ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ನಲ್ಲಿ ಬೆಂದು ಹೋದ ಕೃಷಿಕರ ಕರುಳ ಕುಡಿಗಳು!

ಬದುಕು ಕಟ್ಟಿಕೊಳ್ಳಲು ರಾಜಧಾನಿಗೆ ಬಂದವರು l ಮುಗಿಲು ಮುಟ್ಟಿದ ಕುಟುಂಬ ಸದಸ್ಯರ ಆಕ್ರಂದನ
Last Updated 8 ಜನವರಿ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ–ಬೆಳೆ ಕೈಕೊಟ್ಟಿದ್ದರಿಂದ ದುಡಿಮೆ ಅರಸಿ ರಾಜಧಾನಿಗೆ ಬಂದ ರೈತರ ಈ ಮಕ್ಕಳು, ಕೆಲಸ ಮಾಡುತ್ತಿದ್ದ ಬಾರ್‌ನಲ್ಲೇ ಬೆಂದು ಹೋಗಿದ್ದಾರೆ. ಇಳಿ ವಯಸ್ಸಿನಲ್ಲಿರುವ ತಮಗೆ ಮಕ್ಕಳ ಆಸರೆ ಸಿಗುತ್ತದೆ ಎಂಬ ವಿಶ್ವಾಸದಲ್ಲೇ ಬದುಕು ದೂಡುತ್ತಿದ್ದ ಪೋಷಕರು ಈಗ ದಿಗ್ಭ್ರಾಂತರಾಗಿದ್ದಾರೆ.

ಅಗ್ನಿ ದುರಂತದಲ್ಲಿ ಮೃತಪಟ್ಟ ಐದು ಮಂದಿಯೂ ಕೃಷಿಕರ ಮಕ್ಕಳು. ಮಗಳ ಮದುವೆ ಮಾಡಬೇಕು, ಊರಿನಲ್ಲಿ ಮನೆ ಕಟ್ಟಿಸಬೇಕು, ಜಮೀನು ಖರೀದಿಸಬೇಕು ಹೀಗೆ ಒಬ್ಬೊಬ್ಬರು ಒಂದೊಂದು ಕನಸು ಕಟ್ಟಿಕೊಂಡು ರಾಜಧಾನಿಗೆ ಬಂದವರು. ಯಾರದೋ ನಿರ್ಲಕ್ಷ್ಯಕ್ಕೆ ಅವರ ಕನಸುಗಳೂ ದೇಹದ ಜತೆಗೇ ಭಸ್ಮವಾಗಿವೆ.

ಭಾನುವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆಗಾಗಿ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ತರಲಾಗಿತ್ತು. ಅಲ್ಲಿ ಜಮಾಯಿಸಿದ್ದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ‘ಪ್ರಜಾವಾಣಿ’ ಜತೆ ಮಾತನಾಡಿದ ಮೃತರ ಸಂಬಂಧಿಗಳು, ತಮ್ಮ ಅಳಲು ತೋಡಿಕೊಂಡರು.

ಹುಟ್ಟು ಹಬ್ಬವಿತ್ತು: ಹಾಸನದ ಮಹೇಶ್ ಆರು ವರ್ಷಗಳಿಂದ ಕಲಾಸಿಪಾಳ್ಯದ ‘ಹಂಸ’ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದೇ 16ರಂದು ಅವರ ತಮ್ಮನ ಮಗಳ ಮೊದಲ ವರ್ಷದ ಹುಟ್ಟುಹಬ್ಬವಿತ್ತು. ಮೂರು ದಿನಗಳ ಹಿಂದಷ್ಟೇ ಊರಿಗೆ ಹೋಗಿದ್ದ ಅವರು, ‘ಹುಟ್ಟುಹಬ್ಬ ಸಮಾರಂಭಕ್ಕೆ ಬಾರ್ ಮಾಲೀಕರ ಹತ್ತಿರ ಹಣ ಪಡೆದುಕೊಂಡು ಮುಂದಿನ ವಾರ ಬರುತ್ತೇನೆ’ ಎಂದು ಮನೆಯಲ್ಲಿ ಹೇಳಿ, ಶನಿವಾರ ಸಂಜೆ ನಗರಕ್ಕೆ ವಾಪಸಾಗಿದ್ದರು.

‘ಹಂಸ ಬಾರ್‌ನಲ್ಲಿ ಹೆಚ್ಚು ನೌಕರರು ಇದ್ದುದರಿಂದ, ಅದರ ಮಾಲೀಕರು ಅಣ್ಣನನ್ನು ‘ಕೈಲಾಶ್’ ಬಾರ್‌ಗೆ ಕೆಲಸಕ್ಕೆ ಕಳುಹಿಸಿದ್ದರು. ಮಾಲೀಕರ ಸೂಚನೆಯಂತೆ ಆತ ಭಾನುವಾರವಷ್ಟೆ ಈ ಬಾರ್‌ಗೆ ಕೆಲಸಕ್ಕೆ ಬಂದಿದ್ದ. ರಾತ್ರಿ 9.30ರ ಸುಮಾರಿಗೆ ಕರೆ ಮಾಡಿದ್ದ ಅಣ್ಣ, ‘ಪಾಪು ಹುಟ್ಟುಹಬ್ಬ ಆಚರಿಸಲು ಮಾಲೀಕರು ಹಣ ಕೊಟ್ಟಿದ್ದಾರೆ. ಜ.14ರಂದು ಊರಿಗೆ ಬರುತ್ತೇನೆ’ ಎಂದು ಹೇಳಿದ್ದ. ಆದರೆ, ರಾತ್ರಿ ದುರಂತ ಸಂಭವಿಸಿತು’ ಎಂದು ಮಹೇಶ್ ತಮ್ಮ ಗಣೇಶ್ ದುಃಖತಪ್ತರಾದರು.

‘ಮಹೇಶ್‌ನ ತಂದೆ ಮಹಾಲಿಂಗೇಗೌಡ 10 ವರ್ಷ ಹಿಂದೆಯೇ ನಿಧನರಾಗಿದ್ದಾರೆ. ಮದುವೆಯಾದ ಆರಂಭದಲ್ಲೇ ಪತ್ನಿ ಸಹ ಆತನನ್ನು ತೊರೆದಳು. ಪೋಷಕರ ಜತೆ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಮಹೇಶ್, ಬ್ಯಾಂಕ್‌ನಲ್ಲಿ ಮಾಡಿದ್ದ ಸಾಲ ತೀರಿಸುವ ಉದ್ದೇಶದಿಂದ ನಗರಕ್ಕೆ ಬಂದು ಕೆಲಸ ಮಾಡುತ್ತಿದ್ದ’ ಎಂದು ಬಾಲ್ಯಸ್ನೇಹಿತ ಪ್ರದೀಪ್ ಹೇಳಿದರು.

