ ತ್ಯಾಜ್ಯ ಹೆಕ್ಕಿ ತೆಗೆದು ನಿಯಮಬದ್ಧವಾಗಿ ವಿಲೇವಾರಿ ಮಾಡಲಾಗುತ್ತದೆ.

ಟೆಕಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ ಪರಿಸರಾಸಕ್ತರೆಲ್ಲರೂ ಭಾಗವಹಿಸಲಿದ್ದಾರೆ. ಕಾರವಾರದಿಂದ ಬೈಂದೂರುವರೆಗೆ ಮತ್ತು ಕಟಪಾಡಿಯಿಂದ ಬೈಂದೂರಿನವರೆಗೆ ಜಾಥಾ ಸಂಘಟಿಸಲು ಸಿದ್ಧತೆ ನಡೆಯುತ್ತಿದೆ. ಅಂದಾಜು 300 ಕಿ.ಮೀ. ಸಮುದ್ರ ತೀರದಲ್ಲಿ ತ್ಯಾಜ್ಯ ಹೆಕ್ಕಿ ತೆಗೆಯಲಾಗುತ್ತದೆ. ಈ ಜಾಥಾದಲ್ಲಿ ಕನಿಷ್ಠ 1,000 ಸ್ವಯಂಸೇವಕರು ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ.

ಸಾಗರಗಳ ಸ್ಥಿತಿಗತಿ ಕುರಿತು ಅಪರೂಪದ ಸಾಕ್ಷ್ಯ ಚಿತ್ರಗಳ ಪ್ರದರ್ಶನ, ಮೀನುಗಾರರೊಂದಿಗೆ ಸಂವಾದ ನಡೆಯಲಿದೆ. ಜನರಿಂದ ಸಮುದ್ರ ಸಂರಕ್ಷಣೆಗೆ ಸಂಕಲ್ಪ ಮಾಡಿಸಲಾಗುತ್ತದೆ. ಸಂಪರ್ಕ: 9448077019

2030ಕ್ಕೆ 30 ಲಕ್ಷ ಟನ್‌ ಇ–ತ್ಯಾಜ್ಯ

ಪ್ರತಿ ವರ್ಷ ಸುಮಾರು 6 ಲಕ್ಷದಿಂದ 7 ಲಕ್ಷ ಟನ್‌ಗಳಷ್ಟು ತ್ಯಾಜ್ಯ ಸಮುದ್ರ ಸೇರುತ್ತಿರುವುದು 2013ರ ಸಮೀಕ್ಷೆಯಲ್ಲಿ ಕಂಡುಬಂದಿತ್ತು. ಈ ಪ್ರಮಾಣ ಈಗ 12 ಲಕ್ಷ ಟನ್‌ಗೆ ಏರಿಕೆಯಾಗಿದೆ. 2030ರ ವೇಳೆಗೆ ಇದು 30 ಲಕ್ಷ ಟನ್‌ ಆಗಲಿದೆ. ದೇಶವು ವಾರ್ಷಿಕ ಆಹಾರಕ್ಕೆ ಬಳಕೆ ಮಾಡುತ್ತಿರುವ ಒಟ್ಟು ಅಕ್ಕಿಯ ಪ್ರಮಾಣಕ್ಕಿಂತಲೂ ಇ–ತ್ಯಾಜ್ಯದ ಪ್ರಮಾಣ ಹೆಚ್ಚು ಇರಲಿದೆ. ಇದರಿಂದ ಉಂಟಾಗುವ ಸಮುದ್ರ ಮಾಲಿನ್ಯ ಹಲವು ದುರಂತಗಳಿಗೆ ಎಡೆ ಮಾಡಿಕೊಡಲಿದೆ ಎನ್ನುತ್ತಾರೆ ಪರಿಸರ ತಜ್ಞ ಡಾ.ಅ.ನ.

ಯಲ್ಲಪ್ಪರೆಡ್ಡಿ.

‘ಅನೇಕರು ಸಮುದ್ರವನ್ನೇ ನೋಡಿಲ್ಲ!’

ರಾಜ್ಯದ ಜನಸಂಖ್ಯೆಯಲ್ಲಿ ಶೇ 85ರಷ್ಟು ಜನರು ಸಮುದ್ರವನ್ನೇ ನೋಡಿಲ್ಲ. ನೋಡಿರುವವರಲ್ಲಿ ಶೇ 1ಕ್ಕಿಂತ ಹೆಚ್ಚು ಜನರಿಗೆ ಜೀವಸಂಕುಲದ ಉಗಮದ ಕೇಂದ್ರಬಿಂದು ಸಮುದ್ರದ ಬಗ್ಗೆ ತಿಳಿವಳಿಕೆ ಇಲ್ಲ ಎನ್ನುವುದು ಪರಿಸರ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಕಂಡುಬಂದಿದೆ ಎನ್ನುತ್ತಾರೆ ಈಶ್ವರ್‌ ಪ್ರಸಾದ್‌.

ವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು ಹಾಗೂ ಪೋಷಕರನ್ನು ಕೇಂದ್ರವಾಗಿಟ್ಟುಕೊಂಡು ಪ್ರಶ್ನಾವಳಿಗಳ ಮೂಲಕ ಸಮೀಕ್ಷೆ ನಡೆಸಲಾಗಿತ್ತು. ಸಮುದ್ರ ನೋಡಿದವರಿಗಿಂತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದವರ ಸಂಖ್ಯೆಯೇ ಹೆಚ್ಚು ಇರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಅವರು ತಿಳಿಸಿದರು.

***

ಹೆಚ್ಚುತ್ತಿರುವ ಎಲ್ಲ ಬಗೆಯ ಮಾಲಿನ್ಯಗಳಿಂದ ಭೂಮಿಯಷ್ಟೇ ಅಲ್ಲ, ಸಮುದ್ರವೂ ನರಳುತ್ತಿದೆ

–ಡಾ.ಅ.ನ.ಯಲ್ಲಪ್ಪರೆಡ್ಡಿ, ಪರಿಸರ ತಜ್ಞ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.