ಶನಿವಾರ, ಜೂಲೈ 4, 2020
21 °C

22ರಿಂದ ಹುಲಿ ಗಣತಿ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

22ರಿಂದ ಹುಲಿ ಗಣತಿ ಕಾರ್ಯ

ಆನೇಕಲ್‌: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಜ.22ರಿಂದ ನಡೆಯಲಿರುವ ಹುಲಿ ಗಣತಿ ಹಿನ್ನೆಲೆಯಲ್ಲಿ ಗಣತಿದಾರರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಜಂಗಲ್‌ ಲಾಡ್ಜ್‌ನಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್ ಮೀನಾ ಉದ್ಘಾಟಿಸಿದರು. ಹುಲಿ ಗಣತಿಯನ್ನು ಪಾರದರ್ಶಕವಾಗಿ ಹಾಗೂ ನಿಖರವಾಗಿ ಮಾಡುವ ಸಲುವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. ಗಣತಿಯ ಮೊದಲ ದಿನ ಹೆಜ್ಜೆ ಗುರುತು, ವೀಕ್ಷಣೆ, ಗಡಿ ಗುರುತಿಸುವಿಕೆ ಮತ್ತಿತರ ಮಾಹಿತಿಗಳನ್ನು ಕಾರ್ಯಾಗಾರದಲ್ಲಿ ತಿಳಿಸಲಾಯಿತು. ಬನ್ನೇರುಘಟ್ಟ ಮತ್ತು ರಾಮನಗರ ವಿಭಾಗದ 100 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ 10 ಸ್ವಯಂಸೇವಕರು ಪಾಲ್ಗೊಂಡಿದ್ದರು.

ಉಪಅರಣ್ಯ ಸಂರಕ್ಷಣಾಧಿಕಾರಿ ಜಾವೇದ್‌ ಮಮ್ತಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಸುರೇಶ್, ರಾಮಕೃಷ್ಣ ಹಾಜರಿದ್ದರು.

5 ಹುಲಿ ಯೋಜನೆಗಳಲ್ಲೂ ಕಾರ್ಯಾಗಾರ

ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಭದ್ರಾ, ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಅಭಯಾರಣ್ಯ, ದಾಂಡೇಲಿ ಕಾಳಿ ವನ್ಯಜೀವಿ ಅಭಯಾರಣ್ಯಗಳಲ್ಲೂ ಹುಲಿ ಗಣತಿ ತರಬೇತಿ ಕಾರ್ಯಾಗಾರ ನಡೆಯಿತು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನ, ಪುಷ್ಪಗಿರಿ, ಬ್ರಹ್ಮಗಿರಿ ಹಾಗೂ ತಲಕಾವೇರಿ ವನ್ಯಧಾಮಗಳಲ್ಲೂ ಕಾರ್ಯಾಗಾರ ನಡೆದಿದೆ. 418 ಗಸ್ತು ಪ್ರದೇಶ ಒಳಗೊಂಡಂತೆ 251 ಸ್ವಯಂ ಸೇವಕರು ಹಾಗೂ 1,003 ಸಿಬ್ಬಂದಿಗೆ ತರಬೇತಿ ನೀಡಲಾಯಿತು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.