ಟಿ.ವಿ. ನೋಡಿ ಓಡಿ ಬಂದೆ: ‘ನಾನು ಹಾಗೂ ತಮ್ಮ ಆರು ತಿಂಗಳಿನಿಂದ ಬಳೆಪೇಟೆಯ ‘ಉಡುಪಿ ಕೃಷ್ಣಭವನ’ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆವು. ₹ 500 ಹೆಚ್ಚು ಸಂಬಳ ಸಿಗುತ್ತದೆ ಎಂಬ ಕಾರಣಕ್ಕೆ ತಿಂಗಳ ಹಿಂದಷ್ಟೇ ಆ ಬಾರ್‌ಗೆ ಹೋಗಿದ್ದ’ ಎಂದು ಮೃತ ಕೀರ್ತಿಯ ಅಣ್ಣ ಕಿರಣ್ ಹೇಳಿದರು.

‘ನಮ್ಮದು ಮಂಡ್ಯದ ಶಿವಳ್ಳಿ ಗ್ರಾಮ. ತಮ್ಮ ಹುಟ್ಟಿದ ಆರೇ ತಿಂಗಳಲ್ಲಿ ತಂದೆ ತೀರಿಕೊಂಡರು. ನಂತರ ನಮ್ಮನ್ನು ಸೋದರ ಮಾವ ಕುಮಾರ್ ಅವರೇ 9ನೇ ತರಗತಿವರೆಗೆ ಓದಿಸಿದರು. ತಾಯಿ ಅರ್ಧ ಎಕರೆ ಜಮೀನು ನೋಡಿಕೊಂಡು ಗ್ರಾಮದಲ್ಲೇ ಇದ್ದಾರೆ. ಮಾವನ ಕುಟುಂಬವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ನಾನು ಹಾಗೂ ತಮ್ಮ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದೆವು.’

‘ಎಂದಿನಂತೆ ಭಾನುವಾರ ಬೆಳಿಗ್ಗೆ 5.30ಕ್ಕೆ ಎದ್ದು ಟಿ.ವಿ ಚಾಲೂ ಮಾಡಿದೆ. ವಾಹಿನಿಯೊಂದರಲ್ಲಿ ‘ಕೈಲಾಶ್’ ಬಾರ್ ಬೆಂಕಿಗೆ ಆಹುತಿಯಾಗಿರುವ ಹಾಗೂ ಕೀರ್ತಿ ಮೃತಪಟ್ಟಿರುವ ಸುದ್ದಿ ಪ್ರಸಾರವಾಗುತ್ತಿತ್ತು. ಯಾರಿಗಾದರೂ ಕೇಳಿ ಖಚಿತಪಡಿಸಿಕೊಳ್ಳೋಣ ಎಂದರೆ ನನ್ನ ಬಳಿ ಫೋನ್ ಸಹ ಇಲ್ಲ. ಕೊನೆಗೆ, ದಾರಿಹೋಕರಿಂದ ಮೊಬೈಲ್ ಪಡೆದು ಸೋದರ ಮಾವನಿಗೆ ಕರೆ ಮಾಡಿ ವಿಷಯ ತಿಳಿಸಿದೆ. ನಂತರ ಬಾರ್‌ನತ್ತ ತೆರಳಿದೆ’

‘ಬಾರ್ ಒಳಗೆ ಹೋಗಲು ಮುಂದಾದ ನನ್ನನ್ನು ಪೊಲೀಸರು ತಡೆದರು. ಸರ್ ನನ್ನ ತಮ್ಮ ಕೀರ್ತಿ ಒಳಗಿದ್ದಾನೆ. ಅವನು ಬದುಕಿದ್ದಾನೋ, ಇಲ್ಲವೋ ಎಂಬುದನ್ನಾದರೂ ಹೇಳಿ ಎಂದು ಅಂಗಲಾಚಿದೆ. ‘ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸು’ ಎಂದರು. ಅಂತೆಯೇ ಠಾಣೆಗೆ ಹೋಗಿ 9 ಗಂಟೆವರೆಗೆ ಕಾದೆ. ಆಗ ಪೊಲೀಸರೊಬ್ಬರು ‘ನಿನ್ನ ತಮ್ಮನ ಶವ ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ’ ಎಂದರು. ಅಲ್ಲಿಂದ ಆಸ್ಪತ್ರೆಗೆ ತೆರಳಿದೆ. ಮರಣೋತ್ತರ ಪರೀಕ್ಷೆ ಮಾಡಿ ಸಂಜೆ 4 ಗಂಟೆಗೆ ತಮ್ಮನ ದೇಹವನ್ನು ಕೊಟ್ಟರು’ ಎನ್ನುತ್ತಾ ಕಿರಣ್ ಕಣ್ಣೀರು ಸುರಿಸಿದರು.

ಮಗಳ ಮದುವೆಯೇ ದೊಡ್ಡ ಆಸೆ: ‘ಮಗಳನ್ನು ಒಳ್ಳೆ ಮನೆತನಕ್ಕೆ ಕೊಟ್ಟು ಮದುವೆ ಮಾಡುವುದೊಂದೇ ಮಂಜುನಾಥ್‌ನ ಆಸೆಯಾಗಿತ್ತು. 25 ವರ್ಷಗಳಿಂದ ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ಮಾರಿಕೊಂಡಿದ್ದ ಆತ, ಎರಡು ತಿಂಗಳ ಹಿಂದೆ ಬಾರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ’ ಎಂದು ಮಂಜುನಾಥ್‌ನ ಅಣ್ಣ ಎಚ್‌.ಎಸ್.ದೇವರಾಜ್ ಹೇಳಿದರು.

‘ಹಾಸನದ ಹೊನ್ನಶೆಟ್ಟಿಹಳ್ಳಿಲ್ಲಿ ತಮ್ಮನ ಹೆಸರಿನಲ್ಲಿ ಅರ್ಧ ಎಕರೆ ಜಮೀನು, 10 ಗುಂಟೆ ತೋಟ ಇದೆ. ತಮ್ಮನ ಪತ್ನಿ ಲೀಲಾವತಿ, ಕೂಲಿಗಳನ್ನು ಇಟ್ಟುಕೊಂಡು ಕೃಷಿ ಮಾಡುತ್ತಾರೆ. ಮಗಳು ವಿದ್ಯಾ ಪಿಯು ಓದುತ್ತಿದ್ದು, ಮಗ ಧನುಷ್ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾನೆ. ಮಗಳಿಗೆ ಮದುವೆ ಮಾಡುವ ಬಗ್ಗೆ ಯಾವಾಗಲೂ ನನ್ನ ಜೊತೆ ಚರ್ಚಿಸುತ್ತಿದ್ದ. ಬೆಳಗಿನ ಜಾವ ಟಿ.ವಿ ನೋಡಿದಾಗ ಆಘಾತವಾಯಿತು’ ಎಂದು ಹೇಳುವಾಗ ಅವರ ಕಣ್ಣಾಲಿಗಳು ತುಂಬಿದ್ದವು.

ಸಂಜೆಯಷ್ಟೇ ಮಾತಾಡ್ಸಿದ್ದ ಕಣಪ್ಪಾ: ‘ಮಗ ದಿನಕ್ಕೆ ಮೂರ್ನಾಲ್ಕು ಸಲ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ. ಭಾನುವಾರ ಸಂಜೆ 6.30ಕ್ಕೆ ಕರೆ ಮಾಡಿ, ‘ಅಮ್ಮ ಊಟ ಮಾಡು. ಕೆಲಸ ಮುಗಿಸಿ ರಾತ್ರಿ ಫೋನ್ ಮಾಡ್ತೀನಿ’ ಅಂದಿದ್ದ. ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಬರುವುದಾಗಿ ಹೇಳಿದ್ದ. ಈಗ ಯಾವ ಮಗನ ಬರುವಿಕೆಗಾಗಿ ಕಾಯಲಿ’ ಎಂದು ರಂಗಸ್ವಾಮಿ ತಾಯಿ ತಿಮ್ಮಕ್ಕ ರೋದಿಸಿದರು.

‘ಮಕ್ಕಳು ಚಿಕ್ಕವರಿರುವಾಗಲೇ ಗಂಡ ಕರಿಯಣ್ಣ ನಿಧನರಾದರು. ಕೂಲಿ–ನಾಲಿ ಮಾಡಿ ಮಕ್ಕಳನ್ನು ಸಾಕಿದ್ದೆ. ಇಳಿ ವಯಸ್ಸಿನಲ್ಲಿ ನನ್ನನ್ನು ನೋಡಿಕೊಳ್ಳುತ್ತಾನೆಂಬ ಭರವಸೆ ಇತ್ತು. ಆದರೆ, ಮಗ ನನ್ನನ್ನು ಒಂಟಿ ಮಾಡಿಬಿಟ್ಟ. ‘ಅಮ್ಮ ನಮ್ಮ ಜಮೀನಿನ ಪಕ್ಕದಲ್ಲಿರುವ ರಂಗೇಗೌಡರ ಜಮೀನನ್ನೂ ಇನ್ನು ಎರಡು ವರ್ಷಗಳಲ್ಲಿ ಖರೀದಿಸುತ್ತೇನೆ’ ಎನ್ನುತ್ತಿದ್ದ. ಅವನ ಛಲ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಆತನಿದ್ದಾನೆ ಎಂಬ ಧೈರ್ಯದಲ್ಲೇ ಎಷ್ಟೋ ಅಪಮಾನಗಳನ್ನು ಸಹಿಸಿಕೊಂಡು ಹೋಗುತ್ತಿದ್ದೆ’ ಎಂದು ಅವರು ಹೇಳುವಾಗ ಅಲ್ಲಿದ್ದ ಸಂಬಂಧಿಕರ ಕಣ್ಣುಗಳೂ ತೇವಗೊಂಡವು.

ಬಡತನದಿಂದ ಬಂದವನು: ‘ಗುಬ್ಬಿ ತಾಲ್ಲೂಕು ಚೆನ್ನೈನಪಾಳ್ಯದ ಪ್ರಸಾದ್, ನನ್ನ ತಂಗಿ‌ ಮಗ. ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಆತನನ್ನು 2015ರಲ್ಲಿ ನಾನೇ ಬಾರ್‌ಗೆ ಕರೆದುಕೊಂಡು ಬಂದೆ. ನಾನಿಲ್ಲದಿದ್ದರೂ ಕೆಲಸ ನಿಭಾಯಿಸಿಕೊಂಡು ಹೋಗುವಷ್ಟು ವ್ಯವಹಾರ ಜ್ಞಾನ ಆತನಲ್ಲಿ ಬೆಳೆದಿತ್ತು. ಗ್ರಾಮದಲ್ಲಿ ಊರು ಕಟ್ಟುವ ಕನಸು ಕಂಡವನು ಅವನು. ಈಗ ಆತನ ತಾಯಿಗೆ ಏನೆಂದು ಉತ್ತರ ಹೇಳಲಿ ತಿಳಿಯುತ್ತಿಲ್ಲ’ ಎಂದು ಬಾರ್ ಕ್ಯಾಷಿಯರ್ ಕೆ.ಟಿ.ರಾಮಚಂದ್ರ ಬೇಸರದಿಂದ ನುಡಿದರು.

***

ರಾಜಕೀಯ ಪ್ರವೇಶ, ಸಂಬಂಧಿಗಳ ಆಕ್ರೋಶ

ಮೃತರ ಕುಟುಂಬಗಳಿಗೆ ಬಾರ್ ಮಾಲೀಕ ದಯಾಶಂಕರ್ ತಲಾ ₹ 1.5 ಲಕ್ಷ ಪರಿಹಾರ ನೀಡಿದರು. ಮದ್ಯ ಮಾರಾಟಗಾರರ ಸಂಘದ ನಗರ ಘಟಕದ ಅಧ್ಯಕ್ಷ ಹೊನ್ನಗಿರಿಗೌಡ ಅವರ ಮಧ್ಯಸ್ಥಿಕೆಯಲ್ಲಿ ಬಾರ್ ಮಾಲೀಕರು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

‘ಸತ್ತವರ ಕುಟುಂಬ ಸದಸ್ಯರ ಜತೆಗೂ ಚರ್ಚಿಸ‌ದೆ, ನಿಮ್ಮಷ್ಟಕ್ಕೆ ನೀವೇ ಬಾರ್ ಮಾಲೀಕರ ಬಳಿ ಹೋಗಿ ಪರಿಹಾರದ ಬಗ್ಗೆ ಮಾತನಾಡಿಕೊಂಡು ಬಂದರೆ ಯಾರು ಒಪ್ಪುತ್ತಾರೆ. ಸಮಸ್ಯೆಗಳಿಗೆ ಪರಿಹಾರ ಹುಡುಕಿ ಎಂದರೆ, ಸತ್ತ ಮೇಲೆ ಪರಿಹಾರ ನೀಡಿ ಪ್ರಕರಣ ಮುಚ್ಚಿ ಹಾಕಲು ಬರುತ್ತಾರೆ’ ಎಂದು ಮೃತರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ಬಾರ್ ಮಾಲೀಕರ ವಿರುದ್ಧ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೆವು. ಆದರೆ, ಕೆಲ ರಾಜಕಾರಣಿಗಳ ಆಪ್ತ ಸಹಾಯಕರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಲ್ಲಿ ನ್ಯಾಯಕ್ಕೆ ಬೆಲೆ ಇಲ್ಲವೆಂಬುದು ಅರಿವಾಯಿತು’ ಎಂದು ಹಾಸನದ ನರಸಿಂಹ ಬೇಸರ ವ್ಯಕ್ತಪಡಿಸಿದರು.

‘ಅಂತ್ಯಕ್ರಿಯೆ ಪೂರ್ಣಗೊಳಿಸುವ ಉದ್ದೇಶದಿಂದ ಸದ್ಯಕ್ಕೆ ಇಷ್ಟು ಹಣ ಕೊಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಬಾರ್ ಮಾಲೀಕರ ಜತೆ ಚರ್ಚಿಸಿ ಹೆಚ್ಚಿನ ಪರಿಹಾರ ಕೊಡಿಸುತ್ತೇನೆ’ ಎಂದು ಹೊನ್ನಗಿರಿಗೌಡ ಹೇಳಿದರು.

***

ಮಾವ ಬೆಂಕಿ ಎಂದ..ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ

‘ನಾನು ಹತ್ತು ವರ್ಷಗಳಿಂದ ಈ ಬಾರ್‌ನಲ್ಲಿ ಕ್ಯಾಷಿಯರ್ ಆಗಿದ್ದೇನೆ. ಪ್ರಸಾದ್ ನನ್ನ ತಂಗಿಯ ಮಗ. ಆತ ಮೂರು ವರ್ಷಗಳಿಂದ, ರಂಗಸ್ವಾಮಿ ಮೂರು ವರ್ಷಗಳಿಂದ, ಮಂಜುನಾಥ್ ಹಾಗೂ ಕೀರ್ತಿ 2 ತಿಂಗಳಿನಿಂದ ಬಾರ್‌ನಲ್ಲಿ ಕೆಲಸಕ್ಕಿದ್ದರು. ಮಹೇಶ್, ಭಾನುವಾರವಷ್ಟೇ ನಮ್ಮ ಬಾರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ’ ಎಂದು ಬಾರ್ ಕ್ಯಾಷಿಯರ್ ರಾಮಚಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬಾರ್‌ ಮುಂಭಾಗದಲ್ಲೇ ನಾಗಪ್ಪ ಎಂಬುವವರು ಸೌತೆಕಾಯಿ ಮಂಡಿಯಲ್ಲಿ ಕೆಲಸ ಮಾಡುತ್ತಾರೆ. ನಸುಕಿನ ವೇಳೆ 2.50ಕ್ಕೆ ಕರೆ ಮಾಡಿದ ಅವರು, ಬಾರ್‌ ಒಳಗಿನಿಂದ ದಟ್ಟ ಹೊಗೆ ಬರುತ್ತಿರುವುದಾಗಿ ಹೇಳಿದರು. ಕೂಡಲೇ ಅಳಿಯ ಪ್ರಸಾದ್‌ಗೆ ಕರೆ ಮಾಡಿದೆ. ಆತ, ‘ಮಾವ... ಬಾರ್‌ಗೆ ಬೆಂಕಿ ಹೊತ್ತಿಕೊಂಡಿದೆ. ನಾವು ನಾಲ್ಕು ಜನ ಶೌಚಾಲಯದೊಳಗೆ ಕುಳಿತಿದ್ದೇವೆ. ಮಹೇಶ ಅಲ್ಲೇ ಬಿದ್ದಿದ್ದಾನೆ. ಆತನಿಗೆ ಏನಾಯಿತೋ ಗೊತ್ತಿಲ್ಲ. ಬೇಗ ಬನ್ನಿ ಮಾವ’ ಎಂದು ಅಳುತ್ತಿದ್ದ. ನಾನು ಆತನಿಗೆ ಧೈರ್ಯ ಹೇಳಿ ಕೂಡಲೇ ಸ್ಥಳೀಯ ಪೊಲೀಸರಿಗೆ ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿ ಬಾರ್‌ನತ್ತ ಹೊರಟೆ.’

‘ಮಾರ್ಗಮಧ್ಯೆ 3.05ಕ್ಕೆ ಪುನಃ ಪ್ರಸಾದ್‌ಗೆ ಕರೆ ಮಾಡಿದೆ. ಮೊಬೈಲ್ ರಿಂಗ್ ಆಗುತ್ತಿತ್ತಾದರೂ, ಕರೆ ಸ್ವೀಕರಿಸಲಿಲ್ಲ. ಏನೋ ದೊಡ್ಡ ಅನಾಹುತವೇ ಆಗಿದೆ ಎಂಬುದು ನನಗೆ ಅರಿವಾಯಿತು. 3.15ಕ್ಕೆ ಬಾರ್ ಬಳಿ ತೆರಳಿದೆ. ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಷಟರ್ ಮೀಟಿ ಒಳಗೆ ನುಗ್ಗಿದರು. ಅಷ್ಟರಲ್ಲಿ ಎಲ್ಲರೂ ಅಸುನೀಗಿದ್ದರು. ಮಹೇಶ್‌ನ ದೇಹ ಪೂರ್ತಿ ಬೆಂದು ಹೋಗಿದ್ದರೆ, ಉಳಿದ ನಾಲ್ವರ ಶವಗಳು ಅರೆಬೆಂದ ಸ್ಥಿತಿಯಲ್ಲಿ ಶೌಚಾಲಯದಲ್ಲಿ ಬಿದ್ದಿದ್ದವು.’

‘ಬಾರ್‌ನ ಒಂದು ಕೀಯನ್ನು ನಾನು ಇಟ್ಟುಕೊಂಡಿದ್ದು, ಇನ್ನೊಂದು ಕೀಯನ್ನು ನೌಕರರಿಗೇ ಕೊಟ್ಟಿದ್ದೆ. ಬಹುಶಃ ಬೆಂಕಿಯ ಕೆನ್ನಾಲಗೆ ಇಡೀ ಅಂಗಡಿಗೇ ಚಾಚಿಕೊಂಡಿದ್ದರಿಂದ ಅವರಿಗೆ ಬೀಗ ತೆಗೆದುಕೊಂಡು ಹೊರಗೆ ಬರಲು ಸಾಧ್ಯವಾಗಿಲ್ಲ ಎನಿಸುತ್ತದೆ.’

ತಿಗಣೆ ಕಾಟವಿತ್ತು:  ‘ನೌಕರರಿಗೆ ಕಟ್ಟಡದ ಮೊದಲ ಮಹಡಿಯಲ್ಲಿ ಕೋಣೆ ನೀಡಲಾಗಿತ್ತು. ಆದರೆ, ಅಲ್ಲಿ ತಿಗಣೆ ಕಾಟ ಎಂದು ಎಲ್ಲರೂ ಬಾರ್‌ನಲ್ಲೇ ಮಲಗುತ್ತಿದ್ದರು. ಬೆಳಿಗ್ಗೆ ಅವರೇ ಷಟರ್ ತೆರೆದು ವಹಿವಾಟು ಪ್ರಾರಂಭಿಸುತ್ತಿದ್ದರು’ ಎಂದು ರಾಮಚಂದ್ರ ವಿವರಿಸಿದರು.

***

24 ಗಂಟೆ ಮದ್ಯ ಮಾರಾಟ l ಪರವಾನಗಿ ಕೊಟ್ಟಿದ್ದು ತಪ್ಪು– ಅಗ್ನಿಶಾಮಕ ದಳದ ಅಧಿಕಾರಿ

ಬಾರ್‌ ಅಕ್ರಮಕ್ಕೆ ‘ಕಿಂಡಿ’ಯೇ ಕನ್ನಡಿ!

ಬೆಂಗಳೂರು:‌ ಅದು ಕಾಗದಪತ್ರದಲ್ಲಿ ಮಾತ್ರ ನಿಯಮಬದ್ಧವಾಗಿದ್ದ ಬಾರ್. ಆದರೆ, ಅಲ್ಲಿ ನಡೆಯುತ್ತಿದ್ದ ವಹಿವಾಟು ಕಾನೂನುಬಾಹಿರ. ಅಕ್ರಮವಾಗಿ ಮದ್ಯ ಮಾರಲೆಂದೇ ರೋಲಿಂಗ್‌ ಷಟರ್‌ಗೆ ಕೊರೆದಿದ್ದ ‘ಕಿಂಡಿ’ ಈ ಬಾರ್‌ನ ಅಕ್ರಮಗಳ ಕತೆ ಹೇಳುತ್ತದೆ.

ಐವರು ನೌಕರರನ್ನು ಬಲಿ ಪಡೆದ ‘ಕೈಲಾಶ್ ಬಾರ್ ಆ್ಯಂಡ್ ರೆಸ್ಟೊರೆಂಟ್’ನ ಪರಿಶೀಲನೆಗೆ ತೆರಳಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು, ಹಲವು ಲೋಪಗಳನ್ನು ಪತ್ತೆ ಹಚ್ಚಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ, ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳು ರಾತ್ರಿ 1 ಗಂಟೆವರೆಗೆ ವಹಿವಾಟು ನಡೆಸಬಹುದು. ಆದರೆ, ಇಲ್ಲಿ ಆ ಬಳಿಕವೂ ಮದ್ಯ ಸಿಗುತ್ತಿತ್ತು. ಷಟರ್ ಮುಚ್ಚಿದ ಬಳಿಕ, ಕೆಲಸಗಾರಲ್ಲಿ ಒಬ್ಬರು ಆ ಕಿಂಡಿ ಬಳಿಯೇ ಇರುತ್ತಿದ್ದರು. ಯಾರಾದರೂ ಷಟರ್‌ ಬಡಿದರೆ, ಈ ಕಿಂಡಿಯ ಮೂಲಕವೇ ಮದ್ಯ ಕೊಡುತ್ತಿದ್ದರು. ಮಾರುಕಟ್ಟೆಯಲ್ಲಿ ರಾತ್ರಿಯಿಡೀ ಕೆಲಸ ಮಾಡುವ ಕಾರ್ಮಿಕರು, ಇಲ್ಲಿಗೆ ಕಾಯಂ ಗಿರಾಕಿಗಳಾಗಿದ್ದರು. ಈ ವಿಷಯವನ್ನು ಗಿರಾಕಿಗಳೇ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

‘ಕಾರ್ಯಾಚರಣೆ ವೇಳೆಯೇ ‘ಕಿಂಡಿ’ ಕಂಡು ಸಿಬ್ಬಂದಿ ಅನುಮಾನಗೊಂಡಿದ್ದರು. ಕಾರ್ಯಾಚರಣೆ ಮುಗಿದ ಬಳಿಕ, ‘ಕಿಂಡಿ’ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆ ಕಿಂಡಿ ಮೂಲಕ ಯಾರಾದರೂ ಬೆಂಕಿಯ ಕಿಡಿ ಒಳಗೆ ಎಸೆದಿರಬಹುದು ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾರ್‌ನಲ್ಲಿ 100 ಬಾಕ್ಸ್‌ಗಿಂತಲೂ ಹೆಚ್ಚು ಮದ್ಯ ಸಂಗ್ರಹವಿತ್ತು. ಎರಡು ಸ್ಪಿರಿಟ್‌ ಕ್ಯಾನ್‌ಗಳಿದ್ದವು ಎಂದು ಕ್ಯಾಷಿಯರ್‌ ಹೇಳಿದ್ದಾರೆ.  ಬೆಂಕಿಯ ತೀವ್ರತೆ ಹೆಚ್ಚಲು ಇದು ಕೂಡಾ ಕಾರಣ’ ಎಂದರು. 

ಕೆಳಗೆ ಬಾರ್, ಮೇಲೆ ಶೌಚಾಲಯ: 600 ಚದರ ಅಡಿ ವಿಸ್ತೀರ್ಣದ ಈ ಬಾರ್‌ನಲ್ಲಿ, ಎಂಟು ಅಡಿ ಎತ್ತರದಲ್ಲಿ ಛಾವಣಿ ಇತ್ತು. ಕೆಳಭಾಗದಲ್ಲಿ ಮದ್ಯ ಮಾರಾಟದ ಕೌಂಟರ್‌ ಇದ್ದು, ಮೇಲ್ಭಾಗದಲ್ಲಿ ಶೌಚಾಲಯ ಹಾಗೂ ತೆರೆದ ಕೊಠಡಿ ಇತ್ತು. ಎರಡೂ ಕಡೆ ಗಿರಾಕಿಗಳು ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಲಾಗಿತ್ತು. ನೌಕರರು, ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.

‘ಕಟ್ಟಡದಲ್ಲಿ ಬಾರ್‌ ಆರಂಭಿಸಲು ನಮ್ಮ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಕಾರ್ಮಿಕ ಕಾನೂನು ಉಲ್ಲಂಘನೆಯಾಗಿರುವುದೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಷ್ಟಾದರೂ ಅಬಕಾರಿ ಇಲಾಖೆಯವರು ಪರವಾನಗಿ ನೀಡಿದ್ದು ಆಶ್ಚರ್ಯವನ್ನುಂಟು ಮಾಡಿದೆ. ನಾವು ಕಲೆಹಾಕಿರುವ ಮಾಹಿತಿಯನ್ನೆಲ್ಲ ಉನ್ನತ ಅಧಿಕಾರಿಗಳಿಗೆ ಕೊಡುತ್ತೇವೆ. ಗೃಹ ಸಚಿವರಿಗೆ ಅವರು ವರದಿ ನೀಡಲಿದ್ದಾರೆ’ ಎಂದು ಅವರು ಹೇಳಿದರು.

‘ಬಾರ್‌ನ ವಿದ್ಯುತ್‌ ಸಂಪರ್ಕ ವ್ಯವಸ್ಥೆಯೂ ಸಮರ್ಪಕವಾಗಿ ಇರಲಿಲ್ಲ. ವೈರ್‌ಗಳ ಗುಣಮಟ್ಟ ಕಳಪೆಯಾಗಿದ್ದವು. ಈ ಕಟ್ಟಡದಲ್ಲಿ ಬಾರ್‌ಗೆ ಪರವಾನಗಿ ನೀಡಿದ್ದು ತಪ್ಪು. ಘಟನಾ ಸ್ಥಳದಲ್ಲಿ ಕೆಲ ವಸ್ತುಗಳನ್ನು ಸಂಗ್ರಹಿಸಿದ್ದೇವೆ. ಪರೀಕ್ಷೆ ನಡೆಸಿ, ಅಕ್ರಮದ ಸಮೇತ ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತೇವೆ’ ಎಂದು ಹೆಸರು ಹೇಳಲಿಚ್ಛಿಸದ ಎಲೆಕ್ಟ್ರಿಕಲ್‌ ಪರಿಶೀಲನಾ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

35 ವರ್ಷದ ಕಟ್ಟಡ: ‘ದುರಂತದಲ್ಲಿ ಬಡವರ ಮನೆಯ ಮಕ್ಕಳು ಸತ್ತಿದ್ದಾರೆ. ಈ ಬಗ್ಗೆ ನಮಗೆ ದುಃಖವಿದೆ. ಈ ಬಹುಮಹಡಿ ಕಟ್ಟಡವೇ ಅಕ್ರಮ ಎಂದಾದರೆ, ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್‌ ನೀಡಲಿ. ಅದಕ್ಕೆ ಸ್ಪಂದಿಸುತ್ತೇವೆ’ ಎಂದು ಕುಂಬಾರರ ಸಂಘದ ಅಧ್ಯಕ್ಷ ಮುನಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘35 ವರ್ಷದ ಹಳೆಯ ಕಟ್ಟಡ ಇದಾಗಿದ್ದು, ಆರಂಭದಿಂದಲೂ ಈ ಮಳಿಗೆಯಲ್ಲಿ ಬಾರ್ ಇದೆ. ಅವಘಡ ಸಂಬಂಧ ಸಂಘದ ವ್ಯವಸ್ಥಾಪಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅದಕ್ಕೆ ಅವರೇ ಸೂಕ್ತ ಉತ್ತರ ನೀಡಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ನಾವೂ ಆಗ್ರಹಿಸುತ್ತಿದ್ದೇವೆ’ ಎಂದು ಹೇಳಿದರು.

ವಿದ್ಯುತ್‌ ವೈರ್‌ ಕಡಿಯುತ್ತಿದ್ದ ಇಲಿಗಳು: ‘ಬಾರ್‌ನಲ್ಲಿ ಇಲಿಗಳ ಕಾಟ ವಿಪರೀತವಾಗಿತ್ತು. ಮದ್ಯವಿಡುತ್ತಿದ್ದ ಫ್ರಿಡ್ಜ್‌ ಹತ್ತಿರದ ವಿದ್ಯುತ್‌ ವೈರ್‌ಗಳನ್ನು ಅವು ಕಡಿಯುತ್ತಿದ್ದವು. ಒಂದು ಬಾರಿ ವೈರ್‌ ದುರಸ್ತಿ ಮಾಡಿಸಿದ್ದೆವು. ಆ ಬಳಿಕವೂ ಇಲಿಗಳು ವೈರ್‌ ಕಡಿಯುವುದನ್ನು ನಿಲ್ಲಿಸಿರಲಿಲ್ಲ. ಕಟ್ಟಡದಲ್ಲಿ ಯಾವುದೇ ರೀತಿಯ ಬೆಂಕಿ ಆರಿಸುವ ಉಪಕರಣಗಳು ಇರಲಿಲ್ಲ’ ಎಂದು ಕ್ಯಾಷಿಯರ್‌ ರಾಮಚಂದ್ರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಕಟ್ಟಡದಲ್ಲಿ ತುರ್ತು ನಿರ್ಗಮನ ಇರಲಿಲ್ಲ. ನೆಲ ಮತ್ತು ಒಂದನೇ ಅಂತಸ್ತಿಗೆ ಷಟರ್‌ ಬಾಗಿಲಿತ್ತು. 4 ಸಿ.ಸಿ.ಟಿ.ವಿ ಕ್ಯಾಮೆರಾಗಳಿದ್ದವು ಎಂದು ಅವರು ತಿಳಿಸಿದ್ದಾರೆ

ಅಗ್ನಿಶಾಮಕ ವಾಹನ ತಲುಪಲು ಅಡ್ಡಿ: ನಸುಕಿನಲ್ಲಿ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಹೊರಟಿದ್ದ ವೇಳೆ, ಮಾರುಕಟ್ಟೆಯ ರಸ್ತೆಯಲ್ಲೆಲ್ಲ ಟೊಮೆಟೊ ಬುಟ್ಟಿಗಳನ್ನು ಇಡಲಾಗಿತ್ತು. ಅವುಗಳನ್ನೆಲ್ಲ ರಸ್ತೆಯಿಂದ ತೆಗೆಸಿ ಮುಂದೆ ಹೋಗಲು 10 ನಿಮಿಷ ಬೇಕಾಯಿತು.

***

ಬಾರ್‌ ಮೇಲೆಯೇ ಹಾಸ್ಟೆಲ್‌

ಕುಂಬಾರ ಸಂಘದ ಬಹುಮಹಡಿ ಕಟ್ಟಡವು ಎರಡು ಬ್ಲಾಕ್‌ಗಳಿಂದ ಕೂಡಿದೆ. ನೆಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ಕೊಡಲಾಗಿದೆ. ಒಂದನೇ ಮಹಡಿಯಲ್ಲಿ ವ್ಯಾಪಾರಿಗಳು, ಕೆಲ ಗಣ್ಯರ ಕಚೇರಿಗಳಿವೆ. ಸರ್ವಜ್ಞ ಕೈಗಾರಿಕೆ ತರಬೇತಿ ಕೇಂದ್ರವೂ ಅಲ್ಲಿದೆ.

2 ಹಾಗೂ 3ನೇ ಮಹಡಿಯಲ್ಲಿ ಹಾಸ್ಟೆಲ್‌ ಇದೆ. ಅಲ್ಲಿ 50 ವಿದ್ಯಾರ್ಥಿಗಳು ವಾಸವಿದ್ದಾರೆ. ಅವಘಡ ನಡೆದ ವೇಳೆ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲೇ ಇದ್ದರು. ಅವರೆಲ್ಲರಿಗೂ ಬೆಳಿಗ್ಗೆಯೇ ವಿಷಯ ಗೊತ್ತಾಗಿದೆ. ‘ಬಾರ್‌ ನೌಕರರು ಉಳಿದುಕೊಳ್ಳುವುದಕ್ಕೆ ಹಾಸ್ಟೆಲ್‌ ಪಕ್ಕದ ಕೊಠಡಿಯನ್ನು ಒದಗಿಸಿದ್ದೆವು. ನೌಕರರು ನಿತ್ಯವೂ ಇಲ್ಲಿ ಬಂದು ಮಲಗುತ್ತಿದ್ದರು. ಆದರೆ, ಭಾನುವಾರ ಮಾತ್ರ ಬಂದಿರಲಿಲ್ಲ’ ಎಂದು ಹಾಸ್ಟೆಲ್‌ ಸಿಬ್ಬಂದಿ ತಿಳಿಸಿದರು.

***

ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ: ರಾಮಲಿಂಗಾರೆಡ್ಡಿ

ಬೆಂಗಳೂರು: ‘ಬಾರ್‌ಗಳಿಗೆ ಅಬಕಾರಿ ಇಲಾಖೆ ಹಾಗೂ ರೆಸ್ಟೊರೆಂಟ್‌ಗಳಿಗೆ ಬಿಬಿಎಂಪಿ ಪರವಾನಗಿ ನೀಡುತ್ತದೆ. ಇಂಥ ಬಾರ್‌ನ ಪರವಾನಗಿಯನ್ನು ಅಧಿಕಾರಿಗಳು ಯಾವ ಆಧಾರದ ಮೇಲೆ ನವೀಕರಣ ಮಾಡಿದರೋ ತಿಳಿಯುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವಘಡದ ಬಗ್ಗೆ ವರದಿ ನೀಡುವಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಹೇಳಿದ್ದೇನೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ನೌಕರರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವುದು ಮಾಲೀಕರ ಜವಾಬ್ದಾರಿ. ಈ ವಿಚಾರದಲ್ಲಿ ಅವರಿಂದ ಗಂಭೀರ ಲೋಪವಾಗಿದೆ. ವಾಣಿಜ್ಯ ಚಟುವಟಿಕೆ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಅದನ್ನು ಪಾಲಿಸದಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸಲಿದ್ದೇವೆ’ ಎಂದರು.

***

ವಿದ್ಯುತ್‌ ವೈರ್‌ ಕಡಿಯುತ್ತಿದ್ದ ಇಲಿಗಳು

‘ಬಾರ್‌ನಲ್ಲಿ ಇಲಿಗಳ ಕಾಟ ವಿಪರೀತವಾಗಿತ್ತು. ಮದ್ಯವಿಡುತ್ತಿದ್ದ ಫ್ರಿಡ್ಜ್‌ ಹತ್ತಿರದ ವಿದ್ಯುತ್‌ ವೈರ್‌ಗಳನ್ನು ಅವು ಕಡಿಯುತ್ತಿದ್ದವು. ಒಂದು ಬಾರಿ ವೈರ್‌ ದುರಸ್ತಿ ಮಾಡಿಸಿದ್ದೆವು. ಆ ಬಳಿಕವೂ ಇಲಿಗಳು ವೈರ್‌ ಕಡಿಯುವುದನ್ನು ನಿಲ್ಲಿಸಿರಲಿಲ್ಲ. ಕಟ್ಟಡದಲ್ಲಿ ಯಾವುದೇ ರೀತಿಯ ಬೆಂಕಿ ಆರಿಸುವ ಉಪಕರಣಗಳು ಇರಲಿಲ್ಲ’ ಎಂದು ಕ್ಯಾಷಿಯರ್‌ ರಾಮಚಂದ್ರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಕಟ್ಟಡದಲ್ಲಿ ತುರ್ತು ನಿರ್ಗಮನ ಇರಲಿಲ್ಲ. ನೆಲ ಮತ್ತು ಒಂದನೇ ಅಂತಸ್ತಿಗೆ ಷಟರ್‌ ಬಾಗಿಲಿತ್ತು. 4 ಸಿ.ಸಿ.ಟಿ.ವಿ ಕ್ಯಾಮೆರಾಗಳಿದ್ದವು ಎಂದು ಅವರು ತಿಳಿಸಿದ್ದಾರೆ.

***

ಅಗ್ನಿಶಾಮಕ ವಾಹನ ತಲುಪಲು ಅಡ್ಡಿ:

ನಸುಕಿನಲ್ಲಿ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಹೊರಟಿದ್ದ ವೇಳೆ, ಮಾರುಕಟ್ಟೆಯ ರಸ್ತೆಯಲ್ಲೆಲ್ಲ ಟೊಮೆಟೊ ಬುಟ್ಟಿಗಳನ್ನು ಇಡಲಾಗಿತ್ತು. ಅವುಗಳನ್ನೆಲ್ಲ ರಸ್ತೆಯಿಂದ ತೆಗೆಸಿ ಮುಂದೆ ಹೋಗಲು 15 ನಿಮಿಷ ಬೇಕಾಯಿತು.

***

ಅನಧಿಕೃತ ಬಾರ್‌ಗಳ ವಿರುದ್ಧ ಕಾರ್ಯಾಚರಣೆ

ಬೆಂಗಳೂರು: ಕಲಾಸಿಪಾಳ್ಯದ ಕೈಲಾಶ್‌ ಬಾರ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಎಚ್ಚೆತ್ತಿರುವ ಬಿಬಿಎಂಪಿ, ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಾಗೂ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ಮುಂಬೈನ ರೆಸ್ಟೊರೆಂಟ್‌ವೊಂದರಲ್ಲಿ ಇತ್ತೀಚೆಗೆ ಬೆಂಕಿ ಅವಘಡ ಸಂಭವಿಸಿ 14 ಜನ ಮೃತಪಟ್ಟಿದ್ದರು. ಇಂತಹ ದುರಂತಗಳು ಬೆಂಗಳೂರಿನಲ್ಲಿ ಆಗಬಾರದು ಎಂಬ ಉದ್ದೇಶದಿಂದ ಅನಧಿಕೃತ ಮದ್ಯದಂಗಡಿ ಹಾಗೂ ರೆಸ್ಟೊರೆಂಟ್‌ಗಳ ಮೇಲೆ ಮೇಯರ್‌ ಆರ್‌.ಸಂಪತ್‌ ರಾಜ್‌ ನೇತೃತ್ವದಲ್ಲಿ ಇತ್ತೀಚೆಗೆ ದಾಳಿ ನಡೆಸಲಾಗಿತ್ತು. ನಿಯಮ ಉಲ್ಲಂಘಿಸಿದ್ದ 8 ಬಾರ್‌ಗಳನ್ನು ಮುಚ್ಚಿಸಲಾಗಿತ್ತು. 150 ಮದ್ಯದಂಗಡಿಗಳಿಗೆ ನೋಟಿಸ್‌ ನೀಡಲಾಗಿತ್ತು. ಇದರ ನಡುವೆಯೇ ಕಲಾಸಿಪಾಳ್ಯದ ಬಾರ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ.

‘ಇಂದಿರಾನಗರ, ಕಮ್ಮನಹಳ್ಳಿ ಹಾಗೂ ಎಂ.ಜಿ.ರಸ್ತೆ, ಲ್ಯಾವೆಲ್ಲೆ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿರುವ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ಗಳ ಮೇಲೆ ದಾಳಿ ನಡೆಸಿ, ಪರಿಶೀಲಿಸಿದ್ದೆವು. ತಾರಸಿ ಬಾರ್ ಹಾಗೂ ಪಬ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕೆಲವು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದವು. ಇಂತಹ ಬಾರ್‌ಗಳನ್ನು ಮುಚ್ಚಿಸುವ ಜತೆಗೆ ದಂಡವನ್ನೂ ವಿಧಿಸಿದ್ದೇವೆ. ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ’ ಎಂದು ಮೇಯರ್‌ ತಿಳಿಸಿದರು.

ಕೆಲ ಬಾರ್‌, ಪಬ್‌ಗಳಲ್ಲಿ ಅಲಂಕಾರಕ್ಕಾಗಿ ಬಿದಿರಿನ ವಸ್ತುಗಳನ್ನು ಬಳಸಲಾಗುತ್ತಿದೆ. ಶಾರ್ಟ್‌ ಸರ್ಕೀಟ್‌ ಆದ ಸಂದರ್ಭದಲ್ಲಿ ಬೆಂಕಿಯ ತೀವ್ರತೆ ಹೆಚ್ಚುತ್ತದೆ. ಬಿದಿರಿನ ವಸ್ತುಗಳ ಬಳಕೆಗೂ ನಿಯಂತ್ರಣ ಹೇರುವ ಅಗತ್ಯವಿದೆ ಎಂದರು. ವಾಣಿಜ್ಯ ಪರವಾನಗಿ ರದ್ದು: ‘ಮದ್ಯದಂಗಡಿ, ರೆಸ್ಟೊರೆಂಟ್‌ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಕುರಿತು ಮೇಲ್ವಿಚಾರಣೆ ನಡೆಸಲು ಅಗ್ನಿಶಾಮಕ ಇಲಾಖೆಗೆ ಸೂಚಿಸಲಾಗಿದೆ. ಇಲಾಖೆ ನೀಡುವ ವರದಿಯನ್ವಯ ಕ್ರಮ ಕೈಗೊಳ್ಳುತ್ತೇವೆ. ಅಗ್ನಿ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿರುವ ಬಾರ್‌, ರೆಸ್ಟೊರೆಂಟ್‌ಗಳ ವಾಣಿಜ್ಯ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ’ ಎಂದು ಹೇಳಿದರು.

‘ಕಟ್ಟಡದ ನಕ್ಷೆ ಮಂಜೂರು ಮಾಡುವ ಜತೆಗೆ ವಾಣಿಜ್ಯ ಪರವಾನಗಿ ನೀಡುವ ಜವಾಬ್ದಾರಿ ಪಾಲಿಕೆಯದ್ದು. ಅದರಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಇಲ್ಲವೇ ಎಂಬುದನ್ನು ಅಗ್ನಿ ಶಾಮಕ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅವರ ಸಹಕಾರದೊಂದಿಗೆ ತಪಾಸಣಾ ಕಾರ್ಯಾಚರಣೆ ನಡೆಸುತ್ತೇವೆ’ ಎಂದರು. ಬಾರ್‌, ಪಬ್‌, ರೆಸ್ಟೊರೆಂಟ್‌ ಅಲ್ಲದೆ, ಎಲ್ಲ ಕಟ್ಟಡಗಳಲ್ಲೂ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

***

ಶಾರ್ಟ್‌ ಸರ್ಕೀಟ್‌ ತಡೆಗಟ್ಟುವ ಕ್ರಮಗಳು

'ಮನೆ ಅಥವಾ ಮಳಿಗೆಗಳಿಗೆ ವೈರಿಂಗ್‌ ಮಾಡಿರುವ ಕುರಿತು ಪ್ರಮಾಣೀಕರಿಸಿದ ಬಳಿಕವೇ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ನೀಡಲಾಗುತ್ತದೆ. ವಿದ್ಯುತ್‌ ಬೋರ್ಡ್‌ನಿಂದ ಕಂಬದವರೆಗೆ ಇರುವ ಯಾವುದೇ ಸಮಸ್ಯೆಯನ್ನು ದುರಸ್ತಿ ಮಾಡಲಾಗುತ್ತದೆ. ಆದರೆ, ಕಟ್ಟಡದ ಒಳಭಾಗದಲ್ಲಿ ಸಮಸ್ಯೆ ಉಂಟಾದರೆ, ಎಲೆಕ್ಟ್ರಿಷಿಯನ್‌ಗಳ ಮೂಲಕ ದುರಸ್ತಿ ಮಾಡಿಸಿಕೊಳ್ಳಬೇಕು’ ಎಂದು ಬೆಸ್ಕಾಂನ ಅಧಿಕಾರಿಯೊಬ್ಬರು ತಿಳಿಸಿದರು.

‘ಗುಣಮಟ್ಟದ ತಂತಿಯನ್ನು ಬಳಸಬೇಕು. ತಂತಿಯಲ್ಲಿ ದೋಷ ಇದ್ದರೆ, ಈ ಬಗ್ಗೆ ಪರಿಶೀಲಿಸಬೇಕು. ಹೊಸ ತಂತಿಯನ್ನು ಅಳವಡಿಸಬೇಕು. ಅನೇಕ ತಂತಿಗಳು ಒಂದಕ್ಕೊಂದು ಬೆಸೆದುಕೊಳ್ಳದಂತೆ ನೋಡಿಕೊಳ್ಳಬೇಕು. ಕಾಲಕಾಲಕ್ಕೆ ಎಲೆಕ್ಟ್ರಿಷಿಯನ್‌ಗಳ ಮೂಲಕ ತಪಾಸಣೆ ನಡೆಸಬೇಕು. ಇದರಿಂದ ಶಾರ್ಟ್‌ ಸರ್ಕೀಟ್‌ ಆಗುವುದನ್ನು ತಪ್ಪಿಸಬಹುದು’ ಎಂದು ಮಾಹಿತಿ ನೀಡಿದರು.

***

ಒಂದೇ ವರ್ಷದಲ್ಲಿ  699 ಬಲಿ

ಬೆಂಗಳೂರು: ರಾಜ್ಯದಲ್ಲಿ 2017ರಲ್ಲಿ ಸಂಭವಿಸಿದ ಅಗ್ನಿ ಅವಘಡಗಳಿಗೆ 699 ಮಂದಿ ಮೃತಪಟ್ಟು, 350 ಮಂದಿ ಗಾಯಗೊಂಡಿದ್ದಾರೆ.

ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆ ಮಾಹಿತಿ ಪ್ರಕಾರ, 1,797 ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಲ್ಲಿ ಕಾರ್ಯಾಚರಣೆ ನಡೆಸಿ 1,456 ಜೀವಗಳನ್ನು ರಕ್ಷಿಸಲಾಗಿದೆ. 54 ಮಂದಿಯ ಸಜೀವ ದಹನ ಸೇರಿದಂತೆ, 699 ಮಂದಿ ಬಲಿಯಾಗಿದ್ದಾರೆ.

2016ರಲ್ಲಿ ಸಂಭವಿಸಿದ್ದ 1,865 ಅಗ್ನಿ ಅವಘಡಗಳಲ್ಲಿ 800 ಮಂದಿ ಬಲಿಯಾಗಿ, 473 ಮಂದಿ ಗಾಯಗೊಂಡಿದ್ದರು.

₹221 ಕೋಟಿ ನಷ್ಟ: ಹಿಂದಿನ ವರ್ಷ ಅಗ್ನಿ ಅವಘಡದಿಂದ ರಾಜ್ಯದಲ್ಲಿ ₹221 ಕೋಟಿಯಷ್ಟು ನಷ್ಟ ಸಂಭವಿಸಿದೆ.

ಕಟ್ಟಡಗಳು ಸೇರಿದಂತೆ ₹700 ಕೋಟಿಮೌಲ್ಯದ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದಸಿಬ್ಬಂದಿ, ₹479 ಕೋಟಿಯಷ್ಟು ಆಸ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT